ಕವಿ ಪರಿಚಯ:
ಕವಿ : ದತ್ತಾತ್ರೇಯ ರಾಮಚಂದ್ರ ಬೇಂದ್ರೆ ( ದ. ರಾ. ಬೇಂದ್ರೆ ).
ಕಾವ್ಯನಾಮ : ಅಂಬಿಕಾತನಯದತ್ತ.
ಕಾಲ : 1896.
ಸ್ಥಳ : ಧಾರವಾಡ.
ಕೃತಿಗಳು - ಗರಿ, ಕೃಷ್ಣಕುಮಾರಿ, ಉಯ್ಯಾಲೆ, ಸಖೀಗೀತ, ನಾದಲೀಲೆ, ಮೇಘದೂತ, ಗಂಗಾವತರಣ, ಸೂರಪಾನ, ನಗೆಯ ಹೊಗೆ, ಸಾಹಿತ್ಯದ ವಿರಾಟ್ ಸ್ವರೂಪ ಮುಂತಾದ ಕೃತಿಗಳನ್ನು ರಚಿಸಿದ್ದಾರೆ.
ಪ್ರಶಸ್ತಿಗಳು : ನವೋದಯ ಕನ್ನಡ ಸಾಹಿತ್ಯದ ಪ್ರಮುಖ ಕವಿಗಳಲ್ಲಿ ಒಬ್ಬರಾದ ದ. ರಾ. ಬೇಂದ್ರೆ ಇವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಭಾರತೀಯ ಜ್ಞಾನಪೀಠ ಪ್ರಶಸ್ತಿ, ಪದ್ಮಶ್ರೀ ಪುರಸ್ಕಾರ ದೊರೆತಿವೆ.
ಅ. ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.
1. ಹಕ್ಕಿಯು ಯಾವ ವೇಗದಲ್ಲಿ ಹಾರುತ್ತಿದೆ?
ಹಕ್ಕಿಯು ಎವೆತೆರೆದಿಕ್ಕುವ ಹೊತ್ತಿನ ಒಳಗೆ ಗಾವುದ ಗಾವುದ ವೇಗದಲ್ಲಿ ಹಾರುತ್ತಿದೆ.
2. ಹಕ್ಕಿಯ ಗರಿಯಲ್ಲಿ ಯಾವ ಬಣ್ಣಗಳಿವೆ?
ಬಿಳಿ ಮತ್ತು ಹೊಳೆಯುವ ಬಣ್ಣದ ಗರಿಗಳಿವೆ.
3. ಕಾಲ ಪಕ್ಷಿಯ ಕಣ್ಣುಗಳು ಯಾವುವು?
ಸೂರ್ಯ ಮತ್ತು ಚಂದ್ರರು ಕಾಲ ಪಕ್ಷಿಯ ಕಣ್ಣುಗಳು.
4. ಹಕ್ಕಿಯು ಯಾರ ನೆತ್ತಿಯನ್ನು ಕುಕ್ಕಿದೆ
ಹಕ್ಕಿಯು ಸಾರ್ವಭೌಮರ ನೆತ್ತಿಯನ್ನು ಕುಕ್ಕಿದೆ.
5. ಹಕ್ಕಿಯು ಯಾರನ್ನು ಹರಸಿದೆ?
ಹಕ್ಕಿಯು ಹೊಸಗಾಲದ ಹಸು ಮಕ್ಕಳನ್ನು ಹರಸಿದೆ.
6. ಹಕ್ಕಿಯು ಯಾವುದರ ಸಂಕೇತವಾಗಿದೆ?
ಹಕ್ಕಿಯು ಕಾಲದ ಸಂಕೇತವಾಗಿದೆ.
7. ಹಕ್ಕಿಯ ಚುಂಚಗಳು ಎಲ್ಲಿಯವರೆಗೂ ಚಾಚಿವೆ?
ಹಕ್ಕಿಯ ಚುಂಚಗಳು ದಿಗಂಡಲಗಳ ಅಂಚಿನವರೆಗೂ ಚಾಚಿವೆ.
ಆ. ಕೊಟ್ಟಿರುವ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ.
1. ಹಕ್ಕಿಯ ಹಾರಾಟವನ್ನು ಆಕಾಶಕ್ಕೆ ಹೇಗೆ ಹೋಲಿಸಿದ್ದಾರೆ?
