ಕುಂದು ಕೊರತೆಗಳನ್ನು ಸರಿಪಡಿಸಲು ಸಂಬಂಧಪಟ್ಟವರಿಗೆ ಮನವಿ ಪತ್ರ.
1) ನಿಮ್ಮ ಬಡಾವಣೆಯಲ್ಲಿರುವ ಹೊಯ್ಸಳರ ಕಾಲದ ಒಂದು ಹಳೆಯ ದೇವಾಲಯವನ್ನು ಜೀರ್ಣೋದ್ಧಾರ ಮಾಡಿ ಸ್ಮಾರಕವಾಗಿ ನಿರ್ಮಿಸಬೇಕೆಂದು ಕೋರಿ "ಕಾಯದರ್ಶಿಗಳು, ಪ್ರಾಚ್ಯವಸ್ತು ಇಲಾಖೆ, ಬೆಂಗಳೂರು" ಇವರಿಗೆ ಮನವಿ ಪತ್ರ ಬರೆಯಿರಿ.
ದಿನಾಂಕ : 01-01-2024
ಸ್ಥಳ: ರಾಣೇಬೆನ್ನೂರು.
ಇಂದ,
ಅ ಬ ಕ,
# 45, 3ನೇ ಮುಖ್ಯರಸ್ತೆ,
ಲಕ್ಷ್ಮೀನರಸಿಂಹ ನಗರ,
ರಾಣೇಬೆನ್ನೂರು.

ಇವರಿಗೆ,
ಕಾರ್ಯದರ್ಶಿಗಳು,
ಪ್ರಾಚ್ಯವಸ್ತು ಇಲಾಖೆ,
ಬೆಂಗಳೂರು.

ಮಾನ್ಯರೇ,

ವಿಷಯ : ದೇವಾಲಯವನ್ನು ಸ್ಮಾರಕವಾಗಿ ಘೋಷಿಸಲು ಕೋರಿ.

ಮೇಲ್ಕಂಡ ನಿವಾಸಿಯಾದ ನಾನು ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ, ನಮ್ಮ ಬಡಾವಣೆಯ ಪೂರ್ವ ದಿಕ್ಕಿನಲ್ಲಿ ಚೋಳರ ಕಾಲದಲ್ಲಿ ನಿರ್ಮಾಣವಾದ ಶಿವ ದೇವಾಲಯವೊಂದಿದೆ. ವಾಸ್ತುಶಿಲ್ಪವು ಅತ್ಯಂತ ಚೆನ್ನಾಗಿದ್ದು, ಸಮರ್ಪಕ ನಿರ್ವಹಣೆಯಿಲ್ಲದ ನಿಮಿತ್ತ ದೇವಸ್ಥಾನವು ಶಿಥಿಲಾವಸ್ಥೆಯಲ್ಲಿದೆ. ಇಲ್ಲಿರುವ ಹತ್ತು ಲಿಂಗಗಳು ಬಹಳ ವಿಭಿನ್ನವಾಗಿವೆ. ದೇವಾಲಯದ ಹೊರಭಾಗದಲ್ಲಿರುವ ದೀಪಸ್ಥಂಭವು ವಿಶೇಷವಾದ ಕೆತ್ತನೆ ಕೆಲಸದಿಂದ ಆಕರ್ಷಕವಾಗಿದೆ. ಗರ್ಭಗುಡಿಯಲ್ಲಿನ ವಿಗ್ರಹವನ್ನು ಚಂದ್ರಕಾಂತ ಶಿಲೆಯಿಂದ ಮಾಡಲಾಗಿದೆ. ಮಧ್ಯ ಭಾಗದಲ್ಲಿನ ನವರಂಗವು ತುಂಬಾ ಸೊಗಸಾಗಿದೆ. ಇಂತಹ ಅಪರೂಪ ದೇವಾಲಯವನ್ನು ತಮ್ಮ ಇಲಾಖೆಯ ವತಿಯಿಂದ ಜೀರ್ಣೋದ್ಧಾರ ಮಾಡಿ, ರಾಷ್ಟ್ರೀಯ ಸ್ಮಾರಕವನ್ನಾಗಿ ಘೋಷಿಸಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ.

