ಕವಿ ಪರಿಚಯ : ಪು.ತಿ.ನ.
ಕವಿ ; ಪುರೋಹಿತ ತಿರುನಾರಾಯಣಯ್ಯಂಗಾರ್ಯ ನರಸಿಂಹಾಚಾರ್
ಕಾವ್ಯನಾಮ ; ಪು.ತಿ.ನ
ಕಾಲ ; ಸಾ.ಶ. 1905
ಸ್ಥಳ ; ಮಂಡ್ಯ ಜಿಲ್ಲೆಯ ಮೇಲುಕೋಟೆ
ಕೃತಿಗಳು ; ಅಹಲೈ, ಗೋಕುಲ ನಿರ್ಗಮನ, ಶಬರಿ, ವಿಕಟಕವಿವಿಜಯ, ಹಂಸದಮಯಂತಿ ಮತ್ತು ಇತರ ರೂಪಕಗಳು, ಹಣತೆ, ರಸಸರಸ್ವತಿ, ಗಣೇಶ ದರ್ಶನ, ಶಾರದಯಾಮಿನಿ, ಶ್ರೀಹರಿಚರಿತೆ, ರಥಸಪ್ತಮಿ, ಮುಂತಾದ ಕೃತಿಗಳನ್ನು ರಚಿಸಿದ್ದಾರೆ.
ಪ್ರಶಸ್ತಿಗಳು ; ಇವರಿಗೆ 'ಹಂಸದಮಯಂತಿ ಮತ್ತು ಇತರ ರೂಪಕಗಳು' ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 'ಶ್ರೀಹರಿಚರಿತೆ' ಕಾವ್ಯಕ್ಕೆ ಪಂಪ ಪ್ರಶಸ್ತಿಗಳು ಲಭಿಸಿವೆ.
ಅ. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.
1. ಶ್ರೀರಾಮನ ತಂದೆಯ ಹೆಸರೇನು?
ಶ್ರೀರಾಮನ ತಂದೆಯ ಹೆಸರು ದಶರಥ.
2. ಶ್ರೀರಾಮನಿಗೆ ಸಮರ್ಪಿಸಲು ಶಬರಿ ಏನನ್ನು ಸಂಗ್ರಹಿಸಿದ್ದಳು?
ಶ್ರೀರಾಮನಿಗೆ ಸಮರ್ಪಿಸಲು ಶಬರಿ ಪರಿಮಳಭರಿತ ಹೂವು, ಮಧುಪರ್ಕ ಮತ್ತು ರಸಭರಿತ ಹಣ್ಣು ಹಂಪಲುಗಳನ್ನು ಸಂಗ್ರಹಿಸಿದ್ದಳು.
3. ಮತಂಗಾಶ್ರಮದಲ್ಲಿ ವಾಸವಿದ್ದ ತಪಸ್ವಿನಿ ಯಾರು?
ಮತಂಗಾಶ್ರಮದಲ್ಲಿ ವಾಸವಿದ್ದ ತಪಸ್ವಿನಿ ಶಬರಿ.
4. ರಾಮಲಕ್ಷ್ಮಣರಿಗೆ ಮತಂಗಾಶ್ರಮಕ್ಕೆ ಹೋಗಲು ಸೂಚಿಸಿದವರು ಯಾರು?
ರಾಮಲಕ್ಷ್ಮಣರಿಗೆ ಮತಂಗಾಶ್ರಮಕ್ಕೆ ಹೋಗಲು ಸೂಚಿಸಿದವರು ದನು.
5. ಶಬರಿ ಗೀತನಾಟಕದ ಕರ್ತೃ ಯಾರು?
ಶಬರಿ ಗೀತನಾಟಕದ ಕರ್ತೃ ಪು. ತಿ. ನರಸಿಂಹಾಚಾರ್.
ಆ. ಈ ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯದಲ್ಲಿ ಉತ್ತರಿಸಿ.
1. ರಾಮನು ಗಿರಿವನವನ್ನು ಏನೆಂದು ಪ್ರಾರ್ಥಿಸಿದನು?
ರಾಮನು “ಎಲೈ ಗಿರಿ ವನವೇ ನಾನು ನಿಮ್ಮನ್ನು ಬೇಡಿಕೊಳ್ಳುತ್ತಿದ್ದೇನೆ . ಭೂಮಿಜಾತೆ, ಆತ್ಮಕಾಮಕಲ್ಪಲತೆ, ಚೆಲುವೆಯಾದ ಸೀತೆ ದೊರೆಯಳೇ? ನನ್ನ ಪ್ರೀತಿಯ ರಾಣಿ ಸೀತೆಯು ದೊರೆಯುವಳೇ ? ಅವಳಿರುವ ನೆಲೆಯನ್ನು ಯಾರಾದರೂ ತಿಳಿದಿರುವಿರಾ? ನನ್ನ ಅರಸಿ ನನಗೆ ದೊರೆಯಳೇ? ನನ್ನ ಹೃದಯದ ಈ ದುಃಖವು ನಾಶವಾಗುತ್ತಿಲ್ಲವಲ್ಲ. ಹೇಳಿ ನನ್ನರಸಿ ದೊರೆವಳೇ? ಎಂದು ಗಿರಿವನವನ್ನು ಪ್ರಾರ್ಥಿಸಿದನು.
2. ಲಕ್ಷ್ಮಣನು ಅಣ್ಣನನ್ನು ಹೇಗೆ ಸಂತೈಸಿದನು?
ಲಕ್ಷ್ಮಣನು ಸೀತೆಗಾಗಿ ಪರಿತಪಿಸುತ್ತಿದ್ದ ಅಣ್ಣನನ್ನು ಕುರಿತು "ತಾಳಿಕೋ ಅಣ್ಣ ತಾಳಿಕೋ, ಸೂರ್ಯನೇ ಕಾಂತಿ ಕಳೆದುಕೊಂಡರೆ ಕಾಂತಿಯನ್ನು ನೀಡುವವರು ಯಾರು? ರಾಮನೇ ಧೈರ್ಯ ಕಳೆದುಕೊಂಡರೆ, ಈ ಲೋಕಕ್ಕೆ ಧೈರ್ಯ ನೀಡುವವರಾರು?' ಎಂದು ಸಂತೈಸಿದನು.
3. ರಾಮನ ಸ್ವಾಗತಕ್ಕಾಗಿ ಶಬರಿ ಮಾಡಿಕೊಂಡಿದ್ದ ಸಿದ್ಧತೆಗಳೇನು?
ರಾಮನ ಸ್ವಾಗತಕ್ಕಾಗಿ ಶಬರಿಯು ವನಕ್ಕೆ ಹೋಗಿ ಫಲಭರಿತ ಹಣ್ಣು – ಹಂಪಲುಗಳನ್ನು, ಜೇನುತುಪ್ಪ ಅಧಿಕವಾಗಿರುವ ಮಧುಪರ್ಕವೆಂಬ ಪಾನೀಯವನ್ನು , ಕಂಪನ್ನು ಬೀರುವ ಹೂಗಳನ್ನು, ಸಂಗ್ರಹಿಸಿ ಸಿದ್ಧತೆಮಾಡಿಕೊಂಡು ರಾಮನ ಬರುವಿಕೆಗಾಗಿ ದಾರಿ ಕಾಯುತ್ತಿದ್ದಳು
4. ಶಬರಿಯು ರಾಮಲಕ್ಷ್ಮಣರನ್ನು ಉಪಚರಿಸಿದ ರೀತಿಯನ್ನು ವಿವರಿಸಿ.
ಶಬರಿಯು ರಾಮಲಕ್ಷ್ಮಣರನ್ನು ಕಂಡು ಬೆರಗಾಗಿ, ಹತ್ತಿರಕ್ಕೆ ಬಂದು ಮೈಯನ್ನು ಮುಟ್ಟಿ ಕಾಲಿಗೆ ಬಿದ್ದು ನಮಸ್ಕರಿಸಿ, ಕೈಯನ್ನು ಕಣ್ಣಿಗೊತ್ತಿಕೊಂಡು ಆನಂದದ ಕಣ್ಣೀರನ್ನು ಸುರಿಸಿದಳು. ಬಗೆಬಗೆಯ ಸುವಾಸನೆಯುಳ್ಳ ಹೂಮಾಲೆಯನ್ನು ಕೊರಳಿಗೆ ಹಾಕಿ ಸಂತಸಪಟ್ಟಳು. "ಜಗದೊಳಗೆ ಇದರಷ್ಟು ರುಚಿಯಾದ ಹಣ್ಣು ಯಾವುದು ಇಲ್ಲ , ನಿಮಗಾಗಿಯೇ ತಂದಿರುವೆನು ಎಂದು ತಿನ್ನಲು ಹೇಳಿದಳು." ಮಧುಪರ್ಕವನ್ನು ಸವಿಯಲು ಕೊಟ್ಟು ಉಪಚರಿಸಿದಳು..
