ಪಠ್ಯಪೂರಕ ಅಧ್ಯಯನ -1
ಉದಾತ್ತ ಚಿಂತನೆಗಳು

ಕೊಟ್ಟಿರುವ ಪ್ರಶ್ನೆಗಳಿಗೆ ಒಂದು - ಎರಡು ವಾಕ್ಯಗಳಲ್ಲಿ ಉತ್ತರಿಸಿ. 
1. ಕ್ರಿಯಾ ಸ್ವಾತಂತ್ರ್ಯ ಎಂದರೇನು? ಕ್ರಿಯಾ ಸ್ವಾತಂತ್ರ್ಯವೆಂದರೆ, ತಮಗೆ ಇಷ್ಟ ಬಂದ ಕೆಲಸ ಮಾಡಲು ವ್ಯಕ್ತಿಗೆ ಸ್ವಾತಂತ್ರ್ಯವಿರುವುದು. ಅದು ಔಪಚಾರಿಕವಾಗಿದ್ದರೆ ಸಾಲದು, ವಾಸ್ತವಿಕವಾಗಿ ಕೂಡ ಜಾರಿಯಲ್ಲಿರಬೇಕು.  ಅದು ನಿರ್ದಿಷ್ಟ ಕಾರ್ಯಗಳನ್ನು ಮಾಡಲು ಇರುವ ಪರಿಣಾಮಕಾರಿಯಾದ ಸಾಮರ್ಥ್ಯವಾಗಬೇಕು. ಎಲ್ಲಿ ಶೋಷಣೆ ಇಲ್ಲವೋ, ಎಲ್ಲಿ ನಿರುದ್ಯೋಗ ಇಲ್ಲವೋ, ಎಲ್ಲಿ ಒಂದು ವರ್ಗವು ಇನ್ನೊಂದು ವರ್ಗವನು ತುಳಿಯುತ್ತಿಲ್ಲವೋ, ಎಲ್ಲಿ ತನ್ನ ಕೆಲಸದ ಫಲವಾಗಿ ತನ್ನ ಕೆಲಸ, ಮನೆ , ಆಹಾರಗಳನ್ನು ಕಳೆದುಕೊಂಡು ಬಿಡುವ ಭೀತಿ ವ್ಯಕ್ತಿಗೆ ಇರುವುದಿಲ್ಲವೋ ಅಲ್ಲಿ ನಿಜವಾದ ಕ್ರಿಯಾ ಸ್ವಾತಂತ್ರ್ಯವಿದೆ ಎಂದು ಹೇಳಬಹುದು.

2. ರಾಜಕೀಯ ಸ್ವಾತಂತ್ರ್ಯದ ಮಹತ್ವವೇನು?
ರಾಜಕೀಯ ಸ್ವಾತಂತ್ರ್ಯ ಇರುವುದು ವ್ಯಕ್ತಿಗೆ ಶಾಸನಗಳನ್ನು ರಚಿಸುವುದರಲ್ಲಿ, ಸರಕಾರಗಳ ಸ್ಥಾಪನೆ, ವಿಸರ್ಜನೆಗಳಲ್ಲಿ ಪಾಲು ಇರುವ ಹಕ್ಕಿನಲ್ಲಿ, ಸರಕಾರ, ಇರುವುದಾದರೂ ಜನರಿಗೆ ಜೀವನ, ಸ್ವಾತಂತ್ರ್ಯ, ಸಂತೋಷಾನ್ವೇಷಣೆಗಳನ್ನು ನೇಷಣೆಗಳನ್ನು ಒದಗಿಸಿ ಕೊಡುವ ಸಲುವಾಗಿ, ವಾಸ್ತವವಾಗಿ ರಾಜಕೀಯ ಸ್ವಾತಂತ್ರ್ಯ ಎನ್ನುವುದು ಮಾನವ ವ್ಯಕ್ತಿತ್ವ ಮತ್ತು ಸಮಾನತೆ ತತ್ತ್ವದಿಂದ ಅನುಗಮನ ಮಾಡಿದ ತತ್ವವಾಗಿದೆ. ಏಕೆಂದರೆ ರಾಜಕೀಯವಾದ ಸಮಸ್ತ ಅಧಿಕಾರವೂ ಜನತೆಯಿಂದ ಬರುತ್ತದೆ. ತಮ್ಮ ಸಾರ್ವಜನಿಕವಾದ ಹಾಗೂ ಖಾಸಗಿಯಾದ ಜೀವನವನ್ನು ನಿರ್ದೇಶಿಸುವ, ನಿಯಂತ್ರಿಸುವ ಸಾಮರ್ಥ್ಯವನ್ನು ಅವರು ತಾವೇ ಹೊಂದಿರುತ್ತಾರೆಯೇ ಹೊರತು ಬೇರೆ ಯಾರು ಅಲ್ಲವೆಂದು ಅರ್ಥವಾಗುತ್ತದೆ.

