ಕೃತಿಕಾರರ ಪರಿಚಯ
ಕವಿ : ಕಯ್ಯಾರ ಕಿಞ್ಞಣ್ಣ ರೈ.
ಕಾಲ :  ಕ್ರಿ .ಶ .1915.
ಸ್ಥಳ : ಕಾಸರಗೋಡು ಜಿಲ್ಲೆಯ ಕಯ್ಯಾರ ಗ್ರಾಮದವರು . 
ಕೃತಿಗಳು : ಶ್ರೀಮುಖ , ಐಕ್ಯಗಾನ , ಪುನರ್ನವ ಚೇತನ ಮತ್ತು ಕೊರಗ , ಗಂಧವತಿ ಮುಂತಾದ ಕವನ  ಸಂಕಲನಗಳನ್ನು ರಚಿಸಿದ್ದಾರೆ .ವಿರಾಗಿಣಿ ಎಂಬ ನಾಟಕವನ್ನು ರಚಿಸಿದ್ದಾರೆ . ಅನ್ನದೇವರು ಮತ್ತು ಇತರ ಕತೆಗಳು ಎಂಬ ಸಣ್ಣಕಥಾ ಸಂಕಲನಗಳನ್ನು ರಚಿಸಿದ್ದಾರೆ. ರತ್ನಾಕರ , ಪರಶುರಾಮ , ಎ . ಬಿ . ಶೆಟ್ಟಿಯವರ ಜೀವನ ಚರಿತ್ರೆಗಳನ್ನು ಬರೆದಿದ್ದಾರೆ . ದುಡಿತವೇ ನನ್ನ ದೇವರು ಎಂಬ ಆತ್ಮಕಥೆ ಬರೆದಿದ್ದಾರೆ . ಗೋವಿಂದ ಪೈ – ಸ್ಮೃತಿ ಕೃತಿ, ಸಾಹಿತ್ಯ ದೃಷ್ಟಿ – ವಿಮರ್ಶಾ ಕೃತಿ , ಪಂಚಮಿ – ಅನುವಾದ ಕೃತಿಗಳನ್ನು ರಚಿಸಿದ್ದಾರೆ .
ಪ್ರಶಸ್ತಿಗಳು : ಇವರಿಗೆ 1969 ರಲ್ಲಿ ಕರ್ನಾಟಕ ಸಾಹಿತ್ಯ ಆಕಾಡೆಮಿ ಪ್ರಶಸ್ತಿ , 2005 ರಲ್ಲಿ ಆಳ್ವಾಸ್ ನುಡಿಸಿರಿ ಪ್ರಶಸ್ತಿ , 2006 ರಲ್ಲಿ ನಾಡೋಜ ಪ್ರಶಸ್ತಿ ಮುಂತಾದ ಪ್ರಶಸ್ತಿ ಗೌರವಗಳು ಲಭಿಸಿವೆ . ಇವರು ಮಂಗಳೂರಿನಲ್ಲಿ ನಡೆದ 66ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಪ್ರಸ್ತುತ ಪದ್ಯವನ್ನು ಕಯ್ಯಾರ ಕಿಞ್ಞಣ್ಣ ರೈ ಅವರು ಸಂಪಾದಿಸಿರುವ ಶತಮಾನದ ಗಾನ ಕವನಸಂಕಲನದಿಂದ ಆರಿಸಿಕೊಳ್ಳಲಾಗಿದೆ.

ಅ ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯಗಳಲ್ಲಿ ಉತ್ತರಿಸಿ :
1. ಕವಿ ಎಂತಹ ಹಾಡು ಹಾಡಬೇಕೆಂದು ಬಯಸುವರು ?
ನವಭಾವ , ನವಜೀವನ , ನವಶಕ್ತಿ ತುಂಬಿಸುವ ಹಾಡನ್ನು ಹಾಡಬೇಕು ಎಂದು ಕವಿ ಬಯಸುವರು.

2. ವೀರಧ್ವನಿ ಹೇಗೆ ಏರಬೇಕು ? ಬಹಳ ಗಂಭೀರವಾದ ಭಾವನೆಯ ಅಲೆಗಳನ್ನು ಹರಡಿ ವೀರಧ್ವನಿ ಏರಬೇಕು.

3. ಕಡಿದೊಗೆಯಬೇಕಾದ ಪಾಠಗಳು ಯಾವುವು?
ಜಾತಿ , ಕುಲ , ಮತ , ಧರ್ಮ ಈ ಪಾಶಗಳನ್ನು ಕಡಿದೊಗೆಯಬೇಕು. 

4. ಹಾಡು ನುಡಿಗುಂಡುಗಳು ಯಾವುದರ ಬೆನ್ನಟ್ಟಬೇಕು ?
ಹಾಡು ನುಡಿಗುಂಡುಗಳು ಭಯದ ಬೆನ್ನಟ್ಟಬೇಕು .

5. ಬಾನು ಬುವಿ ಯಾವುದರಿಂದ ಬೆಳಗಬೇಕು ?
ಬಾನು ಬುವಿ ಜಡನಿದ್ರೆಯಿಂದ ಸಿಡಿದೆದ್ದು ವೀರ ಅಟ್ಟಹಾಸದಲ್ಲಿ ಬೆಳಗಬೇಕು.

ಆ ) ಕೊಟ್ಟಿರುವ ಪ್ರಶ್ನೆಗಳಿಗೆ ಮೂರು – ನಾಲ್ಕು ವಾಕ್ಯದಲ್ಲಿ ಉತ್ತರಿಸಿ ,
1 ಕವಿ ಎಂತಹ ಹಾಡನ್ನು ಹಾಡಿದಾಗ ವೀರಧ್ವನಿಯೇರಬೇಕು ಎಂದು ಬಯಸುತ್ತಾರೆ ?
ಬದುಕಿಗೆ ಹೊಸ ತಿರುವನ್ನು ನೀಡಬಲ್ಲ ಹೊಸ ಆಶಯವನ್ನು , ಜೀವನದ ಗತಿಯನ್ನು ಬದಲಿಸಿ ಹೊಸ ಹುರುಪನ್ನು ತುಂಬಬಲ್ಲ ಹೊಸ ಭಾವನೆ , ಹೊಸ ಜೀವನ ಹಾಗೂ ಹೊಸ ಶಕ್ತಿ ತುಂಬಿ ತುಳುಕುವ ಹಾಡನ್ನು ಗಂಭೀರವಾದ ಭಾವನೆಗಳಿಂದ ಹಾಡಬೇಕು . ಆಗ ವೀರಧ್ವನಿಯೇರಬೇಕು ಎಂದು ಬಯಸುತ್ತಾರೆ.

2. ಕವಿ ಎಂತಹ ಹಾಡು ಗುಡುಗಬೇಕು ಎಂದು ಆಶಿಸುತ್ತಾರೆ ?
ಕವಿಯು ಹಳೆಯ ಮೌಢ್ಯವನ್ನು ಕಡಿದೊಗೆದು ಹೊಸ ಭಾವನೆಗಳನ್ನು ಸೃಷ್ಟಿಸಬಲ್ಲ ಹೊಸ ಹಾಡನ್ನು ಹಾಡಬೇಕು , ಜಾತಿ , ಕುಲ , ಮತ , ಧರ್ಮ ಪಾಠಗಳನ್ನು ಕಡಿದೊಗೆಯಬೇಕು. ಸ್ವಾಭಿಮಾನದಿಂದ ಆತ್ಮವಿಶ್ವಾಸದಿಂದ ಎದೆಯೆತ್ತಿ ಹಾಡನ್ನು ಹಾಡಬೇಕು ಆ ಹಾಡು  ಯುಗಯುಗ ಕಳೆದರೂ , ಲೋಕ ಲೋಕಗಳ ಆಚೆಯೂ ಗುಡುಗಿನ ರೀತಿಯಲ್ಲಿ ಪ್ರತಿಧ್ವನಿಸಬೇಕು ಎಂದು ಆಶಿಸುತ್ತಾರೆ .

3 . ಈ ಹಾಡು ಹೊಸತು ಎಂದು ಕವಿ ಹೇಳಲು ಕಾರಣವೇನು ?
ಜಯಜನನಿ ಶಿರವೆತ್ತಿ ವೀರಭರವಸೆಯಿಂದ ಹೊಸಹಾಡನ್ನು ಕೇಳಿ ನೋಡು ; ಇದೋ ಮೊದಲು ಮುನ್ನಿಲ್ಲ … ಮುಗಿದಾದಂದಿನ ಪಾಡು ಹೊಸತಿಂದು ಹೊಸತು ಹಾಡು ” ಕವಿ ವೀರ ಭರವಸೆಯನ್ನು ಮೂಡಿಸುವ ಹಾಡನ್ನು ಒಮ್ಮೆ ಕೇಳಿ ನೋಡಬೇಕೆಂದು ಜಗಜ್ಜನನಿಯಲ್ಲಿ ಪ್ರಾರ್ಥಿಸುತ್ತಾರೆ ಏಕೆಂದರೆ ಹಾಡಿನಲ್ಲಿ ಅಂದಿನ ಪಾಡು ಮುಗಿದು , ಇಂದು ಹೊಸ ಹುರುಪಿನೊಂದಿಗೆ ಹೊಸ ಹಾಡನ್ನು ಹಾಡುತ್ತಿದ್ದರೆ , ಆದ್ದರಿಂದ ಕವಿ ಈ ಹಾಡು ಹೊಸದು ಎಂದು ಹೇಳಿದ್ದಾರೆ .

ಇ ] ಕೊಟ್ಟಿರುವ ಪ್ರಶ್ನೆಗೆ ಎಂಟು ಹತ್ತು ವಾಕ್ಯಗಳಲ್ಲಿ ಉತ್ತರಿಸಿ.
1 ) ಹೊಸಹಾಡು ಪದ್ಯದ ಸಾರಾಂಶವನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ.
ಬದುಕಿಗೆ ನವಭಾವ , ನವಜೀವ ,ನವಶಕ್ತಿ ತುಂಬಬಲ್ಲ ಹೊಸ ಹಾಡನ್ನು ಹಾಡಬೇಕು .ಹಳೆಯ ಮೌಢ್ಯವನ್ನು ಕಡಿದೊಗೆದು ಹೊಸ ಭಾವನೆಗಳನ್ನು ಸೃಷ್ಟಿಸಬಲ್ಲ ಹೊಸ ಹಾಡನ್ನು ಹಾಡಬೇಕು . ನಮ್ಮನ್ನು ಬಿಗಿದಿರುವ ಜಾತಿ , ಕುಲ ,ಮತ , ಧರ್ಮ ಎಂಬ ಪಾಠಗಳನ್ನು ಕತ್ತರಿಸಿ ಉತ್ಸಾಹದಿಂದ ಹಾಡಬೇಕು . ಆ ಹಾಡು ಎಲ್ಲರಲ್ಲೂ ಕ್ರಾಂತಿಯನ್ನುಂಟು ಮಾಡಬೇಕು . ಆ ಹೊಸ ಹಾಡನ್ನು ಉನ್ನತ ಶಿಖರದ ತುದಿಯಲ್ಲಿ ನಿಂತು ಹಾಡಿದಾಗ ಅದರ ನುಡಿಗುಂಡುಗಳು ದಶದಿಕ್ಕಿಗೂ ಸಿಡಿದು ಜನರಲ್ಲಿ ತುಂಬಿರುವ ಭಯವನ್ನು ಓಡಿಸಬೇಕು . ಗಂಡೆದೆಯ ಗರ್ಜನೆಗೆ ನಮ್ಮ ದೇಶದ ಕೋಟ್ಯಂತರ ಜನರು ದನಿಗೂಡಿಸಬೇಕು . ಆ ಒಕ್ಕೊರಲಿನ ಏಕತಾಭಾವದ ಪ್ರತಿಧ್ವನಿಯು ಭೂಮಿ – ಆಕಾಶವನ್ನು ಆವರಿಸಬೇಕು . ಜಡತ್ವದಿಂದ ಕೂಡಿರುವ ಜನರು ಎಚ್ಚೆತ್ತು ಅಂಧಕಾರದ ಕತ್ತಲೆಯಿಂದ ಆವರಿಸಲ್ಪಟ್ಟಿರುವ ಬಾನು ಭೂಮಿಯನ್ನು ಬೆಳಗಬೇಕು . ಪ್ರತಿಯೊಬ್ಬರ ನಡೆ – ನುಡಿಯಲ್ಲಿ ಕ್ರಾಂತಿಯ ಕಿಡಿ ಕೆರಳಬೇಕು , ಜಯವನ್ನು ಹೊಂದಿದ ಮಾತೆಯೇ ನೀನು ಹೆದರದೆ ಧೈರ್ಯದಿಂದ ತಲೆ ಎತ್ತಿ ನೋಡು , ಹಿಂದಿನ ಪಾಡು ಹಿಂದೆಯೇ ಮುಗಿಯಿತು . ಇದೇ ಮೊದಲು , ಇದಕ್ಕಿಂತ ಮುಂಚೆ ಇಂತಹ ಹಾಡು ಇರಲಿಲ್ಲ . ಆದ್ದರಿಂದ ಇಂದು ಇದೇ ಹೊಸಹಾಡು ಎಂದು ಹೇಳುತ್ತಾ ಹೊಸ ಹುರುಪನ್ನು ತುಂಬುವ ಹಾಡು ಇದಾಗಿದೆ . ಇಂತಹ ಸ್ಫೂರ್ತಿಯ ಚಿಲುಮೆಯಾಗುವ ಹಾಡನ್ನು ಹಾಡಬೇಕು , ಅದು ನಿತ್ಯ ನೂತನವಾಗಿರಬೇಕೆಂಬುದು ಪದ್ಯದ ಆಶಯವಾಗಿದೆ .


ಈ) ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ .
1 ) “ ತೀವ್ರತರ ಗಂಭೀರ ಭಾವನೆಯ ತೆರೆ ಮಸಗಿ ವೀರಧ್ವನಿಯೇರಬೇಕು ”
ಆಯ್ಕೆ :  ಈ ವಾಕ್ಯವನ್ನು ಕಯ್ಯಾರ ಕಿಞ್ಞಣ್ಣ ರೈ ಅವರು ಸಂಪಾದಿಸಿರುವ ಶತಮಾನದ ಗಾನ ಕವನಸಂಕಲನ ದಿಂದ ಆಯ್ದು  ಹೊಸಹಾಡು  ಎಂಬ ಪದ್ಯಭಾಗದಿಂದ ಆರಿಸಲಾಗಿದೆ.

ಸಂದರ್ಭ : ಕವಿ ಈ ಮಾತನ್ನು ಹೇಳಿದ್ದಾರೆ .ಬದುಕಿಗೆ ಹೊಸ ತಿರುವನ್ನು ನೀಡಬಲ್ಲ . ಹೊಸ ಆಶಯವನ್ನು ಜೀವನದ ಗತಿಯನ್ನು ಬದಲಿಸಿ ಹೊಸ ಹುರುಪನ್ನು ತುಂಬಬಲ್ಲ ಹಾಡನ್ನು ಹಾಡಬೇಕು. ಹೊಸಹಾಡು ಹಾಡಿದಾಗ ಬಹಳ ಗಂಭೀರವಾದ ಭಾವನೆಯು ಎಲ್ಲೆಡೆ ಹರಡಿ ವೀರಧ್ವನಿ ಏರಬೇಕು ಎಂದು ಕವಿ ಹೇಳಿದ್ದಾರೆ .

ಸ್ವಾರಸ್ಯ : ಹೊಸ ಹಾಡನ್ನು ಕೇಳಿದವರಲ್ಲಿ ವೀರತ್ವ ಮೂಡಬೇಕು , ವೀರಧ್ವನಿ ಏರಬೇಕು ಎಂದು ಕವಿ ಹೇಳಿರುವುದು ಸ್ವಾರಸ್ಯವಾಗಿದೆ .

2 ) “ ಯುಗಯುಗಗಳಾಚೆಯಲಿ ಲೋಕಲೋಕಾಂತರದಲಿ ಆ ಹಾಡು ಗುಡುಗಬೇಕು ”
ಆಯ್ಕೆ :  ಈ ವಾಕ್ಯವನ್ನು ಕಯ್ಯಾರ ಕಿಞ್ಞಣ್ಣ ರೈ ಅವರು ಸಂಪಾದಿಸಿರುವ ಶತಮಾನದ ಗಾನ ಕವನಸಂಕಲನ ದಿಂದ ಆಯ್ದು  ಹೊಸಹಾಡು  ಎಂಬ ಪದ್ಯಭಾಗದಿಂದ ಆರಿಸಲಾಗಿದೆ.

