ಕನ್ನಡ ಸಂಧಿಗಳು : ಕನ್ನಡ ವ್ಯಾಕರಣದಲ್ಲಿನ ಮುಖ್ಯ ಸಂಧಿಗಳು ಮೂರು. 1. ಲೋಪಸಂಧಿ. 2. ಆಗಮಸಂಧಿ. 3. ಆದೇಶಸಂಧಿ.
1. ಲೋಪಸಂಧಿ :ಸಂಧಿಯಾಗುವಾಗ ಸ್ವರದ ಮುಂದೆ ಸ್ವರವು ಬಂದಾಗ, ಅರ್ಥವು ಕೆಡದಿದ್ದ ಪಕ್ಷದಲ್ಲಿ ಮೊದಲ ಪದದ ಕೊನೆಯ ಸ್ವರವು ಲೋಪವಾಗುವುದು.ಆದ್ದರಿಂದಲೇ ಇಂತಹ ಸಂಧಿಯನ್ನು ಲೋಪ ಸಂಧಿ ಎನ್ನುವರು. ಉದಾಹರಣೆ: ಹಣದ +ಆಸೆ = ಹಣದಾಸೆ (ಅಕಾರ ಲೋಪ) ನಾವು + ಎಲ್ಲಾ = ನಾವೆಲ್ಲಾ ('ಉ' ಕಾರ ಲೋಪ) ಊರು + ಊರು = ಊರೂರು (ಉಕಾರ ಲೋಪ) ಬೇರೆ + ಒಂದು = ಬೇರೊಂದು ('ಎ' ಕಾರ ಲೋಪ) ನನಗೆ + ಅಲ್ಲದೆ = ನನಗಲ್ಲದೆ (ಎಕಾರ ಲೋಪ) ಬೇರೆ + ಒಬ್ಬ =ಬೇರೊಬ್ಬ (ಏಕಾರ ಲೋಪ)
2.ಆಗಮ ಸಂಧಿ : ಸಂಧಿ ಕಾರ್ಯ ಮಾಡಿದಾಗ ಒಂದು ಅಕ್ಷರವು ಹೊಸದಾಗಿ ಬಂದು ಸೇರುವುದನ್ನು ಆಗಮ ಸಂಧಿ ಎನ್ನುವರು.
ಆಗಮ ಸಂಧಿ ಇದರಲ್ಲಿ 2 ವಿಧಗಳು 1. ಯಕಾರಾಗಮ ಸಂಧಿ. 2. ವಕಾರಾಗಮ ಸಂಧಿ.
1. ಯಕಾರಾಗಮ ಸಂಧಿ: ಆ, ಇ, ಈ, ಎ, ಏ, ಐ, ಓ ಸ್ವರಗಳ ಮುಂದೆ ಸ್ವರವು ಬಂದರೆ ಸಂಧಿ ಪದದಲ್ಲಿ 'ಯ್' ವ್ಯಂಜನವು ಹೊಸದಾಗಿ ಆಗಮವಾಗುತ್ತದೆ. ಇದಕ್ಕೆ ಯಕಾರಾಗಮ ಸಂಧಿ ಎಂದು ಹೆಸರು. ಉದಾಹರಣೆ: ಕೆರೆ + ಅಲ್ಲಿ = ಕೆರೆಯಲ್ಲಿ ಗಾಳಿ + ಅನ್ನು = ಗಾಳಿಯನ್ನು ತಾಯಿ + ಅನ್ನು = ತಾಯಿಯನ್ನು, ಕೈ + ಇಂದ = ಕೈಯಿಂದ.
2. ವಕಾರಾಗಮ ಸಂಧಿ : ಉ, ಊ, ಋ, ಓ, ಔ ಸ್ವರಗಳ ಮುಂದೆ ಸ್ವರವು ಬಂದರೆ ಸಂಧಿ ಪದದಲ್ಲಿ 'ವ್' ವ್ಯಂಜನವು ಹೊಸದಾಗಿ ಆಗಮವಾಗುತ್ತದೆ. ಇದಕ್ಕೆ ವಕಾರಾಗಮ ಸಂಧಿ ಎಂದು ಹೆಸರು. ಉದಾಹರಣೆ: ಕರು + ಅನ್ನು = ಕರುವನ್ನು ಹೂ + ಉ = ಹೂವು ಗೋ + ಅನ್ನು = ಗೋವನ್ನು ಮಗು + ಇಗೆ = ಮಗುವಿಗೆ ಮಾತೃ + ಅನ್ನು = ಮಾತೃವನ್ನು
3. ಆದೇಶಸಂಧಿ : ಸಂಧಿಯಾಗುವಾಗ ಒಂದು ವ್ಯಂಜನದ ಸ್ಥಾನದಲ್ಲಿ ಮತ್ತೊಂದು ವ್ಯಂಜನ ಬರುವುದಕ್ಕೆ ಆದೇಶ ಸಂಧಿಯೆಂದು ಕರೆಯುತ್ತಾರೆ. ಆದೇಶ ಸಂಧಿಯಲ್ಲಿ ಉತ್ತರ ಪದದ ಮೊದಲಲ್ಲಿ ಇರುವ ಕ, ಜ, ಟ, ತ, ಪ ಎಂಬ ವ್ಯಂಜನಗಳಿಗೆ ಪ್ರತಿಯಾಗಿ, ಕ್ರಮವಾಗಿ ಗ, ಜ, ಡ, ದ, ಬ ಎಂಬ ವ್ಯಂಜನಗಳು ಆದೇಶವಾಗುವುವು. ಉದಾಹರಣೆ: ಮಳೆ + ಕಾಲ = ಮಳೆಗಾಲ ಬೆಟ್ಟ+ ತಾವರೆ = ಬೆಟ್ಟದಾವರೆ ಕಣ್ + ಪನಿ = ಕಂಬನಿ ಹೊಸ + ಕನ್ನಡ = ಹೊಸಗನ್ನಡ