ಕನ್ನಡ ವರ್ಣಮಾಲೆಯಲ್ಲಿ ಒಟ್ಟು 49 ಅಕ್ಷರಗಳಿವೆ. ಈ ಅಕ್ಷರಗಳನ್ನು ವರ್ಣಗಳೆಂದು ಕರೆಯುತ್ತಾರೆ. ಈ ಅಕ್ಷರಗಳ/ವರ್ಣಗಳ ಕ್ರಮಬದ್ಧ ಜೋಡಣೆಗೆ 'ವರ್ಣಮಾಲೆ' ಅಥವಾ 'ಅಕ್ಷರಮಾಲೆ' ಎಂದು ಹೆಸರು.
ಕನ್ನಡ ವರ್ಣಮಾಲೆ (ಸ್ವರಗಳು, ವ್ಯಂಜನಗಳು,ಯೋಗವಾಹಕಗಳು)
ಕನ್ನಡ ವರ್ಣಮಾಲೆಯಲ್ಲಿ 3 ವಿಧಗಳಿವೆ.
13 ಸ್ವರಗಳು – ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ
9 ಯೋಗವಾಹಗಳು – ಅಂ ಅಃ
25+9 ವ್ಯಂಜನಗಳು –
ಕ ಖ ಗ ಘ ಙ
ಚ ಛ ಜ ಝ ಞ
ಟ ಠ ಡ ಢ ಣ
ತ ಥ ದ ಧ ನ
ಪ ಫ ಬ ಭ ಮ
ಯ ರ ಲ ವ ಶ ಷ ಸ ಹ ಳ.
ಸ್ವತಂತ್ರವಾಗಿ ಸ್ಪಷ್ಟವಾಗಿ ಉಚ್ಚರಿಸಲ್ಪಡುವ ಅಕ್ಷರಮಾಲೆಯನ್ನು ಸ್ವರಗಳು ಎನ್ನುತ್ತಾರೆ. ಸ್ವರಗಳು 13 ಅಕ್ಷರಗಳಿವೆ. ಅವುಗಳು ಯಾವೆಂದರೆ:- ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ
ಕನ್ನಡ ವರ್ಣಮಾಲೆಗಳಲ್ಲಿ ಸ್ವರಗಳನ್ನು ಮೂರು ವಿಧಗಳಾಗಿ ವಿಂಗಡಿಸಲಾಗಿದೆ.
1).ಹೃಸ್ವಸ್ವರಗಳು:- ಒಂದು ಮಾತ್ರ ಕಾಲದಲ್ಲಿ ಉಚ್ಚಿರಿಸಲ್ಪಡುವ ಅಕ್ಷರಗಳಿಗೆ ಹೃಸ್ವಸ್ವರ ಎನ್ನುತ್ತಾರೆ.
ಹೃಸ್ವ ಸ್ವರಗಳು ಉದಾ :-ಅ ಇ ಉ ಋ ಎ ಒ
2).ದೀರ್ಘಸ್ವರಗಳು:-ಎರಡು ಮಾತ್ರ ಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳಿಗೆ ದೀರ್ಘಸ್ವರಗಳು ಎನ್ನುತ್ತಾರೆ. ದೀರ್ಘ ಸ್ವರಗಳನ್ನು ಉಚ್ಚರಿಸಲು ದೀರ್ಘವಾದ ಉಸಿರು ಬೇಕಾಗುತ್ತದೆ.
ದೀರ್ಘ ಸ್ವರಗಳು ಉದಾ :- ಆ ಈ ಊ ಏ ಐ ಓ ಔ
3).ಪ್ಳುತ್ವ ಸ್ವರಗಳು:- ಮೂರು ಮಾತ್ರ ಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳಿಗೆ ಪ್ಲತ್ವಸ್ವರ ಎನ್ನುತ್ತಾರೆ. ಇದರ ಸ್ವರಗಳನ್ನು ದೀರ್ಘವಾಗಿ ಹೇಳುವುದಕ್ಕೆ ಪ್ಲತ್ವಸ್ವರ ಎನ್ನುತ್ತಾರೆ.
ಪ್ಳುತ್ವ ಸ್ವರಗಳು ಉದಾ :- ಅಪ್ಪಾ, ತಮ್ಮಾ
ಸ್ವರಗಳ ಸಹಾಯದಿಂದ ಉಚ್ಚರಿಸಲ್ಪಡುವ ಅಕ್ಷರಗಳಿಗೆ ವ್ಯಂಜನಗಳು ಎನ್ನುತ್ತಾರೆ.
ವ್ಯಂಜನಗಳಲ್ಲಿ ಎರಡು ವಿಧಗಳು
1.ವರ್ಗೀಯ ವ್ಯಂಜನಗಳು
2.ಅವರ್ಗೀಯ ವ್ಯಂಜನಗಳು
1.ವರ್ಗೀಯ ವ್ಯಂಜನಗಳು:
ಸ್ವರಗಳ ಸಹಾಯದಿಂದ ಉಚ್ಚರಿಸಲ್ಪಡುವ ವ್ಯಂಜನಾಕ್ಷರಗಳಿಗೆ ವರ್ಗೀಯ ವ್ಯಂಜನಗಳು ಎನ್ನುತ್ತಾರೆ.
ಉದಾ :-
ಕ ಖ ಗ ಘ
ಚ ಛ ಜ ಝ ಞ
ಟ ಠ ಡ ಢ ಣ
ತ ಥ ದ ಧ ನ
ಪ ಫ ಬ ಭ ಮ
ವರ್ಗೀಯ ವ್ಯಂಜನಗಳಲ್ಲಿ 3 ವಿಧಗಳು
1)ಅಲ್ಪಪ್ರಾಣ
2)ಮಹಾಪ್ರಾಣ
3)ಅನುನಾಸಿಕಗಳು
1)ಅಲ್ಪಪ್ರಾಣ :- ಕಡಿಮೆ ಉಸಿರಿನಿಂದ ಉಚ್ಚರಿಸಲ್ಪಡುವ ವ್ಯಂಜನಗಳಿಗೆ ಅಲ್ಪಪ್ರಾಣ ಎನ್ನುತ್ತಾರೆ.
ಉದಾ :- ಕ,ಚ,ಟ,ತ,ಪ ಗ,ಜ,ದ,ಡ,ಬ
2)ಮಹಾಪ್ರಾಣ :- ಹೆಚ್ಚು ಉಸಿರಿನಿಂದ ಉಚ್ಚರಿಸಲ್ಪಡುವ ವ್ಯಂಜನಗಳಿಗೆ ಮಹಾಪ್ರಾಣ ಎನ್ನುತ್ತಾರೆ.
ಉದಾ :- ಖ,ಛ,ಠ,ಥ,ಫ ಘ,ಝ,ಧ,ಢ,ಭ
3)ಅನುನಾಸಿಕಗಳು :- ಮೂಗಿನ ಸಹಾಯದಿಂದ ಉಚ್ಚರಿಸಲ್ಪಡುವ ವ್ಯಂಜನಗಳಿಗೆ ಅನುನಾಸಿಕಗಳು ಎನ್ನುತ್ತಾರೆ.
ಉದಾ :- ಙ,ಞ,ಣ,ನ,ಮ.
2.ಅವರ್ಗಿಯ ವ್ಯಂಜನಗಳು:
ವರ್ಗಗಳನ್ನು ಮಾಡಲು ಸಾಧ್ಯವಿಲ್ಲದ ವ್ಯಂಜನಗಳಿಗೆ ಅವರ್ಗಿಯ ವ್ಯಂಜನಗಳು ಎನ್ನುತ್ತಾರೆ.
ಉದಾ :- ಯ ರ ಲ ವ ಶ ಷ ಸ ಹ ಳ
ಬೇರೆ ಅಕ್ಷರಗಳ ಸಹಯೋಗದಿಂದ ಉಚ್ಚರಿಸಲ್ಪಡುವ ವರ್ಣಗಳಿಗೆ ಅಥವಾ ಅಕ್ಷರಗಳಿಗೆ ಯೋಗವಾಹಕಗಳು ಎನ್ನುತ್ತಾರೆ.
ಯೋಗವಾಹಕಗಳು
ಅನುಸ್ವರ (ಅಂ)
ವಿಸರ್ಗ (ಅ:)
1)ಅನುಸ್ವರ :- ಯಾವುದೇ ಅಕ್ಷರವು ಅಥವಾ ಪದವು ಒಂದೇ ಬಿಂದುವನ್ನು ಹೊಂದಿದರೆ.ಅವುಗಳನ್ನು ಅನುಸ್ವರ ಎನ್ನುವರು.
ಉದಾ :- ಲಿಂಗ, ಅಂಗ, ಕಂಕಣ, ಗುಂಪು, ತಂದೆ.
2)ವಿಸರ್ಗ :- ಯಾವುದೇ ಅಕ್ಷರವು ಅಥವಾ ಪದವು ಎರಡು ಬಿಂದುಗಳನ್ನು ಹೊಂದಿದರೆ ಅವುಗಳನ್ನು ವಿಸರ್ಗ ಎನ್ನುವರು.
ಉದಾ :- ದುಃಖ, ಪುನಃ, ನಮಃ, ಅಂತಃಪುರ,
ಕನ್ನಡ ಕಾಗುಣಿತವು ಕನ್ನಡ ಅಕ್ಷರಮಾಲೆಯಲ್ಲಿನ ಪ್ರತಿಯೊಂದು ವ್ಯಂಜನಗಳಿಗೂ ಪ್ರತಿಯೊಂದು ಸ್ವರವನ್ನು ಸೇರಿಸುವುದು ಹೇಗೆ ಎಂದು ತಿಳಿಸಿಕೊಡುವ ವ್ಯಾಕರಣದ ಕ್ರಮವೇ ಕನ್ನಡ ಕಾಗುಣಿತ / ಗುಣಿತಾಕ್ಷರ ಎಂದು ಕರೆಯಲಾಗುತ್ತದೆ.
ಉದಾ: ಕ್ ವ್ಯಂಜನಕ್ಕೆ ಅ ಸ್ವರವನ್ನು ಸೇರಿಸಿದಾಗ, ಕ ಬರುತ್ತದೆ.
ಕ್ ವ್ಯಂಜನಕ್ಕೆ ಓ ಸ್ವರವನ್ನು ಸೇರಿಸಿದಾಗ, ಕೋ ಬರುತ್ತದೆ.
ಒಂದು ವ್ಯಂಜನದ ಸಂಪೂರ್ಣ ಕಾಗುಣಿತ, ಆ ವ್ಯಂಜನದ ಎಲ್ಲಾ ಸ್ವರಗಳೊಂದಿಗಿನ ಸಂಬಂಧವನ್ನು ತೋರಿಸುತ್ತದೆ.
[ವ್ಯಂಜನ+ವ್ಯಂಜನ+ಸ್ವರ=ಸಂಯುಕ್ತಾಕ್ಷರ]
"ಎರಡು ಅಥವಾ ಎರಡಕ್ಕಿಂತ ಹೆಚ್ಚು ವ್ಯಂಜನಗಳನ್ನು (ಒತ್ತಕ್ಷರವನ್ನು) ಹೊಂದಿರುವ ಅಕ್ಷರಗಳೇ ಸಂಯುಕ್ತಾಕ್ಷರಗಳು."