ಧನ್ಯವಾದಗಳೊಂದಿಗೆ,

ಇಂತಿ ತಮ್ಮ ವಿಶ್ವಾಸಿ
ಅ ಬ ಕ
2) ನಿಮ್ಮ ಜಿಲ್ಲೆಯಲ್ಲಿ ಈ ವರ್ಷದ ಅತೀವೃಷ್ಠಿಯಿಂದಾಗಿರುವ ಅನಾಹುತ ಮತ್ತು ಅದರ ಪರಿಹಾರೋಪಾಯಕ್ಕಾಗಿ ಮಾನ್ಯ ಜಿಲ್ಲಾಧಿಕಾರಿಗಳು, ಜಿಲ್ಲಾಧಿಕಾರಿಗಳ ಕಛೇರಿ, ಶಿವಮೊಗ್ಗ -08 ಇವರಿಗೆ ಮನವಿ ಪತ್ರ ಬರೆಯರಿ.
ದಿನಾಂಕ : 01-01-2024
ಸ್ಥಳ: ಶಿವಮೊಗ್ಗ
ಇಂದ,
ಅ ಬ ಕ,
# 22, 5ನೆಯ ಮುಖ್ಯರಸ್ತೆ,
ವಿನೋಬನಗರ,
ಶಿವಮೊಗ್ಗ - 06.

ಇವರಿಗೆ, ಜಿಲ್ಲಾಧಿಕಾರಿಗಳು,
ಜಿಲ್ಲಾಧಿಕಾರಿಗಳ ಕಛೇರಿ,
ಶಿವಮೊಗ್ಗ - 06.

ಮಾನ್ಯರೆ,

ವಿಷಯ : ಅತೀವೃಷ್ಟಿಯಿಂದಾದ ಅನಾಹುತಕ್ಕೆ ಪರಿಹಾರೋಪಾಯಗಳನ್ನು ಕೋರಿ

ಮೇಲ್ಕಂಡ ನಿವಾಸಿಯಾದ ನಾನು ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ ಈ ಬಾರಿ ವಾಡಿಕೆ ಮಳೆಗಿಂತ ಅತೀ ಹೆಚ್ಚು ಮಳೆಯು ಬೀಳುತ್ತಿದೆ. ಬಂಗಾಳ ಕೊಲ್ಲಿಯಲ್ಲಿನ ವಾಯುಭಾರ ಕುಸಿತದಿಂದ ಉಂಟಾಗಿರುವ ನಿಮಿತ್ತ ನಿರಂತರವಾಗಿ ಒಂದು ವಾರದಿಂದ ನಮ್ಮ ಜಿಲ್ಲೆಯಾದ್ಯಂತ ಮಳೆಯಾಗುತ್ತಿದ್ದು, ಜನಜೀವನ ಅಸ್ಥವ್ಯಸ್ಥವಾಗಿದೆ. ಮೂರು ನಾಲ್ಕು ಕಡೆ ಗುಡ್ಡ ಕುಸಿತ ಉಂಟಾಗಿದ್ದು, ಸಾಕಷ್ಟು ಸಾವು-ನೋವುಗಳು ಸಂಭವಿಸುತ್ತಿವೆ ಎಲ್ಲಾ ನದಿಗಳು ಉಕ್ಕಿ ಹರಿಯುತ್ತಿರುವುದರಿಂದ ಕೆರೆ ಹಾವಳಿ ತೀವ್ರವಾಗಿದ್ದು, ನದಿ ಪಾತ್ರಗಳು ಹಾಗೂ ನದಿ ತೀರ ಭಾಗದ ಊರುಗಳು ಮುಳುಗಡೆಯಾಗಿವೆ. ನೂರಾರು ಮನೆಗಳು ಸಂಪೂರ್ಣ ಹಾಳಾಗಿದ್ದು, ಜಾನುವಾರುಗಳು ನದಿಯಲ್ಲಿ ಕೊಚ್ಚಿ ಹೋಗಿವೆ. ಜನ-ಜಾನುವಾರುಗಳು ನಿರಾಶ್ರಿತ ಕೇಂದ್ರಗಳಲ್ಲಿ, ಮಂದಿರಗಳಲ್ಲಿ ಹಾಗೂ ಶಾಲೆಗಳಲ್ಲಿ ಆಶ್ರಯ ಪಡೆಯುತ್ತಿರುವ ದೃಶ್ಯ ಕಂಡುಬರುತ್ತಿದೆ.