ಕಾಲವೆಂಬ ಹಕ್ಕಿಯು ಆಕಾಶ, ಮೋಡ, ಭೂಮಂಡಲಗಳ ಎಲ್ಲಾ ಬಣ್ಣಗಳನ್ನು ಸಮನಾಗಿ ಆವರಿಸಿಕೊಂಡಿದೆ. ಮುಗಿಲಿಗೆ ರೆಕ್ಕೆಗಳನ್ನು ಮೂಡಿಸುತ್ತಾ, ರೆಕ್ಕೆಗಳನ್ನು ಬೀಸುತ್ತಾ ಹಾರುತ್ತಿದೆ. ಈ ಹಕ್ಕಿಯು ನಕ್ಷತ್ರಮಾಲೆಯನ್ನು ಕೊರಳಿಗೆ ಸಿಕ್ಕಿಸಿಕೊಂಡು, ಆಕಾಶದಲ್ಲಿ ಬೆಳಗುತ್ತಿರುವ ಸೂರ್ಯ-ಚಂದ್ರರನ್ನು ತನ್ನ ಕಣ್ಣುಗಳಾಗಿ ಮಾಡಿಕೊಂಡಿದೆ. ಕಾಲದ ದೈತ್ಯತೆಯನ್ನು ಸಂಕೇತಿಸುವ ಕಾಲವೆಂಬ ಹಕ್ಕಿಯು ಅನಂತದೆಡೆಗೆ ಹಾರಿಹೋಗುತ್ತಿದೆ ಎಂದು ಹಕ್ಕಿಯ ಹಾರಾಟವನ್ನು ಆಕಾಶಕ್ಕೆ ಹೋಲಿಸಿದ್ದಾರೆ.
2. ಹೊಸಗಾಲದ ಹಸುಮಕ್ಕಳನ್ನು ಹಕ್ಕಿ ಹೇಗೆ ಹರಸಿದೆ?
ಹಕ್ಕಿ(ಕಾಲ)ಯು ಯುಗಯುಗಗಳ ಆಗುಹೋಗುಗಳನ್ನು ಅಳಿಸಿ ಹಾಕಿ, ಹೊಸ ಮನ್ವಂತರದ ಭಾಗ್ಯಗಳಿಗೆ ಕಾರಣವಾಗಿದೆ. ಹಕ್ಕಿಯು ತನ್ನ ರೆಕ್ಕೆಗಳನ್ನು ಬೀಸುವ ಮೂಲಕ ಭೂಮಂಡಲದ ಜೀವಿಗಳಿಗೆ ಚೈತನ್ಯ ನೀಡಿ, ಹೊಸಗಾಲದ ಹಸುಮಕ್ಕಳಿಗೆ ಹೊಸ ಚೇತನವನ್ನು ನೀಡುತ್ತಾ, ಉತ್ತಮ ಭವಿಷ್ಯಕ್ಕಾಗಿ ಶುಭ ಹಾರೈಸುತ್ತಿದೆ ಎಂದು ಕವಿ ಬೇಂದ್ರೆ ಹೇಳಿದ್ದಾರೆ.
3. ಹಕ್ಕಿಯು ಯಾವ ಮೇರೆ ಮೀರಿ ನೀರನ್ನು ಹೀರಿದೆ?
ಕಾಲದ ಹಕ್ಕಿಯು, ಬೆಳ್ಳಿಚುಕ್ಕಿ ಎಂದು ಕರೆಯಲ್ಪಡುವ ಶುಕ್ರಗ್ರಹವೆಂಬ ಹಳ್ಳಿಯ ಮೇರೆಯನ್ನು ಮೀರಿ ಹಾರಿಹೋಗುತ್ತಿದೆ. ತಿಂಗಳೂರು ಅಂದರೆ ಚಂದ್ರಲೋಕ. ಈ ಚಂದ್ರಲೋಕಕ್ಕೆ ಕಾಲವೆಂಬ ಹಕ್ಕಿಯು ಮಾನವ ರೂಪದಲ್ಲಿ ಏರಿ ನೀರಿನ ಸೆಲೆಯನ್ನು ಹುಡುಕಿ ಅದನ್ನು ಹೀರುತ್ತ ಸಂತೋಷವಾಗಿ ಆಡುತ್ತಿದೆ. ಹೀಗೆ ಹಾರುವ ಹಕ್ಕಿ ಆಡುತ್ತ, ಹಾಡುತ್ತ, ಹಾರಾಡುತ್ತ, ಉತ್ಸಾಹ ಹಾಗೂ ಭವಿಷ್ಯತ್ತಿನ ಸಂಕೇತವಾಗಿದೆ.
ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿ.
1. ಹಕ್ಕಿಯನ್ನು ಕಾಲಗತಿಗೆ ಹೋಲಿಸುತ್ತಾ ಕವಿ ಹೇಳಿರುವ ಮಾತುಗಳಾವುವು?
ಕವಿ ಬೇಂದ್ರೆಯವರು “ಹಕ್ಕಿ ಹಾರುತ್ತಿದೆ ನೋಡಿದಿರಾ’ ಕವನದಲ್ಲಿ ಕಾಲದ ಗತಿಯನ್ನು ಹಾರುವ ಹಕ್ಕಿಯೊಂದಿಗೆ ಸಮೀಕರಿಸಿ ಹೇಳಿದ್ದಾರೆ. ಚಲನಶೀಲತೆ ಜೀವನದ ಗುಣವಾಗಿರುವುದರಿಂದ ನಿಸರ್ಗದ ಹೊಂದಾಣಿಕೆಯಂತೆ ಕಾಲ ಉರುಳುತ್ತದೆ.
ಆಯಾ ಕಾಲದಲ್ಲಿ ನಡೆದ ಪ್ರತಿಯೊಂದು ಘಟನೆಯೂ ಕಾಲ ಉರುಳಿದಂತೆ ಇತಿಹಾಸವಾಗುತ್ತಾ ಹೋಗುತ್ತದೆ. ಎಂತಹ ಪ್ರಭಾವಶಾಲಿಯಾದರೂ ಕೂಡ ನಿಸರ್ಗದ ಎದುರು ತಲೆ ಬಾಗಲೇಬೇಕು. ಹಕ್ಕಿಯ ಹಾರುವಿಕೆ ಪ್ರಕೃತಿಯ ಸಹಜಕ್ರಿಯೆಯೊಂದಿಗೆ ಯುಗಯುಗಗಳೇ ಉರುಳಿ ಹೊಸತನದ ಸಂಕೇತವೂ ಆಗಿದೆ. ಕಾಲ ಎಂಬ ಪಕ್ಷಿಯು ಬಣ್ಣಬಣ್ಣದ ರೆಕ್ಕೆಗಳನ್ನು ಹೊಂದಿ, ಭೂತಕಾಲ , ವರ್ತಮಾನಕಾಲ ಹಾಗೂ ಭವಿಷ್ಯತ್ ಕಾಲಗಳನ್ನು ಪ್ರತಿನಿಧಿಸುವ ಚಿತ್ರಣವಾಗಿದೆ. ಮುಗಿಲೇ ಬೃಹದಾಕಾರದ ಹಕ್ಕಿಯಂತಿದ್ದು, ನಕ್ಷತ್ರ ಮಾಲೆಯನ್ನು ಕೊರಳಿಗೆ ಸಿಕ್ಕಿಸಿಕೊಂಡು, ಸೂರ್ಯ-ಚಂದ್ರರನ್ನೇ ಕಣ್ಣುಗಳನ್ನಾಗಿ ಮಾಡಿಕೊಂಡಿದೆ .
ಕಾಲವೆಂಬ ಪಕ್ಷಿಯು ಬೇಡದ ವಸ್ತುಗಳನ್ನು ಬಿಟ್ಟು, ಸತ್ವದೊಂದಿಗೆ ಖಂಡ-ಖಂಡಗಳನ್ನು ತೇಲಿಸಿ ಮುಳುಗಿಸಿದೆ. ಒಳಿತು ಕೆಡುಕುಗಳನ್ನು ದಾಟಿ ಬರುತ್ತಿರುವ ಈ ಕಾಲವೆಂಬ ಪಕ್ಷಿಯು ಇತಿಹಾಸವನ್ನು ಸೃಷ್ಟಿಸುತ್ತ, ಹೊಸತನಕ್ಕೆ ತನ್ನನ್ನು ತಾನು ತೆರೆದುಕೊಳ್ಳುವ ಮೂಲಕ ಭೂಮಿಯಲ್ಲಿ ಜನಿಸುತ್ತಿರುವ ಹಸುಮಕ್ಕಳನ್ನು ಹರಸುತ್ತಾ ಮುಂದೆ ಸಾಗಿದೆ ಎಂದು ಕವಿ ಹೇಳಿದ್ದಾರೆ.