ಸಂದರ್ಭ ಈ ಮಾತನ್ನು ಕವಿ ಹೇಳಿದ್ದಾರೆ . ಜಾತಿ , ಕುಲ , ಮತ ಧರ್ಮಗಳ , ಪಾಠಗಳನ್ನು ಕಡಿದೊಗೆದು ಹಾಡನ್ನು ಹಾಡಬೇಕು . ಈ ಹಾಡು ಯುಗಯುಗಗಳಾಚೆ , ಲೋಕಲೋಕಗಳಾಚೆ ಕೇಳಬೇಕು ಎಂದು ಹೇಳುವ ಸಂದರ್ಭದಲ್ಲಿ ಈ ಮಾತು ಬಂದಿದೆ .

ಸ್ವಾರಸ್ಯ : ಜಾತಿ , ಕುಲ ,ಮತ , ಧರ್ಮ ಎಂಬ ಕಟ್ಟಳೆಗಳನ್ನು ಮೀರಿ ನಮ್ಮಲ್ಲಿ ಮನುಜ ಮತದ ಭಾವನೆ ಮೂಡಬೇಕು ಎಂಬುದು ಇಲ್ಲಿನ ಸ್ವಾರಸ್ಯವಾಗಿದೆ .

3 ) “ ಜಡನಿದ್ರೆ ಸಿಡಿದೆದ್ದ ವೀರಾಟ್ಟಹಾಸದಲ್ಲಿ ಬಾನು ಬುವಿ ಬೆಳಗಬೇಕು ”
ಆಯ್ಕೆ :  ಈ ವಾಕ್ಯವನ್ನು ಕಯ್ಯಾರ ಕಿಞ್ಞಣ್ಣ ರೈ ಅವರು ಸಂಪಾದಿಸಿರುವ ಶತಮಾನದ ಗಾನ ಕವನಸಂಕಲನ ದಿಂದ ಆಯ್ದು  ಹೊಸಹಾಡು  ಎಂಬ ಪದ್ಯಭಾಗದಿಂದ ಆರಿಸಲಾಗಿದೆ.

ಸಂದರ್ಭ : ಈ ಮಾತನ್ನು ಕವಿ ಹೇಳಿದ್ದಾರೆ . ನಾವು ಜಡನಿದ್ರೆಯಿಂದ ಎಚ್ಚರಗೊಂಡು ವೀರ ಅಟ್ಟಹಾಸದಲ್ಲಿ ಬಾನು ಭುವಿ ಬೆಳಗಬೇಕು ಹೀಗೆ ಹೊಸ ಹಾಡು ಹೇಗೆ ಮತ್ತು ಯಾವುದನ್ನು ಬೆಳಗಬೇಕು ಎಂದು ವಿವರಿಸುವ ಸಂದರ್ಭದಲ್ಲಿ ಈ ಮಾತು ಬಂದಿದೆ .

ಸ್ವಾರಸ್ಯ : ಸಮಾಜದಲ್ಲಿ ಬದಲಾವಣೆಯ ಗಾಳಿ ಬೀಸಬೇಕಾದರೆ ಮೊದಲು ಹಳೆಯ ಮೌಢ್ಯಗಳು ದೂರವಾಗಬೇಕು ಎಂಬುದು ಸ್ವಾರಸ್ಯಕರವಾಗಿದೆ .

4 ) “ ನಡೆನುಡಿಗಳೆಡೆಯಲ್ಲಿ ಪದತಾಳ ಗತಿಯಲ್ಲಿ ಕ್ರಾಂತಿಕಿಡಿ ಕೆರಳಬೇಕು “
ಆಯ್ಕೆ :  ಈ ವಾಕ್ಯವನ್ನು ಕಯ್ಯಾರ ಕಿಞ್ಞಣ್ಣ ರೈ ಅವರು ಸಂಪಾದಿಸಿರುವ ಶತಮಾನದ ಗಾನ ಕವನಸಂಕಲನ ದಿಂದ ಆಯ್ದು  ಹೊಸಹಾಡು  ಎಂಬ ಪದ್ಯಭಾಗದಿಂದ ಆರಿಸಲಾಗಿದೆ. 
ಸಂದರ್ಭ : ಈ ಮಾತನ್ನು ಕವಿ ಹೇಳಿದ್ದಾರೆ . ಹೊಸ ಹಾಡಿನ ಗತಿ , ಪ್ರಗತಿ ಹೇಗಿರಬೇಕು , ಆ ಹಾಡು ಯುಗಯುಗ ಕಳೆದರೂ , ಲೋಕ ಲೋಕಗಳ ಆಚೆಯೂ ಗುಡುಗಿನ ರೀತಿಯಲ್ಲಿ ಪ್ರತಿಧ್ವನಿಸಬೇಕು ಕ್ರಾಂತಿಯ ಕಿಡಿಯನ್ನು ಹೊತ್ತಿಸಬೇಕು ಎಂದು ಹೇಳುವ ಸಂದರ್ಭದಲ್ಲಿ  ಈ ಮಾತು ಬಂದಿದೆ .
ಸ್ವಾರಸ್ಯ : ಒಳ್ಳೆಯ ಬದಲಾವಣೆಯನ್ನು ಉಂಟುಮಾಡಬೇಕಾದರೆ ಮೊದಲು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂಬುದು ಇಲ್ಲಿನ ಸ್ವಾರಸ್ಯವಾಗಿದೆ .

5 ) ” ಇದೋ ಮೊದಲು ಮುನ್ನಿಲ್ಲ ಮುಗಿದುದಂದಿನ ಪಾಡು ಹೊಸತಿಂದು ಹೊಸತು ಹಾಡು ”
ಆಯ್ಕೆ :  ಈ ವಾಕ್ಯವನ್ನು ಕಯ್ಯಾರ ಕಿಞ್ಞಣ್ಣ ರೈ ಅವರು ಸಂಪಾದಿಸಿರುವ ಶತಮಾನದ ಗಾನ ಕವನಸಂಕಲನ ದಿಂದ ಆಯ್ದು  ಹೊಸಹಾಡು  ಎಂಬ ಪದ್ಯಭಾಗದಿಂದ ಆರಿಸಲಾಗಿದೆ.

ಸಂದರ್ಭ : ಕವಿಯು ಹೊಸಹಾಡಿನ ಬಗ್ಗೆ ಹೇಳುತ್ತಾ ಜಯಜನನಿಯಾದ ಭಾರತಾಂಬೆಯನ್ನು ಕುರಿತು “ ಶಿರವೆತ್ತಿ ವೀರಭರವಸೆಯಿಂ ಹೊಸಹಾಡನ್ನು ಕೇಳು ” ಎಂದು ಹೇಳುವ ಸಂದರ್ಭದಲ್ಲಿ ಹಿಂದಿನ ಪಾಡು ಹಿಂದೆಯೇ ಮುಗಿಯಿತು . ಇದೇ ಮೊದಲು . ಇದಕ್ಕಿಂತ ಮುಂಚೆ ಇಂತಹ ಹಾಡು ಇರಲಿಲ್ಲ . ಆದ್ದರಿಂದ ಇಂದು ಇದೇ ಹೊಸಹಾಡು ಎಂದು ಹೇಳಿದ್ದಾರೆ .

ಸ್ವಾರಸ್ಯ : ಹಿಂದೆ ಆಗಿರುವ ಹಳೆಯದನ್ನು ನೆನೆಯುತ್ತಾ ಇಂದಿನ ಅವಕಾಶದಿಂದ ವಂಚಿತರಾಗಬಾರದು ಎಂಬುದು ಇಲ್ಲಿನ ಸ್ವಾರಸ್ಯವಾಗಿದೆ .

ಉ ) ಮೊದಲೆರಡು ಪದಗಳಿಗಿರುವ ಸಂಬಂಧದಂತ ಮೂರನೆಯ ಪದಕ್ಕೆ ಸಂಬಂಧಿಸಿದ ಪದವನ್ನು ಬರೆಯಿರಿ .
1. ದ್ವನಿ : ದನಿ :: ಯುಗ : ಜುಗ
2. ಲೋಕಾಂತರ : ಸವರ್ಣದೀರ್ಘ ಸಂಧಿ :: ಉನ್ನತೋನ್ನತ : ಗುಣಸಂಧಿ
3. ಬಾನು : ಆಕಾಶ :: ಭಾನು : ಸೂರ್ಯ

ಊ ) ಕೊಟ್ಟಿರುವ ನಾಲ್ಕು ಆಯ್ಕೆಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ .
1. ಹೊಸಹಾಡು  ಪದ್ಯದ ಆಕರ ಗ್ರಂಥ ..........
( ಪುನರ್ನವ . ಚೇತನ , ಕೊರಗ. ಶತಮಾನದಗಾನ ) 2.  ಹೊಸಹಾಡು  ಪದ್ಯದ ಕವಿ ..........
( ಗೋಪಾಲಕೃಷ್ಣ ಅಡಿಗ , ಕಯ್ಯಾರ ಕಿಞ್ಞಣ್ಣ ರೈ , ದ.ರಾ. ಬೇಂದ್ರೆ , ಜಿ .ಎಸ್. ಶಿವರುದ್ರಪ್ಪ )
3. ಉನ್ನತೋನ್ನತ .......... ಶಿಖರವನೇರಿ ಹಾಡಲ್ಲಿ ಹಾಡಬೇಕು.
( ಹಿಮಾಲಯ , ಘನಹಿಮಾದ್ರಿ , ಸಹ್ಯಾದ್ರಿ , ವಿಂಧ್ಯಾ )
4 .......... ಧರ್ಮಪಾಠಗಳ ಕಡಿದೊಗೆದು ಎದೆಹಿಗ್ಗಿ ಹಾಡಬೇಕು.
( ಜಾತಿ – ಕುಲ – ಮತ , ಮೇಲು – ಕೀಳು, ಬಡವ – ಬಲ್ಲಿದ , ಹಳ್ಳಿ – ಪಟ್ಟಣ )
ಪಾರಿವಾಳ
ಕೃತಿಕಾರರ ಪರಿಚಯ
ಕವಿ : ಸು . ರಂ. ಎಕ್ಕುಂಡಿ 
ಪೂರ್ಣ ಹೆಸರು ಸುಬ್ಬಣ್ಣ ರಂಗಣ್ಣ ಎಕ್ಕುಂಡಿ.
ಕಾಲ : 1923
ಸ್ಥಳ : ಹಾವೇರಿ ಜಿಲ್ಲೆಯ ರಾಣೆಬೆನ್ನೂರು. 
ಕೃತಿಗಳು: 
ಕವನ ಸಂಕಲನ : ಶ್ರೀ ಆನಂದ ತೀರ್ಥರು , ಸಂತಾನ , ಹಾವಾಡಿಗರ ಹುಡುಗ , ಮತ್ಸ ಗಂಧಿ , ಬಕುಳದ ಹೂಗಳು .
ಕಥಾಸಂಕಲನ : ನೆರಳು,
ಕಾದಂಬರಿ : ಪ್ರತಿಬಿಂಬಗಳು.
ಪ್ರಶಸ್ತಿಗಳು: ಸೋವಿಯತ್ ಲ್ಯಾಂಡ್‌ನ ನೆಹರು ಪುರಸ್ಕಾರ , ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ, ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ದೊರೆತಿವೆ. ಪ್ರಸ್ತತ  ಪಾರಿವಾಳ  ಪದ್ಯವನ್ನು ಸು . ರಂ . ಎಕ್ಕುಂಡಿ ಅವರ  ಸಮಗ್ರ ಕಥನ ಕವನಗಳು  ಎಂಬ ಕೃತಿಯಿಂದ ಆರಿಸಲಾಗಿದೆ .

ಅ) ಈ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ .
1. ಮುದ್ದು ಪಾರಿವಾಳಗಳ ಜೋಡಿ ಎಲ್ಲಿ ಸಂಸಾರ ಹೂಡಿದ್ದವು ?
ಮುದ್ದು ಪಾರಿವಾಳಗಳ ಜೋಡಿ ದಟ್ಟಕಾಡಿನ ಹೆಮ್ಮರದಲ್ಲಿನ ಪೊಟರೆಯಲ್ಲಿ ಸಂಸಾರ ಹೂಡಿದ್ದವು .

2. ಜೋಡಿ ಪಾರಿವಾಳಗಳು ಹೇಗೆ ಬಾಳುತ್ತಿದ್ದವು ?
ಜೋಡಿ ಪಾರಿವಾಳಗಳು ಹಗಲಿರುಳು ಒಂದನ್ನೊಂದು ಬಿಟ್ಟಿರಲಾಗದೇ ಜೊತೆಗೂಡಿ ಬಾಳುತ್ತಿದ್ದವು.

3. ಬಲೆಯಲ್ಲಿದ್ದ ಮರಿಗಳು ಹೊರಗೆ ಬರಲು ಏನು ಮಾಡಿದವು ?
ಬಲೆಯಲ್ಲಿದ್ದ ಮರಿಗಳು ಹೊರಗೆ ಬರಲು ಚೀತ್ಕರಿಸತೊಡಗಿದವು .

4. ಏನನ್ನು ತೊರೆದು ಬಾಳಬೇಕು ?
ವ್ಯಾಮೋಹವನ್ನು ತೊರೆದು ಬಾಳಬೇಕು .

ಆ ) ಈ ಪ್ರಶ್ನೆಗೆ ಮೂರು – ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ.
1.ಪಾರಿವಾಳಗಳ ಆನಂದಕ್ಕೆ ಕಾರಣವೇನು ?
ದಟ್ಟವಾದ ಕಾಡಿನ ಹೆಮ್ಮರದಲ್ಲಿನ ಪೊಟರೆಯೊಂದರಲ್ಲಿ ಮುದ್ದು ಪಾರಿವಾಳಗಳ ಜೋಡಿ ವಾಸವಾಗಿದ್ದವು ಜೋಡಿ ಪಾರಿವಾಳಗಳು  ಒಂದನ್ನೊಂದು ಬಿಟ್ಟಿರಲಾಗದೇ ಹಗಲಿರುಳು ಒಟ್ಟಿಗೇ ಜೊತೆಗೂಡಿ ಬಾಳುತ್ತಿದ್ದವು .

ಕಾಲಾಂತರದಲ್ಲಿ ಪೊಟರೆಯಲ್ಲಿ ಇಟ್ಟ ಮೊಟ್ಟೆಗಳು ಒಡೆದು ಮರಿಗಳು ಹೊರ ಬಂದಾಗ ,ಪುಟ್ಟ ಮರಿಗಳ ಮಧುರ ಸದ್ದು ಕೇಳಿತು. ಪ್ರತಿನಿತ್ಯ ಆ ಮರಿಗಳ ಮಧುರವಾದ ಚಿಲಿಪಿಲಿ ಸದ್ದು ಕೇಳುತ್ತಾ  ಜೋಡಿ ಪಾರಿವಾಳಗಳು ಆನಂದವಾಗಿದ್ದವು .