ಈ ಬಗ್ಗೆ ಜಿಲ್ಲಾಡಳಿತ ಇನ್ನು ತೀವ್ರತರ ಮುನ್ನೆಚ್ಚರಿಕೆ ವಹಿಸಬೇಕಿದೆ. ಸಂಕಷ್ಟದಲ್ಲಿರುವವರಿಗೆ ತುರ್ತಾಗಿ ಪರಿಹಾರ ನೀಡಬೇಕು. ಪ್ರತಿಯೊಂದು ಗ್ರಾಮಗಳಲ್ಲಿ ಗಂಜಿ ಕೇಂದ್ರಗಳನ್ನು ನಿರ್ಮಿಸಬೇಕು, ಸಾಂಕ್ರಾಮಿಕ ರೋಗಗಳು ಹರಡುತ್ತಿದ್ದು, ಚಿಕಿತ್ಸಾ ಸೌಲಭ್ಯ ಒದಗಿಸುವ ಕಡೆ ಗಮನ ವಹಿಸಬೇಕು, ಎಲ್ಲಾ ಪರಿಹಾರೋಪಾಯಗಳನ್ನು ಕೈಗೊಂಡು ನಿಮ್ಮೊಂದಿಗೆ ನಾವಿದ್ದೇವೆ ಎಂಬ ಭರವಸೆಯನ್ನು ನೀಡಬೇಕು ಎಂಬುದು ನಮ್ಮ ಕಳಕಳಿಯಾಗಿದೆ.

ಧನ್ಯವಾದಗಳೊಂದಿಗೆ

ಇಂತಿ ತಮ್ಮ ವಿಶ್ವಾಸಿ
ಅ ಬ ಕ
3) ನಿಮ್ಮ ಬಡಾವಣೆಗೆ ಅಗತ್ಯವಿರುವ ಬೀದಿ ದೀಪಗಳನ್ನು ಅಳವಡಿಸುವಂತೆ ಕೋರಿ "ಮುಖ್ಯ ಅಭಿಯಂತರರು, ಚೆಸ್ಕಾಂ, ಮೈಸೂರು-06" ಇವರಿಗೆ ಮನವಿ ಸಲ್ಲಿಸಿ.
ದಿನಾಂಕ : 01-01-2024
ಸ್ಥಳ: ಮೈಸೂರು
ಇಂದ,
ಅ ಬ ಕ,
# 11, 8ನೆಯ ಮುಖ್ಯರಸ್ತೆ,
ಜ್ಞಾನಭಾರತಿನಗರ,
ಮೈಸೂರು - 06.

ಇವರಿಗೆ,
ಮುಖ್ಯ ಅಭಿಯಂತರರು,
ಚೆಸ್ಕಾಂ, ಮೈಸೂರು-06.

ಮಾನ್ಯರೇ,
ವಿಷಯ:- ವಿದ್ಯುತ್‌ ದೀಪ ಅಳವಡಿಸಲು ಕೋರಿ.

ಮೇಲ್ಕಂಡ ನಿವಾಸಿಯಾದ ನಾನು ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ, ನಮ್ಮ ಬಡಾವಣೆಯು ನಿರ್ಮಾಣವಾಗಿ ಸುಮಾರು 20 ವರ್ಷಗಳಾಗಿದ್ದು, ಕಾರ್ಪೊರೇಷನ್ ವ್ಯಾಪ್ತಿಗೆ ಒಳಪಟ್ಟಿದ್ದರೂ ಬೀದಿ ದೀಪಗಳನ್ನು ಅಳವಡಿಸಿರುವುದಿಲ್ಲ. ಇದರಿಂದ ರಾತ್ರಿ ಹೊತ್ತು ಸಂಚರಿಸುವುದು ಬಹಳ ಕಷ್ಟವಾಗುತ್ತದೆ. ಈ ಸಂಬಂಧ ತಮ್ಮ ಇಲಾಖೆಗೆ ಸಾಕಷ್ಟು ಪತ್ರಗಳು ರವಾನೆಯಾಗಿದ್ದರೂ ಪ್ರಯೋಜನವಾಗಿಲ್ಲ. ತಾವು ದಯಮಾಡಿ ಈಗಲಾದರೂ ಕಾಳಜಿ ವಹಿಸಿ. ನಮ್ಮ ಬಡಾವಣೆಗೆ ಬೀದಿ ದೀಪಗಳನ್ನು ಅಳವಡಿಸಿ, ಬಡಾವಣೆಯ ನಿವಾಸಿಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ.