ಈ. ಸಂದರ್ಭ ಸಹಿತ ಸ್ವಾರಸ್ಯವನ್ನು ಬರೆಯಿರಿ
1. "ರೆಕ್ಕೆಗಳೆರಡೂ ಪಕ್ಕದಲ್ಲುಂಟು"
ಆಯ್ಕೆ: ಈ ಸಾಲನ್ನು ದ. ರಾ. ಬೇಂದ್ರೆಯವರ 'ಗರಿ' ಕವನ ಸಂಕಲನದಿಂದ ಆಯ್ದ 'ಹಕ್ಕಿ ಹಾರುತಿದೆ ನೋಡಿದಿರಾ' ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ಕವಿ ದ. ರಾ. ಬೇಂದ್ರೆ ಅವರು ಕಾಲದ ಗತಿಯನ್ನು ಹಾರುವ ಹಕ್ಕಿಗೆ ಸಮೀಕರಿಸಿ ವರ್ಣಿಸುವ ಸಂದರ್ಭದಲ್ಲಿ ಕಾಲಪಕ್ಷಿಯ ರೂಪವನ್ನು ತಿಳಿಸುತ್ತಾ ಅದರ ಎರಡೂ ಕಡೆ ಕೆನ್ನನ ಮತ್ತು ಹೊನ್ನಿನ ಬಣ್ಣದ ಎರಡು ರೆಕ್ಕೆಗಳಿವೆ ಎಂದು ವರ್ಣಿಸುವ ಸಂದರ್ಭದಲ್ಲಿ ಈ ಮಾತನ್ನು ಹೇಳಿದ್ದಾರೆ.
ಸ್ವಾರಸ್ಯ: ಕಾಲದ ಹಕ್ಕಿಗೆ ಸೂರ್ಯೋದಯ ಮತ್ತು ಸೂರ್ಯಾಸ್ತ ಎಂಬ ಎರಡು ರೆಕ್ಕೆಗಳಿವೆ ಎಂಬುದು ಕಾಲದ ಚಲನೆಗೆ ಸೂಕ್ತವಾದ ಕಲ್ಪನೆಯಾಗಿದ್ದು ಸ್ವಾರಸ್ಯ ಪೂರ್ಣವಾಗಿದೆ.
2. "ಸಾರ್ವಭೌಮರಾ ನೆತ್ತಿಯ ಕುಕ್ಕಿ"
ಆಯ್ಕೆ: ಈ ಸಾಲನ್ನು ದ. ರಾ. ಬೇಂದ್ರೆಯವರ 'ಗರಿ' ಕವನ ಸಂಕಲನದಿಂದ ಆಯ್ದ 'ಹಕ್ಕಿ ಹಾರುತಿದೆ ನೋಡಿದಿರಾ' ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ಕವಿ ದ. ರಾ. ಬೇಂದ್ರೆ ಅವರು ಕಾಲದ ಗತಿಯನ್ನು ಹಾರುವ ಹಕ್ಕಿಗೆ ಸಮೀಕರಿಸಿ ವರ್ಣಿಸುವ ಸಂದರ್ಭದಲ್ಲಿ ಕಾಲಪಕ್ಷಿಯು ಸಾರ್ವಭೌಮರೆಂದು ಮೆರೆಯುತ್ತಿದ್ದ ಸಾಮ್ರಾಟರ ನೆತ್ತಿಯನ್ನು ಕುಕ್ಕಿ ಅವರ ಅಹಂಕಾರವನ್ನು ಮೆಟ್ಟಿ ನಿಂತಿದೆ ಎಂಬ ಈ ಮಾತನ್ನು ಹೇಳುತ್ತಾರೆ.
ಸ್ವಾರಸ್ಯ: ಕಾಲದ ಗತಿಯಲ್ಲಿ ವೈಭವದಿಂದ, ಆಹಂಕಾರದಿಂದ ಮೆರೆದ ಸಾರ್ವಭೌಮರೆಲ್ಲರೂ ನಾಮಾವಶೇಷವಾಗಿದ್ದಾರೆ. ಕಾಲಚಕ್ರದೊಳಗೆ ಎಲ್ಲರೂ ತಲೆ ಬಾಗಲೇಬೇಕೆಂಬುದು ಈ ಸಾಲಿನ ಸ್ವಾರಸ್ಯವಾಗಿದೆ.