3. ಅಂದವಾದ ಬರೆವಣಿಗೆಯ ಬಗ್ಗೆ ಗಾಂಧೀಜಿಯವರ ಅಭಿಪ್ರಾಯವೇನು?
ಗಾಂಧೀಜಿಯವರು ಇಂಗ್ಲೆಂಡ್ ಗೆ ಹೋಗುವವರೆಗೂ ಅಂದವಾದ ಅಕ್ಷರ ಮತ್ತು ಒಳ್ಳೆಯ ಬರವಣಿಗೆ ಶಿಕ್ಷಣದ ಅವಶ್ಯಕ ಅಂಶವಲ್ಲವೆಂದು ಭಾವಿಸಿದ್ದರು. ಅನಂತರ ದಕ್ಷಿಣ ಆಫ್ರಿಕಾಕ್ಕೆ ಹೋದಮೇಲೆ ಅಲ್ಲಿ ಸುಶಿಕ್ಷಿತ ಯುವಕರ ಮತ್ತು ವಕೀಲರ ಮುತ್ತು ಪೋಣಿಸಿದಂತಿದ್ದ ಸುಂದರ ಬರವಣಿಗೆ ನೋಡಿ ಅವರಿಗೆ ನಾಚಿಕೆಯೂ ಪಶ್ಚಾತ್ತಾಪವೂ ಆಯಿತು. ಕೆಟ್ಟ ಅಕ್ಷರದ ಬರವಣಿಗೆ  ಅಪೂರ್ಣ ಶಿಕ್ಷಣದ ಚಿಹ್ನೆ ಎಂದು ಅರಿತರು. ತನ್ನ ಬರವಣಿಗೆಯನ್ನು ತಿದ್ದಿಕೊಳ್ಳಲು ಪ್ರಯತ್ನಿಸಿದರಾದರೂ ಸುಟ್ಟ ಮಡಕೆಗೆ ಹಸಿಮಣ್ಣನ್ನು ಮೆತ್ತಲು ಸಾಧ್ಯವಿಲ್ಲದ ಹಾಗೆ ಆ ವೇಳೆಗೆ ಕಾಲಮೀರಿ ಹೋಗಿತ್ತು. ಅವರ ಉದಾಹರಣರೆಯಿಂದ ಒಳ್ಳೆಯ ಬರವಣಿಗೆ ಉತ್ತಮ ಶಿಕ್ಷಣದ ಅವಶ್ಯ ಅಂಶವೆಂಬುದು ಪ್ರತಿಯೊಬ್ಬ ಯುವಕ ಯುವತಿಯರು ತಿಳಿದುಕೊಳ್ಳಲಿ ಎಂದು ಗಾಂಧೀಜಿಯವರು ಹೇಳಿದ್ದಾರೆ.

4. 'ಅನ್‌ಟು ದಿಸ್ ಲಾಸ್ಟ್' ಕೃತಿ ಗಾಂಧೀಜಿಯವರ ಮೇಲೆ ಯಾವ ಪರಿಣಾಮ ಬೀರಿತು?
ಗಾಂಧೀಜಿಯವರು ಓದಿದ ರಸ್ಕಿನ್‌ನ ‘ಅನ್‌ಟು ದಿಸ್ ಲಾಸ್ಟ್’ ಪುಸ್ತಕವು ಅವರ ಮನಸ್ಸನ್ನು ಸೆರೆ ಹಿಡಿಯಿತು. ಆ ಪುಸ್ತಕದಲ್ಲಿ ಹೇಳಿದ್ದ ಧ್ಯೇಯಗಳಿಗನುಸಾರವಾಗಿ ಜೀವನವನ್ನು ಬದಲಾಯಿಸಿಕೊಳ್ಳಬೇಕೆಂದು ಅವರು ನಿರ್ಣಯಿಸಿದರು.ಅವರು ಓದಿದ ಕೆಲವು ಪುಸ್ತಕಗಳ ಪೈಕಿ, ಬಾಳಿನಲ್ಲಿ ತತ್‌ಕ್ಷಣ ಪರಿಣಾಮಕಾರಿಯಾದ ಬದಲಾವಣೆಯನ್ನು ಮಾಡಿದುದು 'ಅನ್‌ಟು ದಿಸ್ ಲಾಸ್ಟ್' ಎಂಬ ಪುಸ್ತಕ. ಅನಂತರ ಅವರು ಆ ಪುಸ್ತಕವನ್ನು ಸರ್ವೋದಯವೆಂಬ ಹೆಸರಿನಿಂದ ಗುಜರಾತಿ (ಭಾಷೆ)ಗೆ ಅನುವಾದ ಮಾಡಿದರು. ‘ಅನ್‌ಟು ದಿಸ್ ಲಾಸ್ಟ್‘ ಗ್ರಂಥದ ಸಿದ್ಧಾಂತಗಳನ್ನು ಅವರು ಹೀಗೆ ತಿಳಿಸಿದ್ದಾರೆ .

1.ಎಲ್ಲರ ಒಳ್ಳೆಯದರಲ್ಲಿಯೇ ನಮ್ಮ ಒಳ್ಳೆಯದು ಅಡಗಿದೆ.
2.ವಕೀಲನ ಕೆಲಸಕ್ಕೆ ಇರುವ ಬೆಲೆಯೇ ಕ್ಷೌರಿಕನ ಕೆಲಸಕ್ಕು ಇದೆ. ತಮ್ಮ ಕೆಲಸದಿಂದ ಜೀವನ ನರ್ವಹಿಸಲು ಎಲ್ಲರಿಗೂ ಸಮಾನವಾದ ಹಕ್ಕಿದೆ.
3.ಶ್ರಮ ಜೀವಿಯ ಉಳುವವನ ಅಥವಾ ಕೈಕಸಬುಗಾರನ ಜೀವನವೇ ಯೋಗ್ಯ ಜೀವನ.

5. ವಿವೇಕಾನಂದರ ದೃಷ್ಟಿಯಲ್ಲಿ ದೇಶದ ಪ್ರಗತಿ ಸ್ಥಿರವಾಗುವುದು ಯಾವಾಗ?
ವಿವೇಕಾನಂದರ ದೃಷ್ಟಿಯಲ್ಲಿ ದೇಶದ ಪ್ರಗತಿ ಸ್ಥಿರವಾಗಬೇಕಾದರೆ; ದೇಶದ ಭಾಷೆಯಲ್ಲಿ ಜನರಿಗೆ ಭಾವನೆಗಳನ್ನು ನೀಡಿದರೆ . ಅವರು ವಿಷಯಗ್ರಹಣ ಮಾಡಿಕೊಳ್ಳುವರು. ಆದರೆ ಅವರಿಗೆ ಮತ್ತೊಂದು ಅವಶ್ಯಕತೆ ಇದೆ. ಅದು ಸಂಸ್ಕೃತಿ. ನಾವು ಅವರಿಗೆ ಈ ಸಂಸ್ಕೃತಿಯನ್ನು ಕೊಡುವ ತನಕ ಅವರ ಪ್ರಗತಿ ಸ್ಥಿರವಾಗಲಾರದು. ಅಂದರೆ ಸಂಸ್ಕೃತಿ ಮಾತ್ರ ಆಘಾತವನ್ನು ಸಹಿಸಬಲ್ಲದು. ಕೇವಲ ಜ್ಞಾನರಾಶಿಗೆ ಅದನ್ನು ಎದುರಿಸುವ ಶಕ್ತಿ ಇಲ್ಲ. ಸಂಸ್ಕೃತಿಯು ರಕ್ತದಲ್ಲಿ ಹರಿಯಬೇಕು. ಆಗ ಮಾತ್ರ ದೇಶದ ಪ್ರಗತಿ ಸ್ಥಿರವಾಗುವುದು. ಇದು ವಿವೇಕಾನಂದರ ದೃಷ್ಟಿಯಾಗಿದೆ.