ವ್ಯಂಜನಗಳಿಗೆ ವ್ಯಂಜನಗಳೇ ಸೇರಿ ಸಂಯುಕ್ತಾಕ್ಷರವಾಗುತ್ತದೆ.
ಇವನ್ನು ಒತ್ತಕ್ಷರ ಎಂದೂ ಕರೆಯಬಹುದು
ಸಂಯುಕ್ತಾಕ್ಷರಗಳಲ್ಲಿ ಎರಡು ವಿಧ:
1) ಸಜಾತೀಯ ಸಂಯುಕ್ತಾಕ್ಷರ.
2) ವಿಜಾತೀಯ ಸಂಯುಕ್ತಾಕ್ಷರ.
1) ಸಜಾತೀಯ ಸಂಯುಕ್ತಾಕ್ಷರ:-
"ಒಂದೇ ರೀತಿಯ ವ್ಯಂಜನಗಳನ್ನು ಹೊಂದಿರುವ ಸಂಯುಕ್ತಾಕ್ಷರಗಳನ್ನು 'ಸಜಾತೀಯ ಸಂಯುಕ್ತಾಕ್ಷರ' ಎಂದು ಹೇಳಲಾಗುತ್ತದೆ."
ಉದಾಹರಣೆ :
ಅಪ್ಪ , ಅಮ್ಮ ಅಕ್ಕ , ಅಣ್ಣ , ಹಗ್ಗ , ಅಟ್ಟ , ಅಡ್ಡ ,ಅನ್ನ, ಹಬ್ಬ.
ಅಪ್ಪ ಈ ಪದದಲ್ಲಿ ಪ್ಪ ಎಂಬ ಅಕ್ಷರವನ್ನು ಗಮನಿಸಿ ಇಲ್ಲಿ ಪ್+ಪ್+ಅ ಎಂಬ ಮೂರು ಅಕ್ಷರಗಳಿವೆ. ಇವುಗಳಲ್ಲಿ ಮೊದಲೆರಡು(ಪ್+ಪ್) ಒಂದೇ ರೀತಿಯ ವ್ಯಂಜನಗಳಾಗಿವೆ. ಆದ್ದರಿಂದ ಪ್ಪ ಎಂಬುದು ಸಜಾತೀಯ ಸಂಯುಕ್ತಾಕ್ಷರವಾಗಿದೆ.
2) ವಿಜಾತೀಯ ಸಂಯುಕ್ತಾಕ್ಷರ:-
"ಬೇರೆ ಬೇರೆ ವ್ಯಂಜನಗಳನ್ನು ಹೊಂದಿರುವ ಸಂಯುಕ್ತಾಕ್ಷರಗಳನ್ನು ವಿಜಾತೀಯ ಸಂಯುಕ್ತಾಕ್ಷರಗಳೆಂದು ಕರೆಯಲಾಗುತ್ತದೆ."
ಉದಾಹರಣೆ :
ಶ್ರವಣ, ಪುಸ್ತಕ, ವ್ಯಾಕರಣ, ಆಶ್ಚರ್ಯ ಇತ್ಯಾದಿ...
ಶ್ರವಣ ಈ ಪದದಲ್ಲಿ ಶ್ರ ಎಂಬ ಅಕ್ಷರವನ್ನು ಗಮನಿಸಿ ಇಲ್ಲಿ ಶ್+ರ್+ಅ ಎಂಬ ಮೂರು ಅಕ್ಷರಗಳಿವೆ. ಇವುಗಳಲ್ಲಿ ಮೊದಲೆರಡು (ಶ್+ರ್) ಬೇರೆ ಬೇರೆ ರೀತಿಯ ವ್ಯಂಜನಗಳಾಗಿವೆ. ಆದ್ದರಿಂದ ಶ್ರ ಎಂಬುದು ವಿಜಾತೀಯ ಸಂಯುಕ್ತಾಕ್ಷರವಾಗಿದೆ
ನಾಮ ಪದ: ಒಂದು ವಸ್ತು, ಒಬ್ಬ ವ್ಯಕ್ತಿ, ಒಂದು ಸ್ಥಳದ ಹೆಸರಾಗಿರಬಹುದು ಅಥವಾ ಒಂದು ಗುಂಪನ್ನು ಸೂಚಿಸುವ ಪದವಾಗಿರಬಹುದು ಅಥವಾ ಗುಣ, ಸ್ವಭಾವ, ಸಂಖ್ಯೆ, ಸ್ಥಾನ, ಅಳತೆ, ತೂಕ ಇತ್ಯಾದಿಗಳನ್ನು ಸೂಚಿಸುವ ಪದಗಳಾಗಿರಬಹುದು. ಅವುಗಳನ್ನು ನಾಮಪದಗಳೆಂದು ಕರೆಯುತ್ತೇವೆ. ಇದನ್ನು ಸಂಜ್ಞಾ ಎಂದೂ ಕರೆಯುವರು.
ಉದಾಹರಣೆ : ಅವನು, ಅವಳು, ಅದು, ಅವು, ನೀನು,
ನೀವು, ನಾನು, ಯಾವನು, ಇದು, ಏನು ಇತ್ಯಾದಿ.
ಹೀಗೆ ಯಾರಾದರೂ ವ್ಯಕ್ತಿಯ, ವಸ್ತುವಿನ, ಜಾಗ ಮೊದಲಾದವುಗಳ ಹೆಸರನ್ನು ತಿಳಿಸುವ ಪದಗಳು ನಾಮಪದಗಳಾಗಿರುತ್ತವೆ.
ನಾಮಪದದ ವಿಧಗಳು
ಅ)ವಸ್ತುವಾಚಕ: ವಸ್ತುಗಳ ಹೆಸರುಗಳನ್ನು ಹೇಳುವ ಶಬ್ದಗಳೆಲ್ಲವೂ ವಸ್ತುವಾಚಕಗಳು . ಉದಾ: ಮನುಷ್ಯ, ಬಸವ, ಮುದುಕ, ಮರ, ಹಣ್ಣು, ಅಡವಿ, ಶಾಲೆ. ವಸ್ತುವಾಚಕದಲ್ಲಿ ರೂಢನಾಮ, ಅಂಕಿತನಾಮ, ಅನ್ವರ್ಥನಾಮ ಎಂದು ಮೂರು ಉಪ ವಿಧಗಳಿವೆ.
ಆ) ರೂಢನಾಮ: ರೂಢಿಯಿಂದ ಬಂದ ನಾಮವಾಚಕಗಳು ರೂಢನಾಮಗಳು ಎನಿಸುವುವು.
ಉದಾ: ನದಿ, ಪರ್ವತ, ದೇಶ, ಊರು, ಮರ. ಮನುಷ್ಯ, ಹುಡುಗ.
ಇ)ಅಂಕಿತನಾಮ: ವ್ಯವಹಾರದ ಉಪಯೋಗಕ್ಕೆ ಇಟ್ಟುಕೊಂಡ ಹೆಸರುಗಳೆಲ್ಲಾ ಅಂಕಿತನಾಮಗಳು.
ಉದಾ: ಗಂಗಾ, ಬ್ರಹ್ಮಪುತ್ರ, ಹಿಮಾಲಯ, ಭಾರತ, ಬೇಲೂರು,
ಈ) ಅನ್ವರ್ಥನಾಮ:ಅರ್ಥಕ್ಕೆ ಅನುಗುಣವಾಗಿ ಇಟ್ಟ ಹೆಸರುಗಳೆಲ್ಲಾ ಅನ್ವರ್ಥನಾಮಗಳು.
ದಾ: ಯೋಗಿ, ವ್ಯಾಪಾರಿ, ಜಾಣ, ಇತ್ಯಾದಿ.
ಗುಣವಾಚಕಗಳು:
ವಸ್ತುಗಳ ಗುಣ, ರೀತಿ ಸ್ವಭಾವಗಳನ್ನು ತಿಳಿಸುವ ವಿಶೇಷಣಗಳೆಲ್ಲಾ ಗುಣವಾಚಕಗಳು.
ಉದಾ: ಕೆಂಪು, ದೊಡ್ಡ, ಚಿಕ್ಕ, ಹಳೆಯ, ಕರಿಯ, ಕೆಟ್ಟ, ಒಳ್ಳೆಯ,
ಸಂಖ್ಯಾವಾಚಕಗಳು:
ಸಂಖ್ಯೆಯನ್ನು ಹೇಳುವ ಶಬ್ದಗಳೆಲ್ಲವೂ ಸಂಖ್ಯಾವಾಚಕ ಎನಿಸುವುವು.
ಉದಾ: ಒಂದು, ಎರಡು, ಹತ್ತು, ಸಾವಿರ, ಲಕ್ಷ.
ಸಂಖ್ಯೇಯವಾಚಕಗಳು:
ಸಂಖ್ಯೆಯಿಂದ ಕೂಡಿದ ಶಬ್ದಗಳೆಲ್ಲವೂ ಸಂಖ್ಯೇಯವಾಚಕಗಳು ಎನಿಸುವುವು,.
ಉದಾ: ಒಂದನೆಯ, ಇಮ್ಮಡಿ, ಹತ್ತರಿಂದ ಮುಂತಾದವು.
ಭಾವನಾಮಗಳು:
ಭಾವನೆಗಳನ್ನು ಸೂಚಿಸುವ ಶಬ್ದಗಳೇ ಭಾವನಾಮಗಳು.
ಉದಾ: ಓಹೋ, ಅಯ್ಯೋ, ಅಬ್ಬಬ್ಬ.
ಪರಿಮಾಣವಾಚಕಗಳು:
ವಸ್ತುಗಳ ಸಾಮಾನ್ಯ ಅಳತೆ, ಪರಿಮಾಣ, ಗಾತ್ರ-ಇತ್ಯಾದಿಗಳನ್ನು ಹೇಳುವ ಶಬ್ದಗಳನ್ನು ಪರಿಮಾಣವಾಚಕಗಳೆನ್ನುವರು.
ಉದಾ : ಅಷ್ಟು, ಇಷ್ಟು, ಹಲವು, ಕೆಲವು, ಅನಿತು
ಪ್ರಕಾರವಾಚಕಗಳು:
ವಸ್ತುಗಳ ಸ್ಥಿತಿ ಅಥವಾ ರೀತಿಗಳನ್ನು ತಿಳಿಸುವ ಶಬ್ದಗಳೆಲ್ಲ ಪ್ರಕಾರವಾಚಕಗಳೆನಿಸುವುವು. ಇವೂ ಒಂದು ಬಗೆಯ ಗುಣವಾಚಕಗಳೇ.
ಉದಾ : ಅಂಥ, ಅಂಥಹುದು, ಇಂಥ, ಇಂಥದು, ಎಂತಹ
ದಿಗ್ವಾಚಕಗಳು:
ದಿಕ್ಕುಗಳ ಹೆಸರನ್ನು ಸೂಚಿಸುವ ಶಬ್ದಗಳೆಲ್ಲ ದಿಗ್ವಾಚಕಗಳು.