5. ಆತಿಥ್ಯ ಸ್ವೀಕರಿಸಿದ ರಾಮಲಕ್ಷ್ಮಣರು ಶಬರಿಗೆ ಏನು ಹೇಳಿದರು?
ಆತಿಥ್ಯ ಸ್ವೀಕರಿಸಿದ ರಾಮಲಕ್ಷ್ಮಣರು ಶಬರಿಗೆ “ತಾಯಿ ನಿನ್ನ ಪ್ರೀತಿಯಲ್ಲಿ , ನಿನ್ನ ಸುಖದಲ್ಲಿ ನಾವು ಸುಖಿಗಳಾಗಿದ್ದೇವೆ. ಕಾಡಿನಲ್ಲಿ ಈ ಆನಂದ ಕಾಣುವ ಪುಣ್ಯಕ್ಕೆ ಎಂದೆದಿಗೂ ನಿನಗೆ ನಾವು ಚಿರಋಣಿಗಳಾಗಿದ್ದೇವೆ." ತಾಯಿ ಕಣ್ಣೀರೇಕೆ? ನಿನ್ನ ಆತಿಥ್ಯದಲ್ಲಿ ಸ್ವಲ್ಪವೂ ಕೊರತೆಯಾಗಿಲ್ಲ. ನಮ್ಮ ಅಯೋಧ್ಯೆಯ ಅರಮನೆಗಿಂತಲೂ ಹೆಚ್ಚಿನ ಸತ್ಕಾರ ಇಲ್ಲಿ ದೊರೆಯಿತು. ಇದು ಕಾಡು ಎಂಬುದನ್ನು ಮರೆತು ನಮ್ಮ ಮನೆಯೆಂಬ ಭಾವನೆ ಬಂದಿದೆ. ಆದ್ದರಿಂದ ಇಷ್ಟೊಂದು ಪ್ರೀತಿ ತೋರುವ ನಿನ್ನನ್ನು ಅಬ್ಬೆ (ತಾಯಿ) ಎಂದು ತಿಳಿದಿದ್ದೇವೆ. ನಿನ್ನ ಸುಖದಲ್ಲಿ ನಮ್ಮ ಸುಖವನ್ನು ಕಂಡೆವು" ಎಂದು ಶಬರಿಗೆ ಹೇಳಿದರು.
ಈ ಕೆಳಗಿನ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿ.
1. ಶಬರಿಯ ಚಿಂತೆ ಹಿಂಗಿ ಹೋದ ಸಂದರ್ಭದ ಸ್ವಾರಸ್ಯವನ್ನು ವಿವರಿಸಿ.
ಶಬರಿ ಶ್ರೀರಾಮನ ದರ್ಶನದ ಚಿಂತೆಯಲ್ಲಿ ಇದ್ದಾಗ ಒಂದು ದಿನ ರಾಮ ಲಕ್ಷ್ಮಣರು ಮತಂಗಾಶ್ರಮಕ್ಕೆ ಬರುತ್ತಾರೆ. ರಾಮನನ್ನು ಕಂಡು ಶಬರಿಯು . ಹತ್ತಿರಕ್ಕೆ ಬಂದು ಮೈಯನ್ನು ಮುಟ್ಟಿ ಪಾದಕ್ಕೆ ಬಿದ್ದಳು. ಕೈಯನ್ನು ಕಣ್ಣಿಗೆ ಒತ್ತಿಕೊಂಡು ತನ್ನ ಮನದ ಬಯಕೆಯಂತೆ ಹೂ ಮಾಲೆಯನ್ನು ರಾಮನ ಕೊರಳಿಗೆ ಹಾಕಿ ಸಂಭ್ರಮಿಸಿದಳು. ರಾಮಲಕ್ಷ ಣರಿಗೆ ರುಚಿಕರ ಹಣ್ಣುಗಳನ್ನು ನೀಡಿ ಸತ್ಕರಿಸುತ್ತಾಳೆ. ರಾಮನನ್ನು ಕಂಡು ತಾನು ಪರಮಸುಖಿಯೆಂದು ನರ್ತಿಸುತ್ತಾಳೆ. ರಾಮನೂ ಕೂಡ ನಿನ್ನ ಆತಿಥ್ಯದಿಂದ ನಾವು ಅತ್ಯಂತ ಸಂತೋಷಗೊಂಡಿದ್ದೇವೆ. ನಿನಗೆ ನಾವು ಯಾವಾಗಲು ಋಣಿಯಾಗಿರುತ್ತೇವೆ ಎನ್ನುತ್ತಾನೆ. ಆಗ ಶಬರಿಯು ಕಣ್ಣೀರು ತುಂಬಿಕೊಂಡು, 'ನನ್ನ ಜಾಡನ್ನು ಹಿಡಿದು ಬಂದು ಸಂತಸ ನೀಡಿದ್ದೀರಿ. ನಾನು ನಿಮ್ಮನ್ನು ಕಾಣಬೇಕೆಂದುಕೊಂಡಿದ್ದ ಬಯಕೆ ಇಂದು ಈಡೇರಿತು. ನಾನೊಬ್ಬಳು ಬಡವಿ ಎಂದು ನನಗೆ ಮರುಕ ತೋರಿದಿರಾ?' ಎಂದಳು. ಶ್ರೀರಾಮನು 'ನಿನ್ನ ಅತಿಥ್ಯದಲ್ಲಿ ಸ್ವಲ್ಪವೂ ಕೊರತೆಯಿಲ್ಲ. ನಮ್ಮ ಅರಮನೆಗಿಂತ ನಿನ್ನ ಆಶ್ರಮವನ್ನು ನಮ್ಮ ಮನೆಯಂತೆ ಭಾವಿಸಿದ್ದೇವೆ ಮತ್ತು ಇಷ್ಟೊಂದು ಪ್ರೀತಿ ತೋರುವ ನಿನ್ನನ್ನು ತಾಯಿ ಎಂದೆ ಭಾವಿಸಿದ್ದೇವೆ' ಎಂದಾಗ ಶಬರಿಯು 'ನಿನ್ನ ರೂಪಿನಂತೆ ಮಾತು ಕೂಡ ಉದಾರವಾಗಿದೆ. ನಾನು ಇಂದು ಧನ್ಯಳು, ಸಿದ್ಧರಾದ ಮತಂಗರು ನೀಡಿದ ವರವು ಇಂದು ನನಗೆ ಫಲಿಸಿತು. ಗುರುಗಳ ಪೂಜೆಯನ್ನು ಮಾಡಿದ ಪುಣ್ಯ ನನಗಿಂದು ಈ ರೀತಿಯಾಗಿ ದೊರಕಿದೆ. ನನ್ನ ಚಿಂತೆಯೆಲ್ಲ ಹಿಂಗಿ ಹೋಯಿತು' ಎನ್ನುತ್ತಾಳೆ.
2. ಶಬರಿಯ ಸಡಗರ ಸಂತೋಷ ಮೇಳದವರ ಹಾಡಿನಲ್ಲಿ ಹೇಗೆ ವರ್ಣಿತವಾಗಿದೆ?