3. "ಬಲ್ಲರು ಯಾರಾ ಹಾಕಿದ ಹೊಂಚ"
ಆಯ್ಕೆ: ಈ ಸಾಲನ್ನು ದ. ರಾ. ಬೇಂದ್ರೆಯವರ 'ಗರಿ' ಕವನ ಸಂಕಲನದಿಂದ ಆಯ್ದ 'ಹಕ್ಕಿ ಹಾರುತಿದೆ ನೋಡಿದಿರಾ' ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ಕವಿ ದ. ರಾ. ಬೇಂದ್ರೆ ಅವರು ಕಾಲದ ಗತಿಯನ್ನು ಹಾರುವ ಹಕ್ಕಿಗೆ ಸಮೀಕರಿಸಿ ವರ್ಣಿಸುವ ಸಂದರ್ಭದಲ್ಲಿ ಕಾಲ ಪಕ್ಷಿಯು ಹಾರುತ್ತಾ ದಿಗ್ಗಂಡಲಗಳ ಅಂಚಿನ ಆಚೆಗೂ ತನ್ನ ಕೊಕ್ಕನ್ನು ಚಾಚಿ ಇಡೀ ಬ್ರಹ್ಮಾಂಡಗಳನ್ನು ಒಡೆಯುವುದಕ್ಕೆಂಬಂತೆ ಹಾರುತ್ತಿದೆ. ಅದರ ಸಂಚನ್ನು ಬಲ್ಲವರಾರು! ಎಂದು ವಿಸ್ಮಯದಿಂದ ಈ ಮಾತನ್ನು ಹೇಳುತ್ತಾರೆ.
ಸ್ವಾರಸ್ಯ: ಕಾಲದ ವೇಗ ವಿಸ್ತಾರವನ್ನೂ ಅದು ಉಂಟು ಮಾಡಬಹುದಾದ ಪರಿಣಾಮವನ್ನೂ ಈ ಮಾತಿನಲ್ಲಿ ಸ್ವಾರಸ್ಯಪೂರ್ಣವಾಗಿ ವರ್ಣಿಸಲಾಗಿದೆ.
4. "ಹೊಸಗಾಲದ ಹಸುಮಕ್ಕಳ ಹರಸಿ"
ಆಯ್ಕೆ: ಈ ಸಾಲನ್ನು ದ. ರಾ. ಬೇಂದ್ರೆಯವರ 'ಗರಿ' ಕವನ ಸಂಕಲನದಿಂದ ಆಯ್ದ 'ಹಕ್ಕಿ ಹಾರುತಿದೆ ನೋಡಿದಿರಾ' ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ಪ್ರಕೃತಿಯ ಸಹಜಕ್ರಿಯೆಯೊಂದಿಗೆ ಯುಗಯುಗಗಳೇ ಉರುಳಿ ಹೊಸತನಕ್ಕೆ ಕಾಲವು ತನ್ನನ್ನು ತಾನು ತೆರೆದುಕೊಳ್ಳುತ್ತದೆ. ಹೀಗಿರುವಾಗ ಹೊಸಕಾಲದ, ಹೊಸಯುಗಕ್ಕೆ ಕಾಲಿಡುತ್ತಿರುವ ಹಸುಗೂಸುಗಳು ಪ್ರಕೃತಿಯಲ್ಲಿ ಹೊಸತನ ಪಡೆಯಲಿ ಎಂದು ಕಾಲವು ಹರಸುತ್ತಿದೆ. ಹೊಸಗಾಲದ ಮಕ್ಕಳಲ್ಲಿ ಚೈತನ್ಯವನ್ನು ತುಂಬಿ. ಮುಂದಿನ ಜನಾಂಗವನ್ನು ಕಾಲವೆಂಬ ಪಕ್ಷಿಯು ಹರಸಿ ಮುಂದೆ ಸಾಗುತ್ತಿದೆ ಎಂದು ಹೇಳುವ ಸಂದರ್ಭದಲ್ಲಿ ಕವಿ ಈ ಸಾಲನ್ನು ಹೇಳಿದ್ದಾರೆ.