ಉದಾ: ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ, ಈಶಾನ್ಯ, ವಾಯುವ್ಯ
ಸರ್ವನಾಮಗಳು:
ನಾಮಪದಗಳ ಬದಲಿಗೆ ಬಳಸುವ ಪದಗಳಿಗೆ ಸರ್ವನಾಮಗಳು ಎನಿಸುವುವು.
ಉದಾ: ಅವನು, ಅವಳು, ಅದು, ಅವು, ನೀನು, ನೀವು, ನಾನು.
ಸರ್ವನಾಮದಲ್ಲಿ ಮೂರು ವಿಧ.
1. ಪುರುಷಾರ್ಥಕ ಸರ್ವನಾಮ
2. ಪ್ರಶ್ನಾರ್ಥಕ ಸರ್ವನಾಮ
3. ಆತ್ಮಾರ್ಥಕ ಸರ್ವನಾಮ
ಪುರುಷಾರ್ಥಕ ಸರ್ವನಾಮ :
ಕನ್ನಡದ ಸರ್ವನಾಮಗಳಲ್ಲಿ ಪುರುಷಾರ್ಥಕ ಸರ್ವನಾಮವನ್ನು ಬಹಳ ವ್ಯವಸ್ಥಿತವಾಗಿ ಬಳಸಲಾಗಿದೆ.
ಪುರುಷಾರ್ಥಕ ಸರ್ವನಾಮದಲ್ಲಿ ಮೂರು ವಿಧ.
ಅ. ಉತ್ತಮ ಪುರುಷ ಸರ್ವನಾಮ : ಆ). ಮಧ್ಯಮ ಪುರುಷ ಸರ್ವನಾಮ : ಇ). ಪ್ರಥಮ /ಅನ್ಯ ಪುರುಷ ಸರ್ವನಾಮ :
1ಅ). ಉತ್ತಮ ಪುರುಷ ಸರ್ವನಾಮ : ತನ್ನನ್ನು ತಾನೇ ಸಂಬೋಧಿಸಿ ಕೊಳ್ಳಲು ಬಳಸುವ ಸರ್ವನಾಮವೇ ಉತ್ತಮ ಪುರುಷ ಸರ್ವನಾಮ. ಇದು ಹಳೆಗನ್ನಡದಲ್ಲಿ ಆಂ, ಆನ್, ನಾನ್, ನಾಂ ಎಂಬ ಏಕವಚನ- ಬಹುವಚನ ರೂಪದಲ್ಲಿದ್ದವು. ನಡುಗನ್ನಡ ಕಾಲದಲ್ಲಿ ನಾನ್, ನಾಂ ಎಂಬ ರೂಪ ಪಡೆದವು. ಹೊಸಗನ್ನಡದ ವೇಳೆ ಸ್ವರಾಂತ್ಯ ರೂಪ ಪಡೆದು ನಾನು, ನಾವು ಎಂಬ ಬಳಕೆಯಾಯಿತು
1ಆ). ಮಧ್ಯಮ ಪುರುಷ ಸರ್ವನಾಮ : ತನ್ನ ಎದುರಿಗೆ ಇರುವವರನ್ನು ಸಂಬೋಧಿಸಲು ಬಳಸುವ ಪದವೇ ಮಧ್ಯಮ ಪುರುಷ ಸರ್ವನಾಮ. ಹಳೆಗನ್ನಡ ಕಾಲದಲ್ಲಿ ನೀಂ – ನೀನ್ ಎಂದು ಬಳಕೆಯಾಗುತ್ತಿತ್ತು. ಹೊಸಗನ್ನಡ ಕಾಲದಲ್ಲಿ ಸ್ವರಾಂತ್ಯರೂಪ ಪಡೆದು ನೀನು, ನೀವು ಎಂದು ಬಳಕೆಯಾಗುತ್ತಿದೆ.
1ಇ). ಪ್ರಥಮ ಪುರುಷ : ತಾನು ಹಾಗೂ ಎದುರಿನ ವ್ಯಕ್ತಿ ಇಬ್ಬರನ್ನು ಹೊರತುಪಡಿಸಿ ಮೂರನೇ ವಸ್ತು- ವ್ಯಕ್ತಿಯನ್ನು ಸೂಚಿಸಲು ಬಳಸುವ ಪದವೇ ಪ್ರಥಮ ಪುರುಷ ಸರ್ವನಾಮ. ಹಳೆಗನ್ನಡದಲ್ಲಿ ಅವನ್, ಅವಳ್, ಆತನ್, ಇವನ್ ಎಂದು ಬಳಕೆಯಾಗುತ್ತಿತ್ತು. ಹೊಸಗನ್ನಡದಲ್ಲಿ ಅವನು, ಇವಳು, ಅದು, ಇದು ಎಂದು ಬಳಕೆಯಾಗುತ್ತಿವೆ.
ಪ್ರಶ್ನಾರ್ಥಕ ಸರ್ವನಾಮ :
ಪ್ರಶ್ನಿಸಲು ಬಳಕೆ ಮಾಡುವ ಸರ್ವನಾಮಗಳೇ ಪ್ರಶ್ನಾರ್ಥಕ ಸರ್ವನಾಮಗಳಾಗಿವೆ. ಹಳೆಗನ್ನಡ ಕಾಲಘಟ್ಟದಲ್ಲಿ ಏಕೆ, ಏನ್, ಅವನ್, ಅವಳ್, ಅವುದ್, ಅವು ಎಂದು ಬಳಕೆಯಾಗುತ್ತಿತ್ತು. ಹೊಸಗನ್ನಡದ ಕಾಲದಲ್ಲಿ ಈ ಪದಗಳು ಸ್ವರಾಂತ್ಯ ಹೊಂದಿ ಏಕೆ, ಏನು, ಅವನು, ಅವಳು, ಯಾವುದು, ಯಾವುವು ಎಂಬಂತೆ ಬದಲಾವಣೆಗೊಂಡಿದೆ.
ಆತ್ಮಾರ್ಥಕ ಸರ್ವನಾಮ :
ತನ್ನನ್ನು ತಾನೇ ಆತ್ಮಪೂರ್ವಕವಾಗಿ ಸಂಬೋಧಿಸಿಕೊಳ್ಳಲು ಬಳಸುವ ಸರ್ವನಾಮವೇ ಆತ್ಮಾರ್ಥಕ ಸರ್ವನಾಮವಾಗಿದೆ. ಹಳೆಗನ್ನಡದಲ್ಲಿ ‘ ತಾನ್’ ಎಂಬುದು ಏಕ ವಚನವಾಗಿಯೂ, ‘ತಾಮ್’ ಎಂಬುದು ಬಹುವಚನವಾಗಿ ಬಳಕೆಗೊಡಿದ್ದವು. ಹೊಸಗನ್ನಡದಲ್ಲಿ ತಾನು, ತಾವು ಎಂದು ಬಳಕೆಯಾಗುತ್ತಿದೆ.
ಸಂಧಿ ಎಂದರೇನು?
ಎರಡು ಅಕ್ಷರಗಳ ನಡುವೆ (ಸ್ವರ ಇಲ್ಲವೆ ವ್ಯಂಜನ) ಕಾಲ ವಿಳಂಬವಿಲ್ಲದಂತೆ ಮತ್ತು ಅರ್ಥಕ್ಕೆ ವ್ಯತ್ಯಾಸ ಬರದಂತೆ ಸೇರಿಸಿ ಉಚ್ಛರಿಸುವುದು ಸಂಧಿ ಎನಿಸುವುದು.
ಉದಾಹರಣೆ : ಹೊಸಗನ್ನಡ = ಹೊಸ + ಕನ್ನಡ,
ಹೊಸ - ಪೂರ್ವಪದ, ಕನ್ನಡ - ಉತ್ತರಪದ
ಪೂರ್ವಪದ + ಉತ್ತರಪದ = ಸಂಧಿಪದ.
ಕನ್ನಡ ಭಾಷೆಯಲ್ಲಿ ಹಲವಾರು ಸಂಸ್ಕೃತ ಶಬ್ಧಗಳು ಸೇರಿರುವುದರಿಂದ, ಕೆಲವು ಸಂಸ್ಕೃತ ಸಂಧಿಗಳನ್ನು ಕನ್ನಡದಲ್ಲಿ ಸೇರಿಸಲಾಗಿದೆ. ಸಂಧಿ ಕಾರ್ಯವು ಎರಡು ಕನ್ನಡ ಶಬ್ಧಗಳ ನಡುವೆ ಏರ್ಪಟ್ಟರೆ ಅವನ್ನು ಕನ್ನಡ ಸಂಧಿಯಾಗಿ ಮತ್ತು ಎರಡರಲ್ಲಿ ಒಂದು ಸಂಸ್ಕೃತ ಪದವಾಗಿದ್ದರೆ ಅವನ್ನು ಸಂಸ್ಕೃತ ಸಂಧಿಯಾಗಿ ಪರಿಗಣಿಸಲಾಗುತ್ತದೆ.
ಕನ್ನಡ ಸಂಧಿಗಳು : ಕನ್ನಡ ವ್ಯಾಕರಣದಲ್ಲಿನ ಮುಖ್ಯ ಸಂಧಿಗಳು ಮೂರು.
1. ಲೋಪಸಂಧಿ.
2. ಆಗಮಸಂಧಿ.
3. ಆದೇಶಸಂಧಿ.
1. ಲೋಪಸಂಧಿ :ಸಂಧಿಯಾಗುವಾಗ ಸ್ವರದ ಮುಂದೆ ಸ್ವರವು ಬಂದಾಗ, ಅರ್ಥವು ಕೆಡದಿದ್ದ ಪಕ್ಷದಲ್ಲಿ ಮೊದಲ ಪದದ ಕೊನೆಯ ಸ್ವರವು ಲೋಪವಾಗುವುದು.ಆದ್ದರಿಂದಲೇ ಇಂತಹ ಸಂಧಿಯನ್ನು ಲೋಪ ಸಂಧಿ ಎನ್ನುವರು.
ಉದಾಹರಣೆ:
ಹಣದ +ಆಸೆ = ಹಣದಾಸೆ (ಅಕಾರ ಲೋಪ)
ನಾವು + ಎಲ್ಲಾ = ನಾವೆಲ್ಲಾ ('ಉ' ಕಾರ ಲೋಪ)
ಊರು + ಊರು = ಊರೂರು (ಉಕಾರ ಲೋಪ)
ಬೇರೆ + ಒಂದು = ಬೇರೊಂದು ('ಎ' ಕಾರ ಲೋಪ)
ನನಗೆ + ಅಲ್ಲದೆ = ನನಗಲ್ಲದೆ (ಎಕಾರ ಲೋಪ)
ಬೇರೆ + ಒಬ್ಬ =ಬೇರೊಬ್ಬ (ಏಕಾರ ಲೋಪ)
2.ಆಗಮ ಸಂಧಿ :
ಸಂಧಿ ಕಾರ್ಯ ಮಾಡಿದಾಗ ಒಂದು ಅಕ್ಷರವು ಹೊಸದಾಗಿ ಬಂದು ಸೇರುವುದನ್ನು ಆಗಮ ಸಂಧಿ ಎನ್ನುವರು.