ಧನ್ಯವಾದಗಳೊಂದಿಗೆ,

ಇಂತಿ ತಮ್ಮ ವಿಶ್ವಾಸಿ
ಅ ಬ ಕ
4) ನಿಮ್ಮ ಬಡಾವಣೆ / ಊರಿನಲ್ಲಿ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸ್ಥಾಪಿಸುವಂತೆ ಕೋರಿ, "ಮಾನ್ಯ ಆರೋಗ್ಯ ಸಚಿವರು, ಆರೋಗ್ಯ ಸಚಿವಾಲಯ, ವಿಧಾನಸೌಧ, ಬೆಂಗಳೂರು-01 ಇವರಿಗೆ ಒಂದು ಮನವಿ ಸಲ್ಲಿಸಿರಿ .
ದಿನಾಂಕ : 01-01-2024
ಸ್ಥಳ: ಶಿವಮೊಗ್ಗ
ಇಂದ,
ಅ ಬ ಕ,
# 05, 5ನೇ ಮುಖ್ಯರಸ್ತೆ,
ಗೋಪಾಳ,
ಶಿವಮೊಗ್ಗ - 06.

ಇವರಿಗೆ,
ಮಾನ್ಯ ಆರೋಗ್ಯ ಸಚಿವರು,
ಆರೋಗ್ಯ ಸಚಿವಾಲಯ,
ವಿಧಾನಸೌಧ, ಬೆಂಗಳೂರು-01.

ಮಾನ್ಯರೆ,

ವಿಷಯ : ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪಿಸಲು ಕೋರಿ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಗೋಪಾಳ ನಿವಾಸಿಯಾದ ನಾನು ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ, ನಮ್ಮ ಈ ಬಡಾವಣೆಯ ನಿರ್ಮಾಣವಾಗಿ ಸರಿಸುಮಾರು 20 ವರ್ಷಗಳಾಗಿವೆ. ಈ ಬಡಾವಣೆಯು ನಗರ ಪ್ರದೇಶದಿಂದ ಸುಮಾರು 5 ಕಿ.ಮೀ. ದೂರದಲ್ಲಿದ್ದು, ಸಣ್ಣಪುಟ್ಟ ಆರೋಗ್ಯ ಸಮಸ್ಯೆಯಾದರೂ ಸಹಾ ಹತ್ತಿರದಲ್ಲಿ ಯಾವುದೇ ಚಿಕಿತ್ಸೆ ಸಿಗದೆ ತುಂಬಾ ತೊಂದರೆಯಾಗುತ್ತಿದೆ. ಕೆಲವೊಮ್ಮೆ ತೀವ್ರತರ ಆರೋಗ್ಯ ಸಮಸ್ಯೆಗೆ ಒಳಗಾದಾಗ ತುರ್ತು ಚಿಕಿತ್ಸೆ ಸಿಗದೆ ಸಾವು ಸಂಭವಿಸಿರುವ ಉದಾಹರಣೆಗಳಿವೆ. ನಮ್ಮ ಬಡಾವಣೆಯಲ್ಲಿ 2 ಎಕರೆ ಸರ್ಕಾರಿ ಜಾಗವಿದ್ದು, ಆ ಜಾಗದಲ್ಲಿ ಸುಸಜ್ಜಿತ ಕಟ್ಟಡದೊಂದಿಗೆ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ನಿರ್ಮಿಸಿದರೆ, ನಮ್ಮ ಬಡಾವಣೆ ಮತ್ತು ಸುತ್ತ ಮುತ್ತಲಿನ ಬಡಾವಣೆಯ ನಾಗರಿಕರಿಗೆ ತುಂಬಾ ಅನುಕೂಲವಾಗುವುದು. ದಯಮಾಡಿ ಕೋರಿಕೆಯನ್ನು ಮನ್ನಿಸಿ ಸದರಿ ಆಸ್ಪತ್ರೆಯನ್ನು ಸ್ಥಾಪಿಸಬೇಕೆಂದು ಈ ಮೂಲಕ ವಿನಂತಿಸಿಕೊಳ್ಳುತ್ತೇನೆ.