2.ಬೇಡ ಏನು ಮಾಡಿದನು ?
ದಟ್ಟವಾದ ಕಾಡಿನ ಹೆಮ್ಮರದಲ್ಲಿನ ಪೊಟರೆಯೊಂದರಲ್ಲಿ ಮುದ್ದು ಪಾರಿವಾಳಗಳ ಜೋಡಿ ತನ್ನ ಪುಟ್ಟ ಮರಿಗಳ ಜೊತೆಗೆ ವಾಸವಾಗಿದ್ದವು. ಜೋಡಿ ಪಾರಿವಾಳಗಳು  ಒಂದನ್ನೊಂದು ಬಿಟ್ಟಿರಲಾಗದೇ ಹಗಲಿರುಳು ಒಟ್ಟಿಗೇ ಜೊತೆಗೂಡಿ ಬಾಳುತ್ತಿದ್ದವು .ಇದನ್ನು ನೋಡಿದ ಬೇಡನೊಬ್ಬನು ಬಲೆಯನ್ನು ಹಾಕುತ್ತಾನೆ.
ಆ ಬಲೆಯೊಳಗೆ ಮೊದಲು ಪುಟ್ಟ ಮರಿಗಳು ಹಾರಿ ಸಿಲುಕಿಕೊಂಡು ಹೊರಗೆ ಬರಲಾಗದೇ ಚೀತ್ಕರಿಸತೊಡಗಿದವು . ಮರಿ ಪಾರಿವಾಳಗಳ ಸ್ಥಿತಿಯನ್ನು ಕಂಡು ತಾಯಿ ಪಾರಿವಾಳ ಮರಿಗಳನ್ನು ರಕ್ಷಿಸಲು ತಾನು ಕೂಡ ಬಲೆಗೆ ಧುಮುಕಿತು. ಹೆಂಡತಿಯನ್ನು ಬಿಟ್ಟಿರಲಾರದ ಗಂಡು ಪಾರಿವಾಳವು ಸಹ ಬಲೆಯಲ್ಲಿ ಬಿದ್ದಿತು. ಮರಿಗಳ ಜೊತೆ ಜೋಡಿ ಪಾರಿವಾಳಗಳು ಬಲೆಯೊಳಗೆ ಸಿಲುಕಿರುವುದನ್ನು ನೋಡಿದ ಹಸಿದ ಬೇಡನು ಪಾರಿವಾಳಗಳ ಕುಟುಂಬವನ್ನು ಹೊತ್ತುಕೊಂಡು ಹೋದನು.

ಇ ) ಈ ಪ್ರಶ್ನೆಗೆ ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿ
1. ಜೋಡಿ ಪಾರಿವಾಳಗಳ ದುಡುಕಿನ ನಿರ್ಧಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ?
ದಟ್ಟವಾದ ಕಾಡಿನ ಹೆಮ್ಮರದಲ್ಲಿನ ಪೊಟರೆಯೊಂದರಲ್ಲಿ ಮುದ್ದು ಪಾರಿವಾಳಗಳ ಜೋಡಿ ತನ್ನ ಪುಟ್ಟ ಮರಿಗಳ ಜೊತೆಗೆ ವಾಸವಾಗಿದ್ದವು. ಜೋಡಿ ಪಾರಿವಾಳಗಳು  ಒಂದನ್ನೊಂದು ಬಿಟ್ಟಿರಲಾಗದೇ ಹಗಲಿರುಳು ಒಟ್ಟಿಗೇ ಜೊತೆಗೂಡಿ ಬಾಳುತ್ತಿದ್ದವು .ಇದನ್ನು ನೋಡಿದ ಬೇಡನೊಬ್ಬನು ಬಲೆಯನ್ನು ಹಾಕುತ್ತಾನೆ .ಆ ಬಲೆಯೊಳಗೆ ಮೊದಲು ಪುಟ್ಟ ಮರಿಗಳು ಹಾರಿ ಸಿಲುಕಿಕೊಂಡು ಹೊರಗೆ ಬರಲಾಗದೇ ಚೀತ್ಕರಿಸತೊಡಗಿದವು. 
ತಮ್ಮ ಮರಿಗಳು ಬಲೆಗೆ ಸಿಕ್ಕಿಕೊಂಡದನ್ನು ನೋಡಿದ ತಾಯಿ ಪಾರಿವಾಳ ವಿವೇಚನೆಯಿಲ್ಲದೆ ಮರಿಗಳ ಮೇಲಿನ ಅತಿಯಾದ ವಾತ್ಸಲ್ಯದಿಂದ ತನ್ನ ಮರಿಗಳನ್ನು ರಕ್ಷಿಸಲು ತಾನು ಕೂಡ ಬಲೆಗೆ ಬೀಳುತ್ತದೆ. ಹೆಣ್ಣು ಪಾರಿವಾಳವನ್ನು ಬಿಟ್ಟಿರದಷ್ಟು ಹಚ್ಚಿಕೊಂಡಿದ್ದ ಗಂಡು ಪಾರಿವಾಳವು ತಾನೂ ಕೂಡ ಬಲೆಗೆ ಸಿಕ್ಕಿಕೊಂಡಿತು. ಹೀಗೆ ಜೋಡಿ ಪಾರಿವಾಳಗಳು ಮರಿಗಳ ಮೇಲಿನ ಅತಿಯಾದ ವ್ಯಾಮೋಹದಿಂದ ಪ್ರಾಣ ಕಳೆದುಕೊಂಡವು. ಮರಿಗಳ ಜೊತೆ ಜೋಡಿ ಪಾರಿವಾಳಗಳು ಬಲೆಯೊಳಗೆ ಸಿಲುಕಿರುವುದನ್ನು ನೋಡಿದ ಹಸಿದ ಬೇಡನು ಪಾರಿವಾಳಗಳ ಕುಟುಂಬವನ್ನು ಹೊತ್ತುಕೊಂಡು ಹೋದನು .
ಜೋಡಿ ಪಾರಿವಾಳಗಳು ದುಡುಕಿನಿಂದ ತಮ್ಮ ಮರಿಗಳ ಮೇಲಿನ ವ್ಯಾಮೋಹದಿಂದ ತಾವೂ ಸಹ ಬೇಡನಿಗೆ ಆಹಾರವಾದದ್ದು ಸರಿಯಲ್ಲ .  ವ್ಯಾಮೋಹವನ್ನು ತೊರೆದು ಬಾಳಬೇಕು ಏನೇ ಬಂದರು ತಾಳ್ಮೆಯಿಂದ ಯೋಚಿಸಿ ಕಾರ್ಯಸಾಧನೆ ಮಾಡಬೇಕು . ಎಂಬುದೇ ನಮ್ಮ ಅಭಿಪ್ರಾಯವಾಗಿದೆ. ಆದ್ದರಿಂದ ಅತಿಯಾದ ವ್ಯಾಮೋಹ ಒಳ್ಳೆಯದಲ್ಲ ಎಂದು ಹೇಳಬಹುದು .

2.‘ ಪಾರಿವಾಳ ‘ ಪದ್ಯದ ಕಥೆಯನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ.
ಪಾರಿವಾಳ  ಎಂಬ ಕವನವು ಒಂದು ಕಥನ ಕವನವಾಗಿದೆ . ದಟ್ಟವಾದ ಕಾಡಿನ ಹೆಮ್ಮರದಲ್ಲಿನ ಪೊಟರೆಯೊಂದರಲ್ಲಿ ಮುದ್ದು ಪಾರಿವಾಳಗಳ ಜೋಡಿ ತನ್ನ ಪುಟ್ಟ ಮರಿಗಳ ಜೊತೆಗೆ ವಾಸವಾಗಿದ್ದವು. ಜೋಡಿ ಪಾರಿವಾಳಗಳು  ಒಂದನ್ನೊಂದು ಬಿಟ್ಟಿರಲಾಗದೇ ಹಗಲಿರುಳು ಒಟ್ಟಿಗೇ ಜೊತೆಗೂಡಿ ಬಾಳುತ್ತಿದ್ದವು.
ಈ ಪುಟ್ಟ ಸಂಸಾರದಲ್ಲಿ ಸುಃಖ, ಸಂತೋಷ, ಆನಂದ ಮನೆ ಮಾಡಿತ್ತು. ಈ ಗೂಡಿನಲ್ಲಿ ಒಮ್ಮೆ ಹೆಣ್ಣು ಪಾರಿವಾಳವು ಮೊಟ್ಟೆಗಳನ್ನು ಇಟ್ಟಿತು . ಒಂದು ದಿನ ಮೊಟ್ಟೆಯೊಡೆದು ಹೊರಬಂದ ತನ್ನ ಮರಿ ಪಾರಿವಾಳಗಳನ್ನು ನೋಡಿ ಅವುಗಳ ಸಂತೋಷ ಇಮ್ಮಡಿಯಾಯಿತು. ಆ ಮರಿಗಳ ಮಧುರ ಸದ್ದು ಕೇಳಿ ಸಂತೋಷದಿಂದ ಜೀವನ ಸಾಗಿಸುತ್ತಿದ್ದವು.

ಹೀಗಿರುವಾಗ ಒಂದು ದಿನ ಈ ಪುಟ್ಟ ಪಾರಿವಾಳಗಳ ಕುಟುಂಬದ ಮೇಲೆ ಬೇಡನೊಬ್ಬನ ಕಣ್ಣು ಬೀಳುತ್ತದೆ . ಈ ಬೇಡನು ಬಂದು ಪಾರಿವಾಳಗಳ ಗೂಡಿಗೆ ಬಲೆಯನ್ನು ಹಾಕಿದಾಗ, ಆ ಬಲೆಯೊಳಗೆ ಮೊದಲು ಪುಟ್ಟ ಮರಿಗಳು ಹಾರಿ ಸಿಲುಕಿಕೊಂಡು ಹೊರಗೆ ಬರಲಾಗದೇ ಚೀತ್ಕರಿಸತೊಡಗಿದವು . ತಮ್ಮ ಮರಿಗಳು ಬಲೆಯಲ್ಲಿ ಬಿದ್ದು ಕಷ್ಟ ಪಡುವುದನ್ನು ನೋಡಿದ ತಾಯಿ ಪಾರಿವಾಳ ವಿವೇಚನೆಯಿಲ್ಲದೆ ಮರಿಗಳ ಮೇಲಿನ ಅತಿಯಾದ ವಾತ್ಸಲ್ಯದಿಂದ ತನ್ನ ಮರಿಗಳನ್ನು ರಕ್ಷಿಸಲು ತಾನು ಕೂಡ ಬಲೆಗೆ ಬೀಳುತ್ತದೆ . ಹೆಣ್ಣು ಪಾರಿವಾಳವನ್ನು ಬಿಟ್ಟಿರದಷ್ಟು ಹಚ್ಚಿಕೊಂಡಿದ್ದ ಗಂಡು ಪಾರಿವಾಳವು ತಾನೂ ಕೂಡ ಬಲೆಗೆ ಸಿಕ್ಕಿಕೊಂಡಿತು .

ಹೀಗೆ ಜೋಡಿ ಪಾರಿವಾಳಗಳು ಮರಿಗಳ ಮೇಲಿನ ಅತಿಯಾದ ವ್ಯಾಮೋಹದಿಂದ ಪ್ರಾಣ ಕಳೆದುಕೊಂಡವು. ಮರಿಗಳ ಜೊತೆ ಜೋಡಿ ಪಾರಿವಾಳಗಳು ಬಲೆಯೊಳಗೆ ಸಿಲುಕಿರುವುದನ್ನು ನೋಡಿದ ಹಸಿದ ಬೇಡನು ಪಾರಿವಾಳಗಳ ಕುಟುಂಬವನ್ನು ಹೊತ್ತುಕೊಂಡು ಹೋದನು .  “ ಮೋಹ ಮುಸುಕಿದ ಬುದ್ಧಿ ಸರ್ವನಾಶದ ಸಿದ್ಧಿ ವ್ಯಾಮೋಹವನು ತೊರೆದು ಬಾಳಬೇಕು ಏನು ಬಂದರು ಕೂಡ ತಾಳಬೇಕು ” ಎಂದು ಕವಿ ಹೇಳಿರುವ ಈ ಸಾಲುಗಳು ತುಂಬಾ ಅರ್ಥ ಗರ್ಭಿತವಾಗಿವೆ . ಮಕ್ಕಳು ಬಲೆಯಲ್ಲಿ ಬಿದ್ದಾಗ ತಾಯಿ ಪಾರಿವಾಳ ವ್ಯಾಮೋಹ ಬಿಟ್ಟು ಸ್ವಲ್ಪ ವಿವೇಕದಿಂದ ಯೋಚನೆ ಮಾಡಬೇಕಿತ್ತು . ಇದರಿಂದ ತನ್ನ ಪ್ರಾಣ ಉಳಿಯುತ್ತಿತ್ತು . ಬೇಡನ ಬಲೆಯಲ್ಲಿ ಬಿದ್ದು ಮರಿ ಪಾರಿವಾಳಗಳ ಜೀವ ಹೋಗಬೇಕು ಎಂದು ಆ ವಿಧಿ ಬರೆದಿದ್ದರೆ ಯಾರು ತಾನೇ ತಪ್ಪಿಸಲು ಸಾಧ್ಯ ? ಎಂದು ತಾಯಿ ಪಾರಿವಾಳ ವಿವೇಕದಿಂದ ಯೋಚನೆ ಮಾಡಬೇಕಿತ್ತು.
ಇದೇ ರೀತಿ ಮರಿ ಪಾರಿವಾಳಗಳು ಮತ್ತು ಹೆಣ್ಣು ಪಾರಿವಾಳ ಬೇಡನ ಬಲೆಯಲ್ಲಿ ಬಿದ್ದಾಗ ಗಂಡು ಪಾರಿವಾಳ ಯೋಚನೆ ಮಾಡಿದ್ದರೆ ಪಾರಿವಾಳಗಳ ಕುಟುಂಬ ಸರ್ವನಾಶವಾಗುತ್ತಿರಲಿಲ್ಲ . ಜೀವನ ಎಂದ ಮೇಲೆ ಕಷ್ಟ ನಷ್ಟ ಸಮಸ್ಯೆಗಳು ಬರುತ್ತವೆ . ಸವಾಲುಗಳಿಗೆ ಹೆದರದೆ , ಭಾವುಕರಾಗಿ ಅನಾಹುತಗಳನ್ನು ಮಾಡಿಕೊಳ್ಳದೇ ವಿವೇಕದಿಂದ ಆಲೋಚಿಸಿ ಪರಿಹಾರ ಕಂಡುಕೊಳ್ಳಬೇಕು . ‘ಮೋಹ ‘ ಎಂಬುದು ಸರ್ವನಾಶಕ್ಕೆ ಕಾರಣ . ವ್ಯಾಮೋಹ ತೊರೆದು ತಾಳ್ಮೆಯಿಂದ ಯೋಚಿಸಿ ಕಾರ್ಯ ಸಾಧನೆ ಮಾಡಬೇಕು ಎಂಬುದೇ ಈ ಕಥನ ಕವನದ ಆಶಯವಾಗಿದೆ.

ಈ ) ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ
1.“ ಒಳಗೆ ಬಂದಿತು ಬಳಿಗೆ ಬಿಕ್ಕಿ ಬಿಕ್ಕಿ"
ಆಯ್ಕೆ : ಈ ವಾಕ್ಯವನ್ನು. ಸು . ರಂ . ಎಕ್ಕುಂಡಿ ಅವರ  ಸಮಗ್ರ ಕಥನ ಕವನಗಳು  ಎಂಬ ಕೃತಿಯಿಂದ ಆಯ್ದ  ಪಾರಿವಾಳ ಎಂಬ ಪದ್ಯಭಾಗದಿಂದ ಆರಿಸಲಾಗಿದೆ.

ಸಂದರ್ಭ : ಒಂದು ದಿನ ಈ ಪುಟ್ಟ ಪಾರಿವಾಳಗಳ ಕುಟುಂಬದ ಮೇಲೆ ಬೇಡನೊಬ್ಬನ ಕಣ್ಣು ಬೀಳುತ್ತದೆ. ಈ ಬೇಡನು ಬಂದು ಪಾರಿವಾಳಗಳ ಗೂಡಿಗೆ ಬಲೆಯನ್ನು ಹಾಕಿದಾಗ, ಆ ಬಲೆಯೊಳಗೆ ಮೊದಲು ಪುಟ್ಟ ಮರಿಗಳು ಹಾರಿ ಸಿಲುಕಿಕೊಂಡು ಹೊರಗೆ ಬರಲಾಗದೇ ಚೀತ್ಕರಿಸತೊಡಗಿದವು . ತಮ್ಮ ಮರಿಗಳು ಬಲೆಯಲ್ಲಿ ಬಿದ್ದು ಕಷ್ಟ ಪಡುವುದನ್ನು ನೋಡಿದ ತಾಯಿ ಪಾರಿವಾಳ ವಿವೇಚನೆಯಿಲ್ಲದೆ ಮರಿಗಳ ಮೇಲಿನ ಅತಿಯಾದ ವಾತ್ಸಲ್ಯದಿಂದ ತನ್ನ ಮರಿಗಳನ್ನು ರಕ್ಷಿಸಲು ತಾನು ಕೂಡ ಬಲೆಗೆ ಬೀಳುತ್ತದೆ . ಹೆಣ್ಣು ಪಾರಿವಾಳವನ್ನು ಬಿಟ್ಟಿರದಷ್ಟು ಹಚ್ಚಿಕೊಂಡಿದ್ದ ಗಂಡು ಪಾರಿವಾಳವು  ಕೂಡ ಬಲೆಯೊಳಗೆ ಹೋದ ಸಂದರ್ಭದಲ್ಲಿ ಕವಿ ಈ ಮಾತನ್ನು ಹೇಳಿದ್ದಾರೆ .