ಆಗಮ ಸಂಧಿ ಇದರಲ್ಲಿ 2 ವಿಧಗಳು
1. ಯಕಾರಾಗಮ ಸಂಧಿ.
2. ವಕಾರಾಗಮ ಸಂಧಿ.
1. ಯಕಾರಾಗಮ ಸಂಧಿ:
ಆ, ಇ, ಈ, ಎ, ಏ, ಐ, ಓ ಸ್ವರಗಳ ಮುಂದೆ ಸ್ವರವು ಬಂದರೆ
ಸಂಧಿ ಪದದಲ್ಲಿ 'ಯ್' ವ್ಯಂಜನವು ಹೊಸದಾಗಿ ಆಗಮವಾಗುತ್ತದೆ. ಇದಕ್ಕೆ ಯಕಾರಾಗಮ ಸಂಧಿ ಎಂದು ಹೆಸರು.
ಉದಾಹರಣೆ:
ಕೆರೆ + ಅಲ್ಲಿ = ಕೆರೆಯಲ್ಲಿ
ಗಾಳಿ + ಅನ್ನು = ಗಾಳಿಯನ್ನು
ತಾಯಿ + ಅನ್ನು = ತಾಯಿಯನ್ನು,
ಕೈ + ಇಂದ = ಕೈಯಿಂದ.
2. ವಕಾರಾಗಮ ಸಂಧಿ :
ಉ, ಊ, ಋ, ಓ, ಔ ಸ್ವರಗಳ ಮುಂದೆ ಸ್ವರವು ಬಂದರೆ ಸಂಧಿ ಪದದಲ್ಲಿ 'ವ್' ವ್ಯಂಜನವು ಹೊಸದಾಗಿ ಆಗಮವಾಗುತ್ತದೆ. ಇದಕ್ಕೆ ವಕಾರಾಗಮ ಸಂಧಿ ಎಂದು ಹೆಸರು.
ಉದಾಹರಣೆ:
ಕರು + ಅನ್ನು = ಕರುವನ್ನು
ಹೂ + ಉ = ಹೂವು
ಗೋ + ಅನ್ನು = ಗೋವನ್ನು
ಮಗು + ಇಗೆ = ಮಗುವಿಗೆ
ಮಾತೃ + ಅನ್ನು = ಮಾತೃವನ್ನು
3. ಆದೇಶಸಂಧಿ :
ಸಂಧಿಯಾಗುವಾಗ ಒಂದು ವ್ಯಂಜನದ ಸ್ಥಾನದಲ್ಲಿ ಮತ್ತೊಂದು ವ್ಯಂಜನ ಬರುವುದಕ್ಕೆ ಆದೇಶ ಸಂಧಿಯೆಂದು ಕರೆಯುತ್ತಾರೆ.
ಆದೇಶ ಸಂಧಿಯಲ್ಲಿ ಉತ್ತರ ಪದದ ಮೊದಲಲ್ಲಿ ಇರುವ ಕ, ಜ, ಟ, ತ, ಪ ಎಂಬ ವ್ಯಂಜನಗಳಿಗೆ ಪ್ರತಿಯಾಗಿ, ಕ್ರಮವಾಗಿ ಗ, ಜ, ಡ, ದ, ಬ ಎಂಬ ವ್ಯಂಜನಗಳು ಆದೇಶವಾಗುವುವು.
ಉದಾಹರಣೆ:
ಮಳೆ + ಕಾಲ = ಮಳೆಗಾಲ
ಬೆಟ್ಟ+ ತಾವರೆ = ಬೆಟ್ಟದಾವರೆ
ಕಣ್ + ಪನಿ = ಕಂಬನಿ
ಹೊಸ + ಕನ್ನಡ = ಹೊಸಗನ್ನಡ
ಸಂಸ್ಕೃತ ಸಂಧಿಗಳು :
ಸಂಸ್ಕೃತ ಸಂಧಿಗಳಲ್ಲಿ ಮುಖ್ಯವಾಗಿ 2 ಭೇದಗಳು.
ಸಂಸ್ಕೃತ ಸ್ವರಸಂಧಿಗಳು & ಸಂಸ್ಕೃತ ವ್ಯಂಜನಸಂಧಿಗಳು.
ಸಂಸ್ಕೃತ ಸ್ವರಸಂಧಿಗಳು
1 ಸವರ್ಣ ಧೀರ್ಘ ಸಂಧಿ
2 ಗುಣ ಸಂಧಿ
3 ವೃದ್ಧಿ ಸಂಧಿ
4 ಯಣ್ ಸಂಧಿ
ಸಂಸ್ಕೃತ ವ್ಯಂಜನಸಂಧಿಗಳು
1.ಜಶ್ತ್ವ ಸಂಧಿ
2.ಶ್ಚುತ್ವ ಸಂಧಿ
3.ಅನುನಾಸಿಕಸಂಧಿ
ಸಂಸ್ಕೃತ ಸ್ವರಸಂಧಿಗಳು
1.ಸವರ್ಣದೀರ್ಘಸಂಧಿ :
ಎರಡು ಪದಗಳು ಸೇರುವಾಗ ಪೂರ್ವಪದದ ಕಡೆಯಲ್ಲಿ ಅ ಆ ಇ ಈ ಉ ಊ ಸ್ವರಗಳಿದ್ದು ಉತ್ತರ ಪದದ ಆದಿಯಲ್ಲಿ ಅದೇ ಅಕ್ಷರ ಎದುರಾದ ಎರಡು ಸ್ವರಗಳು ಸೇರಿ ಒಂದೇ ದೀರ್ಘಸ್ವರ ಬರುವುದು. ಸಂಧಿಕಾರ್ಯದಲ್ಲಿ ಸವರ್ಣಸ್ವರಗಳು ಸೇರುವದರಿಂದ ಇದನ್ನು ಸವರ್ಣದೀರ್ಘಸಂಧಿ ಎಂದು ಕರೆಯುವರು
ಉದಾಹರಣೆ :
ದೇವ + ಅಸುರ = ದೇವಾಸುರ (ಅ + ಅ)
ಸುರ + ಅಸುರ = ಸುರಾಸುರ (ಅ + ಅ)
ಮಹಾ + ಆತ್ಮಾ = ಮಹಾತ್ಮ (ಆ + ಆ)
ಕವಿ + ಇಂದ್ರ = ಕವೀಂದ್ರ (ಇ + ಇ)
ಗಿರಿ + ಈಶ = ಗಿರೀಶ (ಇ + ಈ)
ಲಕ್ಷೀ + ಈಶ = ಲಕ್ಷೀಶ (ಈ + ಈ)
ಗುರು + ಉಪದೇಶ = ಗರೂಪದೇಶ (ಉ + ಉ)
2. ಗುಣಸಂಧಿ :
ಪೂರ್ವಪದದ ಕಡೆಯಲ್ಲಿರುವ ಅ ಅ ಕಾರಗಳ ಮುಂದೆ ಇ ಈ ಕಾರಗಳು ಬಂದರೆ ಏಕಾರವು , ಉ,ಊ ಕಾರಗಳ ಮುಂದೆ ಓ ಕಾರವು, ೠ ಕಾರವು ಬಂದರೆ ಅರ್ ಎಂಬುದೂ ಆದೇಶವಾಗಿ ಬರುತ್ತದೆ ಇದನ್ನು ಗುಣಸಂಧಿ ಎಂದು ಕರೆಯುವರು
ಉದಾಹರಣೆ
ಸುರ + ಇಂದ್ರ = ಸುರೇಂದ್ರ (ಅ + ಇ)
ಧರಾ + ಇಂದ್ರ = ಧರೇಂದ್ರ (ಆ + ಇ)
ಮಹಾ + ಈಶ್ವರ = ಮಹೇಶ್ವರ (ಆ + ಈ)
ಚಂದ್ರ + ಉದಯ = ಚಂದ್ರೋದಯ (ಅ + ಉ)
ಏಕ + ಊನ = ಏಕೋನ (ಅ + ಊ)
ದೇವ + ಋಷಿ = ದೇವರ್ಷಿ (ಅ + ಋ)
ಮಹಾ + ಋಷಿ = ಮಹರ್ಷಿ (ಆ + ಋ)
3 ವೃದ್ಧಿಸಂಧಿ :
ಅ ಆ ಕಾರಗಳಿಗೆ ಏ ಐ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ಐ ಕಾರವೂ, ಓ ಔ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ಔ ಕಾರವೂ ಆದೇಶಗಳಾಗಿ ಬರುತ್ತವೆ. ಇದಕ್ಕೆ ವೃದ್ಧಿಸಂಧಿ ಯೆನ್ನುವರು.
ಉದಾಹರಣೆ :
ಲೋಕ + ಏಕವೀರ = ಲೋಕೈಕವೀರ (ಅ + ಏ)
ಜನ + ಐಕ್ಯ = ಜನೈಕ್ಯ (ಅ + ಐ)
ವಿದ್ಯಾ + ಐಶ್ವರ‍್ಯ = ವಿದ್ಯೈಶ್ವರ‍್ಯ (ಆ + ಐ)
ಜಲ + ಓಘ = ಜಲೌಘ (ಅ + ಓ)
ಘನ + ಔದಾರ‍್ಯ = ಘನೌದಾರ‍್ಯ (ಅ + ಔ)
ಮಹಾ + ಔದಾರ‍್ಯ = ಮಹೌದಾರ‍್ಯ (ಆ + ಔ)
ಏಕ + ಏಕ = ಏಕೈಕ (ಅ + ಏ)
ಅಷ್ಟ + ಐಶ್ವರ‍್ಯ = ಅಷ್ಟೈಶ್ವರ‍್ಯ (ಅ + ಐ)
ವನ + ಓಷಧಿ = ವನೌಷಧಿ (ಅ + ಓ)
ಮಹಾ + ಔನ್ನತ್ಯ = ಮಹೌನ್ನತ್ಯ (ಆ + ಔ)
4. ಯಣ್ ಸಂಧಿ:
ಇ, ಈ, ಉ, ಊ, ಋ ಕಾರಗಳಿಗೆ ಸವರ್ಣವಲ್ಲದ ಸ್ವರ ಪರವಾದರೆ ಇ ಈ ಕಾರಗಳಿಗೆ ಯ್ ಕಾರವೂ, ಉ ಊ ಕಾರಗಳಿಗೆ ವ್ ಕಾರವೂ, ಋ ಕಾರಕ್ಕೆ ರ್ ಕಾರ ವೂ ಆದೇಶಗಳಾಗಿ ಬರುತ್ತವೆ. ಇದಕ್ಕೆ ಯಣ್ ಸಂಧಿಯೆಂದು ಹೆಸರು.