6. ಬಾಳಿನಲ್ಲಿ ತೃಪ್ತಿ ದೊರಕಬೇಕಾದರೆ ಏನು ಮಾಡಬೇಕೆಂಬುದು ವಿವೇಕಾನಂದರ ಅಭಿಪ್ರಾಯ?
ನಮ್ಮ ದೇಶದ ಮತ್ತು ಇಡೀ ಜಗತ್ತಿನ ಕಲ್ಯಾಣ ನಮ್ಮ ಮೇಲೆ ನಿಂತಿದೆ ಎಂದು ಭಾವಿಸಿಕೊಂಡು ನಾವು ಕಾರ್ಯೋನ್ಮುಖರಾಗಬೇಕು. ವೇದಾಂತದ ಸಂದೇಶವನ್ನು ಪ್ರತಿ ಮನೆಮನೆಗೂ ಸಾರಿ, ಪ್ರತಿಯೊಂದು ಆತ್ಮದಲ್ಲಿರುವ ಸುಪ್ತ ಪಾವಿತ್ರ್ಯವನ್ನು ಜಾಗೃತಗೊಳಿಸಬೇಕು. ನಾವು ಎಷ್ಟೇ ಅಲ್ಪವನ್ನು ಸಾಧಿಸಿದ್ದರೂ ನಾವು ಒಂದು ಮಹಾ ಆದರ್ಶಕ್ಕಾಗಿ ಬಾಳಿ ದುಡಿದು ಮಡಿದೆವು ಎಂಬ ತೃಪ್ತಿ ದೊರಕುತ್ತದೆ ಎಂಬುದು ವಿವೇಕಾನಂದರ ಅಭಿಪ್ರಾಯವಾಗಿದೆ.
ಪಠ್ಯಪೂರಕ ಅಧ್ಯಯನ - 2
ಸಾಮಾಜಿಕ ಮತ್ತು ಧಾರ್ಮಿಕ ಸುಧಾರಕರು

ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ. 
1. ನಾರಾಯಣಗುರು ಧರ್ಮಪರಿಪಾಲನಾ ಯೋಗಂ ಸಂಘಟನೆಯ ಕೊಡುಗೆಗಳನ್ನು ತಿಳಿಸಿ.
ಶ್ರೀ ನಾರಾಯಣಗುರು ಅವರು 1903ರಲ್ಲಿ ಧರ್ಮಪರಿಪಾಲನಾ ಯೋಗಂ ಸಂಘಟನೆಯನ್ನು ಆರಂಭಿಸಿದರು. ಈ ಸಂಘಟನೆಯ ಪ್ರಮುಖ ಉದ್ದೇಶವೆಂದರೆ ಹಿಂದುಳಿದ ಮತ್ತು ಶೋಷಣೆಗೊಳಗಾದ ಸಮುದಾಯಗಳ ಸಬಲೀಕರಣವಾಗಿತ್ತು. ಇದನ್ನು ಸಾಧಿಸಲು ಶಿಕ್ಷಣವೇ ಮಾರ್ಗವೆಂದು ಸಾರಿದರು. ಕೆಳಸಮುದಾಯಗಳ ಪ್ರವೇಶ ನಿರಾಕರಿಸುತ್ತಿದ್ದ ದೇವಾಲಯಗಳಿಗೆ ಪರ್ಯಾಯ ದೇವಾಲಯಗಳನ್ನು ಕಟ್ಟಿದರು. ನಾರಾಯಣ ಗುರು ಮತ್ತು ಅವರ ಅನುಯಾಯಿಗಳು 1924ರಲ್ಲಿ ʼವೈಕಂ ಸತ್ಯಾಗ್ರಹʼ ವೆಂಬ ಶಿವ ದೇವಾಲಯ ಪ್ರವೇಶ ಚಳುವಳಿಯನ್ನು ನಡೆಸಿದರು. ಗುರುವಾಯೂರು ದೇವಾಲಯ ಪ್ರವೇಶ ಚಳುವಳಿಯು ಮತ್ತೊಂದು ಮಹತ್ವದ ಘಟನೆ.

2.ನಾರಾಯಣಗುರು ಅವರ ಪ್ರಮುಖ ಆಶಯ ಏನಾಗಿತ್ತು?
ನಾರಾಯಣ ಗುರು ಅವರ ಪ್ರಮುಖ ಆಶಯ ಮಾನವ ಕುಲಕ್ಕೆ ಒಂದೇ ಜಾತಿ, ಒಂದೇ ಧರ್ಮ ಮತ್ತು ಒಬ್ಬನೇ ದೇವರು ಎಂಬುದು.