ರಾಮಲಕ್ಷ್ಮಣರು ಬಂದು ತನ್ನ ಆಶ್ರಮದಲ್ಲಿ ನಿಂತಿರುವುದನ್ನು ನೋಡಿ ಶಬರಿಯು ಆಶ್ಚರ್ಯಪಟ್ಟಳು. ರಾಮನ ಹತ್ತಿರ ಬಂದು ರಾಮನನ್ನು ಮುಟ್ಟಿ, ಪಾದಕ್ಕೆ ನಮಸ್ಕರಿಸಿ, ಕೈಯನ್ನು ಕಣ್ಣಿಗೊತ್ತಿಕೊಂಡು ಆನಂದದಿಂದ ಕಣ್ಣೀರನ್ನು ಸುರಿಸಿದಳು. ಗದ್ಗದಿತ ಸ್ವರದಿಂದ "ಬನ್ನಿರಿ” ಎಂದು ಆಹ್ವಾನಿಸಿದಳು. ಇಂದು ಏನು ಸಿದ್ಧತೆಯೇ ಇಲ್ಲವಲ್ಲ ಎಂದು ಹಂಬಲಿಸಿದಳು. ಮನಸ್ಸಿನ ಬಯಕೆಯಂತೆ ಬಗೆ ಬಗೆಯ ಸುವಾಸನೆಯನ್ನು ಬೀರುವ ಕಾಡಿನ ಹೂವುಗಳಿಂದ ಮಾಡಿದ ಮಾಲೆಯನ್ನು ರಾಮನ ಕೊರಳಿಗೆ ಹಾಕಿ ಸಂಭ್ರಮಿಸಿದಳು.ತಾನು ತಂದಿದ್ದ ರುಚಿಯಾದ ಹಣ್ಣುಗಳನ್ನು ತಾನೆ ರಾಮಲಕ್ಷ್ಮಣರ ಕೈಯೊಳಗೆ ಇಟ್ಟು ಜಗದೊಳಗೆ ಇಷ್ಟು ರುಚಿಯಾದ ಹಣ್ಣು ಯಾವುದು ಇಲ್ಲ , ನಿಮಗಾಗಿ ತಂದಿರುವೆನು ಎಂದು ತಿನ್ನಲು ಹೇಳಿದಳು. ಮಧುಪರ್ಕವನ್ನು ಸವಿಯಲು ಕೊಟ್ಟಳು. ಶಬರಿಯ ಸೇವೆಯಿಂದ ರಾಮನು ಸುಪ್ರಸನ್ನನಾದನು. ರಾಮ ಲಕ್ಷ್ಮಣರು ಧನ್ಯತಾಭಾವದಿಂದ ಮಂದಹಾಸ ಬೀರಿದರು. ಶಬರಿಯು "ಸುಖಿ ನಾ ಸುಖಿ ನಾ..." ಎಂದು ಹಾಡಿ ನರ್ತಿಸಿದಳು. ಹೀಗೆ ಶಬರಿಯ ಸಡಗರ ಸಂತೋಷ ಮೇಳದವರ ಹಾಡಿನಲ್ಲಿ ವರ್ಣಿತವಾಗಿದೆ.
3. 'ನಂಬಿ ಕೆಟ್ಟವರಿಲ್ಲ' ಎಂಬ ಮಾತು ಶಬರಿಯ ಪಾಲಿಗೆ ಹೇಗೆ ನಿಜವಾಗಿದೆ ಎಂಬುದನ್ನು ಸಮರ್ಥಿಸಿ.
ಶಬರಿ ಬೇಡರಾಜನ ಮಗಳು. ಆಕೆ ಮತಂಗ ಋಷಿಯ ಆಶ್ರಮದಲ್ಲಿ ವಾಸಿಸುತ್ತಿರುತ್ತಾಳೆ. ಮತಂಗ ಋಷಿಗಳು ಪ್ರತಿನಿತ್ಯ ದಶರಥ ಪುತ್ರನಾದ ಶ್ರೀರಾಮನ ಗುಣ ಸ್ವಭಾವಗಳನ್ನು ಹಾಡಿ ಹೊಗಳುತಿರುತ್ತಾರೆ. ಇದರಿಂದ ಶ್ರೀರಾಮನ ಗುಣ ಸ್ವಭಾವಗಳ ಸೆಳೆತಕ್ಕೆ ಸಿಕ್ಕಿ ಅವನನ್ನು ಕಾಣುವುದೇ ಜೀವನದ ಏಕೈಕ ಗುರಿ ಎಂಬ ಹಂಬಲದಲ್ಲಿ ಇರುತ್ತಾಳೆ. , ಮತಂಗ ಋಷಿಗೆ ಶಬರಿಯ ಮನದ ಹಂಬಲ ತಿಳಿದು ಇಲ್ಲಿಗೆ ಶ್ರೀರಾಮ ಬಂದೇ ಬರುತ್ತಾನೆ. ಅವನ ದರ್ಶನದಿಂದ ನಿನ್ನ ಇಷ್ಟಾರ್ಥ ನೆರವೇರುತ್ತದೆ ಎಂದಿದ್ದರು. ಅವರ ಮಾತಿನಂತೆ ರಾಮಲಕ್ಷ್ಮಣರು ಶಬರಿಯ ಆಶ್ರಮಕ್ಕೆ ಭೇಟಿ ನೀಡುತ್ತಾರೆ. ಆಗ ಶಬರಿಯು ರಾಮನ ದರ್ಶನದಿಂದ ಪುಳಕಿತಳಾದಳು. ಕಣ್ಣುಂಬ ರಾಮನ ದರ್ಶನ ಮಾಡಿ ಪಾದಕ್ಕೆ ನಮಸ್ಕರಿಸಿ ಸಂಭ್ರಮಿಸಿದಳು. ಪರಿಮಳಭರಿತ ಹೂಮಾಲೆಯನ್ನು ರಾಮನ ಕೊರಳಿಗೆ ಹಾಕಿ, ರುಚಿಕರ ಹಣ್ಣುಗಳನ್ನು ನೀಡಿ ಉಪಚರಿಸಿದಳು. ಧನ್ಯಳಾದೆನೆಂದು ಸಂತಸ ವ್ಯಕ್ತಪಡಿಸಿದಳು. ಹಲವಾರು ವರ್ಷಗಳಿಂದ ರಾಮನ ದರ್ಶನಕ್ಕಾಗಿ ಕಾದು, ಮತಂಗ ಮುನಿಗಳ ಮಾತನ್ನು ನಂಬಿ, ರಾಮನು ಬರುವ ಕ್ಷಣವನ್ನೇ ಎದುರು ನೋಡುತ್ತಿದ್ದ ಶಬರಿಗೆ ರಾಮನ ದರ್ಶನವಾಯಿತು. ಶಬರಿಯ ಮನದಾಸೆ ಈಡೇರಿತು. ಇದರಿಂದಾಗಿ 'ನಂಬಿಕೆಟ್ಟವರಿಲ್ಲ' ಎಂಬ ಮಾತು ಶಬರಿಯ ಪಾಲಿಗೆ ನಿಜವಾಯಿತು.
ಇ. ಸಂದರ್ಭ ಸಹಿತ ಸ್ವಾರಸ್ಯವನ್ನು ಬರೆಯಿರಿ.
1. "ಆವುದೀ ಮರುಳು? ನಮ್ಮೆಡೆಗೆ ಬರುತಿಹುದು"
ಆಯ್ಕೆ: ಈ ಮೇಲಿನ ವಾಕ್ಯವನ್ನು ಶ್ರೀರಂಗ ಮತ್ತು ನಾ.ಕಸ್ತೂರಿ ಅವರು ಸಂಪಾದಿಸಿರುವ 'ಏಕಾಂಕ ನಾಟಕಗಳು' ಎಂಬ ಕೃತಿಯಿಂದ ಆಯ್ದ ಪು. ತಿ. ನ. ಬರೆದಿರುವ 'ಶಬರಿ' ಎಂಬ ಗೀತನಾಟಕದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ಶಬರಿಯನ್ನು ನೋಡಿದ ರಾಮನು ಲಕ್ಷ್ಮ ಣನಿಗೆ ಈ ಮಾತನ್ನು ಹೇಳಿದನು. ಮತಂಗಾಶ್ರಮದಲ್ಲಿ ರಾಮನ ದರ್ಶನಕ್ಕಾಗಿ ಶಬರಿ ಕಾಯುತ್ತಿದ್ದಳು. ಅದೇ ಸಂದರ್ಭದಲ್ಲಿ ರಾಮಲಕ್ಷಣರು ಸೀತೆಯನ್ನು ಅರಸುತ್ತ ಮತಂಗಾಶ್ರಮಕ್ಕೆ ಬರುತ್ತಾರೆ. ಆಗ ಶಬರಿಯು ತನ್ನ ಕೈ, ಕಂಕುಳು, ತಲೆ ಮೇಲೆ ಹೂ, ಹಣ್ಣುಗಳನ್ನು ಇಟ್ಟುಕೊಂಡು ಬರುತ್ತಿದ್ದುದನ್ನು ಕಂಡು ಆಶ್ಚರ್ಯ ಹಾಗೂ ಗಾಬರಿಯಿಂದ ರಾಮನು ಅಗೋ ನೋಡು ಲಕ್ಷ್ಮಣ “ಆವುದೀ ಮರುಳು ? ನಮ್ಮೆಡೆಗೆ ಬರುತಿಹುದು”ಎಂದು ರಾಮ-ಲಕ್ಷ್ಮಣರೂ ಭಯಗೊಂಡು ಅವಿತುಕೊಳ್ಳುವ ಸಂದರ್ಭದಲ್ಲಿ ಈ ಮೇಲಿನ ವಾಕ್ಯವು ಬಂದಿದೆ.