ಉದಾಹರಣೆ
ಅತಿ + ಅಂತ = ಅತ್ಯಂತ (ಇ + ಅ = ಯ್‌ಅ)
ಮನು + ಅಂತರ = ಮನ್ವಂತರ (ಉ + ಅ =ವ್‌ಅ)
ಪಿತೃ + ಆರ್ಜಿತ =ಪಿತ್ರಾರ್ಜಿತ (ಋ + ಆ = ರ್‌ಆ)
ಅತಿ + ಅವಸರ = ಅತ್ಯವಸರ (ಇ + ಅ)
ಜಾತಿ + ಅತೀತ = ಜಾತ್ಯಾತೀತ (ಇ + ಅ)
ಕೋಟಿ + ಅಧೀಷ = ಕೋಟ್ಯಧೀಶ (ಇ + ಅ)
ಗತಿ + ಅಂತರ = ಗತ್ಯಂತರ (ಇ + ಅ)
ಪ್ರತಿ + ಉತ್ತರ = ಪ್ರತ್ಯುತ್ತರ (ಇ + ಉ)
ಪತಿ + ಅರ್ಥ = ಪತ್ಯರ್ಥ (ಇ + ಅ)
ಅತಿ + ಆಶೆ = ಅತ್ಯಾಶೆ (ಇ + ಆ)
ಗುರು + ಆಜ್ಞೆ = ಗುರ‍್ವಾಜ್ಞೆ (ಉ + ಆ)
ವ್ಯಂಜನ ಸಂಧಿಗಳು
1.ಜಶ್ತ್ವ ಸಂಧಿ :
ಪೂರ್ವಪದದ ಕೊನೆಯಲ್ಲಿರುವ ವರ್ಗದ ಪ್ರಥಮಾಕ್ಷರಗಳಿಗೆ ಯಾವ ವರ್ಣ ( ಕ , ಚ , ಟ , ತ , ಪ ) ಎದುರಾದರೂ ಅದೇ ವರ್ಗದ ಮೂರನೇ ಅಕ್ಷರ ( ಗ , ಜ , ಡ , ದ , ಬ ) ಆದೇಶವಾಗಿ ಬಂದು ಜಶ್ತ್ವ ಸಂಧಿಯಾಗುವುದು. ಪ್ರತಿ ವರ್ಗದ ಮೂರನೇ ಅಕ್ಷರ ಎಂದರ್ಥ .
ಉದಾಹರಣೆ :
ದಿಕ್ + ಅಂತ = ದಿಗಂತ (ಕ್ + ಅ = ಗ್‌ಅ)
ಅಚ್ + ಅಂತ = ಅಜಂತ (ಚ್ + ಅ = ಜ್‌ಅ)
ಷಟ್ + ಆನನ =ಷಡಾನನ (ಟ್ + ಅ = ಡ್‌ಅ)
ಸತ್ + ಆನಂದ =ಸದಾನಂದ (ತ್ + ಆ = ದ್‌ಆ)
ಅಪ್ + ಧಿ = ಅಬ್ಧಿ (ಪ್ + ಧಿ = ಬ್‌ಧಿ)
2. ಶ್ಚುತ್ವ ಸಂಧಿ :
‘ ಶ್ಚು ‘ ಎಂದರೆ ಶಕಾರ ಚವರ್ಗಾಕ್ಷರಗಳು . ( ಶ್ = ಶಕಾರ , ಚು = ಚ ಛ ಜ ಝು ಇ ) ಈ ಆರು ಅಕ್ಷರಗಳೇ ‘ ಶ್ಚು ‘ ಎಂಬ ಸಂಜ್ಞೆಯಿಂದ ಸಂಸ್ಕೃತ ವ್ಯಾಕರಣದಲ್ಲಿ ಕರೆಯಿಸಿಕೊಳ್ಳುತ್ತವೆ . ಇವುಗಳು ಆದೇಶವಾಗಿ ಬರುವುದೇ ಶ್ಚುತ್ವಸಂಧಿ ಎನಿಸುವುದು .
ಉದಾಹರಣೆ :
ಮನಸ್ +ಶುದ್ಧಿ = ಮನಶುದ್ಧಿ ( ಸಕಾರಕ್ಕೆ ಶಕಾರ )
ಯಶಸ್ + ಚಂದ್ರಿಕೆ = ಯಶಶ್ಚಂದ್ರಿಕೆ ( ಸಕಾರಕ್ಕೆ ಚಕಾರ )
ಸತ್ + ಚಿತ್ರ = ಸಚ್ಚಿತ್ರ ( ತಕಾರಕ್ಕೆ ಚಕಾರ )
ಬೃಹತ್ + ಛತ್ರ =ಬೃಹಕೃತ್ರ ( ತಕಾರಕ್ಕೆ ಛಕಾರ )
3 ಅನುನಾಸಿಕಸಂಧಿ :
(೨೬) ವರ್ಗ ಪ್ರಥಮ ವರ್ಣಗಳಿಗೆ ಯಾವ ಅನುನಾಸಿಕಾಕ್ಷರ ಪರವಾದರೂ, ಅವುಗಳಿಗೆ ಅಂದರೆ ಕ ಚ ಟ ತ ಪ ವ್ಯಂಜನಗಳಿಗೆ ಕ್ರಮವಾಗಿ ಙ ಞ ಣ ನ ಮ ವ್ಯಂಜನಗಳು ಆದೇಶಗಳಾಗಿ ಬರುತ್ತವೆ.
ಉದಾಹರಣೆಗೆ:-
ಷಟ್ + ಮಾಸ = ಷಣ್ಮಾಸ
ಚಿತ್ + ಮಯ = ಚಿನ್ಮಯ
ಸತ್ + ಮಣಿ = ಸನ್ಮಣಿ
ಸಮಾಸ ಎದರೇನು?
ಎರಡು ಅಥವಾ ಅನೇಕ ಪದಗಳು ಕೂಡಿ, ಒಂದು ಅರ್ಥವನ್ನು ಹೇಳುವಾಗ, ವಿಭಕ್ತಿ ಪ್ರತ್ಯಯಗಳು ಲೋಪವಾಗಿ, ಒಂದು ಪದ ಆಗುವುದನ್ನು ಸಮಾಸ ಎನ್ನಲಾಗುವುದು.
ಸಮಾಸ ಪದದಲ್ಲಿ ಮುಖ್ಯವಾಗಿ ಎರಡು ಪದಗಳಿರುತ್ತವೆ. ಮೊದಲು ಬರುವ ಪದ ಪೂರ್ವ ಪದ ಆಗಿರುತ್ತದೆ. ಆನಂತರದಲ್ಲಿ ಬರುವ ಪದ ಉತ್ತರ ಪದ ಆಗಿರುತ್ತದೆ. ಸಮಾಸ ಪದವನ್ನು ಬಿಡಿಸಿ ಬರೆದಾಗ ವಿಗ್ರಹ ವಾಕ್ಯ ಎನಿಸುವುದು.
ಉದಾಹರಣೆ :
ಪೂರ್ವಪದ - ಉತ್ತರಪದ – ಸಮಾಸಪದ
ಮಳೆಯ + ಕಾಲ = ಮಳೆಗಾಲ
ಹಿರಿಯ + ಜೇನು = ಹೆಚ್ಚೇನು
ನೀಲವಾದ + ಉತ್ಪಲ = ನೀಲೋತ್ಪಲ
ದನಗಳೂ + ಕರುಗಳೂ = ದನಕರುಗಳೂ
ಸಮಾಸ ಪದಗಳಾಗುವ ಬಗೆ,
1.ಎರಡು ಸಂಸ್ಕೃತ ಪದಗಳ ಸೇರ್ಪಡೆಯಿಂದ.
2.ಎರಡು ಕನ್ನಡ ಪದಗಳು ಪರಸ್ಪರ ಸೇರುವುದರಿಂದ.
3.ತದ್ಭವ-ತದ್ಭವ ಪದಗಳು ಕೂಡುವುದರಿಂದ.
4.ಕನ್ನಡ ಪದದೊಂದಿಗೆ ತದ್ಭವ ಪದವು ಸೇರಿದಾಗ.
ಸಮಾಸದಲ್ಲಿ ವಿಧಗಳು
1.ತತ್ಪುರುಷ ಸಮಾಸ
2.ಕರ್ಮಧಾರಯ ಸಮಾಸ
3,ಬಹುವ್ರೀಹಿ ಸಮಾಸ
4.ಕ್ರಿಯಾ ಸಮಾಸ
5.ಅಂಶಿಸಮಾಸ
6.ದ್ವಿಗುಸಮಾಸ
7.ದ್ವಂದ್ವಸಮಾಸ
8.ಗಮಕ ಸಮಾಸ
1. ತತ್ಪುರುಷ ಸಮಾಸ-
ಎರಡು ನಾಮ ಪದಗಳು ಸೇರಿದಾಗ, ಉತ್ತರ ಪದದ ಅರ್ಥವು ಪ್ರಧಾನವಾಗಿದ್ದರೆ, ತತ್ಪುರುಷ ಸಮಾಸ ಆಗುವುದು.
ಉದಾಹರಣೆ:
ಉತ್ತಮರಲ್ಲಿ + ಉತ್ತಮ = ಉತ್ತಮೋತ್ತಮ
ದೇವರ + ಮಂದಿರ = ದೇವಮಂದಿರ
ಕಣ್ಣಿನಿಂದ + ಕುರುಡ = ಕಣ್ಣುಕುರುಡ
ಬೆಟ್ಟದ + ತಾವರೆ = ಬೆಟ್ಟದಾವರೆ
ವ್ಯಾಘ್ರದ ದೆಸೆಯಿಂದ + ಭಯ = ವ್ಯಾಘ್ರಭಯ
ಇಂದ್ರನ + ಲೋಕ = ಇಂದ್ರಲೋಕ
2. ಕರ್ಮಧಾರಯ ಸಮಾಸ-
ಪೂರ್ವ ಹಾಗೂ ಉತ್ತರ ಪದಗಳು ಲಿಂಗವಚನ, ವಿಭಕ್ತಿಗಳಿಂದ ಸಮಾಸವಾಗಿರುತ್ತದೆ. ವಿಶೇಷಣ-ವಿಶೇಷ ಸಂಬಂಧದಿಂದ ಕೂಡಿರುತ್ತದೆ. ಇದನ್ನೇ ಕರ್ಮಧಾರಯ ಸಮಾಸ ಎನ್ನಲಾಗುವುದು.
ಉದಾಹರಣೆ :
ಕೆಂಪಾದ + ತಾವರೆ = ಕೆಂದಾವರೆ
ನೀಲವಾದ + ಸಮುದ್ರ = ನೀಲ ಸಮುದ್ರ
ಚಿಕ್ಕದು + ಮಗು = ಚಿಕ್ಕಮಗು
ಹಿರಿದಾದ + ಮರ = ಹೆಮ್ಮರ
ಇನಿದು + ಸರ = ಇಂಚರ
3. ಬಹುವ್ರೀಹಿ ಸಮಾಸ –
ಎರಡು ಇಲ್ಲವೇ ಅನೇಕ ಪದಗಳು ಕೂಡಿಕೊಂಡು ಸಮಾಸ ಆದಾಗ ಬೇರೊಂದು ಅರ್ಥದ ಪದವು ಪ್ರಧಾನವಾಗಿ ಬಂದರೆ, ಅಂತಹ ಸಮಾಸವನ್ನು ಬಹುವ್ರೀಹಿ ಸಮಾಸ ಎನ್ನುವರು.