ಸ್ವಾರಸ್ಯ : ಜೋಡಿ ಪಾರಿವಾಳಗಳ ಕುರುಡು ವಾತ್ಸಲ್ಯವು ಇಲ್ಲಿ ಸ್ವಾರಸ್ಯಕರವಾಗಿ ಮೂಡಿಬಂದಿದೆ .

2.“ ಮೋಹ ಮುಸುಕಿದ ಬುದ್ಧಿ ಸರ್ವನಾಶದ ಸಿದ್ಧಿ "
ಆಯ್ಕೆ : ಈ ವಾಕ್ಯವನ್ನು. ಸು . ರಂ . ಎಕ್ಕುಂಡಿ ಅವರ  ಸಮಗ್ರ ಕಥನ ಕವನಗಳು  ಎಂಬ ಕೃತಿಯಿಂದ ಆಯ್ದ  ಪಾರಿವಾಳ  ಎಂಬ ಪದ್ಯಭಾಗದಿಂದ ಆರಿಸಲಾಗಿದೆ.

ಸಂದರ್ಭ : ಬೇಡನು ಹಾಕಿದ ಬಲೆಗೆ ಸಿಲುಕಿದ ಪುಟ್ಟ ಮರಿಗಳನ್ನು ನೋಡಿದ ಜೋಡಿ ಪಾರಿವಾಳಗಳು ತಮ್ಮ ಕುರುಡು ವಾತ್ಸಲ್ಯದ ಅವಿವೇಕದಿಂದ ತಾವೂ ಬಲೆಗೆ ಸಿಲುಕಿ ಬೇಡನ ಪಾಲಾದವು . ಮೋಹ ಎಂಬುದು ಸರ್ವನಾಶಕ್ಕೆ ಕಾರಣ ಎಂದು ಹೇಳುವ ಸಂದರ್ಭದಲ್ಲಿ ಕವಿ ಈ ಮಾತನ್ನು ಹೇಳಿದ್ದಾರೆ. 

ಸ್ವಾರಸ್ಯ: ವ್ಯಾಮೋಹ ತೊರೆದು ತಾಳ್ಮೆಯಿಂದ ಯೋಚಿಸಿ ಕಾರ್ಯಸಾಧನೆ ಮಾಡಬೇಕು . ಅತಿಯಾದ ವ್ಯಾಮೋಹ ಒಳ್ಳೆಯದಲ್ಲ ಎಂಬುದು ಇಲ್ಲಿನ ಸ್ವಾರಸ್ಯವಾಗಿದೆ .
ಸಿರಿಯನಿನ್ನೇನ  ಬಣ್ಣಿಪೆನು
ಕೃತಿಕಾರರ ಪರಿಚಯ
ಕವಿ : ರತ್ನಾಕರವರ್ಣಿ
ಕಾಲ : ( ಕ್ರಿಸ್ತ 1560 )
ಸ್ಥಳ : ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದರೆ.
ಕನ್ನಡ ಸಾಂಗತ್ಯ ಕವಿಗಳಲ್ಲಿ ಅಗ್ರಗಣ್ಯ , ಅಪ್ಪಟ ದೇಸೀ ಛಂದಸ್ಸಾದ ಸಾಂಗತ್ಯದಲ್ಲಿ ಬೃಹತ್ ಕಾವ್ಯವನ್ನು ರಚಿಸಿದ್ದಾನೆ. ತಾಳ ಪ್ರದೇಶದ ಭೈರರಸ ಒಡೆಯರ ಆಸ್ಥಾನದಲ್ಲಿ ಕೆಲವು ಕಾಲ ಇದ್ದು ಶೃಂಗಾರಕವಿ ಅಭಿದಾನಕ್ಕೆ ಪಾತ್ರರಾಗಿದ್ದನು . ಯೋಗಶಾಸ್ತ್ರ ಮತ್ತು ಕಾವ್ಯಶಾಸ್ತ್ರಗಳೆರಡರಲ್ಲೂ ಪರಿಣತರಾಗಿದ್ದನು . ಭರತೇಶವೈಭವ ಸಾಂಗತ್ಯ ಕಾವ್ಯವನ್ನು , ಅಪರಾಜಿತೇಶ್ವರ ಶತಕ , ತ್ರಿಲೋಕಶತಕ , ರತ್ನಾಕರಾಧೀಶ್ವರಶತಕ ಜೈನಧಾತ್ಮಿಕ ಕಾವ್ಯಗಳನ್ನು ರಚಿಸಿರುವನು . ಸುಮಾರು ಎರಡುಸಾವಿರ ಸಾಂಪ್ರದಾಯಿಕ ಹಾಡುಗಳನ್ನು ರಚಿಸಿದ್ದು , ಅವು ಆಧ್ಯಾತ್ಮ ಗೀತಗಳೆಂದು ಪ್ರಸಿದ್ಧವಾಗಿವೆ .

ಅ ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ .
1. ಭರತೇಶವೈಭವ ಕಾವ್ಯದ ಕರ್ತೃ ಯಾರು ?
ಭರತೇಶವೈಭವ ಕಾವ್ಯದ ಕರ್ತೃ ರತ್ನಾಕರವರ್ಣಿ.

2. ಭರತನನ್ನು ಹೊಗಳುತ್ತಿದ್ದ ಮೂರು ಲೋಕಗಳು ಯಾವುವು ?
ಭರತನನ್ನು ಹೊಗಳುತ್ತಿದ್ದ ಮೂರು ಲೋಕಗಳು ಸ್ವರ್ಗಲೋಕ, ಮೃತ್ಯುಲೋಕ ಮತ್ತು ಪಾತಾಳ ಲೋಕಗಳು.

3. ಭರತ ಚಕ್ರವರ್ತಿ ಓಲಗಕ್ಕೆ ಹೇಗೆ ಬರುತ್ತಾನೆ ?
ಭರತ ಚಕ್ರವರ್ತಿಯು ಸೂರ್ಯೋದಯ ಸಮಯದಲ್ಲಿ ಎದ್ದು ದೇವತಾರ್ಚನೆಯನ್ನು ಮಾಡಿ ಓಲಗಕ್ಕೆ ಬರುತ್ತಾನೆ .

4. ಆಸ್ಥಾನ ಭವನದೊಳಗೆ ರಾಜನು ಹೇಗೆ ಶೋಭಿಸುವನು ?
ಆಸ್ಥಾನ ಭವನದೊಳಗೆ ರಾಜನು ದೇವೇಂದ್ರನಂತೆ ಶೋಭಿಸುತ್ತಿದ್ದನು .

5. ತುಂಬಿದ ಸಭೆಯು ಮೈಮರೆತು ಕಾತುರರಾಗಿದ್ದುದಕ್ಕೆ ಕಾರಣವೇನು ?
ಭರತ ಚಕ್ರವರ್ತಿಯನ್ನು ನೋಡಲು ತುಂಬಿದ ಸಭೆಯು ಮೈಮರೆತು ಕಾತುರವಾಗಿತ್ತು .

ಆ ) ಕೊಟ್ಟಿರುವ ಪ್ರಶ್ನೆಗಳಿಗೆ ಮೂರು – ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ .
1. ಧ್ಯಾನ ಬೇಸರಾದಾಗ ಏನು ಮಾಡುತ್ತೇನೆಂದು ಕವಿ ಹೇಳುತ್ತಾನೆ ?
ಕವಿ ರತ್ನಾಕರವರ್ಣಿಯ  ಗುರುವೇ ಧ್ಯಾನಮಾಡುವುದಕ್ಕೆ ಬೇಸರವಾದಾಗ ಕನ್ನಡದಲ್ಲಿ ಒಂದು ಕಥೆಯನ್ನು ಹೇಳುತ್ತೇನೆ. ಆ ಕತೆಯ ನಾಯಕ ನೀವೇ, ಅದಕ್ಕೆ ಅಪ್ಪಣೆ ನೀಡಬೇಕು , ಆಶೀರ್ವಾದಿಸಬೇಕು . ಎಂದು ಹೇಳಿದ್ದಾರೆ .

2. ಬೇರೆಬೇರೆ ಭಾಷಿಕರು ತನ್ನ ಕೃತಿಯನ್ನು ಹೇಗೆ ಹೊಗಳಬೇಕೆಂದು ಕವಿ ಬಯಸುವನು ?
ಭರತನ ಅಪ್ಪಣೆಯನ್ನು ಕೇಳಿ ಕನ್ನಡದಲ್ಲಿ ಕಥೆಯನ್ನು ಹೇಳಲು ಕವಿ ರತ್ನಾಕರವರ್ಣಿಯವರು ಪ್ರಾರಂಭಿಸುತ್ತಾರೆ. ನಾನು ಹೇಳುವ ಕಥೆಯನ್ನು ಎಲ್ಲರೂ ಮೈಯುಬ್ಬಿ ಕೇಳಬೇಕು . ಕನ್ನಡಿಗರು ತುಂಬಾ ಚೆನ್ನಾಗಿದೆ  ಎಂದು ಹೊಗಳಬೇಕು, ತೆಲುಗರು  ಮಂಚಿದೆ  ಎಂದು ಹೊಗಳಬೇಕು , ತುಳು ಮಾತನಾಡುವವರು  ಎಂಚಪೊರ್ಲಾಂಡೆ  ಎಂದು ಹೊಗಳಬೇಕು. ಬೇರೆಬೇರೆ ಭಾಷಿಕರು ತನ್ನ ಕೃತಿಯನ್ನು ಈ ರೀತಿ ಹೊಗಳಬೇಕೆಂದು ಕವಿ ರತ್ನಾಕರವರ್ಣಿಯವರು  ಬಯಸುತ್ತಾರೆ .

3. ಭರತ ಚಕ್ರವರ್ತಿ ಓಲಗಮಂಟಪವನ್ನೇರಿದ ಸಂದರ್ಭವನ್ನು ಬಣ್ಣಿಸಿ .
ಭರತನು ಇಡೀ ಭೂಮಂಡಲವನ್ನೇ ಗೆದ್ದ ಪ್ರಥಮ ಚಕ್ರವರ್ತಿ ಎಂದು ಪ್ರಸಿದ್ಧಿಯಾಗುತ್ತಾನೆ .  ಇಂತಹ ಭರತ ಚಕ್ರವರ್ತಿ ಪ್ರತಿದಿನ ಸೂರ್ಯೋದಯಕ್ಕೆ ಮೊದಲು ಎದ್ದು ಸ್ನಾನ ಮಾಡಿ , ದೇವರ ಪೂಜೆಮಾಡಿ , ರಾಜಸಭೆಗೆ ನಡೆದ ಬರುವ ದೃಶ್ಯ ವೈಭವದಿಂದ ಕೂಡಿದೆ . ನವರತ್ನಗಳಿಂದ ಹಾಗೂ ಬಂಗಾರದಿಂದ ನಿರ್ಮಾಣವಾಗಿದ್ದ ಅಸ್ಥಾನ ಭವನದಲ್ಲಿ ಭರತ ಚಕ್ರವರ್ತಿ ಸ್ವರ್ಗ ಲೋಕದ ದೇವೇಂದ್ರನಂತೆ ಕಂಗೊಳಿಸುತ್ತಿದ್ದನು .ಇವನು ವೈಭವದಿಂದ ರಾಜ್ಯಭಾರ ಮಾಡುತ್ತಿದ್ದನು .

ಇ ) ಕೊಟ್ಟಿರುವ ಪ್ರಶ್ನೆಗೆ ಏಳು – ಎಂಟು ವಾಕ್ಯಗಳಲ್ಲಿ ಉತ್ತರಿಸಿ .
1) ಭರತ ಚಕ್ರವರ್ತಿಯ ರಾಜದರ್ಬಾರಿನ ವೈಭವವನ್ನು ವಿವರಿಸಿ.
ಭರತ ಚಕ್ರವರ್ತಿಯು ಸೂರ್ಯೋದಯದ ಸಮಯದಲ್ಲಿ ಎದ್ದು ದೇವರ ಪೂಜೆಯನ್ನು ಮಾಡಿ. ಆಸ್ಥಾನಕ್ಕೆ ಬಂದು ನಡೆಸಿದ ಒಡೋಲಗ ಬಹಳ ವೈಭವಯುತವಾಗಿತ್ತು. ಭರತಚಕ್ರವರ್ತಿಯ ಆಸ್ಥಾನ ಭವನವು ನವರತ್ನ ಹಾಗೂ ಚಿನ್ನದಿಂದ ನಿರ್ಮಿತವಾಗಿತ್ತು. ಸ್ವರ್ಗ ಲೋಕದಲ್ಲಿ ದೇವೇಂದ್ರನು ರತ್ನಪುಷ್ಪಕ ಸಿಂಹಾಸನದಲ್ಲಿ ಶೋಭಿಸುವಂತೆ ಆಸ್ಥಾನದಲ್ಲಿ ಕಾಂತಿಯಿಂದ ಶೋಭಿಸಿದನು. 'ಆಗಸದಲ್ಲಿ ತೇಲುವ ಬಿಳಿ ಮೋಡಗಳ ಹಿಂದೆ ಆಗಾಗ ತೋರಿ ಮರೆಯಾಗುವ ಚಂದ್ರನೋ ಸುರ್ಯನೋ ಎಂಬಂತೆ' ವಿಧವಿಧವಾಗಿ ಪ್ರಕಾಶಿಸುತ್ತಿರುವ ಉದ್ದವಾದ ಚಾಮರಗಳ ಸಾಲಿನ ಹಿಂದೆ ಅವನು ಸಭಿಕರಿಗೆ ಕಾಣುತ್ತಿದ್ದನು. ಆಸ್ಥಾನದಲ್ಲಿ ನೆರೆದಿದ್ದ ಸಭಿಕರೆಲ್ಲ 'ತಾವರೆಯು ಸೂರ್ಯನನ್ನು ನೋಡುವಂತೆ. ನೀಲಿ ತಾವರೆ(ನೈದಿಲೆ)ಯು ಚಂದ್ರನನ್ನು ನೋಡುವಂತೆ ಅವನನ್ನು ನೋಡಲು ಕಾತುರದಿಂದ ಮೈಮರೆತು ಕಾಯುತ್ತಿದ್ದರು.

ಈ) ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ.
1. "ಕನ್ನಡದೊಳಗೊಂದು ಕಥೆಯ ಪೇಳುವೆನು"
ಆಯ್ಕೆ: ಈ ವಾಕ್ಯವನ್ನು ರತ್ನಾಕರವರ್ಣಿಯ ಭರತೇಶ ವೈಭವ ಕೃತಿಯಿಂದ ತೆಗೆದುಕೊಳ್ಳಲಾಗಿರುವ ಸಿರಿಯನಿನ್ನೇನ ಬಣ್ಣಿಪೆನು ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.

ಸಂದರ್ಭ: ಕವಿ ರತ್ನಾಕರವರ್ಣಿಯು ತಾನು ಕಾವ್ಯ ಬರೆಯಲು ಕಾರಣ ಮತ್ತು ಪ್ರೇರಕವಾದ ಅಂಶಗಳನ್ನು ತಿಳಿಸುವ ಸಂದರ್ಭದಲ್ಲಿ ಈ ಮಾತನ್ನು ಹೇಳಿದ್ದಾನೆ. ತನಗೆ ಧ್ಯಾನಮಾಡುವುದು ಬೇಸರವಾದಾಗ ತನ್ನ ಧರ್ಮ ದೇವತೆಯನ್ನು ಮೊದಲಾಗಿಟ್ಟುಕೊಂಡು ಕನ್ನಡದಲ್ಲಿ ಕಥೆ ಬರೆಯುವುದಾಗಿ ಹೇಳಿದ್ದಾನೆ.

ಸ್ವಾರಸ್ಯ: ಕವಿ ರತ್ನಾಕರವರ್ಣಿ ಅವರಿಗೆ ಇರುವ  ಕನ್ನಡ ಪ್ರೇಮ, ಕನ್ನಡಾಭಿಮಾನ, ಆಶ್ರಯಕೊಟ್ಟ ರಾಜನ ಮೇಲಿರುವ ಗೌರವ ಭಾವನೆಯು ಇಲ್ಲಿ ಸ್ವಾರಸ್ಯಕರವಾಗಿದೆ.