ಸ್ವಾರಸ್ಯ: ಕಾಲವೆಂಬ ಪಕ್ಷಿಯು ಸದಾ ಮುಂದೆ ಸಾಗುತ್ತಿದ್ದರೂ, ಆಗ ತಾನೆ ಜನಿಸಿರುವ ಹಸುಗೂಸನ್ನೂ ಕೂಡ ಹರಸುತ್ತ ಮುಂದೆ ಸಾಗುತ್ತದೆ ಎಂಬುದು ಈ ಸಾಲಿನ ಸ್ವಾರಸ್ಯವಾಗಿದೆ.
5. "ಮಂಗಳಲೋಕದ ಅಂಗಳಕೇರಿ"
ಆಯ್ಕೆ: ಈ ಸಾಲನ್ನು ದ. ರಾ. ಬೇಂದ್ರೆಯವರ 'ಗರಿ' ಕವನ ಸಂಕಲನದಿಂದ ಆಯ್ದ 'ಹಕ್ಕಿ ಹಾರುತಿದೆ ನೋಡಿದಿರಾ' ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ಕವಿ ದ. ರಾ. ಬೇಂದ್ರೆ ಅವರು ಕಾಲದ ಗತಿಯನ್ನು ಹಾರುವ ಹಕ್ಕಿಗೆ ಸಮೀಕರಿಸಿ ವರ್ಣಿಸುತ್ತಾ; ಕಾಲ ಪಕ್ಷಿಯು ನಕ್ಷತ್ರಗಳನ್ನು ಮೀರಿ: ಚಂದ್ರಲೋಕದ ನೀರನ್ನು ಹೀರಿ: ಆಟವಾಡಲು, ಹಾರಾಡಲು ಮಂಗಳಲೋಕದ ಅಂಗಳಕ್ಕೇರಿದೆ ಎಂದು ವರ್ಣಿಸುವ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾರೆ.
ಸ್ವಾರಸ್ಯ: ವೇಗದ ಕಾಲ ಗತಿಯಲ್ಲಿ ಮಾನವನು ವೈಜ್ಞಾನಿಕವಾಗಿ ಮುಂದುವರೆಯುತ್ತಾ ಚಂದ್ರ, ಮಂಗಳ ಗ್ರಹ ಮುಂತಾದ ಕಾಯಗಳೆಡೆಗೆ ಹಾರುತ್ತಿರುವುದನ್ನು ಈ ಮಾತಿನಲ್ಲಿ ಸ್ವಾರಸ್ಯಪೂರ್ಣವಾಗಿ ವರ್ಣಿಸಲಾಗಿದೆ.
ಉ) ಹೊಂದಿಸಿ ಬರೆಯಿರಿ.
ಅ ಪಟ್ಟಿ-ಬಪಟ್ಟಿ
1.ಹಕ್ಕಿ- ಪಕ್ಷಿ
2.ನಾಕುತಂತಿ- ಜ್ಞಾನಪೀಠ ಪ್ರಶಸ್ತಿ
3.ನೀಲಮೇಘಮಂಡಲ- ಸಮ ಬಣ್ಣ
4.ರಾಜ್ಯದ ಸಾಮ್ರಾಜ್ಯದ- ತೆನೆಒಕ್ಕಿ
5.ತೇಲಿಸಿ ಮುಳುಗಿಸಿ- ಖಂಡ- ಖ೦ಡಗಳ
6.ಮಂಗಳ- ಅ೦ಗಳಕೇರಿ
ಕೊಟ್ಟಿರುವ ಪದಗಳಿಗೆ ಸಮಾನಾರ್ಥಕ ಪದಗಳನ್ನು ಬರೆಯಿರಿ.
1. ಸೂರ್ಯ ಭಾಸ್ಕರ, ರವಿ, ಭಾನು, ನೇಸರ, ಅರ್ಕ.
2. ಮೇಘ – ಮೋಡ, ಮುಗಿಲು.
3. ಗಡ - ಸಣ್ಣಕೋಟೆ, ಸೀಮೆ.
4. ಹರಸು - ಆಶೀರ್ವದಿಸು, ಹಾರೈಕೆ
5. ಒಕ್ಕಿ - ಕಸ ಕಡ್ಡಿ ಬೇರ್ಪಡಿಸುವುದು, ಶುದ್ದೀಕರಿಸುವುದು.