ಉದಾಹರಣೆ:
ಹಣೆಯಲ್ಲಿ ಕಣ್ಣು ಉಳ್ಳವನು ಅವನು ಹಣೆಗಣ್ಣ (ಈಶ್ವರ)
ಪೀತವಾದ ಅಂಬರವನ್ನು ಯಾರು ಧರಿಸಿರುವರೋ ಅವರು ಪೀತಾಂಬರಿ (ವಿಷ್ಣು)
ಚಕ್ರವನ್ನು = ಪಾಣಿಯಲ್ಲಿ ಯಾರು ಧರಿಸಿರುವರೋ ಅವರು ಚಕ್ರಪಾಣಿ (ವಿಷ್ಣು)
ಪೂರ್ವ- ಉತ್ತರ ಪದಗಳೆರಡೂ ಒಂದೇ ವಿಭಕ್ತಿಯಲ್ಲಿ ಇರುತ್ತವೆ.
4. ಕ್ರಿಯಾಸಮಾಸ-
ಪೂರ್ವ ಪದವು ಸಾಮಾನ್ಯವಾಗಿ ದ್ವಿತೀಯಾ ವಿಭಕ್ತಿಯಲ್ಲಿದ್ದು ಉತ್ತರ ಪದವು ಕ್ರಿಯಾಪದ ಆಗಿದ್ದರೆ, ಅಂತಹ ಸಮಾಸವು ಕ್ರಿಯಾಸಮಾಸ ಎನಿಸುವುದು.
ಉದಾಹರಣೆ :
ಕೈಯನ್ನು + ಹಿಡಿದು = ಕೈಹಿಡಿದು
ಮೈಯನ್ನು + ತೊಳೆದು = ಮೈತೊಳೆದು
ಆಟವನ್ನು + ಅಡಿ = ಆಟವಾಡಿ
ಪೂಜೆಯನ್ನು + ಮುಗಿಸಿ = ಪೂಜೆಮುಗಿಸಿ
ಕಣ್ಣಿನಿಂದ + ಕೆಡು = ಕಂಗೆಡು
5.ಅಂಶಿಸಮಾಸ
ಅವ್ಯಯ ಮತ್ತು ನಾಮಪದಗಳು ಒಟ್ಟಿಗೆ ಸೇರಿ ಬಂದಾಗ ಅಂಶಿಸಮಾಸ ಆಗುವುದು
:ತಲೆಯಮುಂದು ಮುಂದಲೆಕಾಲಿನ ಹಿಂದುಹಿಂಗಾಲು ತಲೆಯಹಿಂದು ಹಿಂದಲೆನೋಟದ ಮುಂದುಮುನ್ನೋಟ ಅಂಶಿ ಅಂದರೆ ಭಾಗಶಃ ಎಂದು ಅರ್ಥಆಗುತ್ತದೆ ಮೇಲಿನ ಉದಾಹರಣೆಗಳು ಈರೀತಿಯ ಭಾಗಗಳು ಸೇರಿಪೂರ್ಣ ಪದ ಎನಿಸಿವೆ.
6.ದ್ವಿಗುಸಮಾಸ
ಪೂರ್ವಪದವು ಸಂಖ್ಯಾವಾಚಕವೂ ಉತ್ತರಪದವು ನಾಮಪದವೂ ಆಗಿದ್ದರೆ ಪರಸ್ಪರ ಸೇರ್ಪಡೆ ಆಗಿದ್ದರೆ ದ್ವಿಗುಸಮಾಸ ಎನಿಸುವುದು.
ಉದಾಹರಣೆ:
ಎರಡು + ಮಡಿ = ಇಮ್ಮಡಿ
ಹತ್ತು + ರೂಪಾಯಿಗಳು = ಹತ್ತುರೂಪಾಯಿಗಳು
ದಶ + ದಿಸೆಗಳು = ದಶದಿಸೆಗಳು
ಸಪ್ತ + ಸಮುದ್ರಗಳು = ಸಪ್ತಸಮುದ್ರಗಳು
ಮೂರು + ಗಾವುದ = ಮೂರು ಗಾವುದ
7. ದ್ವಂದ್ವ ಸಮಾಸ
ಪೂರ್ವ-ಉತ್ತರ ಪದಗಳೆರಡೂ ಸಮಾಸ ಆಗುವಾಗ ಪ್ರಮುಖ ಎನಿಸಿದ್ದರೆ, ಅಂತಹ ಸಮಾಸವನ್ನು ದ್ವಂದ್ವ ಸಮಾಸ ಎನ್ನುವರು.
ಉದಾಹರಣೆ :
ಆನೆಗಳೂ, ಕುದುರೆಗಳೂ, ಒಂಟೆಗಳೂ = ಆನೆ ಕುದುರೆ ಒಂಟೆಗಳು
ಕೆರೆಗಳೂ, ಕಟ್ಟೆಗಳೂ, ಬಾವಿಗಳೂ = ಕೆರೆ ಕಟ್ಟೆ ಬಾವಿಗಳು
ಮರವೂ, ಗಿಡವೂ, ಬಳ್ಳಿಯೂ = ಮರ ಗಿಡ ಬಳ್ಳಿಗಳು
ಸೂರ್ಯನೂ, ಚಂದ್ರನೂ, ನಕ್ಷತ್ರವೂ = ಸೂರ್ಯ ಚಂದ್ರ ನಕ್ಷತ್ರಗಳೂ
8. ಗಮಕ ಸಮಾಸ
ಪೂರ್ವಪದವು ಸರ್ವನಾಮವೋ, ಕೃದಂತವೋ ಆಗಿದ್ದು, ಉತ್ತರ ಪದ ನಾಮಪದವೆನಿಸಿದ್ದು, ಎರಡೂ ಪದಗಳ ಸೇರ್ಪಡೆ ಆಗಿದ್ದರೆ, ಅಂತಹ ಸಮಾಸವು ಗಮಕ ಸಮಾಸ ಎನಿಸುವುದು.
ಉದಾಹರಣೆ:
ಅದು + ಮನೆ = ಆ ಮನೆ
ಇದು + ಹಣ್ಣು = ಈ ಹಣ್ಣು
ಇವನು + ಹುಡುಗ = ಈ ಹುಡುಗ
ಅವರು + ಸಹೋದರರು = ಆ ಸಹೋದರರು
ಇವು + ಪುಸ್ತಕಗಳು = ಈ ಪುಸ್ತಕಗಳು
ಅವನು + ಮನುಷ್ಯ = ಆ ಮನುಷ್ಯ
8ಅ. ಅರಿ ಸಮಾಸ:
ಈ ಎರಡೂ ಸಮಾಸಗಳಲ್ಲದೆ ಅರಿ ಸಮಾಸ ಎಂಬ ಇನ್ನೂ ಒಂದು ಭೇದ ಉಂಟು. ಕನ್ನಡ ಪದದೊಂದಿಗೆ ಸಂಸ್ಕೃತ ಪದವನ್ನು ಸೇರಿಸಿ ಸಮಾಸ ಮಾಡಿದಾಗ, ಅರಿಸಮಾಸ ಆಗುವುದು.
ಉದಾಹರಣೆ:
ಕನ್ನಡಪದ + ಸಂಸ್ಕೃತಪದ = ಅರಿ ಸಮಾಸ
ಮಳೆಯ + ಕಾಲ = ಮಳೆಗಾಲ
ತುರಗದ + ದಳ = ತುರಗದಳ
ದಳದ + ಪತಿ = ದಳಪತಿ
1.ಪೂರ್ಣವಿರಾಮ (.) Full stop
2.(,)ಅಲ್ಪವಿರಾಮ (Comma)
3.(;)ಅರ್ಧವಿರಾಮ (Semi colon)
4.(?)ಪ್ರಶ್ನೆಸೂಚಕ ಚಿಹ್ನೆ (Question mark)
5.(!)ಆಶ್ಚರ್ಯಸೂಚಕ ಚಿಹ್ನೆ (Exclamatory mark)
6.(“ “)ಉದ್ಧರಣ ಚಿಹ್ನೆ ( Inverted Commas)
7.(‘ ‘) ವಿಶೇಷಕ(Inverted commas)
8.( )ಆವರಣ (Brackets)
9.(:) ವಿವರಣಾತ್ಮಕ(Colen)
10.(+)ಅಧಿಕಚಿಹ್ನೆ (Addition mark)
11.(=) ಸಮಾನಾರ್ಥಕಚಿಹ್ನೆ(Equal)
1.ಪೂರ್ಣವಿರಾಮ(.) Full stop
ಆವರಣದಲ್ಲಿ ಕೊಟ್ಟಿರುವ ಗುರುತು ಪೂರ್ಣವಿರಾಮದ ಸಂಕೇತ. ಬರವಣಿಗೆಯಲ್ಲಿ ಪೂರ್ಣವಿರಾಮದ ಸಂಕೇತ. ಬರವಣಿಗೆಯಲ್ಲಿ ಪ್ರತಿವಾಕ್ಯವೂ ಪೂರ್ಣ ಆದಾಗ ವಾಕ್ಯದ ಕೊನೆಯಲ್ಲಿ ಈ ಗುರುತನ್ನುಇಡಬೇಕಾಗುವುದು. ಇಲ್ಲವಾದರೆ ಅರ್ಥೈಸಿಕೊಳ್ಳುವಾಗ ಹಲವಾರು ಅನರ್ಥಗಳಿಗೆ ಆಸ್ಪದ ಉಂಟಾಗುವುದು.
ಉದಾಹರಣೆ:
ರಾಮನು ಮರವನ್ನು ಕಡಿದನು.
ಮಗುವು ಮಲಗಿತು.
ವಿದ್ಯಾರ್ಥಿಗಳು ಪದ್ಯವನ್ನುಹಾಡುತ್ತಾರೆ.
ಊರಿನಲ್ಲಿ ಇಂದು ಜಾತ್ರಾ ಮಹೋತ್ಸವ ಇದೆ.
2.ಅಲ್ಪವಿರಾಮ(,) Comma
ಹಲವಾರು ನಾಮಪದಗಳು ವಾಕ್ಯದಲ್ಲಿ ಒಟ್ಟಿಗೆ ಬಂದಾಗ, ವಾಕ್ಯವು ಪೂರ್ಣ ಆಗುವ ಮೊದಲು, ಪ್ರತಿನಾಮ ಪದ ಶಬ್ದಗಳ ಮುಂದೆ ಅಲ್ಪ ವಿರಾಮದ ಗುರುತಾದ (,) ಅನ್ನು ಉಪಯೋಗಿಸುತ್ತೇವೆ. ಸಮುಚ್ಚಯ ಪದಗಳ ಅಂತ್ಯದಲ್ಲಿ “ಊ'' ವಿಸರ್ಗವು
ಬಂದಾಗಲೂ, ಈ ಗುರುತು ಹಾಕುತ್ತೇವೆ. ಇದೇ ರೀತಿ ಸಂಬೋಧನೆಯ ಪದಗಳ ಮುಂದೆಯೂ ಸಹ ಈ ಅಲ್ಪವಿರಾಮದ ಗುರುತನ್ನು ಉಪಯೋಗಿಸುತ್ತೇವೆ.