2. “ ಶ್ರೀ ವಿಲಾಸವನೇನನೆಂಬೆ ? ”
ಆಯ್ಕೆ: ಈ ವಾಕ್ಯವನ್ನು ರತ್ನಾಕರವರ್ಣಿಯ ಭರತೇಶ ವೈಭವ ಕೃತಿಯಿಂದ ತೆಗೆದುಕೊಳ್ಳಲಾಗಿರುವ ಸಿರಿಯನಿನ್ನೇನ ಬಣ್ಣಿಪೆನು ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.

ಸಂದರ್ಭ : ಭರತ ಚಕ್ರವರ್ತಿಯು ಆಸ್ಥಾನಕ್ಕೆ ಆಗಮಿಸುತ್ತಿದ್ದ ವೈಭವದ ಬಗ್ಗೆ ವರ್ಣಿಸುವ ಸಂದರ್ಭದಲ್ಲಿ ಕವಿ ರತ್ನಾಕರವರ್ಣಿಯು ಈ ಮಾತನ್ನು ಹೇಳಿದ್ದಾರೆ . ಭರತ ಚಕ್ರವರ್ತಿಯು ಒಂದು ದಿನ ಸೂರ್ಯೋದಯದಲ್ಲಿ ಎದ್ದು ದೇವರ ಪೂಜೆಯನ್ನು ಮಾಡಿ, ಆಸ್ಥಾನಕ್ಕೆ ಬಂದು ಒಡೋಲಗ ನಡೆಸಿದ ಆ ಒಂದು ವೈಭವವನ್ನು ಏನೆಂದು ವರ್ಣಿಸಲಿ ಎಂದು ಕವಿ ಹೇಳುತ್ತಾನೆ.

ಸ್ವಾರಸ್ಯ : ಭರತ ಚಕ್ರವರ್ತಿಯು ವೈಭವದಿಂದ ರಾಜ್ಯಭಾರ ಮಾಡುತ್ತಿರುವುದು ಸ್ವಾರಸ್ಯ ಪೂರ್ಣವಾಗಿ  ಮೂಡಿಬಂದಿದೆ.
3. “ ಚಂದಿರನೋ ಭಾಸ್ಕರನೊಯೆಂಬಂತೆ ”
ಆಯ್ಕೆ: ಈ ವಾಕ್ಯವನ್ನು ರತ್ನಾಕರವರ್ಣಿಯ ಭರತೇಶ ವೈಭವ ಕೃತಿಯಿಂದ ತೆಗೆದುಕೊಳ್ಳಲಾಗಿರುವ ಸಿರಿಯನಿನ್ನೇನ ಬಣ್ಣಿಪೆನು ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.

ಸಂದರ್ಭ: ಭರತ ಚಕ್ರವರ್ತಿಯು ಆಸ್ಥಾನದಲ್ಲಿ ಕಾಂತಿಯಿಂದ ಕಂಗೊಳಿಸುತ್ತಿದ್ದ ದೃಶ್ಯವನ್ನು ವರ್ಣಿಸುವ ಸಂದರ್ಭದಲ್ಲಿ ಕವಿ ಮಾತನ್ನು ಹೇಳಿದ್ದಾನೆ. ಚಾಮರಗಳ ಸಾಲಿನ ಹಿಂದೆ ಸಿಂಹಾಸನದಲ್ಲಿ ಕುಳಿತಿದ್ದ ಭರತ ಚಕ್ರವರ್ತಿಯು 'ಆಗಸದಲ್ಲಿ ತೇಲುವ ಬಿಳಿ ಮೋಡಗಳ ಹಿಂದೆ ಆಗಾಗ ತೋರಿ ಮರೆಯಾಗುವ ಚಂದ್ರನೋ ಸೂರ್ಯನೋ" ಎಂಬಂತೆ ಕಂಗೊಳಿಸಿದನು.

ಸ್ವಾರಸ್ಯ : ಬಿಳಿ ಬಣ್ಣದ ಚಾಮರಗಳನ್ನು ಮೋಡವಾಗಿಯೂ ಭರತೇಶನನ್ನು ಸೂರ್ಯ-ಚಂದ್ರರಾಗಿಯೂ ಕಲ್ಪಿಸಿರುವುದು ಸ್ವಾರಸ್ಯಪೂರ್ಣವಾಗಿದೆ.

ಉ ) ಮೊದಲೆರಡು ಪದಗಳಿಗಿರುವ ಸಂಬಂಧದಂತೆ ಮೂರನೆಯ ಪದಕ್ಕೆ ಸಂಬಂಧಿಸಿದ ಪದ ಬರೆಯಿರಿ .
1. ಬಿನ್ನಹ : ಅರಿಕೆ :: ವಿಭು : ರಾಜ
2 . ಹೊಗಳು : ತೆಗಳು :: ಕಾರ್ಮುಗಿಲ್ : ಬೆಳ್ಳಗಿಲ್
3. ಭರತ : ಅಯೋಧ್ಯೆ :: ಬಾಹುಬಲಿ : ಪೌದನಪುರ
4. ನೀಲಾಂಬುಜ : ನೀಲ + ಅಂಬುಜ :: ಚಕ್ರೇಶ್ವರ :  ಚಕ್ರ + ಈಶ್ವರ
ಬಲಿಯನಿತ್ತೊಡೆ ಮುನಿವೆಂ
ಕೃತಿಕಾರರ ಪರಿಚಯ
ಜನ್ನ ಹಳೇಬೀಡು ಪ್ರಾಂತದ ಕವಿ ( ಸಾ.ಶ.1225 ) ಹೊಯ್ಸಳರ ಬಲ್ಲಾಳನಿಂದ ಕವಿಚಕ್ರವರ್ತಿ ಅಭಿಧಾನವನ್ನು ಪಡೆದ ಈತ ಯಶೋಧರ ಚರಿತೆ , ಅನಂತನಾಥಪುರಾಣ ಮತ್ತು ಅನುಭವ ಮುಕುರ ಕಾವ್ಯಗಳ ಕರ್ತೃ . ನರಸಿಂಹ ಬಲ್ಲಾಳನ ಆಸ್ಥಾನದಲ್ಲಿ ದಂಡಾಧಿಪತಿಯೂ ಮಂತ್ರಿಯೂ ಆಗಿದ್ದನು . ಜೈನ ಧಾರ್ಮಿಕ ಕಾವ್ಯಗಳನ್ನು ರಚಿಸಿದ ಜನ್ನ ಅಹಿಂಸಾ ತತ್ವವನ್ನು ಕಾವ್ಯಗಳಲ್ಲಿ ಸಂದೇಶ ರೂಪದಲ್ಲಿ ನೀಡಿದ ಕವಿ .

ಅಹಿಂಸೆ – ಹಿಂಸೆಯ ಮೇಲೆ , ಧರ್ಮ – ಅಧರ್ಮದ ಮೇಲೆ , ನ್ಯಾಯ – ಅನ್ಯಾಯದ ಮೇಲೆ , ನೀತಿ ಅನೀತಿಯ ಮೇಲೆ ಜಯವನ್ನು ಸಾಧಿಸಬೇಕೆಂಬುದು ಲೋಕದ ಆಶಯ . ಈ ಆಶಯಕ್ಕನುಸಾರ ಕಾಮ , ಕ್ರೋಧ , ಲೋಭ , ಮೋಹ , ಮದ , ಮಾತ್ಸರಗಳ ಬಗೆಗೆ ಸದಾ ಎಚ್ಚರದಿಂದ ಇರಬೇಕು . ಸ್ವಲ್ಪ ಮೈ ಮರೆತರೂ ಅಮೃತಮತಿಯಂತೆ ನಾಯಕ ನರಕವನ್ನು ಅನುಭವಿಸಬೇಕಾದೀತು . ಇಲ್ಲದಿದ್ದರೆ ……. ಮನಸಿಜನ ಮಾಯೆ ವಿಧಿವಿಲಸನದ ನೆರಂಬಡೆಯೆ ಕೊಂದು ಕೂಗದೆ ನರರಂ ಎಂದು ನಿಟ್ಟುಸುರು ಬಿಡುವಂತಾಗುವುದು .

ಪ್ರಸ್ತುತ ಬಲಿಯನಿತ್ತೊಡೆ ಮುನಿವೆಂ ನಿಗದಿತ ಪದ್ಯ ಭಾಗವನ್ನು ಕನ್ನಡ ಸಾಹಿತ್ಯ ಪರಿಷತ್ತು ಹೊರತಂದಿರುವ ತೆಕ್ಕುಂಜೆ ಗೋಪಾಲ ಕೃಷ್ಣಭಟ್ಟ ಅವರ ಸಂಪಾದನಾ ಗ್ರಂಥ ಜನ್ನ ಕವಿ ವಿರಚಿತ ಯಶೋಧರಚರಿತೆ ಕಾವ್ಯದಿಂದ ಆಯ್ಕೆ ಮಾಡಿಕೊಂಡು ಸಂಯೋಜಿಸಿ ನಿಗದಿಪಡಿಸಿದೆ .

ಬಲಿಯನಿತ್ತೊಡೆ ಮುನಿವೆಂ ಪದ್ಯದ ಸಾರಾಂಶ
 || ೧ || ಅಭಯರುಚಿಯು ಮಾರಿದತ್ತನನ್ನು ಕುರಿತು “ನಾನು ಅಭಯರುಚಿ ಕುಮಾರ, ಇವಳೇ ನನ್ನ ನೆಚ್ಚಿನ ಸಹೋದರಿ ಅಭಯಮತಿ. ನಾನಾ ರೀತಿಯ ಕರ್ಮಗಳಿಂದ ನೀನು ಇನ್ನೇನನ್ನು ಕೇಳುವೆ ಮಾರಿದತ್ತ ಮಹಾರಾಜ?” ಎಂದನು.

 || ೨ || ಅಭಯರುಚಿಯು ಮುಂದುವರಿದು ಮಾತನಾಡುತ್ತಾ “ನಮ್ಮ ಗುರುಗಳು ಭಿಕ್ಷೆ ಮಾಡಿಕೊಂಡು ಬರಲು ಅಪ್ಪಣೆ ಮಾಡಿದ್ದರು. ಆದ್ದರಿಂದ ನಾವಿಬ್ಬರೂ ಭಿಕ್ಷೆಗೆ ಬರುತ್ತಿರುವಾಗ ನಿಮ್ಮಕಡೆಯವರು ನಮ್ಮನ್ನು ಹಿಡಿದು ತಂದರು. ನಮ್ಮನ್ನು ಹಿಡಿದು ತಂದ ಕಾರಣಕ್ಕಾಗಿ ನಮಗೆ ಸ್ವಲ್ಪವೂ ಭಯವಿಲ್ಲ. ಆದರೆ ನಿನಗೆ ಮುಂದೆ ಉಂಟಾಗಬಹುದಾದ ಕೇಡನ್ನು ಆಲೋಚಿಸಿ ನಿನ್ನ ಮೇಲಿನ ಕರುಣೆಯಿಂದ ನಾನು ತಳಮಳಗೊಂಡಿದ್ದೇನೆ.” ಎಂದು ಅಭಯರುಚಿ ಹೇಳಿದನು .

 || ೩ || ಅಭಯರುಚಿಯು ಮುಂದುವರಿದು ಮಾತನಾಡುತ್ತಾ ಕೇವಲ ಸಂಕಲ್ಪ ಹಿಂಸೆಯೊಂದನ್ನು ಮಾಡಿದ್ದರಿಂದಾಗಿ ನಾವು ಹಲವು ಜನ್ಮಾಂತರಗಳನ್ನೆತ್ತಿ ದುಃಖವನ್ನನುಭವಿಸಿದೆವು. ನೀನು ಇಷ್ಟೊಂದು ಜೀವಿಗಳನ್ನು ಕೊಂದಿರುವೆ. ಇದಕ್ಕೆ ಶಿಕ್ಷೆಯನ್ನು ನೀನು ನರಕದಲ್ಲಿ ಪಡೆಯುವುದರಲ್ಲಿ ಯಾವ ಅನುಮಾನವೂ ಇಲ್ಲ.

 || ೪ || ಎಂದು ಹೇಳಿದ ಮಾತು ಅಲ್ಲಿ ನೆರೆದಿದ್ದ ಜೀವಸಮೂಹಕ್ಕೆ ಅಭಯವೆಂಬ ಡಂಗುರ ಬಾರಿಸಿದಂತೆ ಆದಾಗ, ಮಾರಿದತ್ತ ಮಹಾರಾಜನು ಅದನ್ನು ಕೇಳಿ ಬಹಳ ವಿಸ್ಮಯಭರಿತನಾಗಿ, ಉದ್ವೇಗಗೊಂಡನು.

 || ೫ || ಆಗ ಚಂಡಮಾರಿ ದೇವತೆಯು ಪ್ರತ್ಯಕ್ಷವಾಗಿ ಮಾರಿದತ್ತ ರಾಜನನ್ನು ಕುರಿತು “ಚಿಕ್ಕ ಮಕ್ಕಳನ್ನು ಹಿಡಿದು ತಂದಿರುವ ನೀನು ಆಚಾರ್ಯನೆ? ಎಂದಳು ಅಲ್ಲದೆ ಜಾತ್ರೆಯಲ್ಲಿ ನೆರೆದಿದ್ದವರೆಲ್ಲಾ ಕೇಳುವಂತೆ ಹೀಗೆ ಸೂಚಿದಳು...

 || ೬ || ಚಂಡಮಾರಿಯು ಅಲ್ಲಿ ನೆರೆದಿದ್ದವರೆಲ್ಲಾ ಕೇಳುವಂತೆ “ಪ್ರಜೆಗಳೆಲ್ಲಾ ಜಲ, ಗಂಧ, ಧೂಪ, ಧೀಪ, ಹವಿಸ್ಸು, ತಾಂಬೂಲಗಳಿಂದ ಪೂಜಿಸುವುದು. ಅದನ್ನು ಬಿಟ್ಟು ಜೀವಿಗಳನ್ನು ಬಲಿಕೊಟ್ಟರೆ ನಾನು ಮುನಿಯುತ್ತೇನೆ” ಎಂದಳು.

 || ೭ || ಎಂದು ಹೇಳಿ ಮಾರಿಯು ಮಾಯವಾದಳು. ಆಗ ಮಾರಿದತ್ತ ರಾಜನು ಅಲ್ಲಿ ಬಲಿಗಾಗಿ ತಂದಿರಿಸಿದ್ದ ಎಲ್ಲಾ ಜೀವರಾಶಿಗಳನ್ನು ಬಿಡಿಸಿ ಪ್ರಜೆಗಳ ಮಕ್ಕಳನ್ನು ತನ್ನ ಸಹೋದರಿಯ ಮಕ್ಕಳನ್ನು ಮುದ್ದಾಡಿದನು.

 || ೮ || ಮಾರಿದತ್ತ ಮಹಾರಾಜನು ದುಃಖಿತನಾಗಿ ಧಾರಾಕಾರವಾಗಿ ಸುರಿಯುತ್ತಿದ್ದ ಕಣ್ಣೀರಿನಿಂದ ’ಅಶುಭಕ್ಕೆ ಮಂಗಲ ಸ್ನಾನವನ್ನು ಮಾಡಿಸಿದಂತೆ’ ತನ್ನ ಸೋದರಿಯ ಮಕ್ಕಳಾದ ಅಭಯರುಚಿ-ಅಭಯಮತಿಯನ್ನು ತನ್ನ ಒಡಲೊಳಗೆ ಅಪ್ಪಿಕೊಂಡು ಬೆಚ್ಚನೆಯ ಕಣ್ಣೀರನ್ನು ಸುರಿಸುತ್ತಾ ದುಃಖಿಸಿದನು.

 || ೯ || ಮಾರಿದತ್ತ ರಾಜನು – ತಾನು ಅದುವರೆಗೂ ಮಾಡಿದ್ದ ಹೀನ ಕೃತ್ಯಗಳಿಗೆ ನಾಚಿ ತನ್ನ ಮಗನಾದ ಕುಸುಮದತ್ತನಿಗೆ ರಾಜ್ಯಪದವಿಯನ್ನು ಕೊಟ್ಟು ಆನಂತರ ಸನ್ಯಾಸ ಧೀಕ್ಷೆಯನ್ನು ಪಡೆದನು.

 || ೧೦ || ಕೆಲವು ಕಾಲದವರೆಗೆ ಉಗ್ರವಾದ ತಪಸ್ಸನ್ನು ಆಚರಿಸಿ ಸಮಾಧಿ ಸ್ಥಿತಿಗೇರಿ ಪ್ರಾಣವನ್ನು ತ್ಯಜಿಸಿ ಮೂರನೆಯ ಸ್ವರ್ಗದಲ್ಲಿ ನೆಲೆಗೊಂಡು ಕಲಿಯನ್ನೇ ಮೂದಲಿಸುವಂತೆ ದೇವರೇ ಆದನು.