6. ಕೆನ್ನ - ಕೆಂಪು, ಕೆಚ್ಚನೆಯ
ತತ್ಸಮ-ತದ್ಭವಗಳನ್ನು ಬರೆಯಿರಿ.
1. ವರ್ಣ - ಬಣ್ಣ
2. ಬ್ರಹ್ಮ - ಬೊಮ್ಮ
3. ಚಂದ್ರ ಚಂದಿರ
4. ಯುಗ – ಜುಗ
5. ಅ೦ಕಣ - ಅ೦ಗಳ
ಕೊಟ್ಟಿರುವ ಪದಗಳನ್ನು ಬಿಡಿಸಿ ಸಂಧಿ ಹೆಸರಿಸಿ. ( ಇರುಳಳಿದು, ತೆರೆದಿಕ್ಕುವ, ಹೊಸಗಾಲ, ದಿಗ್ಮಂಡಲ, ತಿಂಗಳಿನೂರು ).
1. ಇರುಳು + ಅಳಿದು = ಇರುಳಳಿದು - ಲೋಪಸಂಧಿ
2. ತೆರೆದು + ಇಕ್ಕುವ = ತೆರೆದಿಕ್ಕುವ - ಲೋಪಸಂಧಿ
3. ಹೊಸ + ಕಾಲ = ಹೊಸಗಾಲ - ಆದೇಶಸಂಧಿ
4. ದಿಕ್ + ಮಂಡಲ = ದಿಗ್ಗಂಡಲ - ಜತ್ತ್ವಸಂಧಿ
5. ತಿಂಗಳಿನ + ಊರು = ತಿಂಗಳಿನೂರು – ಲೋಪಸಂಧಿ
ಈ ಪದ್ಯದಲ್ಲಿ ಬರುವ ದ್ವಿರುಕ್ತಿ ಪದಗಳನ್ನು ಪಟ್ಟಿ ಮಾಡಿರಿ.
ಇರುಳಿರುಳು – ದಿನದಿನ - ಗಾವುದಗಾವುದ – ಬಣ್ಣಬಣ್ಣ - ಖಂಡಖ೦ಡ - ಯುಗಯುಗ
ಕೊಟ್ಟಿರುವ ಅವ್ಯಯ ಪದಗಳು ಯಾವ ಅವ್ಯಯಕ್ಕೆ ಸೇರಿವೆ ಎಂಬುದನ್ನು ಗುರುತಿಸಿ ಬರೆಯಿರಿ.(ಅದುವೇ, ಆದ್ದರಿಂದ, ಅಯ್ಯೋ, ಬೇಗನೆ, ಧಗಧಗ, ಸಾಕು, ಓಹೋ, ಹೌದು, ನೀನೇ, ರೊಯ್ಯನೆ, ಮೆಲ್ಲಗೆ, ಅಲ್ಲದೆ).
1. ಅದುವೇ - ಅವಧಾರಣಾರ್ಥಕಾವ್ಯಯ
2. ಆದ್ದರಿಂದ - ಸಂಬಂಧಾರ್ಥಕಾವ್ಯಯ
3. ಅಯ್ಯೋ - ಭಾವಸೂಚಕಾವ್ಯಯ
4. ಬೇಗನೆ - ಸಾಮಾನ್ಯಾರ್ಥಕಾವ್ಯಯ
5. ಧಗಧಗ - ಅನುಕರಣಾವ್ಯಯ
6. ಸಾಕು - ಕ್ರಿಯಾರ್ಥಕಾವ್ಯಯ
7. ಓಹೋ - ಭಾವಸೂಚಕಾವ್ಯಯ
8. ಹೌದು - ಕ್ರಿಯಾರ್ಥಕಾವ್ಯಯ
9. ನೀನೇ- ಅವಧಾರಣಾರ್ಥಕಾವ್ಯಯ
10. ರೊಯ್ಯನೆ - ಅನುಕರಣಾವ್ಯಯ
11. ಮೆಲ್ಲಗೆ - ಸಾಮಾನ್ಯಾರ್ಥಕಾವ್ಯಯ
12. ಅಲ್ಲದೆ - ಸಂಬಂಧಾರ್ಥಕಾವ್ಯಯ