ಉದಾಹರಣೆ :
ರಾಮಾ, ಊಟಮಾಡು.
ಪರಮಾತ್ಮಾ, ಕಾಪಾಡು.
ಮಕ್ಕಳೇ, ಬನ್ನಿರಿ,
ರಾಮನೇ, ಇಲ್ಲಿ ಬಾ.
3.ಅರ್ಧವಿರಾಮ(;) Semi colon
ಯಾವುದೇ ಪ್ರಧಾನವಾಕ್ಯಕ್ಕೆ ಸಂಬಂಧಿಸಿದಂತೆ ಅಧೀನ ವಾಕ್ಯಗಳು
ಜೊತೆಯಲ್ಲಿ ಬಂದಾಗ ಅರ್ಧವಿರಾಮದ ಗುರುತನ್ನು ನಮೂದಿಸುತ್ತೇವೆ.
ಉದಾಹರಣೆ :
ಅವನು ಕಾಶಿರಾಮೇಶ್ವರಗಳಿಗೆ ಹೋಗಿಬಂದನು;
ಆದರೂ ಕೆಟ್ಟ ಬುದ್ಧಿಯನ್ನು ಬಿಡಲಿಲ್ಲ.
ಆ ದಿನ ಮಳೆ ಬಂದಿತ್ತು; ಆದುದರಿಂದ ಆಟವಾಡಲಿಲ್ಲ.
ಇದು ಆಟಗಾರರಿಗೆ
ಸ್ವಲ್ಪ ನಿರಾಸೆಯನ್ನುಂಟುಮಾಡಿತು.
ತಾವು ಕಡಿಮೆ ಮಾತನಾಡಿದ್ದೀರಿ; ಹೆಚ್ಚು ಕೆಲಸ ಮಾಡಿದ್ದೀರಿ.ಅಂದು ಮಳೆ ಬಂದಿತು; ಆದುದರಿಂದ ಆಟವಾಡಲಿಲ್ಲ.
4.ಪ್ರಶ್ನೆಸೂಚಕಚಿಹ್ನೆ (?) Mark of Interrogation
ಪ್ರಶ್ನವಾಚಕವಾಕ್ಯದ ಕೊನೆಯಲ್ಲಿ ಪ್ರಶ್ನಸೂಚಕ ಚಿಹ್ನೆಯನ್ನು ನಮೂದಿಸ ಬೇಕಾಗುತ್ತದೆ.
ಉದಾಹರಣೆ :
ರಾಮನು ಎಲ್ಲಿಗೆ ಹೋದ?
ನೀನು ಯಾರು?
ಸೀತಾ ಇನ್ನೂ ಏಕೆ ಬರಲಿಲ್ಲ?
ಕರ್ನಾಟಕದ ರಾಜಧಾನಿ ಯಾವುದು?
5.ಆಶ್ಚರ್ಯಸೂಚಕ ಚಿಹ್ನೆ (!) Exclamatory Sentence
ಹರ್ಷ, ಆಶ್ಚರ್ಯ, ದುಃಖ, ಕೋಪ ಮೊದಲಾದ ಭಾವಗಳನ್ನು ವ್ಯಕ್ತಗೊಳಿಸುವ ಸಮಯದಲ್ಲಿ ಆಶ್ಚರ್ಯ ಸೂಚಕ ಚಿಹ್ನೆ (!)
ಯನ್ನು ಬಳಸಲಾಗುವುದು.
ಉದಾಹರಣೆ :
ಆಹಾ! ತಂಗಾಳಿ ಹೇಗೆ ಬೀಸುತ್ತಿದೆ!
ಆಹಾ! ಮೈಸೂರು ದಸರಾ ಎಷ್ಟೊಂದು ಸುಂದರವಾಗಿದೆ!
ಅಯ್ಯೋ ದೇವರೇ! ಹೀಗಾಯಿತಲ್ಲ!
ಛೀ! ಮೂರ್ಖ ತೊಲಗು!
6.ಉದ್ಧರಣಚಿಹ್ನೆ (“ “) Inverted Commas
ಇನ್ನೊಬ್ಬರು ಹೀಗೆ ಹೇಳಿದರೆಂದು ಒಬ್ಬರ ಮಾತನ್ನು ಉದ್ಧರಿಸಿ ಬರೆಯುವಾಗ ಅಥವಾ ಇನ್ನೊಬ್ಬರ ನೇರ ಮಾತುಗಳನ್ನುತೋರಿಸುವಾಗ ಈ ಚಿಹ್ನೆಯನ್ನು ಉಪಯೋಗಿಸಬೇಕು.
ಉದಾಹರಣೆ :
ಮಹಾಭಾರತದಲ್ಲಿ "ಧರ್ಮಕ್ಕೇ ಎಂದಿಗೂ ಜಯ" ಎಂದು ಹೇಳಲಾಗಿದೆ.
ನಿನ್ನೆ ಭಾಷಣದಲ್ಲಿ ನಮ್ಮ ಮುಖ್ಯೋಪಾಧ್ಯಾಯರು “ಪ್ರತಿಯೊಬ್ಬ ವಿದ್ಯಾರ್ಥಿಯೂ ಕಷ್ಟಪಟ್ಟು ಓದಬೇಕು” ಎಂದು ಹೇಳಿದರು.
7.ವಿಶೇಷಕಚಿಹ್ನೆ (‘ ‘) Inverted Commas
ವಿಶೇಷ ರೀತಿಯ ಹಾಗೂ ವಿಧಾಯಕ ರೂಪದ ಪದವನ್ನು ಸೂಚಿಸಲು ಈ ರೀತಿಯ ವಿಶೇಷಕ ಚಿಹ್ನೆಯನ್ನು ಬಳಸಲಾಗುವುದು.
ಉದಾಹರಣೆ :
ಕನ್ನಡದಲ್ಲಿ ಅನೇಕ ‘ಇಂಗ್ಲೀಷ್’ ಪದಗಳು ಸೇರಿ ಬಳಕೆಗೆ ಬಂದಿವೆ
ನಿನ್ನೆ ಉಪಾಧ್ಯಾಯರು ‘ಹೈಡೋಜನ್’ ವಿಷಯದಲ್ಲಿ ಪಾಠ ಹೇಳಿದರು.
ಶ್ರೀ ಬಿ.ಎಂ. ಶ್ರೀಕಂಠಯ್ಯನವರ ಕಾವ್ಯನಾಮ ‘ಶ್ರೀ’ ಎಂದು.
8.ಆವರಣಚಿಹ್ನೆ ( ) Brackets
ವಾಕ್ಯದಲ್ಲಿ ಹಲವೆಡೆ ಹೆಚ್ಚಿನ ಮಾಹಿತಿಗಳನ್ನು ನೀಡುವಾಗ, ಅರ್ಥ ವಿವರಣೆ ಹಾಗೂ ಸಮಾನಾರ್ಥ ಪದವನ್ನು ಸೂಚಿಸುವಾಗ ಈ ಚಿಹ್ನೆಯನ್ನು ಬಳಸಲಾಗುವುದು.
ಉದಾಹರಣೆ:
ಮಯನ್ಮಾರ್ ( ಬರ್ಮಾ ) ಪ್ರಸ್ತುತ ಮಿಲಿಟರಿ ಆಡಳಿತದ ಹಿಡಿತದಲ್ಲಿದೆ .
ಶಾಂತಿ (ನನ್ನ ತಂಗಿಯ ಮಗಳು) ಈಗ ಅಮೇರಿಕದಲ್ಲಿ ನೆಲೆಸಿದ್ದಾಳೆ.
ಮನೆಯ ಮುಂದೆ ಹೀಗೆ ಬರೆದಿದೆ: ಸರ್ವೇಜನಾಃ ಸುಖಿನೋಭವಂತು (ಎಲ್ಲರೂ ಸುಖಿಗಳಾಗಿರಲಿ).
ನೀರನ್ನು ವಿಭಜಿಸಿದರೆ ಆಮ್ಲಜನಕ (ಆಕ್ಸಿಜನ್) ಜಲಜನಕ (ಹೈಡ್ರೋಜನ್)ಗಳು ಉತ್ಪತ್ತಿಯಾಗುತ್ತವೆ.
9.ವಿವರಣಾತ್ಮಕಚಿಹ್ನೆ (:) Colon
ಒಂದು ಅಭಿಪ್ರಾಯವನ್ನು ವಿವರಿಸುವಾಗ, ಅದು ಮುಂದಿನಂತೆ ಇದೆ ಎಂದು ತೋರಿಸುವ ಸಂದರ್ಭದಲ್ಲಿ ಈ ಚಿಹ್ನೆಯನ್ನು ಬಳಸಲಾಗುತ್ತದೆ.
ಉದಾಹರಣೆ:
ಇನ್ನು ಪಂಪ ಮಹಾಕವಿಯ ವಿಚಾರ: ಪಂಪ ಕವಿಯು ಕನ್ನಡದ ಬಹು ದೊಡ್ಡ ಕವಿ …….. ಇತ್ಯಾದಿ.
ಇಲ್ಲಿ ಪಂಪ ಕವಿಯ ವಿಚಾರ-ಎಂಬ ಪದದ ಮುಂದೆ ವಿವರಣಾತ್ಮಕವಾದ (:) ಈ ಚಿಹ್ನೆ ಹಾಕಲಾಗಿದೆ.
ನೀನು ಈ ದಿನ ಮಾಡಬೇಕಾದ ಕೆಲಸಗಳು : ಬ್ಯಾಂಕ್ ಗೆ ಹೋಗಿ ಹಣ ತರುವುದು, ಅಂಗಡಿಯಿಂದ ಸಾಮಾನು ತರುವುದು, ಹೀಗೆ (:)ಈ ಚಿನ್ಹೆಯನ್ನು ಮುಂದೆ ವಿವರಣೆ ಮಾಡಿದೆ ಎಂಬರ್ಥದಲ್ಲಿ ಹಾಕಬೇಕಾಗುವುದು.
10.ಅಧಿಕ ಚಿಹ್ನೆ (+) Plus
ಎರಡುಪದಗಳನ್ನೋ, ಅಥವಾ ವಿಭಕ್ತಿ ಪ್ರತ್ಯಯಗಳನ್ನೋ, ಕೂಡಿಸಿ ಸಂಧಿಮಾಡಿ ಹೇಳುವಾಗ, ಎರಡು ಪದಗಳನ್ನು ಕೂಡಿಸಿ ಸಮಾಸ ಮಾಡುವಾಗ, ಅಥವಾ ಎರಡು ಸಂಖ್ಯೆಗಳ ಕೂಡಿಸಿದೆ ಎಂಬರ್ಥ ಸೂಚನೆ ಮಾಡುವಾಗ ಸಾಮಾನ್ಯವಾಗಿ '+' ಈ ಚಿಹ್ನೆ ಬಳಸುವುದುಂಟು.
ಇದಕ್ಕೆ ಅಧಿಕ (ಹೆಚ್ಚು) ಚಿಹ್ನೆ ಎಂದು ಕರೆಯುತ್ತಾರೆ.