3.ಪೆರಿಯಾರ್ ಚಳವಳಿಯ ಮುಖ್ಯಾಂಶಗಳನ್ನು ಪಟ್ಟಿ ಮಾಡಿ.
ಪೆರಿಯಾರ್ ಚಳವಳಿಯ ಮುಖ್ಯಾಂಶಗಳು

1. ವರ್ಣಾಶ್ರಮ ಧರ್ಮದ ಪರವಾಗಿ ಕಾಂಗ್ರೆಸ್ಸಿದೆ ಎಂದು ಅದಕ್ಕೆ ಪರ್ಯಾಯವಾದ ದ್ರಾವಿಡ ಚಳುವಳಿ ಎಂಬ ಜನಾಂಗೀಯ ಪರಿಕಲ್ಪನೆ ಕೇಂದ್ರಿತ ಚಳುವಳಿಯನ್ನು ರೂಪಸಿದರು.
2. ತಮಿಳು ಭಾಷೆಯನ್ನು ದ್ರಾವಿಡರ ಭಾಷೆ ಎಂದರು.
3. ಜಾತಿ ಮತ್ತು ಲಿಂಗ ತಾರತಮ್ಯಗಳನ್ನು ವಿರೋಧಿಸಿ ಸಮಾನತೆಯ ಆಶಯವನ್ನು ಎತ್ತಿ ಹಿಡಿದರು.
4. ಮೊದಲಿಗೆ ಆರಂಭವಾಗಿದ್ದ ಬ್ರಾಹ್ಮಣೇತರ ಚಳುವಳಿಯನ್ನು ಪರಿವರ್ತಿಸಿದರು.
5. ಎಲ್ಲ ಬಗೆಯ ಶೋಷಣೆಗಳಿಂದ ಹೊರಬಂದು ಸರ್ವಧರ್ಮ ಸಹಿಷ್ಣುತೆಯ ಸಮಾಜ ರೂಪುಗೊಳ್ಳಬೇಕು ಎಂದರು.
4.ಪೆರಿಯಾರ್‌ರವರು ಹುಟ್ಟು ಹಾಕಿದ ಸಂಘಟನೆಯ ಹೆಸರೇನು ?
ಪೆರಿಯಾರ್‌ರವರು ಹುಟ್ಟು ಹಾಕಿದ ಸಂಘಟನೆಯ ಹೆಸರು ʼದ್ರಾವಿಡ ಕಳಗಂʼ
ಪಠ್ಯಪೂರಕ ಅಧ್ಯಯನ - 3
ಭಗತ್ ಸಿಂಗ್

ಪ್ರಶ್ನೆಗಳಿಗೆ ಉತ್ತರಿಸಿ. 
1. ಜಲಿಯನ್  ವಾಲಾಬಾಗ್ ನಲ್ಲಿ ಶಾಂತಿಯುತ ಸಭೆ ಯಾವಾಗ ನಡೆಯಿತು ?
ಜಲಿಯನ್  ವಾಲಾಬಾಗ್ ನಲ್ಲಿ ಶಾಂತಿಯುತ ಸಭೆ 13 - ಏಪ್ರಿಲ್ -1919 ರಲ್ಲಿ ನಡೆಯಿತು.

2. ಭಗತ್ ಸಿಂಗ್ ಜಲಿಯನ್  ವಾಲಾಬಾಗ್ ನ ಮಣ್ಣಿನ ಕುರಿತು ತನ್ನ ತಂಗಿಗೆ ಏನೆಂದು ಹೇಳುತ್ತಾನೆ ?
 ಭಗತ್ ಸಿಂಗ್ ಜಲಿಯನ್  ವಾಲಾಬಾಗ್ ನ ಮಣ್ಣಿನ ಕುರಿತು ತನ್ನ ತಂಗಿಗೆ ಇದು ಬಹಳ ಪೂಜ್ಯನೀಯವಾದ ಮಣ್ಣು. ಈ ಮಣ್ಣು "ತ್ಯಾಗದ ಪ್ರತೀಕ" ಎಂದು ಹೇಳುತ್ತಾನೆ.

3.ಅಮಾಯಕ ಭಾರತೀಯರ ಮೇಲೆ ಗುಂಡಿನ ಮಳೆಗರೆದ ಅಧಿಕಾರಿಯ ಹೆಸರೇನು ?
ಅಮಾಯಕ ಭಾರತೀಯರ ಮೇಲೆ ಗುಂಡಿನ ಮಳೆಗರೆದ ಅಧಿಕಾರಿಯ ಹೆಸರು ಪಂಜಾಬಿನ ಲೆಫ್ಟಿನಂಟ್ ಗೌರ್ನರ್ ಜನರಲ್ ಡಯರ್ ಕಠೋರ.

4.ಭಗತ್ ಸಿಂಗ್ ಜಲಿಯನ್  ವಾಲಾಬಾಗ್ ಮಾರಣ ಹೋಮದಿಂದ ತೆಗೆದುಕೊಂಡ ನಿರ್ಧಾರವೇನು ?
ಜಲಿಯನ್ ವಾಲಾಬಾಗ್ ಮಾರಣಹೋಮ ಭಗತ್ ಸಿಂಗ್ ನ ಮನಸ್ಸಿನಲ್ಲಿ ಅಚ್ಚಳಿಯದ ಪ್ರಭಾವವನ್ನು ಬೀರಿತ್ತು. 1921ರಲ್ಲಿ ಅವನು ಒಂದು ನಿರ್ಧಾರಕ್ಕೆ ಬಂದ. ಒಂದಲ್ಲ ಒಂದು ದಿನ ಈ ದಮನಕಾರಿ ಪ್ರಭುತ್ವವನ್ನು ಧ್ವಂಸ ಮಾಡಲು ಏನನ್ನಾದರೂ ಮಾಡಿಯೇ ತೀರುತ್ತೇನೆಂದೂ, ಆಗ ಕ್ರೂರ ಬ್ರಿಟೀಷ್ ಆಳ್ವಿಕೆ ಅಂತ್ಯವಾಗುತ್ತದೆ ಎಂದಿದ್ದ. ಮುಂದೆ ಕ್ರಾಂತಿಕಾರಿಗಳ ಸಹಕಾರದಿಂದ, ಮಾತೃಭೂಮಿಯನ್ನು ಗುಲಾಮಗಿರಿಯ ಸಂಕೋಲೆಯಿಂದ ಬಿಡಿಸಲು. ಸ್ವಾತಂತ್ರ್ಯ ಹೋರಾಟದ ಪಥದಲ್ಲಿ ಮುನ್ನಡೆದ, "ಇಂಕ್ವಿಲಾಲ್ ಜಿಂದಾಬಾದ್" ಎಂಬ ಘೋಷಣೆಯೊಂದಿಗೆ ಸ್ವಾತಂತ್ರ್ಯಕ್ಕೋಸ್ಕರ ತನ್ನ ಜೀವನವನ್ನೇ ಆರ್ಪಿಸಿ, ಮರಣದಂಡನೆಗೆ ಈಡಾಗಿ ಸ್ವಾತಂತ್ರ್ಯ ಹೋರಾಟಕ್ಕೆ ಒಂದು ಗುರಿಯನ್ನು ತೋರಿಸಿಕೊಟ್ಟು ಪ್ರಾಣಾರ್ಪಣೆ ಮಾಡಿದ ಭಗತ್ ಸಿಂಗ್ ತನ್ನ ತ್ಯಾಗ ಬಲಿದಾನದಿಂದ ಅಮರನಾದನು.
ಪಠ್ಯಪೂರಕ ಅಧ್ಯಯನ - 4
ವಸಂತ ಮುಖ ತೋರಲಿಲ್ಲ.

ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ.
1. ಪುಟ್ಟ ಪೋರಿ ಏನು ಮಾಡುತ್ತಿದ್ದಾಳೆ?
ಪುಟ್ಟ ಪೋರಿ ಮುಸುರೆ ತಿಕ್ಕುತ್ತಿದ್ದಾಳೆ.

2. ಪುಟ್ಟ ಪೋರಿಯ ಅಮ್ಮ ಎಲ್ಲಿ ಮಲಗಿದ್ದಾಳೆ?
ಪುಟ್ಟ ಪೋರಿಯ ಅಮ್ಮ ಗುಡಿಸಲಿನಲ್ಲಿ ಮಲಗಿದ್ದಾಳೆ.

3. ಯಾರಿಗೆ ವಸಂತಮುಖ ತೋರಲಿಲ್ಲ?
ಕಮ್ಮಾರ, ನೇಕಾರ, ಕುಂಬಾರ, ಕೇರಿಯ ಮಾರ ಮತ್ತು ಪುಟ್ಟಿಗೆ, ವಸಂತ ಮುಖ ತೋರಲಿಲ್ಲ.

4. ಪುಟ್ಟಿಯ ಪ್ರಶ್ನೆಗಳೇನು?
ಗುಡಿಸಲೊಳಗೆ ಬರಲು ವಸಂತ ಹೆದರಿದನೆ? ಹರಿದ ಚಿಂದಿ ಬಟ್ಟೆಗಳ ಕಂಡು ಅವನು ಮರುಗಿದನೆ? ಇವು ಪುಟ್ಟಿಯ ಪ್ರಶ್ನೆಗಳಾಗಿವೆ.

5. ಈ ಕವನದಲ್ಲಿ ಪ್ರಕೃತಿಯ ಸಂಭ್ರಮ ಹೇಗೆ ವ್ಯಕ್ತವಾಗಿದೆ?
ಮಾವಿನ ಮರಗಳು ಮೈತುಂಬಿ ನಿಂತಿವೆ. ಹಕ್ಕಿಗಳು ರೆಕ್ಕೆ ಬಿಚ್ಚಿ ಹಾರಾಡುತ್ತಿವೆ. ಕೋಗಿಲೆಗಳು ಮನದುಂಬಿ ಇಂಪಾಗಿ ಹಾಡುತ್ತಿವೆ. ಕಡಲು ಉಕ್ಕಿ ಹರಿಯುತ್ತಿದೆ. ಮಲ್ಲಿಗೆ ಹೂವು ಮುಗುಳುನಗೆ ಬೀರಿದೆ. ಹೊಳೆಯುವ ರಂಗೋಲಿಯಲ್ಲಿ ಬಾಲರವಿ ಥಳಥಳಿಸುತ್ತಿದ್ದಾನೆ. ಈ ರೀತಿ 'ವಸಂತ ಮುಖ ತೋರಲಿಲ್ಲ' ಕವನದಲ್ಲಿ ಪ್ರಕೃತಿಯ ಸಂಭ್ರಮ ವ್ಯಕ್ತವಾಗಿದೆ.
ಪಠ್ಯಪೂರಕ ಅಧ್ಯಯನ - 5
ಸ್ವದೇಶಿ ಸೂತ್ರದ ಸರಳಹಬ್ಬ

ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ.
1. ಸ್ವಾತಂತ್ರ್ಯಪೂರ್ವದಲ್ಲಿ ಹೋರಾಟಗಾರರು ಗಿರಾಕಿಗಳು ಮತ್ತು ಅಂಗಡಿಯವನನ್ನು ಏನೆಂದು ವಿನಂತಿಸಿಕೊಂಡರು ?
ಸ್ವಾತಂತ್ರ್ಯಪೂರ್ವದಲ್ಲಿ ಹೋರಾಟಗಾರರು ಗಿರಾಕಿಗಳು ಮತ್ತು ಅಂಗಡಿಯವರನ್ನು ಹಿಂದೂಸ್ತಾನದಲ್ಲಿ ಪ್ರತಿಯೊಬ್ಬನ ದಿನದ ಉತ್ಪನ್ನ ಸರಾಸರಿ ಒಂದು ಆಣೆ ಮೂರು ಪೈಸೆಗಳು ಮಾತ್ರ! ಇಲ್ಲಿ 55 ಕೋಟಿ ಜನರ ಸರಾಸರಿ ವರ್ಷದ ಉತ್ಪನ್ನ 1250 ಕೋಟಿಯಿದೆ. ದೇಶದ ಸಾಲವು 1100 ಕೋಟಿಯಿದೆ. ಇದಲ್ಲದೆ ಪ್ರತಿವರ್ಷ 125 ಕೋಟಿ ಪರದೇಶಕ್ಕೆ ಹೋಗುತ್ತಿದೆ. ವಸ್ತುಸ್ಥಿತಿ ಹೀಗಿರುವಾಗ ಹಬ್ಬ, ಹುಣ್ಣಿಮೆಗಳು ಸಮೀಪಿಸಿದ ಈ ದಿನಗಳಲ್ಲಿ ಪರದೇಶಿ ವಸ್ತುಗಳನ್ನು ಕೊಳ್ಳುವುದು ಸರಿಯಲ್ಲ. ಬಣ್ಣದ ಕಾಗದ, ಗಾಜಿನ ಮಣಿಗಳು, ಬೇಗಡಿ, ಇಮಿಟೇಶನ್‌ ಮುತ್ತು, ತುರಾಯಿಗಳು ನಮ್ಮ ಹಿಂದುಸ್ತಾನದಂತಹ ಬಡದೇಶಕ್ಕೆ ಅನವಶ್ಯಕ ಪಟಾಕಿ, ಧಡಾಕಿ, ನೆಲಗುಮ್ಮ, ಮುಂತಾದ ವಸ್ತುಗಳು, ವಿದೇಶಿ ಎಂದು ಮಾರಲ್ಟಡುವ ಕರ್ಪೂರ, ಪರದೇಶಿ ಅತ್ತರುಗಳನ್ನು ಖರೀದಿಸಿ ದೇಶಕ್ಕೆ ಒದಗಿರುವ ಸಂಕಟ ಪರಂಪರೆಯನ್ನು ಯಾರೂ ಹೆಚ್ಚಿಸಬಾರದು! ದೇವರ ಪೂಜಾದಿಗಳನ್ನು ಶುದ್ದ ಶುಭ್ರ ದೇಶೀ ವಸ್ತುಗಳಿಂದಲೇ ಮಾಡಿರಿ, ಪರದೇಶಿ ವಸ್ತುಗಳಿಂದ ದೇವರ ಮೂರ್ತಿಗನ್ನು ಭ್ರಷ್ಟ ಮಾಡಬೇಡಿರಿ! ಎಂದು ವಿನಂತಿಸಿಕೊಂಡರು.
2.ಯಾವ ಯಾವ ವಸ್ತುಗಳನ್ನು ಬಳಸಬೇಡಿರೆಂದು ಜನಾಂದೋಲನ ಮಾಡಲಾಯಿತು ?
ಪರದೇಶದಿಂದ ಬರುವ ಬಣ್ಣದ ಕಾಗದ, ಗಾಜಿನ ಮಣಿಗಳು, ಬೇಗಡಿ, ಇಮಿಟೇಶನ್‌ ಮುತ್ತು, ತುರಾಯಿಗಳು, ಪಟಾಕಿ, ಧಡಾಕಿ, ನೆಲಗುಮ್ಮ, ಕರ್ಪೂರ ಹಾಗೂ ಜರಿಯ ಟೋಪಿಗಳನ್ನು ಬಳಸಬೇಡಿರೆಂದು ಜನಾಂದೋಲನ ಮಾಡಲಾಯಿತು.

3.ಮಲೆನಾಡಿನಲ್ಲಿ ದೀಪದ ಬತ್ತಿಯ ಸಮಸ್ಯೆಯನ್ನು ಹೇಗೆ ಪರಿಹರಿಸಿಕೊಳ್ಳಲಾಯಿತು?
ಮಲೆನಾಡಿನ ಪಶ್ಚಿಮ ಘಟ್ಟದ ಕಾಡುಗಳಲ್ಲಿ ತೊಡಕಲು ಕುಡಿ ಎಂಬ ಬೂದು ಬಣ್ಣದ ಗಿಡವಿದೆ. ಇದರ ಎಳೆಯ ಕುಡಿ ಸಂಗ್ರಹಿಸಿ ಡಬ್ಬದಲ್ಲಿ ಶೇಖರಿಸಿ ಇಡಲಾಗುತ್ತಿತ್ತು. ಇದರ ಒಣಗಿದ ಕುಡಿಯನ್ನು ಎಣ್ಣೆಯಲ್ಲಿ ಅದ್ದಿ ನಿತ್ಯ ಆರತಿಗೆ ಬಳಸಲಾಗುತ್ತಿತ್ತು. ಇದು ಎಣ್ಣೆಯನ್ನು ಹತ್ತಿಯಂತೆ ಹೀರಿಕೊಂಡು ದೀಪ ಉರಿಯಲು ಸಹಾಯಕವಾಗಿತ್ತು .ಇದಲ್ಲದೆ ದೀಪಾವಳಿ , ಕಾರ್ತೀಕಮಾಸದಲ್ಲಿ  ನಾಗಸಂಪಿಗೆ ಮರದ ಬೀಜಗಳಲ್ಲಿ ಎಣ್ಣೆ ಅಂಶ ಜಾಸ್ತಿ ಇರುವುದರಿಂದ ಅದನ್ನೂ ದೀಪಕ್ಕೆ ಉಪಯೋಗಿಸಲಾಗುತ್ತದೆ. ಅಡಿಕೆ ತೋಟಗಳ ಅಂಚಿನಲ್ಲಿ ಒಂದೆರಡು ಜವಾರಿ ಹತ್ತಿ ಗಿಡಗಳು ಇರುತ್ತಿದ್ದವು. ಈ ಹತ್ತಿಯನ್ನು ದೀಪಕ್ಕೆ ಬಳಸುವ ಪರಿಪಾಠವಿತ್ತು.

4.ಆಗ ಕರ್ಪೂರಕ್ಕೆ ಕಾದಾಡಿದ ಮನಸ್ಸುಗಳು ಮರುಗಿವೆ – ಏಕೆ?
ಸರಳ ಬದುಕು ಆದರ್ಶವಾಗಿದ್ದ ನೆಲದಲ್ಲಿ ಆಡಂಬರ , ರಂಗು , ನಾಟಕೀಯತೆ ಸೇರಿಕೊಂಡು ಬದುಕು ಲಗಾಮಿಲ್ಲದ ಓಟ ಕಿತ್ತಿದೆ . ಸಂಪ್ರದಾಯ , ದೇವರ ನಂಬಿಕೆಗಳಿಗಿಂತ ಹಬ್ಬಗಳು ಖರೀದಿಯ ಸವಾಲು ಒಡ್ಡಿ ಮನೆ ಮನಗಳನ್ನು ಕಾಡುತ್ತಿವೆ . ಆಚರಣೆಯ ಶ್ರದ್ಧೆ ಮರೆಯಾಗಿ ಖರೀದಿ ವಿಜೃಂಭಿಸಿದೆ . ಅಷ್ಟೇಕೆ , ರಾತ್ರಿ ಹಗಲಾಗಿಸುವ ವಿದ್ಯುತ್ ದೀಪಾಲಂಕಾರದಲ್ಲಿ ಪರದೇಶಿ ಚೈನಾ ಬಲ್ಪ್ ಮೆರೆದಿದೆ ! ಆಗ ಕರ್ಪೂರಕ್ಕೆ ಕಾದಾಡಿದ ಮನಸ್ಸುಗಳು ಮರುಗಿವೆ .