ಅ. ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.
1. ಅಭಯರುಚಿಯ ಸಹೋದರಿಯ ಹೆಸರೇನು?
ಅಭಯರುಚಿಯ ಸಹೋದರಿಯ ಹೆಸರು ಅಭಯಮತಿ.
2. ಅಭಯರುಚಿ ಮತ್ತು ಅಭಯಮತಿಯರನ್ನು ಸೆರೆಹಿಡಿದುದು ಯಾವಾಗ?
ಅಭಯರುಚಿ ಮತ್ತು ಅಭಯಮತಿಯರನ್ನು ಸೆರೆಹಿಡಿದಿದ್ದು ಅವರು ಚರಿಗೆಗೆ (ಭಿಕ್ಷೆಟಾನೆಗೆ) ಬಂದಾಗ ಸೆರೆಹಿಡಿದರು.

3. ಕುಸುಮದತ್ತನ ತಂದೆಯ ಹೆಸರೇನು?
ಕುಸುಮದತ್ತನ ತಂದೆಯ ಹೆಸರು ಮಾರಿದತ್ತ.

4. ಮಾರಿದತ್ತ ಪಟ್ಟವನ್ನು ಯಾರಿಗೆ ಕಟ್ಟಿದನು?
ಮಾರಿದತ್ತ ಪಟ್ಟವನ್ನು ಕುಸುಮದತ್ತನಿಗೆ ಕಟ್ಟಿದನು.
ಆ. ಕೊಟ್ಟಿರುವ ಪ್ರಶ್ನೆಗಳಿಗೆ ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ.
1. ಅಭಯರುಚಿ ತಲ್ಲಣಗೊಳ್ಳಲು ಕಾರಣವೇನು?
ಗುರು ಸುದತ್ತಾಚಾರ್ಯರ ಆಜ್ಞೆಯ ಮೇರೆಗೆ ಭಿಕ್ಷೆಗೆ ಹೊರಟ್ಟಿದ್ದ ಎಳೆ ವಯಸ್ಸಿನ ಸಹೋದರ -ಸಹೋದರಿಯರಾದ ಅಭಯರುಚಿ ಮತ್ತು ಅಭಯಮತಿ  ಅವರನ್ನು ನರಬಲಿ ಕೊಡಲು ಹಿಡಿದು ತರಲಾಯಿತು. ಆಗ ನಿರ್ಭಿತನಾದ ಅಭಯರುಚಿ ರಾಜಪುರವೆಂಬ ಪಟ್ಟಣದ ಅರಸ ಮಾರಿದತ್ತನಿಗೆ ಒದಗಿ ಬರಬಹುದಾದ ಕೇಡನ್ನು ನೆನೆದು ಕರುಣೆಯಿಂದ ತಲ್ಲಣಗೊಂಡನು.

2. ಮಾರಿದತ್ತನು ಏಕೆ ಉದ್ವಿಗ್ನನಾದನು?
ಅಭಯರುಚಿಯು ಮಾರಿಮನೆಯ ದೃಶ್ಯವನ್ನು ಕಂಡು ಸ್ವಲ್ಪವೂ ಭಯಗೊಳ್ಳದೆ  ಮಾರಿದತ್ತನನ್ನು ಕುರಿತು ” ಇಷ್ಟೊಂದು ಜೀವಿಗಳ ಕೊಂದಿರುವೆ ನರಕದೊಳಗೆ ಇದಕ್ಕೆ ನಿವಾರಣೆ ದೊರೆಯುವುದು” ಎಂದು ಅಲ್ಲಿ ನೆರೆದ ಜನತೆಯ ಮುಂದೆ ಸಾರಿ ಹೇಳಿದನು. ಈ ಮಾತನ್ನು ಕೇಳಿದ ಮಾರಿದತ್ತನು ಉದ್ವಿಗ್ನನಾದನು.

3. ಚಂಡಮಾರಿ ಜನರನ್ನು ಕುರಿತು ಹೇಳಿದ್ದು ಏನು?
ಚಂಡಮಾರಿ (ದೇವತೆ) ಯೂ ಜಾತ್ರೆಗೆ ಬಂದು ಸೇರಿದ್ದ ಜನತೆಯನ್ನು ಕುರಿತು, ನನ್ನ ಪೂಜೆಯನ್ನು ಜಲ, ಗಂಧ, ಹೂಮಾಲೆ, ಅಕ್ಕಿ, ಧೂಪ, ದೀಪ, ಹವಿಸ್ಸು ಮತ್ತು ತಾಂಬೂಲ ಸಮೂಹಗಳಿಂದ ಪೂಜಿಸಲು ತಿಳಿಸುತ್ತಾ ಜೀವಜಾತದಿಂದ ಬಲಿಯನ್ನು ಕೊಟ್ಟರೆ ತಾನು ಕೋಪಿಸಿಕೊಳ್ಳುವುದಾಗಿ ಹೇಳಿತು.

4. ಜೀವಿಗಳನ್ನು ಬಲಿ ಕೊಡುವುದರಿಂದ ಆಗುವ ಪರಿಣಾಮವೇನು?
ಜೀವಿಗಳನ್ನು ಬಲಿ ಕೊಡುವುದರಿಂದ ಆಗುವ ಪರಿಣಾಮ -  ಜೀವಿಗಳನ್ನು ಬಲಿಕೊಡುವುದು ಇರಲಿ, ಜೀವಿಗಳನ್ನು ಬಲಿ ಕೊಡುವುದಾಗಿ ಸಂಕಲ್ಪಿಸುವುದೂ ಕೂಡ ಘೋರಪಾಪ. ಹೀಗಿರುವಾಗ ಜೀವಿಗಳನ್ನು ಬಲಿಕೊಡುವ ಘೋರಪಾಪ ಜನ್ಮ ಜನ್ಮಾಂತರವೂ ಕಾಡುತ್ತದೆ. ಹಿಂಸೆ ಮಾನವನ್ನು ರಾಕ್ಷಸನನ್ನಾಗಿ ಮಾಡುತ್ತದೆ, ಈ ಘೋರಪಾಪದ ಪರಿಹಾರವನ್ನು ನರಕದಲೇ ಅನುಭವಿಸಬೇಕಾಗುತ್ತದೆ.

ಇ. ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು/ಹತ್ತು ವಾಕ್ಯಗಳಲ್ಲಿ ಉತ್ತರಿಸಿ.
1. ಅಭಯರುಚಿ ಮಾರಿದತ್ತನನ್ನು ಭೇಟಿಯಾದ ಸಂದರ್ಭವನ್ನು ವಿವರಿಸಿ.
ಮಾರಿದತ್ತ, ತರಾಳ ಚಂಡಕರ್ಮನಿಗೆ ಚಂಡಮಾರಿ ದೇವಿಗೆ ನರಬಲಿ ಕೊಡುವುದಕ್ಕಾಗಿ ಮಾನವರನ್ನು ಹಿಡಿದು ತರುವಂತೆ  ಆಜ್ಞಾಪಿಸಿದ. ಅವನು ಸುದತ್ತಾಚಾರ್ಯ ಮುನಿಗಳೊಡನೆ ಆ ರಾಜಪುರಕ್ಕೆ ಬಂದು ಭಿಕ್ಷೆಗೆ ಹೊರಟಿದ್ದ ಎಳೆಯ ವಯಸ್ಸಿನ ಸಹೋದರ ಸಹೋದರಿಯರಾದ ಅಭಯರುಚಿ ಮತ್ತು ಅಭಯಮತಿಯರನ್ನು ಹಿಡಿದು ತಂದು ಮಾರಿದತ್ತನಿಗೆ ಒಪ್ಪಿಸುವನು. ಮಾರಿಯ ಮನೆಯ ಭಯಂಕರ ದೃಶ್ಯದಿಂದ ಆ ಮಕ್ಕಳು ಸ್ವಲ್ಪವೂ ವಿಚಲಿತರಾಗಲಿಲ್ಲ. ಆ ಭಯಾನಕ ವಾತಾವರಣದಲ್ಲಿ ಅತ್ಯಂತ ಕ್ರೂರನಾದ ಮಾರಿದತ್ತನನ್ನು ನೋಡಿದ ಅಭಯರುಚಿ ಕುಮಾರನು ತಾನು ಅಭಯರುಚಿ, ಈಕೆ ನನ್ನ ಸಹೋದರಿ ಅಭಯಮತಿ ಎಂದು ನಿರ್ಭಿತನಾಗಿ ನುಡಿದನು. ಹಾಗು  ನೀವು ನಮಗೆ ಕೊಡುವ ಬಲಿಯ ಹಿಂಸೆಯ ಬಗೆಗೆ ಸ್ವಲ್ಪವೂ ಭಯವಿಲ್ಲ. ಆದರೆ ನಿಮಗೆ ತಟ್ಟಬಹುದಾದ ಜೀವಿತಾವಧಿಯ ನರಕದ ಬಗ್ಗೆ ಆಲೋಚಿಸಿದಾಗ ಮನಸ್ಸು ಕರುಣೆಯಿಂದ ತಲ್ಲಣಗೊಳ್ಳುತ್ತದೆ. ಎಂದು ನುಡಿದನು. ಅವರ ಧೈರ್ಯ, ಸ್ಥೈರ್ಯ ಕಂಡು ಬೆಕ್ಕಸಬೆರಗಾದ ಮಾರಿದತ್ತ ಅವರನ್ನು ಬಲಿ ಕೊಡದೆ ಅವರ ವೃತ್ತಾಂತವನ್ನು ತಿಳಿಯ ಬಯಸಿದ. ಇದು ಅಭಯರುಚಿ ಮಾರಿದತ್ತನ್ನು ಭೇಟಿಯಾದ ಸಂದರ್ಭ.

2. ಅಭಯರುಚಿಯ ಮಾತುಗಳು ಮಾರಿದತ್ತನ ಮೇಲೆ ಬೀರಿದ ಪರಿಣಾಮವನ್ನು ತಿಳಿಸಿ.
ಅಭಯರುಚಿಯು ಸಂಕಲ್ಪ ಹಿಂಸೆಯ ಮಾತ್ರಕ್ಕೆ ನಾನು ಹಲವು ಜನ್ಮಗಳ ಭವಾವಳಿಯಲ್ಲಿ ಸಾಗಿ ಬರಬೇಕಾಯಿತು ಎಂದು ಹೇಳಿದನು. ಘೋರ ಹಿಂಸಾಚಾರಗಳನ್ನು ಮಾಡುತ್ತಿರುವ ಮಾರಿದತ್ತ ನೀನು ನಿಸ್ಸಂಶಯವಾಗಿ ಈ ಪಾಪಗಳ ಪರಿಹಾರವನ್ನು ನರಕದಲ್ಲೇ ನಿವಾರಣೆ ಹೊಂದಬೇಕು. ಎಂಬ ಅಭಯರುಚಿಯ ಮಾತನ್ನು ಕೇಳಿದ ಮಾರಿದತ್ತನು ತುಂಬಾ ಬೆರಗಾಗಿ ಉದ್ವೇಗಕ್ಕೆ ಒಳಗಾದನು. ಮಾರಿದತ್ತನಲ್ಲಿ ಅಗಾಧವಾದ ಪರಿವರ್ತನೆ ಕಂಡು ಬರುತ್ತಿತ್ತು . ಮಾರಿಯ ಬಲಿಗಾಗಿ ಬಂಧಿಸಿಟ್ಟಿದ್ದ ಜೀವರಾಶಿಗಳನ್ನೆಲ್ಲ ಬಂಧನದಿಂದ ಬಿಡಿಸುವನು. ಜನತೆಯ ಸಂತೋಷವನ್ನು ತನ್ನ ಅನುಜ ನಂದನರ ಮಾತುಗಳನ್ನು ಮಾರಿದತ್ತನು ಆಲಿಸುವನು. ಮಂಗಳ ಸ್ನಾನ ಮಾಡುವಂತೆ ದಡದಡನೆ ಕಣ್ಣೀರು ಸುರಿಸಿದನು. ಸೋದರ ಶಿಶುಗಳಿಬ್ಬರನ್ನು ಸೆಳೆದಪ್ಪಿಕೊಂಡು ಬೆಚ್ಚನೆಯ ಪ್ರೀತಿ ನೀಡಿದನು. ಇದುವವರೆಗೆ ತಾನು ಮಾಡಿದ ತಪ್ಪಿನ ಅರಿವಾಗಿ ಮಾರಿದತ್ತನು ಜೀನಾ ದೀಕ್ಷೆಯನ್ನು ಕೈಗೊಂಡನು. ಹೀಗೆ ಅಭಯರುಚಿಯ ಮಾತುಗಳು ಮಾರಿದತ್ತನ ಮೇಲೆ ಪರಿಣಾಮ ಬೀರಿದವು.

3. ಮಾರಿದತ್ತನು ರಾಜ್ಯವನ್ನು ತ್ಯಜಿಸಲು ಕಾರಣವೇನು?
ರಾಜಪುರವೆಂಬ ಪಟ್ಟಣದ ದೊರೆ ಮಾರಿದತ್ತ , ಆ ಊರಿನಲ್ಲಿ ಚಂಡಮಾರಿಯ ದೇವಾಲಯವಿತ್ತು . ಆಶ್ವಯುಜ ಹಾಗೂ ಚೈತ್ರಋತುಗಳಲ್ಲಿ ನಡೆಯುವ ಜಾತ್ರೆಯಲ್ಲಿ ಮಾರಿಗೆ ನರಬಲಿ ಕೊಡುವುದಕ್ಕಾಗಿ ಮಾನವರನ್ನು ಹಿಡಿದುತರುವಂತೆ ಮಾರಿದತ್ತ , ತಳಾರ ಚಂಡಕರ್ಮನಿಗೆ ಆಜ್ಞಾಪಿಸಿದ ಅವನು ಸುದತ್ತಾಚಾರ್ಯ ಮುನಿಗಳೊಡನೆ ರಾಜಪುರವೆಂಬ ಪಟ್ಟಣಕ್ಕೆ ಬಂದನು. ಅಲ್ಲಿ ಭಿಕ್ಷೆಗೆ ಹೊರಟಿದ್ದ ಎಳೆಯ ವಯಸ್ಸಿನ ಸಹೋದರ ಸಹೋದರಿಯಾದ ಅಭಯರುಚಿ ಮತ್ತು ಅಭಯಮತಿಯರನ್ನು ಹಿಡಿದು ತಂದು ತರಾಳ ಚಂಡಕರ್ಮನು ಮಾರಿದತ್ತನಿಗೆ ಒಪ್ಪಿಸಿದನು. ಮಾರಿಯ ಮನೆಯ ಭಯಂಕರ ದೃಶ್ಯದಿಂದ ಆ ಮಕ್ಕಳು ಸ್ವಲ್ಪವೂ ವಿಚಲಿತರಾಗಲಿಲ್ಲ. ಆ ಭಯಾನಕ ವಾತಾವರಣದಲ್ಲಿ ಅತ್ಯಂತ ಕ್ರೂರನಾದ ಮಾರಿದತ್ತನನ್ನು ನೋಡಿದ ಅಭಯರುಚಿ ಕುಮಾರನು ತಾನು ಅಭಯರುಚಿ, ಈಕೆ ನನ್ನ ಸಹೋದರಿ ಅಭಯಮತಿ ಎಂದು ನಿರ್ಭಿತನಾಗಿ ನುಡಿದನು. ಹಾಗು ನಮಗೆ ನೀವು ಕೊಡುವ ಬಲಿಯ ಹಿಂಸೆಯ ಬಗೆಗೆ ಸ್ವಲ್ಪವೂ ಭಯವಿಲ್ಲ. ಆದರೆ ನಿಮಗೆ ತಟ್ಟಬಹುದಾದ ಜೀವಿತಾವಧಿಯ ನರಕದ ಬಗ್ಗೆ ಆಲೋಚಿಸಿದಾಗ ಮನಸ್ಸು ಕರುಣೆಯಿಂದ ತಲ್ಲಣಗೊಳ್ಳುತ್ತದೆ. ಎಂದು ನುಡಿದನು.