ಸ್ವಾರಸ್ಯ: ಶಬರಿಯ ಮರುಳು ರೂಪವನ್ನು ನೋಡಿ ರಾಮ-ಲಕ್ಷ್ಮಣರೂ ಭಯಗೊಂಡು ಅವಿತುಕೊಂಡದ್ದು ಇಲ್ಲಿ ಸ್ವಾರಸ್ಯಕರವಾಗಿ ವ್ಯಕ್ತವಾಗಿದೆ.
2. "ನಾಚುತಿಹನೀ ಪೂಜೆಯೇ ನಲುಮೆಯಿಂದ"
ಆಯ್ಕೆ: ಈ ಮೇಲಿನ ವಾಕ್ಯವನ್ನು ಶ್ರೀರಂಗ ಮತ್ತು ನಾ.ಕಸ್ತೂರಿ ಅವರು ಸಂಪಾದಿಸಿರುವ 'ಏಕಾಂಕ ನಾಟಕಗಳು' ಎಂಬ ಕೃತಿಯಿಂದ ಆಯ್ದ ಪು. ತಿ. ನ ಬರೆದಿರುವ 'ಶಬರಿ' ಎಂಬ ಗೀತನಾಟಕದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ಈ ಮಾತನ್ನು ರಾಮನು ಲಕ್ಷ್ಮಣನಿಗೆ ಹೇಳಿದನು. ರಾಮನಿಗಾಗಿ ಹಂಬಲಿಸುತ್ತಿದ್ದ ಶಬರಿಯನ್ನು ಕಂಡು 'ದನು ಹೇಳಿದ ಶಬರಿ ಇವಳೇ ಇರಬಹುದು. ನಮ್ಮಿಂದ ಈಕೆಗೆ ಯಾವುದೇ ಉಪಕಾರ ಇಲ್ಲದಿದ್ದರೂ ಈಕೆಯು ನನ್ನನ್ನು ಇಷ್ಟೊಂದು ನಲ್ಮೆ ಯಿಂದ ನಮ್ಮನ್ನು ನೆನೆಯುತ್ತಿದ್ದಾಳೆ ಈ ಪೂಜ್ಯಳನ್ನು ಕಂಡರೆ ನನಗೆ ಸಂಕೋಚವಾಗುತ್ತಿದೆ .ಎಂದು ಹೇಳುವ ಸಂದರ್ಭದಲ್ಲಿ ಈ ಮೇಲಿನ ವಾಕ್ಯವನ್ನು ಹೇಳಲಾಗಿದೆ.
ಸ್ವಾರಸ್ಯ: ಶಬರಿಯ ಅನನ್ಯ ಭಕ್ತಿಭಾವ ನೋಡಿ ಸಂಕೋಚ ತಾಳುವ ರಾಮನ ಮನಃಸ್ಥಿತಿಯು ಇಲ್ಲಿ ವ್ಯಕ್ತವಾಗಿದೆ.
3. "ತಾಯಿ ದಾರಿಗರಿಗೆ ಬೀಡಿಲ್ಲಿ ದೊರೆಯುವುದೇ?''
ಆಯ್ಕೆ: ಈ ಮೇಲಿನ ವಾಕ್ಯವನ್ನು ಶ್ರೀರಂಗ ಮತ್ತು ನಾ.ಕಸ್ತೂರಿ ಅವರು ಸಂಪಾದಿಸಿರುವ 'ಏಕಾಂಕ ನಾಟಕಗಳು" ಎಂಬ ಕೃತಿಯಿಂದ ಆಯ್ದ ಪು. ತಿ. ನ ಬರೆದಿರುವ 'ಶಬರಿ' ಎಂಬ ಗೀತನಾಟಕದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ರಾಮನು ಶಬರಿಗೆ ಕೇಳುವ ಮಾತು ಇದಾಗಿದೆ. ಸೀತೆಗಾಗಿ ಹುಡುಕಾಡುತ್ತಾ ಬಂದ ರಾಮಲಕ್ಷ ಣರು ಕಾಡೆಲ್ಲ ಸುತ್ತಿ ದಣಿದು ಮತಂಗಾಶ್ರಮಕ್ಕೆ ಬರುತ್ತಾರೆ. ಆಗ ಶಬರಿಯು ರಾಮನಿಗಾಗಿ ಅರ್ಪಿಸಲು ತಂದಿರಿಸಿದ್ದ ಹೂ ಹಣ್ಣುಗಳು ಇನ್ನೂ ಸಮರ್ಪಿತವಾಗಿಲ್ಲ. ಇದಕ್ಕಾಗಿ ಶಬರಿಯು ಬೇಸರಿಸಿ ಪುನಃ ಪುನಃ ಹೊಸದನ್ನು ಸಂಗ್ರಹಿಸಿ ತಂದು ರಾಮನಿಗಾಗಿ ಕೊಡಲು ಕಾತರಿಸುತ್ತಾ, ರಾಮನ ಗುಣಗಾನ ಮಾಡುತ್ತಾ, ಅವನಿಗಾಗಿ ಕಟ್ಟಿದ ಹೂಮಾಲೆಗೆ ಮುದ್ದಿಕ್ಕುತ್ತಾ ಸಂಭ್ರಮಿಸುತ್ತಿರುವ ಸಂದರ್ಭದಲ್ಲಿ ಈ ಮಾತು ಬಂದಿದೆ.
ಸ್ವಾರಸ್ಯ: ತನಗಾಗಿ ಹಂಬಲಿಸುತ್ತಿರುವ ಶಬರಿಯನ್ನು ಕುರಿತು ರಾಮನು ಏನೂ ಅರಿಯದವನಂತೆ "ದಾರಿಗರಾದ ನಮಗೆ ಇಲ್ಲಿ ಉಳಿದುಕೊಳ್ಳಲು ಸ್ಥಳಾವಕಾಶ ದೊರೆಯುವುದೇ?" ಎಂದು ಕೇಳುವುದು ಸ್ವಾರಸ್ಯಪೂರ್ಣವಾಗಿದೆ.
4. "ರೂಪಿನಂತೆ ಮಾತು ಕೂಡ ಎನಿತುದಾರವಾಗಿದೆ!''
ಆಯ್ಕೆ: ಈ ಮೇಲಿನ ವಾಕ್ಯವನ್ನು ಶ್ರೀರಂಗ ಮತ್ತು ನಾ. ಕಸ್ತೂರಿ ಸಂಪಾದಿಸಿರುವ 'ಏಕಾಂಕ ನಾಟಕಗಳು' ಎಂಬ ಕೃತಿಯಿಂದ ಆಯ್ದ ಪು. ತಿ. ನ ಬರೆದಿರುವ 'ಶಬರಿ' ಎಂಬ ಗೀತನಾಟಕದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ಈ ಮಾತನ್ನು ಶಬರಿಯು ರಾಮನನ್ನು ಕುರಿತು ಹೇಳುವ ಮಾತಾಗಿದೆ. ಕಣ್ಣೀರಿಡುತ್ತಿದ್ದ ಶಬರಿಯನ್ನು ಕಂಡು ರಾಮನು ಕಣ್ಣ ನೀರಿದೇಕೆ ತಾಯಿ? ನೀವು ನಮಗೆ ನೀಡಿದ ಆತಿಥ್ಯದಲ್ಲಿ ಯಾವುದೇ ಕೊರತೆಯಿಲ್ಲ. ನಮ್ಮ ಅಯೋಧ್ಯೆಯ ಅರಮನೆಗಿಂತ ಹೆಚ್ಚಿನ ಸತ್ಕಾರ ಇಲ್ಲಿ ದೊರೆಕಿದೆ. ಇದು ಕಾಡು ಎಂಬುದನ್ನೇ ಮರೆತಿದ್ದೇವೆ. ನಿನ್ನನ್ನು ತಾಯಿ ಎಂದೆ ಭಾವಿಸಿದ್ದೇವೆ ಎಂದು ಹೇಳುವ ಸಂದರ್ಭದಲ್ಲಿ ಶಬರಿಯು ಈ ಮೇಲಿನಂತೆ ಹೇಳಿರುವ ಮಾತಾಗಿದೆ.
ಸ್ವಾರಸ್ಯ: ರಾಮನ ಉದಾರಗುಣ, ಮಾತು ಹಾಗೂ ರೂಪವನ್ನು ಹೊಗಳಿರುವುದು ಇಲ್ಲಿ ಸ್ವಾರಸ್ಯಪೂರ್ಣವಾಗಿ ವ್ಯಕ್ತವಾಗಿದೆ.