5.ಸ್ವದೇಶೀ ಆರ್ಥಿಕತೆ ಬಲಪಡಿಸಲು ಹಬ್ಬಗಳಲ್ಲಿ ಸ್ವದೇಶೀ ವಸ್ತುಗಳನ್ನೇ ಬಳಸಲು ಪ್ರಾರಂಭಿಸಬೇಕು
– ಈ ಕುರಿತು ನಿಮ್ಮ ಅಭಿಪ್ರಾಯವೇನು ?
 ನಮ್ಮ ದೇಶದಲ್ಲಿ ಹಬ್ಬದ ಸಮಯದಲ್ಲಿ ಬಟ್ಟೆಗಳನ್ನು ,ವಿವಿಧ ವಸ್ತುಗಳನ್ನು ಕೊಳ್ಳುವುದು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ .ಇದಕ್ಕೆ ಕಾರಣ ಹಬ್ಬ ಎಂದರೆ ಉತ್ಸಾಹ ಸಂಭ್ರಮವನ್ನು ಆಚರಿಸುವ ಕಾಲ ಎಂಬ ಭಾವನೆ. ಜನರು ಈ ಸಮಯದಲ್ಲಿ ಹೆಚ್ಚು ಕೊಳ್ಳುತ್ತಾರೆ ಅಥವಾ ಅವರನ್ನು ಕೊಳ್ಳುವಂತೆ ಮಾಡಬೇಕು ಎಂದು ಅಂಗಡಿಗಳು ಈ ಸಮಯದಲ್ಲಿ ರಿಯಾಯಿತಿ ( ಡಿಸ್ಕೌಂಟ್)‌ ಗಳನ್ನು ಘೋಷಿಸುತ್ತದೆ. ಜನರು ಈ ಸಮಯದಲ್ಲಿ ಸ್ವದೇಶಿ ವಸ್ತುಗಳನ್ನು ಖರೀದಿಸುವ ಮನಸ್ಸು ಮಾಡಿದರೆ ಖಂಡಿತ ಸ್ವದೇಶಿ ಆರ್ಥಿಕತೆಯು ಬಲವಾಗುತ್ತದೆ. ಅದರೆ ಇದು ಅಷ್ಟು ಸುಲಭವಾಗಿಲ್ಲ. ಜನರು ವಿದೇಶಿ ವಸ್ತುಗಳನ್ನು ಏಕೆ ಖರೀದಿಸುತ್ತಾರೆ ಎಂಬುದಕ್ಕೆ ಮುಖ್ಯವಾಗಿ ಎರಡು ಕಾರಣಗಳನ್ನು ಕೊಡಬಹುದು. ಕೆಲವು ವಿದೇಶಿ ವಸ್ತುಗಳು ಉದಾಹರಣೆಗೆ ಚೈನಾದಿಂದ ಆಮದಾಗುವ ಹಲವಾರು ವಸ್ತುಗಳು ಸ್ವದೇಶಿ ವಸ್ತುಗಳಿಗಿಂತ ತುಂಬಾ ಅಗ್ಗವಾಗಿರುತ್ತದೆ. ಎರಡನೆಯದು ವಿದೇಶಿ ವಸ್ತುಗಳು ಗುಣಮಟ್ಟದಲ್ಲಿ ಸ್ವದೇಶಿ ವಸ್ತುಗಳಿಗಿಂತ ಚೆನ್ನಾಗಿರುತ್ತದೆ ಎಂಬುದು. ಇದು ಲೋಕಲ್‌ (ಸ್ವದೇಶಿ) ಚೆನ್ನಾಗಿರುವುದಿಲ್ಲ. ಇದು ಇಂಪೋರ್ಟೆಡ್‌ (ವಿದೇಶದಿಂದ ತರಿಸಿದ್ದು ) ತುಂಬಾ ಚೆನ್ನಾಗಿರುತ್ತದೆ ಎಂಬ ಭಾವನೆ ಜನರಲ್ಲಿ ಬಲವಾಗಿ ಬೇರೂರಿದೆ. ಒಳ್ಳೆಯ ಗುಣಮಟ್ಟದ ವಸ್ತುಗಳನ್ನು ಸ್ಪರ್ಧಾತ್ಮಕ ದರದಲ್ಲಿ ತಯಾರಿಸುವ ಸವಾಲು ದೇಶಿಯ ಉತ್ಪಾದಕರ ಮುಂದಿದೆ. ನಾವು ಧರಿಸುವ ವಿವಿಧ ಬಟ್ಟೆಗಳು ಉಡುಪುಗಳು, ಮನೆಬಳಕೆ ವಸ್ತುಗಳು, ಮನೆಯ ಅಲಂಕಾರದ ಸಾಮಗ್ರಿ , ಸವಾರಿ ಮಾಡುವ ವಿವಿಧ ಗಾಡಿಗಳನ್ನು ಹಬ್ಬದ ಸಮಯದಲ್ಲಿ ಖರೀದಿಸುವುದು ರೂಢಿ. ಈ ಎಲ್ಲವನ್ನೂ ಖರೀದಿಸುವಾಗ ಜನರು ಆದಷ್ಟು ಸ್ವದೇಶಿ ವಸ್ತುಗಳನ್ನೆ ಕೊಳ್ಳಬೇಕು. ಎಂಬ ಮನಸ್ಸು ಮಾಡಿದರೆ ಸ್ವದೇಶಿ ಆರ್ಥಿಕತೆಗೆ ಖಂಡಿತ ಬಲ ಸಿಗುತ್ತದೆ.
ಪಠ್ಯಪೂರಕ ಅಧ್ಯಯನ -6
ನಾನು ಪ್ರಾಸ ಬಿಟ್ಟ ಕತೆ

ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ.
1. ಪೈಗಳ ತಮ್ಮನ ನೂಲು ಮದುವೆಯ ದಿನ ಅಂಗಳದಲ್ಲಿ ಏನೇನು ಸಿದ್ಧತೆಗಳಾಗುತ್ತಿದ್ದವು?
ತಮ್ಮನ ನೂಲುಮದುವೆಯ ದಿನ ಚಪ್ಪರ ಹಾಕಿದೆ. ಮಳೆ ಜಿನುಗುತ್ತಿತ್ತು. ಅಂದು ಶನಿವಾರವೊ, ರವಿವಾರವೊ ಅಥವಾ ಪ್ರಾಯಶಃ ಶಿವರಾತ್ರಿಯೊ. ಹೇಗೂ ಸಾಲೆ ಇಲ್ಲದ ದಿನ. ಚಪ್ಪರದಲ್ಲಿ ಒಂದು ಕಡೆಯಲ್ಲಿ ಲಡ್ಡುಗೆಗಳನ್ನು ಕಟ್ಟುವುದು, ಮತ್ತೊಂದು ಕಡೆ ಮಂಡಿಗೆಗಳನ್ನು ಮಡುಚುವುದು, ಬೇರೊಂದು ಕಡೆ ಸೇವಿಗೆಯನ್ನು ಒತ್ತುತ್ತಿದ್ದರು ಈ ರೀತಿಯ ಸಿದ್ಧತೆ ನಡೆಯುತ್ತಿತ್ತು.

2. ಹಾಡು ಕಿವಿಗೆ ಬಿದ್ದಾಗ ಪೈಗಳು ಏನು ಮಾಡಿದರು?
ಏನು ತೋಚಿತೊ ದೇವರೇ ಬಲ್ಲ. ಮತ್ತೆ ಚಪ್ಪರದ ಗವುಜು ಅವರಿಗೆ ಕೇಳಿಸಲಿಲ್ಲ. ನೆಟ್ಟಗೆ ಹೋದರು, ಅಭ್ಯಾಸದ ಪುಸ್ತಕವನ್ನು ಹಿಡಿದರು. ಬರೆಯತೊಡಗಿದರು. ಇಂದಿನ ಮಾತಿನಲ್ಲಿ ಏಕಾಂಕ ನಾಟಕ ಎನ್ನಬಹುದಾದ ಒಂದು ನಾಟಕವನ್ನು ಇಳಿಹೊತ್ತಿನೊಳಗೆ ಬರೆದು ಮುಗಿಸಿದರು.
3.ಪೈಗಳು ಬರೆದ ಮೊದಲ ಯಕ್ಷಗಾನ ಪ್ರಸಂಗದ ಹೆಸರೇನು?
ಪೈಗಳು ಬರೆದ ಮೊದಲ ಯಕ್ಷಗಾನ ಪ್ರಸಂಗದ ಹೆಸರು ಮಕರಾಕ್ಷನ ಕಾಳಗ.

4.ಬಾಸೆಲ್ ಮಿಶನ್‌ ನವರು ಪ್ರಕಟಿಸಿದ್ದ ಯಾವ ಕೃತಿಗಳನ್ನು ಲೇಖಕರು ಓದಿಕೊಂಡರು?
ಬಾಸೆಲ್ ಮಿಶನ್‌ನವರು ಪ್ರಕಟಿಸಿದ್ದ 'ಹಳಗನ್ನಡ ವ್ಯಾಕರಣ ಸೂತ್ರಗಳು' ಕೃತಿಗಳನ್ನು ಲೇಖಕರು ಓದಿಕೊಂಡರು.

5. "ಬಿಲ್ಲ ಹಬ್ಬ"ವನ್ನು ರಚಿಸಿದ ಕವಿ ಯಾರು?
ವಾಸುದೇವ ಪ್ರಭು ಎಂಬವರು 'ಬಿಲ್ಲ ಹಬ್ಬ'ವನ್ನು ರಚಿಸಿದರು.

6. ಮುದ್ದಣ ಕವಿ ಲೇಖಕರಿಗೆ ಏನೆಂದು ಸಲಹೆ ಕೊಟ್ಟರು?
1899ರಲ್ಲಿ ಶೇಕ್ ಸ್ಪಿಯರ್ "ಟೈಲ್ ನೈಟ್" ಎಂಬ ನಾಟಕದ ಮೊದನೆಯ ಅಂಕದಿಂದ ಕೆಲವು ನೋಟಗಳನ್ನು ವೃತ್ತ- ಕಂದಗಳಲ್ಲಿ ಕನ್ನಡಿಸಿ, ಅವನ್ನು ಶ್ರೀ ನಂದಳಿಕೆ ಲಕ್ಷ್ಮೀನಾರಣಪ್ಪ(ಮುದ್ದಣ)ನವರಿಗೆ ಉಡುಪಿಗೆ ಕಳಿಸಿಕೊಟ್ಟರು. ಮುಂದರಿಸು ಎಂದು ಅವರು ಹೇಳಿ ಕಳಿಸಿದರು.

7.ಪ್ರಾಸ ಬಿಡಬೇಕೆಂದು ನಿರ್ಧರಿಸಿದ ಬಳಿಕ ಪೈಗಳು ಯಾವ ಕೃತಿಯನ್ನು ಬರೆದರು?
ಪ್ರಾಸ ಬಿಡಬೇಕೆಂದು ನಿರ್ಧರಿಸಿದ ಬಳಿಕ ಪೈಗಳು ಗಿಳಿವಿಂಡು ಕೃತಿಯನ್ನು ಬರೆದರು.
Please enable JavaScript in your browser to complete this form.
Full Name
Scroll to Top