ಉದಾಹರಣೆ :
ರಾಮ + ಇಂದ = ರಾಮನಿಂದ,
ಎರಡು + ಮೂರು = ಐದು.
೮ + ೪ = ೧೨. ಇತ್ಯಾದಿ.
11.ಸಮಾನಾರ್ಥಕ ಚಿಹ್ನೆ(=) Equals
ಎರಡು ಪದಗಳ ಅರ್ಥವೂ ಸಮ ಎನಿಸಿದಾಗ, ಆ ಭಾವವನ್ನು ವ್ಯಕ್ತಗೊಳಿಸಲು = ಗುರುತನ್ನು ಉಪಯೋಗಿಸಲಾಗುವುದು.
ಉದಾಹರಣೆ :
ರಜತ = ಬೆಳ್ಳಿ
ಸುವರ್ಣ = ಚಿನ್ನ
ನಭ = ಆಕಾಶ
ವೃಕ್ಷ = ಮರ
ರಾಮ ಎಂಬ ನಾಮಪದಕ್ಕೆ ಎಂಟು ವಿಭಕ್ತಿ ಪ್ರತ್ಯಯಗಳನ್ನು ಸೇರಿಸುವುದು ಹೇಗೆಂದು ಕೆಳಗೆ ಕೊಡಲಾಗಿದೆ.
ಪ್ರಥಮಾ ವಿಭಕ್ತಿ: ರಾಮ + ಉ = ರಾಮನು
ದ್ವಿತೀಯಾ ವಿಭಕ್ತಿ: ರಾಮ + ಅನ್ನು = ರಾಮನನ್ನು
ತೃತೀಯಾ ವಿಭಕ್ತಿ: ರಾಮ + ಇಂದ = ರಾಮನಿಂದ
ಚತುರ್ಥೀ ವಿಭಕ್ತಿ: ರಾಮ + ಗೆ = ರಾಮನಿಗೆ
ಪಂಚಮೀ ವಿಭಕ್ತಿ: ರಾಮ + ದೆಸೆಯಿಂದ = ರಾಮನ ದೆಸೆಯಿಂದ
ಷಷ್ಠೀ ವಿಭಕ್ತಿ: ರಾಮ + ಅ = ರಾಮನ
ಸಪ್ತಮೀ ವಿಭಕ್ತಿ: ರಾಮ + ಅಲ್ಲಿ = ರಾಮನಲ್ಲಿ
ಸಂಭೋದನ ವಿಭಕ್ತಿ: ರಾಮ + ಏ = ರಾಮನೇ
ಒಂದು ಶಬ್ದಕ್ಕೆ ತೀರಾ ವಿರುದ್ಧ ಅರ್ಥವನ್ನು ಕೊಡುವ ಇನ್ನೊಂದು ಶಬ್ದಕ್ಕೆ ವಿರುದ್ಧಾರ್ಥಕ ಶಬ್ದ ಎನ್ನುವರು.
ಅಧಿಕೃತ x ಅನಧಿಕೃತ | ಅಧ್ಯಯನ x ಅನಧ್ಯಯನ |
---|---|
ಅಂಕುಶ x ನಿರಂಕುಶ | ಅಂತ x ಅನಂತ |
ಅಂತ್ಯ x ಆರಂಭ | ಅಕ್ಷಯ x ಕ್ಷಯ |
ಅಗಲ x ಕಿರಿದು | ಅಡ್ಡ x ಲಂಬ |
ಅತಿವೃಷ್ಠಿ x ಅನಾವೃಷ್ಟಿ | ಅತ್ಯಾಕರ್ಷಕ x ನೀರಸ |
ಅದೃಷ್ಟ x ದುರದೃಷ್ಟ | ಅದೃಷ್ಟ x ನತದೃಷ್ಟ |
ಅರ್ಥ x ಅನರ್ಥ | ಅರಿವು x ಮರೆವು |
ಅವಮಾನ x ಅಭಿನಂದನೆ | ಅವಶ್ಯಕ x ಅನಾವಶ್ಯಕ |
ಅಸೂಯೆ x ಅನಸೂಯೆ | ಆಡಂಬರ x ನಿರಾಡಂಬರ |
ಆವಾಹನೆ x ವಿಸರ್ಜನೆ | ಆರ್ಯ x ಅನಾರ್ಯ |
ಆದ್ರ್ರ x ಶುಷ್ಕ | ಆದ್ರ್ರ x ಒಣ |
ಆಸಕ್ತಿ x ನಿರಾಸಕ್ತಿ | ಆಸೆ x ನಿರಾಸೆ |
ಆಹಾರ x ನಿರಾಹಾರ | ಆಳವಾದ x ಆಳವಿಲ್ಲದ |
ಇಳಿಯುವಿಕೆ x ಆರೋಹಣ | ಉಗ್ರ x ಶಾಂತ |
ಉಚಿತ x ಅನುಚಿತ | ಉಚ್ಚ x ನೀಚ |
ಅನಾಥ x ನಾಥ | ಅನಾರೋಗ್ಯ x ಆರೋಗ್ಯ |
---|---|
ಅನುಭವ x ಅನನುಭವ | ಅಪೇಕ್ಷೆ x ಅನಪೇಕ್ಷೆ |
ಅಬಲೆ x ಸಬಲೆ | ಅಭಿಮಾನ x ನಿರಭಿಮಾನ |
ಅಭ್ಯಾಸ x ದುರಭ್ಯಾಸ | ಅಮೂಲ್ಯ x ನಿಕೃಷ್ಟ |
ಅಮೃತ x ವಿಷ | ಅರಿವು x ಮರೆವು |
ಅವಮಾನ x ಅಭಿನಂದನೆ | ಅರಸ x ಆಳು |
ಆತಂಕ x ನಿರಾತಂಕ | ಆತಿಥೇಯ x ಅತಿಥಿ |
ಆದರ x ಅನಾದರ | ಆದಾಯ x ವೆಚ್ಚ |
ಆಧುನಿಕ x ಪ್ರಾಚೀನ | ಆಮದು x ರಫ್ತು |
ಆಯಾಸ x ಅನಾಯಾಸ | ಆಯುಧ x ನಿರಾಯುಧ |
ಆರಂಭ x ಅಂತ್ಯ | ಆರಂಭ x ಮುಕ್ತಾಯ |
ಇಂಚರ x ಕರ್ಕಶ | ಇಂದು x ನಾಳೆ |
ಇಲ್ಲಿ X ಅಲ್ಲಿ | ಇಹಲೋಕ x ಪರಲೋಕ |
ಉತ್ತಮ x ಅಧಮ | ಉತ್ತಮ x ಕಳಪೆ |
ಉತ್ತೀರ್ಣ x ಅನುತ್ತೀರ್ಣ | ಉತ್ಸಾಹ x ನಿರುತ್ಸಾಹ |
ಕನ್ನಡ ಭಾಷೆಯಲ್ಲಿ ಬಳಕೆಯಾಗುತ್ತಿರುವ ಪದಗಳಲ್ಲಿ ಯಾವ ಪದಗಳು ಸಂಸ್ಕೃತದಿಂದ ನೇರವಾಗಿ ಬಂದಿವೆಯೋ ಅಂತಹ ಪದಗಳನ್ನು ' ತತ್ಸಮ ' ಗಳೆಂದು ಕರೆಯುತ್ತಾರೆ . ಕನ್ನಡ ಭಾಷೆಗೆ ಬಳಕೆಯಾಗುತ್ತಿರುವ ಪದಗಳು ಸಂಸ್ಕೃತದಿಂದ ಬಂದು ಅಲ್ಪ ಸ್ವಲ್ಪ ಬದಲಾವಣೆಯಿಂದ ಉಂಟಾದ ಪದಗಳನ್ನು ' ತದ್ಭವ ' ಗಳೆಂದು ಕರೆಯುತ್ತಾರೆ .
ತತ್ಸಮ - ತದ್ಬವ : ಉದಾಹರಣೆಗಳು
ಸ್ವರ್ಗ - ಸಗ್ಗ | ಆಶ್ಚರ್ಯ - ಅಚ್ಚರಿ |
---|---|
ರತ್ನ - ರತುನ | ಶಯ್ಯಾ - ಸಜ್ಜೆ |
ಸಾಹಸ - ಸಾಸ | ಭ್ರಮೆ - ಬೆಮೆ |
ಕಾರ್ಯ - ಕಜ್ಜ | ಪ್ರಯಾಣ - ಪಯಣ |
ಸ್ನೇಹ - ನೇಹ | ಪುಸ್ತಕ - ಹೊತ್ತಿಗೆ |
ವಿಧಿ - ಬಿದಿ | ಪ್ರತಿ - ಪಡಿ |
ಸಂಧ್ಯಾ - ಸಂಜೆ | ಆಕಾಶ - ಆಗಸ |
ಬ್ರಹ್ಮ - ಬೊಮ್ಮ | ರಾಕ್ಷಸ - ರಕ್ಕಸ |
ಮುಖ - ಮೊಗ | ಮೃತ್ಯು - ಮಿತ್ತು |
ಬೀದಿ - ವೀದಿ | ಅದ್ಭುತ - ಅದುಬುತ |
ಮುಸುಳಿದ - ಮುಬ್ಬಾದ | ಮಂಟಪ - ಮಂಡಪ |
ಅಪ್ಪಣೆ - ಅಣತಿ | ಶೃಂಗಾರ - ಸಿಂಗಾರ |
ಮತ್ಸರ - ಮಚ್ಚರ | ವರ್ಷ - ವರುಷ |
ಪುಸ್ತಕ - ಹೊತ್ತಿಗೆ | ಪೃಥ್ವಿ - ಪೊಡವಿ |
---|---|
ಧ್ವನಿ - ದನಿ | ವನ - ಬನ |
ಲಕ್ಷ್ಮಿ - ಲಕುಮಿ | ಸ್ಫಟಿಕ - ಪಟಿಕ |
ಕ್ರೌಂಚೆ - ಕೊಂಚೆ | ಸ್ಫಟಿಕ - ಪಟಿಕ |
ತಟ - ದಡ | ಪಲ್ಲಯಣ - ಹಲ್ಲಣ |
ಹಂಸ - ಅಂಚೆ | ಆಕಾಶ - ಆಗಸ |
ವಿದ್ಯಾ - ಬಿಜ್ಜೆ | ವೇದ - ಬೇದ |
ತಪಸ್ವಿ - ತವಸಿ | ದಾಳಿಂಬೆ - ದಾಳಿಂಬ |
ನಿತ್ಯ - ನಿಚ್ಚ | ದಂಷ್ರ್ಟಾ - ದಾಡೆ |
ನಾಯಿ - ಗಾವಸಿಂಗ (ಗ್ರಾಮಸಿಂಗ) | ಶಿಲಾ - ಸಿಲೆ |
ಚೀರಾ (ವಸ್ತ್ರ )- ಸೀರೆ | ಪರ್ವ - ಹಬ್ಬ |
ಘೋಷಣೆ - ಗೋಸನೆ | ಶಿರಿ - ಸಿರಿ |
ಮುಗ್ದೆ - ಮುಗುದೆ | . |