5. "ಬೆಳಕಿಗೊಲಿದವರ್ ಉರಿವ ಬತ್ತಿಯ ಕರುಕ ಕಾಣರು"
ಆಯ್ಕೆ: ಈ ಮೇಲಿನ ವಾಕ್ಯವನ್ನು ಶ್ರೀರಂಗ ಮತ್ತು ನಾ.ಕಸ್ತೂರಿ ಸಂಪಾದಿಸಿರುವ 'ಏಕಾಂಕ ನಾಟಕಗಳು' ಎಂಬ ಕೃತಿಯಿಂದ ಆಯ್ದ ಪು. ತಿ. ನ ಬರೆದಿರುವ 'ಶಬರಿ' ಎಂಬ ಗೀತನಾಟಕದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ರಾಮನ ದರ್ಶನ ಭಾಗ್ಯದಿಂದ ಸಂತುಷ್ಟಳಾದ ಶಬರಿಯು ಮುಕ್ತಿಯನ್ನು ಪಡೆಯುವುದಕ್ಕಾಗಿ ಅಗ್ನಿ ಪ್ರವೇಶಿಸಿದ ಸಂದರ್ಭದಲ್ಲಿ ರಾಮನು ಈ ಮಾತನ್ನು ಹೇಳುತ್ತಾನೆ. ಉರಿಯುವ ದೀಪ ಬೆಳಕನ್ನು ಕೊಡುತ್ತದೆ. ಆ ದೀಪದ ಜ್ವಾಲೆಯ ಬುಡದಲ್ಲಿ ಬತ್ತಿಯ ಕರಕು (ಕಪ್ಪು) ಭಾಗವೂ ಇರುತ್ತದೆ. ಆದರೆ ಯಾರು ಆ ದೀಪದಲ್ಲಿ ಅದರ ಬೆಳಕನ್ನು ಮಾತ್ರ ಆಶಿಸುತ್ತಾರೋ ಅವರಿಗೆ ದೀಪದ ಬುಡದಲ್ಲಿರುವ ಕಪ್ಪು ಭಾಗ ಕಾಣುವುದಿಲ್ಲ. ಅಂದರೆ ಯಾರು ಒಳಿತನ್ನು ಮಾತ್ರ ಆಲೋಚಿಸುವರೋ ಅವರಿಗೆ ದೋಷ-ಕೆಡುಕುಗಳು ಗೋಚರಿಸುವುದಿಲ್ಲ ಎಂದು ಹೋಲಿಸಿ ಹೇಳುವಾಗ ಈ ಮೇಲಿನ ಮಾತನ್ನು ಹೇಳಲಾಗಿದೆ.
ಸ್ವಾರಸ್ಯ: ಶಬರಿಯು ರಾಮಭಕ್ತಿಯ ಶ್ರೇಷ್ಠತೆ, ಆತನ ದರ್ಶನದ ಬಯಕೆ, ಮುಕ್ತಿಯ ಗುರಿಯನ್ನು ಮಾತ್ರ ಬಯಸಿದ್ದರಿಂದ ಅವಳಿಗೆ ಬೇರಾವುದರ ವಿಚಾರವೂ ಮುಖ್ಯವಾಗಿರಲಿಲ್ಲ ಎಂಬುದು ಈ ಮಾತಿನಲ್ಲಿ ಬಹುಸ್ವಾರಸ್ಯಪೂರ್ಣವಾಗಿ ವ್ಯಕ್ತವಾಗಿದೆ.
ಹೊಂದಿಸಿ ಬರೆಯಿರಿ
1. ಮತಂಗ ---- ಆಶ್ರಮ
2. ಪು. ತಿ .ನ ---- ಮೇಲುಕೋಟೆ
3.ದಶರಥ ------- ರಾಮ
4. ಚಿತ್ರಕೂಟ------- ಪರ್ವತ
5.ಭೂಮಿಜಾತೆ------- ಸೀತೆ
ಕೊಟ್ಟಿರುವ ಗಾದೆಗಳ ಅರ್ಥವನ್ನು ವಿವರಿಸಿ ಬರೆಯಿರಿ ;-
ತಾಳಿದವನು ಬಾಳಿಯಾನುತಾಳಿದವನು ಬಾಳಿಯಾನು ಮನುಷ್ಯನ ಸಾಮಾನ್ಯ ಗುಣವೆಂದರೆ ಒಮ್ಮೆಲೇ ಎಲ್ಲವನ್ನೂ ಸಾಧಿಸಿಬಿಡಬೇಕೆಂಬುದು . ಹೇಗಾದರೂ ಮಾಡಿ ಆದಷ್ಟು ಬೇಗ ಎತ್ತರಕ್ಕೆ ಬೆಳೆಯಬೇಕು , ಸಮಾಜದಲ್ಲಿ ವಿಶೇಷ ಗೌರವ ಸಂಪಾದಿಸಬೇಕು ಎಂಬುದೇ ಆಗಿದೆ . ಆದರೆ , ಅದಕ್ಕೆ ಮುಖ್ಯವಾಗಿ ತಾಳ್ಮೆ ಬೇಕು , ಅವಸರದಿಂದ ಯಾವ ಕೆಲಸವನ್ನು ಮಾಡಬಾರದು . ಸಹನೆ – ತಾಳ್ಮೆ ಪ್ರತಿಯೊಬ್ಬರ ಜೀವನದ ಉಸಿರಾಗಬೇಕು … ಯಾವುದೇ ಸಮಯದಲ್ಲಿ ಸಹನೆಯನ್ನು ಕಳೆದುಕೊಳ್ಳಬಾರದು . ಇವುಗಳನ್ನು ಪಡೆಯಲು ಕೇವಲ ಮಾತಿನಿಂದ ಸಾಧ್ಯವಾಗದು . ಅದಕ್ಕೆ ಸಮಯ ಬರಬೇಕು . ಪ್ರಯತ್ನ ನಿರಂತರವಾಗಿ ಸಾಗಬೇಕು ಎಂಬುದು ಈ ಗಾದೆಯ ಸಾಮಾನ್ಯ ಅರ್ಥ .
ಮನಸ್ಸಿದ್ದರೆ ಮಾರ್ಗ
ಯಾವುದೇ ಕೆಲಸ ಮಾಡುವಾಗ ಅದರ ಸಾಧನೆಗೆ ಎರಡು ಅಂಶಗಳು ಮುಖ್ಯ – ಒಂದು, ಕೆಲಸವನ್ನು ಮಾಡುವ ಸಾಮರ್ಥ್ಯ, ಇನ್ನೊಂದು, ಆ ಕೆಲಸ ಮಾಡಿ ಮುಗಿಸುವ ಪಯತ್ನ, ಸಾಮರ್ಥ್ಯ ಮತ್ತು ಪ್ರಯತ್ನಗಳು ಒಟ್ಟು ಸೇರಿದಾಗ ಕಾರ್ಯಸಾಧನೆ ಕಟ್ಟಿಟ್ಟ ಬುತ್ತಿ ಒಂದು ಕೆಲಸ ಆಗದೇ ಇರುವುದಕ್ಕೆ ಸಾಮರ್ಥ್ಯ ಅಥವಾ ಪ್ರಯತ್ನದ ಕೊರತೆಯೇ ಕಾರಣ. ಆದರೆ ಹೆಚ್ಚಾಗಿ ನೋಡಿದರೆ ಪ್ರಯತ್ನದ ಅಭಾವವೇ ಕಂಡುಬರುತ್ತದೆ. ನಮ್ಮ ಅನೇಕ ವಿದ್ಯಾರ್ಥಿಗಳು ಬುದ್ಧಿವಂತರಾಗಿದ್ದರೂ, ಮನಸ್ಸಿಟ್ಟು ಪ್ರಯತ್ನಿಸದೇ ಇರುವುದರಿಂದ ಪರೀಕ್ಷೆಯಲ್ಲಿ ಉತ್ತಮ ಪರಿಣಾಮ ಸಿಗುವುದಿಲ್ಲ. ಓದಬೇಕೆಂಬ ಹಠವಿದ್ದರೆ ಪುಸ್ತಕಗಳನ್ನು ಎಲ್ಲೆಲ್ಲಿಂದಲೋ ಒದಗಿಸಿಕೊಂಡು, ಓದಿ ಪಾಸಾಗಬಹುದು. ಹಲವು ವೇಳೆ ಎಲ್ಲ ಪುಸ್ತಕಗಳನ್ನು ಹೊಂದಿದ್ದರೂ, ಓದಲು ಮನಸ್ಸಿಲ್ಲದೇ ಫೇಲಾಗುವವರೂ ಇದ್ದಾರೆ. ಪ್ರೀತಿಯಿಂದ ಮಾಡಿದ ಕೆಲಸಗಳು ಯಶಸ್ವಿಯಾಗುತ್ತವೆ. ಹಾಗಾಗಿ ಮೊದಲು ನಮ್ಮಲ್ಲಿ ಗುರಿ ಇರಬೇಕು ನಂತರ ಗುರಿ ಸಾಧಿಸುತ್ತೇನೆ ಎಂಬ ಛಲ ಇರಬೇಕು
1.ಗ್ರಂಥಾಲಯಗಳ ಮಹತ್ವ
ಪೀಠಿಕೆ; ಸಮಾಜದ ಅಭಿವೃದ್ಧಿಗೆ ಗ್ರಂಥಾಲಯಗಳು ಬಹಳ ಮುಖ್ಯ. ಗ್ರಂಥಾಲಯವು ಜ್ಞಾನದ ಭಂಡಾರವಾಗಿದೆ. ನಮಗೆ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಲು ಸಹಾಯ ಮಾಡುತ್ತದೆ. ಪುಸ್ತಕಗಳನ್ನು ನಮ್ಮ ಆತ್ಮೀಯ ಸ್ನೇಹಿತ ಎಂದು ಹೇಳಲಾಗುತ್ತದೆ. ನಾವು ಬಯಸಿದರೆ ನಮ್ಮ ಅಭ್ಯಾಸ ಗಳನ್ನು ಪುಸ್ತಕಗಳನ್ನು ಓದುವ ಮೂಲಕ ಬದಲಿಸಿಕೊಳ್ಳಬಹುದು. ಅದಕ್ಕಾಗಿಯೇ ನಮ್ಮ ಜೀವನದಲ್ಲಿ ಗ್ರಂಥಾಲಯವು ಬಹಳ ಮುಖ್ಯವಾಗಿದೆ.