ಹಿಂಸೆ ಮಾನವನನ್ನು ದಾನವನ್ನಾಗಿಸುತ್ತದೆ. ಹಿಂಸೆಯನ್ನು ಮಾಡುವುದಿರಲಿ ಹಿಂಸೆಯನ್ನು ಸಂಕಲ್ಪಿಸುವುದು ಘೋರ ಪಾಪ ಇದು ಜನ್ಮ ಜನ್ಮಾಂತರಕ್ಕೂ ಕಾಡದೇ ಬಿಡದು. ಸಂಕಲ್ಪ ಹಿಂಸೆಯ ಮಾತ್ರಕ್ಕೆ ನಾವು ಹಲವು ಜನ್ಮಗಳ ಭವಾವಳಿಯಲ್ಲಿ ಸಾಗಿ ಬರಬೇಕಾಯಿತು. ನಿಸ್ಸಂಶಯವಾಗಿ ಮಾರಿದತ್ತ ನೀವು ಮಾಡಿರುವ ಪಾಪಗಳ ಪರಿಹಾರವನ್ನು ನರಕದಲ್ಲೇ ನಿವಾರಣೆ ಹೊಂದಬೇಕು. ಎಂಬ ಅಭಯರುಚಿಯ ಮಾತನ್ನು ಕೇಳಿದ ಮಾರಿದತ್ತನು ತುಂಬಾ ಬೆರಗಾದ ಮಾರಿದತ್ತ ಅವರನ್ನು ಬಲಿ ಕೊಡದೆ ಅವರ ವೃತ್ತಾಂತವನ್ನು ತಿಳಿಯ ಬಯಸಿದ. ಅಭಯರುಚಿಯು ತಮ್ಮ ಪೂರ್ವಕಥೆಯನ್ನು ನಿರೂಪಿಸಿದ. ಅಭಯರುಚಿಯ ವೃತ್ತಾಂತವನ್ನೆಲ್ಲ ತಿಳಿದ ಅರಸನ ಮನಸ್ಸು ಸಂಪೂರ್ಣವಾಗಿ ಬದಲಾಯಿತು. ಮತ್ತು ಚಂಡಮಾರಿ ದೇವತೆಯು ತನಗೆ ಹಿಂಸೆಸಲ್ಲದು ಬಲಿಯನಿತ್ತೊಡೆ ಮುನಿವೆಂ ಎಂದು ನುಡಿದಳು. ಹಾಗೂ ಅರಸನು ಅದು ಮಂಗಳ ಸ್ನಾನವೆಂದು ಅರಿಯುವನು. ಸೋದರ ಶಿಶಗಳನ್ನು ಬಿಗಿದಪ್ಪಿಕೊಂಡು ಮಡುಗಟ್ಟಿದ ತನ್ನ ದುಃಖ ಹೊರಹಾಕಿ, ಕುಸುಮದತ್ತನಿಗೆ ಪಟ್ಟವನ್ನು ಕಟ್ಟಿ ಮಾರಿದತ್ತನು ರಾಜ್ಯವನ್ನು ತ್ಯಜಿಸಿದನು.

4. ಅಭಯರುಚಿ ಮತ್ತು ಮಾರಿದತ್ತರಲ್ಲಿ ಯಾರನ್ನು ಮೆಚ್ಚುವಿರಿ? ಏಕೆ?
ಅಭಯರುಚಿ ಎಂದರೆ ನನಗೆ ಮೆಚ್ಚುಗೆ. ಏಕೆಂದರೆ ರಾಜಪುರದಲ್ಲಿ ಭಿಕ್ಷೆಗೆ ಹೊರಟಿದ್ದ ಎಳೆಯ ವಯಸ್ಸಿನ ಸಹೋದರ ಸಹೋದರಿಯಾದ ಅಭಯರುಚಿ ಮತ್ತು ಅಭಯಮತಿಯರನ್ನು ಹಿಡಿದು ತಂದು ತರಾಳ ಚಂಡಕರ್ಮನು ಮಾರಿದತ್ತನಿಗೆ ಒಪ್ಪಿಸಿದನು. ಮಾರಿಯ ಮನೆಯ ಭಯಂಕರ ದೃಶ್ಯದಿಂದ ಆ ಮಕ್ಕಳು ಸ್ವಲ್ಪವೂ ವಿಚಲಿತರಾಗಲಿಲ್ಲ. ಹಿಂಸೆಯನ್ನು ಮಾಡುವುದಿರಲಿ ಹಿಂಸೆಯನ್ನು ಸಂಕಲ್ಪಿಸುವುದು ಘೋರ ಪಾಪ ಇದು ಜನ್ಮ ಜನ್ಮಾಂತರಕ್ಕೂ ಕಾಡದೇ ಬಿಡದು. ಸಂಕಲ್ಪ ಹಿಂಸೆಯ ಮಾತ್ರಕ್ಕೆ ನಾವು ಹಲವು ಜನ್ಮಗಳ ಭವಾವಳಿಯಲ್ಲಿ ಸಾಗಿ ಬರಬೇಕಾಯಿತು. ನಿಸ್ಸಂಶಯವಾಗಿ ಮಾರಿದತ್ತ ನೀವು ಮಾಡಿರುವ ಪಾಪಗಳ ಪರಿಹಾರವನ್ನು ನರಕದಲ್ಲೇ ನಿವಾರಣೆ ಹೊಂದಬೇಕು. ಎಂಬ ಅಭಯರುಚಿಯ ಮಾತು ಮತ್ತು ಆತನ ಧೈರ್ಯ, ಸ್ಥೈರ್ಯ ಕಂಡು ಮಾರಿದತ್ತ ಅರಸನೇ ಬೆಕ್ಕಸ ಬೆರಗಾಗುತ್ತಾನೆ. ಅಭಯರುಚಿಯ ಮಾತು ತುಂಬಾ ಅನುಭವಿ ಮತ್ತು ಜ್ಞಾನಮಯವಾಗಿದೆ. ಅದಕ್ಕೆ ಪ್ರತಿಯಾಗಿ ಸ್ವತಃ ದೇವಿಯೇ ಬಲಿಯನ್ನು ಕೊಟ್ಟರೆ ಕೋಪಿಸಿಕೊಳ್ಳುತ್ತೇನೆ ಎಂದು ಹೇಳುತ್ತದೆ. ಹಾಗೂ ಅಭಯರುಚಿಯ ನುಡಿಯಿಂದ ಅರಸನ ಮನಸ್ಸು ಪರಿವರ್ತನೆಯಾಗಿ ಜೈನಧರ್ಮದ ಮೂಲ ತತ್ವ ಅಹಿಂಸೆ ಕೂಡ ಸಾಕಾರವಾಗುತ್ತದೆ. 

ಈ. ಕೊಟ್ಟಿರುವ ವಾಕ್ಯಗಳ ಸಂದರ್ಭೋಚಿತ ಸ್ವಾರಸ್ಯ ವಿವರವನ್ನು ಬರೆಯಿರಿ.
1. “ಕರುಣದಿಂದೆ ತಲ್ಲಣಿಸಿದಪೆಂ”
ಆಯ್ಕೆ: ಈ ವಾಕ್ಯವನ್ನು ತೆಕ್ಕುಂಜೆ ಗೋಪಾಲ ಕೃಷ್ಣಭಟ್ಟ ಅವರ ಸಂಪಾದನಾ ಗ್ರಂಥ ಜನ್ನಕವಿ ವಿರಚಿತ ಯಶೋಧರಚರಿತೆ ಕಾವ್ಯದಿಂದ ಆಯ್ದ ಬಲಿಯನಿತ್ತೊಡೆ ಮುನಿವೆಂ ಪದ್ಯ ಪಾಠದಿಂದ ಆರಿಸಿಕೊಳ್ಳಲಾಗಿದೆ.

ಸಂದರ್ಭ: ಈ ಮಾತನ್ನು ಅಭಯರುಚಿಯು ಮಾರಿದತ್ತನಿಗೆ ಹೇಳಿದನು. ಮಾರಿಗೆ ನರಬಲಿ ಕೊಡುವುದಕ್ಕಾಗಿ ಅಭಯರುಚಿ ಮತ್ತು ಅಭಯಮತಿಯರನ್ನು ಚಂಡಕರ್ಮನೆಂಬ ತರಾಳನು ಹಿಡಿದು ತಂದು ಮಾರಿದತ್ತನಿಗೆ ಒಪ್ಪಿಸಿದ ಸಂದರ್ಭದಲ್ಲಿ ಮಾರಿಯ ಮನೆಯ ಭಯಾನಕತೆಯನ್ನು ಕಂಡು ಅಭಯರುಚಿಯು ಸ್ವಲ್ಪವು ವಿಚಲಿತನಾಗದೆ, ತಾನು ಕೇವಲ ಸಂಕಲ್ಪ ಹಿಂಸೆಯಿಂದ ಜನ್ಮ ಜನ್ಮಾಂತರಗಳಲ್ಲಿ ದುಃಖವನ್ನು ಅನುಭವಿಸಿದೆ. ಆದರೆ ಘೋರ  ಹಿಂಸಾಚಾರಗಳನ್ನು ಮಾಡುತ್ತಿರುವ ಮಾರಿದತ್ತ ನಿನಗೆ ಮುಂದೆ ಉಂಟಾಗಬಹುದಾದ ಕೇಡನ್ನು ಆಲೋಚಿಸಿ ನಿನ್ನ ಮೇಲಿನ ಕರುಣೆಯಿಂದ ನಾನು ತಳಮಳಗೊಂಡಿದ್ದೇನೆ. (ಕರುಣದಿಂದೆ ತಲ್ಲಣಿಸಿದಪೆಂ) ಎಂದು ಅಭಯರುಚಿ ಹೇಳಿದನು

ಸ್ವಾರಸ್ಯ: ಮಾರಿದತ್ತನು, ಅಭಯರುಚಿ ಮತ್ತು ಅಭಯಮತಿಯರನ್ನು ನರಬಲಿ ಕೊಡಲು ಸಿದ್ದತೆ ನಡೆಸಿದ್ದರೂ ಸಹ ಅಭಯರುಚಿಯು ಮಾರಿದತ್ತನ ಕೇಡನ್ನು ನೆನೆದು ಅವನಲ್ಲಿ ಕನಿಕರ ತೋರುವುದು ಇಲ್ಲಿ ಸ್ವಾರಸ್ಯಕರವಾಗಿ ವ್ಯಕ್ತವಾಗಿದೆ.

2. “ಬಲಿಯನಿತ್ತೊಡೆ ಮುನಿವೆಂ”
ಆಯ್ಕೆ: ಈ ವಾಕ್ಯವನ್ನು ತೆಕ್ಕುಂಜೆ ಗೋಪಾಲ ಕೃಷ್ಣಭಟ್ಟ ಅವರ ಸಂಪಾದನಾ ಗ್ರಂಥ ಜನ್ನಕವಿ ವಿರಚಿತ ಯಶೋಧರಚರಿತೆ ಕಾವ್ಯದಿಂದ ಆಯ್ದ ಬಲಿಯನಿತ್ತೊಡೆ ಮುನಿವೆಂ ಪದ್ಯ ಪಾಠದಿಂದ ಆರಿಸಿಕೊಳ್ಳಲಾಗಿದೆ.

ಸಂದರ್ಭ: ಈ ಮೇಲಿನ ಮಾತನ್ನು ಚಂಡಮಾರಿ ದೇವಿಯು ಭಕ್ತರಿಗೆ ಹೇಳುವಳು. ಮಾರಿಯ ಮನೆಯ ಭಯಂಕರ ದೃಶ್ಯದಿಂದ ಆ ಮಕ್ಕಳು ಸ್ವಲ್ಪವೂ ವಿಚಲಿತರಾಗಲಿಲ್ಲ. ಆ ಭಯಾನಕ ವಾತಾವರಣದಲ್ಲಿ ನಿರ್ಭಿತನಾದ ಅಭಯರುಚಿ ಕುಮಾರನು, ಈಕೆ ನನ್ನ ಸಹೋದರಿ ಅಭಯಮತಿ ಎಂದು ಪರಿಚಯಿಸಿಕೊಂಡು ತನ್ನ ವೃತ್ತಾಂತವನ್ನೆಲ್ಲ ಹೇಳುವನು.  ಅರಸನ ಪ್ರವೃತ್ತಿಯಿಂದ ಅರಸನಿಗೆ ದೊರೆಯಬಹುದಾದ ಮೋಕ್ಷ ನರಕದಲ್ಲಿ ನಿವಾರಣೆ ಎಂದು ನುಡಿಯುವ ಸಂದರ್ಭದಲ್ಲಿ ಚಂಡಮಾರಿ ದೇವತೆಯು ಪ್ರತ್ಯಕ್ಷಳಾಗಿ, ಮಕ್ಕಳನ್ನು ಬಲಿ ಕೊಡುವುದು ಮಹಾಪರಾಧ , ಇನ್ನು ಮುಂದೆ ರಾಜಪುರದ ಜನರೆಲ್ಲ ಜಲ, ಗಂಧ, ಹೂಮಾಲೆ, ಅಕ್ಕಿ, ಧೂಪ, ದೀಪ, ಹವಿಸ್ಸು ಮತ್ತು ತಾಂಬೂಲಗಳಿಂದ ನನ್ನನ್ನು ಪೂಜಿಸಲಿ ಎಂದು ಭಕ್ತರಿಗೆ ಹೇಳುವಳು.

ಸ್ವಾರಸ್ಯ: ಸ್ವತಃ ಚಂಡಮಾರಿ ದೇವಿಯೆ ಪ್ರತ್ಯಕ್ಷವಾಗಿ ನೆರೆದಿದ್ದ ಪುರಜನರನ್ನು ಉದ್ದೇಶಿಸಿ ಬಲಿಯನಿತ್ತೊಡೆ ಮುನಿವೆಂ (ಜೀವಬಲಿ ಕೊಟ್ಟರೆ ಕೋಪಿಸಿಕೊಳ್ಳುವುದಾಗಿ) ಹೇಳುವುದು ಸ್ವಾರಸ್ಯವಾಗಿದೆ.

3. “ನರಕದೊಳ್‌ ನಿವಾರಣೆವಡೆವಯ್”‌
ಆಯ್ಕೆ: ಈ ವಾಕ್ಯವನ್ನು ತೆಕ್ಕುಂಜೆ ಗೋಪಾಲ ಕೃಷ್ಣಭಟ್ಟ ಅವರ ಸಂಪಾದನಾ ಗ್ರಂಥ ಜನ್ನಕವಿ ವಿರಚಿತ ಯಶೋಧರಚರಿತೆ ಕಾವ್ಯದಿಂದ ಆಯ್ದ ಬಲಿಯನಿತ್ತೊಡೆ ಮುನಿವೆಂ ಪದ್ಯ ಪಾಠದಿಂದ ಆರಿಸಿಕೊಳ್ಳಲಾಗಿದೆ.

ಸಂದರ್ಭ: ಈ ಮಾತನ್ನು ಅಭಯರುಚಿಯು ಮಾರಿದತ್ತನಿಗೆ ಹೇಳಿದನು.  ರಾಜಪುರವೆಂಬ ಪಟ್ಟಣದ ದೊರೆ ಮಾರಿದತ್ತನು ಆ ಊರಿನ ಚಂಡಮಾರಿ ದೇವಿಗೆ ಆಶ್ವಯುಜ ಹಾಗೂ ಚೈತ್ರಋತುಗಳಲ್ಲಿ ನಡೆಯುವ ಜಾತ್ರೆಯಲ್ಲಿ ಮಾರಿಗೆ ನರಬಲಿ ಕೊಡುವುದಕ್ಕಾಗಿ ಅಭಯರುಚಿ ಮತ್ತು ಅಭಯಮತಿಯರನ್ನು ಹಿಡಿದು ತರುವಂತೆ ತಳಾರ ಚಂಡಕರ್ಮನಿಗೆ ಆಜ್ಞಾಪಿಸಿದನು. ಆಗ ಮಾರಿದತ್ತನ ಭಯಾನಕ ಹಿಂಸಾ ಕೃತ್ಯವನ್ನು ಕಂಡ ಅಭಯರುಚಿಯು, ಕೇವಲ ಸಂಕಲ್ಪ ಹಿಂಸೆಯಿಂದಲೇ ನಾವು ಹಲವು ಜನ್ಮಗಳ ಭವಾವಳಿಯಲ್ಲಿ ಸಾಗಿ ಬರಬೇಕಾಯಿತು. ಎಂದು ಹೇಳುವ ಸಂದರ್ಭದಲ್ಲಿ ಅಭಯರುಚಿಯು ಮಾರಿದತ್ತನಿಗೆ ನೀನು ಮಾಡುತ್ತಿರುವ ಪಾಪ ಕೃತ್ಯಗಳಿಗೆ ನರಕದೊಳ್‌ ನಿವಾರಣೆವಡೆವಯ್‌ ಎಂದು ಹೇಳುವನು.