ಧನ್ಯವಾದಗಳೊಂದಿಗೆ

ಇಂತಿ ತಮ್ಮ ವಿಶ್ವಾಸಿ
ಅ ಬ ಕ
5) ನಿಮ್ಮ ಬಡಾವಣೆ / ಬೀದಿಗೆ ಶುದ್ಧ ಕುಡಿಯುವ ನೀರಿನ ಘಟಕವೊಂದನ್ನು ಮಂಜೂರು ಮಾಡಲು ವಿನಂತಿಸಿಕೊಂಡು ಅಧ್ಯಕ್ಷರು ನಗರಸಭೆ / ಪುರಸಭೆ / ಪಂಚಾಯಿತಿ, ನಂಜನಗೂಡು ಇವರಿಗೆ ಒಂದು ಮನವಿ ಪತ್ರ ಬರೆಯಿರಿ.
ದಿನಾಂಕ : 01-01-2024
ಸ್ಥಳ: ಶಿವಮೊಗ್ಗ
ಇಂದ,
ಅ ಬ ಕ,
# 10, ವೆಂಕಟಾದ್ರಿ,
ಶಂಕರಮಠ ಬಡಾವಣೆ,
ಶಿವಮೊಗ್ಗ - 06.

ಇವರಿಗೆ, ಅಧ್ಯಕ್ಷರು,
ನಗರ ಸಭೆ,
ಶಿವಮೊಗ್ಗ - 06.

ಮಾನ್ಯರೆ,

ವಿಷಯ : ಶುದ್ಧ ಕುಡಿಯುವ ನೀರಿನ ಘಟಕ ಮಂಜೂರು ಮಾಡಲು ಕೋರಿ.

ಮೇಲ್ಕಂಡ ನಿವಾಸಿಯಾದ ನಾನು ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೇ ನಮ್ಮ ಬಡಾವಣೆಯು ನಿರ್ಮಾಣವಾಗಿ ಸುಮಾರು 15 ವರ್ಷಗಳಾಗಿವೆ. ಕಳೆದ ಐದು ವರ್ಷಗಳ ಹಿಂದೆಯೇ ನಗರ ಸಭಾ ವ್ಯಾಪ್ತಿಗೆ ಸೇರಿದ್ದು, ಯಾವುದೇ ಮೂಲ ಸೌಕಯ್ಯಗಳನ್ನು ಒದಗಿಸಿಲ್ಲ ಅದರಲ್ಲಿಯೂ ಬಹು ಮುಖ್ಯವಾದ ಕುಡಿಯುವ ನೀರಿನ ವ್ಯವಸ್ಥೆ ಇರುವುದಿಲ್ಲ. ಶುದ್ಧ ಕುಡಿಯುವ ನೀರಿಗಾಗಿ ನಾವು ಸುಮಾರು ಐದು ಕಿ.ಮೀ. ದೂರ ಕ್ರಮಿಸಬೇಕಿದೆ. ಅಲ್ಲಿಯೂ ಸರತಿ ಸಾಲಿನಲ್ಲಿ ನಿಂತು ತುಂಬಾ ಗಂಟೆಗಳ ಕಾಲ ಕಾದು ನಿಂತು ತರಬೇಕಾದ ಸಮಸ್ಯೆಯಿರುವುದರಿಂದ ದಯಮಾಡಿ ನಮ್ಮ ಬಡಾವಣೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕವೊಂದನ್ನು ಮಂಜೂರು ಮಾಡಿಕೊಟ್ಟರೆ, ಬಡಾವಣೆಯ ನಾಗರೀಕರಿಗೆ ಉಪಕಾರವಾಗುತ್ತದೆ. ಈ ದಿಕ್ಕಿನಲ್ಲಿ ತಾವು ಸಂಬಂಧಪಟ್ಟವರ ಗಮನಕ್ಕೆ ತಂದು ಸೂಕ್ತ ಸ್ಥಳದಲ್ಲಿ ನೀರಿನ ಘಟಕ ನಿರ್ಮಿಸಬೇಕೆಂದು ಈ ಮೂಲಕ ವಿನಮ್ರವಾಗಿ ಕೇಳಿಕೊಳ್ಳುತ್ತೇನೆ.
ಧನ್ಯವಾದಗಳೊಂದಿಗೆ

ಇಂತಿ ತಮ್ಮ ವಿಶ್ವಾಸಿ
ಅ ಬ ಕ
Scroll to Top