ವಿಷಯ ವಿವರಣೆ ;
ಗ್ರಂಥಾಲಯ ಎಂಬ ಪದವು ಎರಡು ಪದಗಳ ಸಂಯೋಜನೆಯಿಂದ ಬಂದಿದೆ. ಗ್ರಂಥ+ಆಲಯ = ಗ್ರಂಥಾಲಯ, ಅಂದರೆ ಗ್ರಂಥ ಎಂದರೆ ಪುಸ್ತಕ ಹಾಗೂ ಆಲಯ ಎಂದರೆ ಸ್ಥಳ. ಗ್ರಂಥಾಲಯವನ್ನು ಪುಸ್ತಕಗಳ ಮನೆ ಅಥವಾ ಪುಸ್ತಕಗಳನ್ನು ಸಂಗ್ರಹಿಸಿ ಇಡುವ ಸ್ಥಳ ಎಂದು ಹೇಳಬಹುದು. ಭಾರತದಲ್ಲಿ ಗ್ರಂಥಾಲಯದ ಅಗತ್ಯವು ಹಳ್ಳಿಗಳಲ್ಲಿ ಅಥವಾ ಸಣ್ಣ ಸಣ್ಣ ಪಟ್ಟಣಗಳಲ್ಲಿ ಹೆಚ್ಚು ಏಕೆಂದರೆ ಜನರು ಸೀಮಿತ ಸಂಪನ್ಮೂಲಗಳನ್ನು ಹೊಂದಿರುತ್ತಾರೆ. ಅವರ ಅದಾಯವು ಕಡಿಮೆ, ದುಬಾರಿ ಪುಸ್ತಕಗಳನ್ನು ಖರೀದಿಸಲು ಕಷ್ಟವಾದ್ದರಿಂದ ಜ್ಞಾನವನ್ನು ಸಂಪಾದಿಸಲು ಗ್ರಂಥಾಲಯವು ಹೆಚ್ಚು ಸಹಾಯಕವಾಗುತ್ತದೆ.
ಗ್ರಂಥಾಲಯಗಳಲ್ಲಿ ಸಾರ್ವಜನಿಕ ಗ್ರಂಥಾಲಯಗಳು ಮತ್ತು ಖಾಸಗಿ ಗ್ರಂಥಾಲಯಗಳು ಎಂಬ ಎರಡು ವಿಧಗಳಿವೆ. ಸಾರ್ವಜನಿಕ ಗ್ರಂಥಾಲಯಗಳು ಎಲ್ಲಾ ವರ್ಗದವರಿಗೂ ಲಭ್ಯವಿದೆ. ಯಾರು ಬೇಕಾದರೂ ಗ್ರಂಥಾಲಯಕ್ಕೆ ಹೋಗಿ ತಮ್ಮ ಇಷ್ಟದ ಪುಸ್ತಕಗಳನ್ನು ಓದಬಹುದು. ಖಾಸಗಿ ಗ್ರಂಥಾಲಯಕ್ಕೆ ವಕೀಲರು, ವೈದ್ಯರು, ಎಂಜಿನಿಯರ್‌ಗಳು ಮುಂತಾದ ವಿಶೇಷ ವರ್ಗದ ಜನರು ಭೇಟಿ ನೀಡಬಹುದು. ಏಕೆಂದರೆ ಅಲ್ಲಿ ಅವರಿಗೆ ಉಪಯುಕ್ತವಾದ ಮಾಹಿತಿ ಅಥವಾ ವಿಷಯವನ್ನು ತಿಳಿಯಲು ಹಾಗೂ ಅಗತ್ಯವಾದ ಅಂಶವನ್ನು ಅರ್ಥಮಾಡಿಕೊಳ್ಳಲು ವಿಭಿನ್ನ ಪುಸ್ತಕಗಳು ಸಿಗುತ್ತವೆ. ಗ್ರಂಥಾಲಯಗಳು ಜ್ಞಾನವನ್ನು ಹೊಂದಲು ಹಾಗೂ ಜ್ಞಾನವನ್ನು ಹಂಚಲು ಸಹಾಯಕವಾಗಿವೆ. ಗ್ರಂಥಾಲಯವು ಪುಸ್ತಕಗಳು, ನಿಯತಕಾಲಿಕೆಗಳು, ಪತ್ರಿಕೆಗಳು, ಡಿವಿಡಿಗಳು, ಹಸ್ತಪ್ರತಿಗಳು ಮತ್ತು ಹೆಚ್ಚಿನದನ್ನು ಒಳಗೊಂಡಿವೆ. ಗ್ರಂಥಾಲಯವು ಎಲ್ಲವನ್ನು ಒಳಗೊಂಡಿರುವ ಮಾಹಿತಿಯ ಮೂಲವಾಗಿದೆ.
ಉಪಸಂಹಾರ ; ಗ್ರಂಥಾಲಯದಿಂದ ಶಿಸ್ತುಬದ್ಧ ಜೀವನಶೈಲಿ, ಏಕಾಂತ ಮತ್ತು ಏಕಾಗ್ರತೆಯ ವಾತಾವರಣ ಕಾಣಬಹುದು ವಿದ್ಯಾರ್ಥಿಗಳಿಗೆ ಅದರಲ್ಲೂ ಪುಸ್ತಕ ಓದುವ ಆಸಕ್ತಿ ಹೊಂದಿರುವವರ ಜೀವನದಲ್ಲಿ ಗ್ರಂಥಾಲಯವು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ, ನಿಯಮಿತವಾಗಿ ಗ್ರಂಥಾಲಯವನ್ನು ಬಳಸುವವರಿಗೆ ಇದರ ಅರ್ಥ ಚನ್ನಾಗಿ ತಿಳಿದಿರುತ್ತದೆ.
2.ಸಾಮಾಜಿಕ ಪಿಡುಗುಗಳು ಪೀಠಿಕೆ ಸಮಾಜದ ಅಭಿವೃದ್ಧಿಗೆ ತೊಡಕನ್ನುಂಟುಮಾಡುವ ಕೆಲವು ಪದ್ಧತಿಗಳನ್ನು ಸಾಮಾಜಿಕ ಪಿಡುಗುಗಳು ಎಂದು ಕರೆಯುತ್ತಾರೆ . ಭಾರತದಂತಹ ಅಭಿವೃದ್ದಿ ಪಥದಲ್ಲಿರುವ ರಾಷ್ಟ್ರಗಳಲ್ಲಿ ಇಂತಹ ಪದ್ಧತಿಗಳು ,ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಕಂಟಕವಾಗಿವೆ. ಇವುಗಳನ್ನು ನಿವಾರಿಸಿಕೊಂಡಾಗ ಮಾತ್ರ ಸಮಾಜ ಸ್ವಾಸ್ಥ್ಯವಾಗಿರಬಲ್ಲದು .
ವಿಷಯ ವಿವರಣೆ
ಸಾಮಾಜಿಕ ಪಿಡುಗುಗಳೆಂದರೆ ಜಾತಿಯತೆ, ಬಡತನ, ಬಾಲಾಪರಾಧ, ಹೆಣ್ಣು ಭ್ರೂಣ ಹತ್ಯೆ, ಲಿಂಗ ತಾರತಮ್ಯ ಮಿತಿಮೀರಿದ ಜನಸಂಖ್ಯೆ, ನಿರುದ್ಯೋಗ, ಭ್ರಷ್ಟಾಚಾರ, ಮಹಿಳೆಯರ ಶೋಷಣೆ, ಬಾಲ್ಯವಿವಾಹ ವರದಕ್ಷಿಣೆ ಕಿರುಕುಳ ಮತ್ತು ಇತ್ಯಾದಿ. ಜಾತಿಯತೆ ಜಾತಿ ವ್ಯವಸ್ಥೆಯು ವರ್ಗವನ್ನು ನಿರ್ಧರಿಸುವ ಅಥವಾ ಹುಟ್ಟಿನಿಂದಲೇ ಜನರಿಗೆ ಸ್ಥಾನಮಾನವನ್ನು ನಿಗದಿಪಡಿಸುವ ಒಂದು ವ್ಯವಸ್ಥೆಯಾಗಿದೆ. ಭಾರತದಲ್ಲಿ ಜಾತಿ ವ್ಯವಸ್ಥೆಯ ಕಾರಣಗಳು, ಪರಿಣಾಮಗಳು ಮತ್ತು ಪರಿಹಾರಗಳನ್ನು ಕೆಳಗೆ ವಿವರಿಸಲಾಗಿದೆ:
ಬಡತನ ಬಡತನ ಎಂದರೆ ಜನರ ಮೂಲಭೂತ ಅಗತ್ಯಗಳನ್ನು ಪೂರೈಸದ ಪರಿಸ್ಥಿತಿ. ಸಂಪನ್ಮೂಲಗಳು ಮತ್ತು ಅವಕಾಶಗಳು ಸೀಮಿತವಾದಾಗ ಮತ್ತು ಜನಸಂಖ್ಯೆಯು ಅಧಿಕವಾಗಿರುವಾಗ, ನಿರುದ್ಯೋಗ ಪರಿಸ್ಥಿತಿಯು ಅಂತಿಮವಾಗಿ ಬಡತನಕ್ಕೆ ಕಾರಣವಾಗುತ್ತದೆ. ಬಾಲಕಾರ್ಮಿಕ ಸಮಸ್ಯೆ :
ಸಾಮಾನ್ಯವಾಗಿ, ಅಪ್ರಾಪ್ತ ವಯಸ್ಸಿನ ಮಕ್ಕಳ ದುಡಿಮೆಯನ್ನು ಬಾಲಕಾರ್ಮಿಕತನ ಎಂದು ಕರೆಯಲಾಗುತ್ತದೆ. ಭಾರತ ಸಂವಿಧಾನದ ಪ್ರಕಾರ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಆರ್ಥಿಕ ಸಂಪಾದನೆಯ ಉದ್ದೇಶದಿಂದ ದುಡಿಮೆ ಮಾಡುತ್ತಿದ್ದರೆ ಅಂತಹವರನ್ನು ಬಾಲ ಕಾರ್ಮಿಕರು ಎಂದು ಕರೆಯಲಾಗಿದೆ. ಮಕ್ಕಳ ದುಡಿತವೆಂಬುದು ಸಾಮಾಜಿಕ ವ್ಯವಸ್ಥೆಯ ಒಂದು ಗಂಭೀರ ಪಿಡುಗಾಗಿದೆ.
ಹೆಣ್ಣು ಭ್ರೂಣ ಹತ್ಯೆ : ಸ್ವಾಭಾವಿಕವಾಗಿ ತಾಯಿಯ ಗರ್ಭದಲ್ಲಿ ಹೆಣ್ಣು ಭ್ರೂಣವಿದ್ದು, ಅದು ತಂದೆ ತಾಯಿಗೆ ಬೇಡವಾದರೆ ಅದನ್ನು ಗರ್ಭದಲ್ಲಿಯೇ ಕೊಂದುಹಾಕುವುದೆ ಹೆಣ್ಣು ಭ್ರೂಣ ಹತ್ಯೆ ಎನ್ನುವರು. ಗಂಡು ಮಕ್ಕಳ ಬಯಕೆಯಿಂದ ಆಧುನಿಕ ತಂತ್ರಜ್ಞಾನದ ದುರ್ಬಳಕೆ ನಡೆಯುತ್ತಿದೆ.
ಲಿಂಗ ತಾರತಮ್ಯ: ಲಿಂಗತ್ವ ಎಂಬುದು ಮಹಿಳೆಯರು ಮತ್ತು ಪುರುಷರು ಎಂದು ಗುರುತಿಸಿಕೊಳ್ಳುವುದ್ದಕ್ಕಾಗಿ ಇರುವ ಪರಿಕಲ್ಪನೆಯಾಗಿದೆ. ಇದು ಸ್ತ್ರೀ ಪುರುಷರಿಬ್ಬರಿಗೂ ಅವರವರ ಸ್ಥಾನವನ್ನು ಸೂಚಿಸುತ್ತದೆ. ಲಿಂಗತಾರತಮ್ಯದಲ್ಲಿ ಪ್ರಕಾರಗಳಿವೆ ಅವುಗಳೆಂದರೆ ಜನನ ಪ್ರಮಾಣದಲ್ಲಿ ಅಸಮಾನತೆ, ಮೂಲ ಸೌಕರ್ಯದಲ್ಲಿ ಅಸಮಾನತೆ, ಅವಕಾಶಗಳಲ್ಲಿ ಅಸಮಾನತೆ, ಒಡೆತನದ ಅಸಮಾನತೆ, ಕೌಟುಂಬಿಕ ಅಸಮಾನತೆ.
ಬಾಲ್ಯವಿವಾಹ :
ಕಾನೂನಿನ ಪ್ರಕಾರ ಬಾಲ್ಯವಿವಾಹ ಎಂದರೆ 18 ವರ್ಷದೊಳಗಿನ ಹುಡುಗಿಗೆ ಅಥವಾ 21 ವರ್ಷದೊಳಗಿನ ಹುಡುಗನಿಗೆ ಮದುವೆ ಮಾಡಿದರೆ ಅದನ್ನು ಬಾಲ್ಯವಿವಾಹ ಎನ್ನಲಾಗುತ್ತದೆ. ಲಿಂಗತಾರತಮ್ಯ, ಶಿಕ್ಷಣ ಇಲ್ಲದಿರುವಿಕೆ, ಬಾಲಕಾರ್ಮಿಕತೆ, ಇವೆಲ್ಲವೂ ಬಾಲ್ಯ ವಿವಾಹಕ್ಕೆ ಕಾರಣವಾಗಿವೆ.
ಮಕ್ಕಳ ಸಾಗಾಣಿಕೆ ಮತ್ತು ಮಾರಾಟ : 18 ವರ್ಷದೊಳಗಿನ ಯಾವುದೆ ವ್ಯಕ್ತಿಯ ನೇಮಕಾತಿ, ಸಾಗಾಣಿಕೆ, ವರ್ಗಾವಣೆ, ಆಶ್ರಯ, ರವಾನಿಸುವುದು ಅಥವಾ ಶೋಷಣೆಯ ಉದ್ದೇಶಕ್ಕಾಗಿ ನಡೆಯುವ ಕೃತ್ಯವನ್ನು ಮಕ್ಕಳ ಸಾಗಾಣಿಕೆ ಎನ್ನುವರು. ಹೆಚ್ಚಾಗುತ್ತಿರುವ ಸಾಮಾಜಿಕ ಅಸಮಾನತೆ, ಕೌಶಲ್ಯಗಳ ಕೊರತೆ, ಅಸಮಾನ ವ್ಯಾಪಾರ ಸಂಬಂಧ ಇವೆಲ್ಲವೂ ಮಕ್ಕಳ ಸಾಗಾಣಿಕೆ ಮತ್ತು ಮಾರಾಟಕ್ಕೆ ಕಾರಣವಾಗಿವೆ.
ವರದಕ್ಷಿಣೆ :
ವಿವಾಹದ ಉಡುಗೊರೆಯಾಗಿ ವಧುವಿನ ಕುಟುಂಬದವರಿಂದ ನಾನಾರೂಪದಲ್ಲಿ ಅಪೇಕ್ಷಿಸಲಾಗುವ ಸ್ವತ್ತು, ಚಿನ್ನಾಭರಣ, ನಗದು ಅಥವಾ ವಾಹನ ಇತ್ಯದಿಗಳು ವವರದಕ್ಷಿಣೆಯ ರೂಪಗಳಾಗಿರುತ್ತವೆ. ವರದಕ್ಷಿಣೆಯನ್ನು ಕೊಡುವುದು ಮತ್ತು ಪಡೆಯುವುದು ಶಿಕ್ಷಾರ್ಹ ಅಪರಾಧ.
ಉಪಸಂಹಾರ ಸಾಮಾಜಿಕ ಪಿಡುಗುಗಳು ದೇಶಕ್ಕೆ ಅಂಟಿದ ಕಪ್ಪು ಚುಕ್ಕೆಯಾಗಿದೆ. ಇದನ್ನು ನಿರ್ಮೂಲನೆ ಮಾಡುವತ್ತ ನಾವೆಲ್ಲರೂ ಸಾಗಬೇಕಾಗಿದೆ. ಇದು ಕೇವಲ ಒಬ್ಬರಿಂದ ಸಾದ್ಯವಿಲ್ಲ, ಎಲ್ಲರೂ ಇವುಗಳ ಬಗ್ಗೆ ಸರಿಯಾದ ರೀತಿಯಲ್ಲಿ ಕ್ರಮತೆಗೆದುಕೊಳ್ಳಬೇಕಾಗಿದೆ.
3.ರಾಷ್ಟ್ರೀಯ ಹಬ್ಬಗಳ ಮಹತ್ವ
ಪೀಠಿಕೆ
ರಾಷ್ಟ್ರೀಯ ಹಬ್ಬಗಳು ಏಕತೆಯನ್ನು ಬೆಳೆಸುವಲ್ಲಿ, ಸಂಸ್ಕೃತಿಯನ್ನು ಸಂರಕ್ಷಿಸುವಲ್ಲಿ ಮತ್ತು ದೇಶದ ನಾಗರಿಕರಲ್ಲಿ ಸೇರಿರುವ ಭಾವನೆಯನ್ನು ಬಲಪಡಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. ಅವು ರಾಷ್ಟ್ರದ ಇತಿಹಾಸ, ಸಂಪ್ರದಾಯಗಳು ಮತ್ತು ಮೌಲ್ಯಗಳ ಪ್ರತಿಬಿಂಬವಾಗಿದೆ. ರಾಷ್ಟ್ರೀಯ ಹಬ್ಬಗಳು ಭಾರತದ ಏಕತೆ ಹಾಗೂ ಶ್ರೀಮಂತ ಸಂಸ್ಕೃತಿಯನ್ನು ಸಂರಕ್ಷಿಸುವಲ್ಲಿ ಮಹತ್ವವೆನ್ನಿಸಿವೆ.
ವಿಷಯ ವಿವರಣೆ ರಾಷ್ಟ್ರೀಯ ಹಬ್ಬಗಳ ಮಹತ್ವ
ರಾಷ್ಟ್ರೀಯ ಹಬ್ಬಗಳು ಕೇವಲ ಆಚರಣೆಗಳ ಕಾರ್ಯಕ್ರಮಗಳಲ್ಲ, ಸಂತೋಷವನ್ನು ಮೀರಿದ ಆಳವಾದ ಮಹತ್ವವನ್ನು ಹೊಂದಿವೆ. ಅವು ದೇಶದ ಐತಿಹಾಸಿಕ ಹೋರಾಟಗಳು ಮತ್ತು ಸಾಧನೆಗಳ ನೆನಪಿಗಾಗಿ ಹಾಗೂ ಗುರುತನ್ನಾಗಿ ಅಚರಿಸುತ್ತಾರೆ. ಈ ಹಬ್ಬಗಳು ರಾಷ್ಟ್ರದ ವೈವಿಧ್ಯತೆ ಗೆ ಸಾಕ್ಷಿಯಾಗಿದೆ.
ಏಕತೆಯನ್ನು ಬೆಳೆಸುವುದು
ರಾಷ್ಟ್ರೀಯ ಹಬ್ಬಗಳ ಪ್ರಾಥಮಿಕ ಉದ್ದೇಶವೆಂದರೆ ವೈವಿಧ್ಯಮಯ ಜನರ ನಡುವೆ ಏಕತೆಯನ್ನು ಬೆಳೆಸುವುದು. ವೈವಿಧ್ಯಮಯ ಜನಾಂಗೀಯ, ಧಾರ್ಮಿಕ ಮತ್ತು ಭಾಷಿಕ ಹಿನ್ನೆಲೆಯನ್ನು ಹೊಂದಿರುವ ಎಲ್ಲವನ್ನು ಒಗ್ಗೂಡಿಸುವ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತದೆ.
ಸಂಸ್ಕೃತಿಯನ್ನು ಕಾಪಾಡುವುದು ರಾಷ್ಟ್ರೀಯ ಹಬ್ಬಗಳು ದೇಶದ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಸಂರಕ್ಷಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಸಾಂಸ್ಕೃತಿಕ ಆಚರಣೆಗಳು ಮತ್ತು ಜಾನಪದವನ್ನು ಒಂದು ಪೀಳಿಗೆಯಿಂದ ಮುಂದಿನ ಪೀಳಿಗೆಗೆ ತಲುಪಿಸುತ್ತವೆ. ಈ ಹಬ್ಬಗಳ ಮೂಲಕ ಯುವಕರು ತಮ್ಮ ಸಾಂಸ್ಕೃತಿಕ ಪರಂಪರೆ ಮತ್ತು ವಿವಿಧ ಪದ್ಧತಿಗಳ ಮಹತ್ವವನ್ನು ತಿಳಿದುಕೊಳ್ಳುತ್ತಾರೆ. ದೇಶಪ್ರೇಮವನ್ನು ತುಂಬುವುದು
ರಾಷ್ಟ್ರೀಯ ಹಬ್ಬಗಳು ದೇಶಭಕ್ತಿ ಮತ್ತು ಹೆಮ್ಮೆಯ ಭಾವವನ್ನು ಹುಟ್ಟುಹಾಕುತ್ತವೆ. ರಾಷ್ಟ್ರದ ಸ್ವಾತಂತ್ರ್ಯ ಮತ್ತು ಸಮೃದ್ಧಿಗಾಗಿ ಹಿಂದಿನ ತಲೆಮಾರುಗಳು ಮಾಡಿದ ತ್ಯಾಗ ಮತ್ತು ಬಲಿದಾನ ಗಳನ್ನು ನೆನಪಿಸುತ್ತವೆ. ಮೆರವಣಿಗೆಗಳು, ಧ್ವಜಾರೋಹಣ ಸಮಾರಂಭಗಳು ಮತ್ತು ದೇಶಭಕ್ತಿ ಗೀತೆಗಳ ಮೂಲಕ ನಾಗರಿಕರು ತಮ್ಮ ರಾಷ್ಟ್ರದ ಮೌಲ್ಯಗಳು ಮತ್ತು ತತ್ವಗಳನ್ನು ಅಲವಡಿಸಿಕೊಳ್ಳುವಲ್ಲಿ ಅನುಕೂಲವಾಗಿದೆ.
ಉಪಸಂಹಾರ ಒಟ್ಟಾರೆ ಹೇಳುವುದ್ದಾದರೆ, ರಾಷ್ಟ್ರೀಯ ಹಬ್ಬಗಳು ನಾಗರಿಕರ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿವೆ, ಇವು ದೇಶದ ಇತಿಹಾಸ, ಸಂಸ್ಕೃತಿ ಮತ್ತು ಏಕತೆ ಬಗ್ಗೆ ಅರಿವು ಮೂಡಿಸುತ್ತವೆ. ಸಾಂಸ್ಕೃತಿಕ ಸಂಪ್ರದಾಯಗಳನ್ನು ಸಂರಕ್ಷಿಸುವಲ್ಲಿ ಮತ್ತು ದೇಶಭಕ್ತಿಯ ಭಾವವನ್ನು ತುಂಬುವಲ್ಲಿ ರಾಷ್ಟ್ರೀಯ ಹಬ್ಬಗಳ ಮಹತ್ವ ತುಂಬಾ ದೊಡ್ಡದು. ಈ ಹಬ್ಬಗಳು ರಾಷ್ಟ್ರದ ಶ್ರೀಮಂತ ಪರಂಪರೆಗೆ ಸಾಕ್ಷಿಯಾಗಿದೆ. ರಾಷ್ಟ್ರೀಯ ಹಬ್ಬಗಳ ಆಚರಣೆ ಕೇವಲ ಸಂಪ್ರದಾಯವಲ್ಲ; ಇದು ರಾಷ್ಟ್ರದ ವೈವಿಧ್ಯತೆಯಲ್ಲಿ ಏಕತೆಯನ್ನು ಸೂಚಿಸುತ್ತದೆ.