ಸ್ವಾರಸ್ಯ: ಅಪರಾಧಕ್ಕೆ ಪರಿಹಾರವೆಂಬುದು ಇದ್ದೇ ಇರುತ್ತದೆ ಅದರೆ ಮಾರಿದತ್ತನದ್ದು ಮಹಾ ಅಪರಾಧ ಇದರ ನಿವಾರಣೆ ನರಕದಲ್ಲಿಯೇ ಸಾಧ್ಯವೆಂಬ ಮಾತು ಅತ್ಯಂತ ಸ್ವಾರಸ್ಯಮಯವಾಗಿ ಮೂಡಿ ಬಂದಿದೆ.

4. “ದೇವನೆ ಆದಂ”
ಆಯ್ಕೆ: ಈ ವಾಕ್ಯವನ್ನು ತೆಕ್ಕುಂಜೆ ಗೋಪಾಲ ಕೃಷ್ಣಭಟ್ಟ ಅವರ ಸಂಪಾದನಾ ಗ್ರಂಥ ಜನ್ನಕವಿ ವಿರಚಿತ ಯಶೋಧರಚರಿತೆ ಕಾವ್ಯದಿಂದ ಆಯ್ದ ಬಲಿಯನಿತ್ತೊಡೆ ಮುನಿವೆಂ ಪದ್ಯ ಪಾಠದಿಂದ ಆರಿಸಿಕೊಳ್ಳಲಾಗಿದೆ.

ಸಂದರ್ಭ:  ಈ ಮಾತನ್ನು ಕವಿಯು ಹೇಳಿದ್ದಾರೆ. ಅಭಯರುಚಿ ಮತ್ತು ಅಭಯಮತಿಯರ ಜನ್ಮ ಜನ್ಮಾಂತರದ ವೃತ್ತಾಂತನೆಲ್ಲ ತಿಳಿದ ಅರಸನ ಮನಸ್ಸು ಸಂಪೂರ್ಣವಾಗಿ ಬದಲಾಯಿತು. ಹಾಗೂ ಚಂಡಮಾರಿ ದೇವತೆಯು ಸಹ ಹಿಂಸೆಸಲ್ಲದು ಬಲಿಯನಿತ್ತೊಡೆ ಮುನಿವೆಂ ಎಂದು ನುಡಿದಳು. ನಂತರ ಮಾರಿದತ್ತನು ಜೀನ ದೀಕ್ಷೆಯನ್ನು ಕೈಗೊಳ್ಳುವನು ಕೆಲಕಾಲ ಉಗ್ರ ತಪಸ್ಸು ಕೈಗೊಂಡನು. ನಂತರ ಮೂರನೆಯ ಸ್ವರ್ಗದಲ್ಲಿ ನೆಲೆಯೂರುವನು. ಮಾರಿದತ್ತನು ಕಲಿಯನ್ನೇ ಮೂದಲಿಸುವಂತೆ ಸ್ವಯಂ ದೇವನೇ ಆದನು ಎಂದು ಕವಿಯು ಈ ರೀತಿಯಾಗಿ ಹೇಳಿದ್ದಾರೆ.

ಸ್ವಾರಸ್ಯ: ಹಿಂಸಾಕೃತ್ಯಗಳನ್ನು ಮಾಡುತ್ತಿದ್ದ ಮಾರಿದತ್ತನ ಮನ ಪರಿವರ್ತನೆಗೊಂಡು ಉಗ್ರವಾದ ತಪಸ್ಸಿನಿಂದ ಕಲ್ಕಿಯನ್ನೇ ನಂಬುವಂತೆ ಸ್ವಯಂ ದೇವನಾದ ಎಂಬುದು ಸ್ವಾರಸ್ಯ ಪೂರ್ಣವಾಗಿ ವ್ಯಕ್ತವಾಗಿದೆ.

ಅ). ಬಿಟ್ಟಿರುವ ಜಾಗವನ್ನು ಸೂಕ್ತ ಪದದಿಂದ ತುಂಬಿ.
1. ಅಭಯರುಚಿಯ ಸಹೋದರಿಯ ಹೆಸರು ಅಭಯಮತಿ.
2. ಅಭಯರುಚಿ ಮತ್ತು ಅಭಯಮತಿಯರನ್ನು ಭಿಕ್ಷೆಗೆ ಬಂದಿದ್ದಾಗ ಸೆರೆಹಿಡಿದನು.
3. ಬಲಿಯನಿತ್ತೊಡೆ ಮುನಿವೆಂ ಪದ್ಯದ ಆಕಾರ ಯಶೋಧರಚರಿತೆ.
4. ಮಾರಿದತ್ತ ಕಲಿಯಂ ಮೂದಲಿಸುವಂತೆ ದೇವನಾದನು.

ಆ). ಕೊಟ್ಟಿರುವ ಪದಗಳಲ್ಲಿ ಆಯಾ ಗುಂಪಿಗೆ ಸೇರದ ಪದವನ್ನು ಆರಿಸಿ ಬರೆಯಿರಿ.
1. ರನ್ನ, ಜನ್ನ, ಹರಿಹರ, ಪೊನ್ನ
2. ನೃಪೇಂದ್ರ, ದೊರೆ, ನೃಪ, ನರಪತಿ
3. ಗುರುವಿಂದು, ಹಿಂಸೆಯೊಂದರೊಳ್‌, ಬರುತಿದೆ, ಪ್ರಜೆಯೆಲ್ಲಂ
4. ಅನಂತಪುರಾಣ, ಯಶೋಧರಚರಿತೆ, ವಿಕ್ರಮಾರ್ಜುನವಿಜಯ, ಅನುಭವಮುಕುರ
ಹೇಮಂತ
ಕೃತಿಕಾರರ ಪರಿಚಯ :
ಕವಿ : ಎಸ್ . ವಿ . ಪರಮೇಶ್ವರ ಭಟ್ಟರು
ಕಾಲ : 8 ಫೆಬ್ರವರಿ 1914
ಸ್ಥಳ : ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ
ಕೃತಿಗಳು : ಗಗನಚುಕ್ಕಿ, ಇಂದ್ರಚಾಪ, ಸುರಹೊನ್ನೆ, ಉಪ್ಪುಕಡಲು, ರಾಗಿಣಿ  ಮುಂತಾದವು.
ಎಸ್.ವಿ. ಪರಮೇಶ್ವರ ಭಟ್ಟರು ಮೈಸೂರು ಮತ್ತು ಮಂಗಳೂರು ವಿಶ್ವವಿದ್ಯಾನಿಲಯಗಳಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದವರು . ಕನ್ನಡದ ಹಾಗೂ ಕಾಳಿದಾಸರ ಸಂಸ್ಕೃತ ಕೃತಿಗಳನ್ನು ಅತ್ಯಂತ ಸಮರ್ಥವಾಗಿ ಕನ್ನಡಕ್ಕೆ ಭರ್ತೃಹರಿಯ ಶತಕತ್ರಯಗಳನ್ನೂ ಜಯದೇವನ ಗೀತಗೋವಿಂದವನ್ನೂ ಅವರು ಕನ್ನಡಿಸಿದರು.
ಪ್ರಶಸ್ತಿಗಳು : ರಾಜ್ಯ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿಗಳ ಪುರಸ್ಕಾರ ಪಡೆದವರು. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯರಾಗಿದ್ದರು. ಹೇಮಂತ ಕವಿತೆಯನ್ನು ಅವರ ಗಗನಚುಕ್ಕಿ ಕವನಸಂಕಲನದಿಂದ ಆರಿಸಿಕೊಳ್ಳಲಾಗಿದೆ.

ಅ). ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.
1. ಹೇಮಂತರಾಜನು ಇಳೆಗೆ ಬಂದಾಗ ಮರಗಳು ಹೇಗಿರುತ್ತವೆ?
ಹೇಮಂತರಾಜನು ಇಳೆಗೆ ಬಂದಾಗ ಮರಗಳು ಹೂವಿಲ್ಲದೆ ಹಸುರಿಲ್ಲದೆ ಚಿಗುರೆಲೆಗಳಿಲ್ಲದೆ ಬೋಳಾಗಿರುತ್ತವೆ.

2. ಮಂಜು ಮುಸುಕನು ಹೊದ್ದು ಮಲಗಿರುವವರು ಯಾರು?
ಮಂಜು ಮುಸುಕನು ಹೊದ್ದು ಹೊಲಗದ್ದೆಗಳು ಮಲಗಿವೆ.

3. ಕಾನನದ ಹಕ್ಕಿ ಏನು ಮಾಡುತ್ತಿದೆ?
ಕಾನನದ ಹಕ್ಕಿ ಕಣ್ಣೀರನ್ನು ಸುರಿಸುತ್ತಿದೆ.

4. ಎತ್ತಲೂ ಕಾಣುತ್ತಿರುವ ದೃಶ್ಯ ಯಾವುದು?
ಎತ್ತಲೂ ಕಾಣುತ್ತಿರುವ ದೃಶ್ಯ ಬಿಳಿಯ ಮಂಜು, ಹಿಮದ ಗಾಳಿ, ನಡುಗುತ್ತಿರುವ ನೀರಸ ಲೋಕ, ಬರಡಾಗಿರುವ ಬನ, ಜಡವಾಗಿರುವ ಜನ.

5. ಹೇಮಂತ ಋತುವಿನಲ್ಲಿ ತುಂಗೆಯ ತೊರೆ ಹೇಗೆ ಹರಿಯುತ್ತಿದೆ?
ಹೇಮಂತ ಋತುವಿನಲ್ಲಿ ತುಂಗೆಯ ತೊರೆ ಮೆಲ್ಲ ಮೆಲ್ಲನೆ ಸರಿಯುತ್ತಾ ಮುಖದ ಪರದೆಯನ್ನು ಎಳೆದುಕೊಂಡು ಮೈ ನೆನೆದು ನಡುಗುತ್ತ ಹರಿಯುತ್ತಿದೆ.

6. ಯಾವುದಕ್ಕೆ ತಲೆಬಾಗಬೇಕೆಂದು ಕವಿ ಹೇಳುತ್ತಾರೆ?
ಹೇಮಂತನ ಕಠಿಣ ಶಾಸನಕ್ಕೆ ಎಲ್ಲರೂ ತಲೆಬಾಗಬೇಕು ಎಂದು ಕವಿ ಹೇಳುತ್ತಾರೆ.

7. ಜೀವಗಳ ಧರ್ಮ ಯಾವುದು?
ಒಂದೊಂದು ಋತುವಿನಲ್ಲಿ ಒಂದೊಂದು ರೀತಿಯಲ್ಲಿ ಸಂಸ್ಕಾರವನ್ನು ಪಡೆಯುವುದೇ ಜೀವಗಳ ಧರ್ಮವಾಗಿದೆ.

ಆ ). ಕೊಟ್ಟಿರುವ ಪ್ರಶ್ನೆಗಳಿಗೆ ಮೂರು ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ.
1.ಹೇಮಂತನು ಬಂದಿಳಿದಾಗ ಲೋಕದ ಪರಿಸ್ಥಿತಿ ಹೇಗಿತ್ತು?
ಹೇಮಂತನು ಬಂದಿಳಿದಾಗ ಲೋಕದ ಪರಿಸ್ಥಿತಿ ಗಿಡಗಳಲ್ಲಿ ಹೂವಿಲ್ಲ, ಹಸಿರಿಲ್ಲ, ಚಿಗುರೆಲೆಗಳಿಲ್ಲ, ಪ್ರಕೃತಿಯಲ್ಲಿ ದುಂಬಿಗಳ ದನಿ ಇಲ್ಲ, ಹಕ್ಕಿಗಳ ಹಾಡಿಲ್ಲ, ಹೂವಿನ ಪರಿಮಳ ತರುವ ಗಾಳಿ ಇರಲ್ಲಿಲ.

2. ಹೊಲಗದ್ದೆಗಳು ಮತ್ತು ನದಿಗಳ ಮೇಲೆ ಹೇಮಂತನ ಪ್ರಭಾವ ಏನು?
ಹೊಲಗದ್ದೆಗಳು ಮತ್ತು ನದಿಗಳ ಮೇಲೆ ಹೇಮಂತನ ಪ್ರಭಾವ ಏನೆಂದರೆ ಹೊಲಗದ್ದೆಗಳು ಮಂಜಿನ ಮುಸುಕನ್ನು ಹೊದ್ದು ಮಲಗಿವೆ. ಮತ್ತು ನದಿಯು ಮೆಲ್ಲಮೆಲ್ಲನೆ ಸರಿಯುತ್ತಾ ಮುಖದ ಪರದೆಯನ್ನು ಎಳೆದುಕೊಂಡು ಮೈ ನೆನೆದು ನಡಗುತ್ತಾ ಹರಿಯುತ್ತಿದೆ.

3. ಹೇಮಂತ ಋತುವಿನಲ್ಲಿ ಮರಗಳ ಸ್ಥಿತಿ ಹೇಗಿರುತ್ತದೆ?
ಹೇಮಂತ ಋತುವಿನಲ್ಲಿ ಮರಗಳ ಸ್ಥಿತಿ ಎಲೆಗಳು ಹಣ್ಣಾಗಿ ಉದುರಿ, ಮರ ಬೋಳಾಗುತ್ತವೆ. ಮರಗಳಲ್ಲಿ ಹೂವಿಲ್ಲ, ಚಿಗುರೆಲೆಗಳಿಲ್ಲ, ಹಸಿರು ಇಲ್ಲ. ಮರಗಳ ಈ ಸ್ಥಿತಿ ನೋಡಿ ಕಾನನದ ಹಕ್ಕಿ ಕೂಡ ಕಣ್ಣೀರು ಸುರಿಸುತ್ತಿದೆ ಎಂದು ಕವಿ ವರ್ಣಿಸಿದ್ದಾರೆ.

4. ಹೇಮಂತನ ಕಠಿಣ ಶಾಸನವನ್ನು ಹೇಗೆ ಸ್ವೀಕರಿಸಬೇಕು?
ಹೇಮಂತನ ಕಠಿಣ ಶಾಸನವನ್ನು ಮನುಷ್ಯನ ನೈಸರ್ಗಿಕ, ನಿಸರ್ಗದ ನಿಯಮ ಎಂದು ಸ್ವೀಕರಿಸಬೇಕು. ಬದುಕು ಸದಾ ಸಂಭ್ರಮದ ವಸಂತ ಋತುವೇ ಆಗಿರುವುದಿಲ್ಲ. ಕೆಲವೊಮ್ಮೆ ಬಾಳಿನಲ್ಲಿ ಕಷ್ಟ ನಷ್ಟಗಳು ಬರುತ್ತವೆ. ಆದ್ದರಿಂದ ವಿಧಿಯನ್ನು ಹಳಿಯಬಾರದು. ಹೊಸ ಕಾಲಕ್ಕೆ ಮಾನವ ಕಾಯಬೇಕು.

ಇ) ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿ.
1.ಹೇಮಂತ ಋತುವಿನಲ್ಲಿ ಪ್ರಕೃತಿಯು ಹೇಗಿರುತ್ತದೆ ?
ಹೇಮಂತ ಋತುವಿನಲ್ಲಿ ಇಳೆಯಲ್ಲಿ ಹೂವಿಲ್ಲ,ಹಸುರಿಲ್ಲ, ಚಿಗುರೆಲೆಗಳಿಲ್ಲ, ದುಂಬಿಗಳ ಧ್ವನಿಯೂ ಇಲ್ಲ, ಹಕ್ಕಿಗಳ ಹಾಡೂ ಇಲ್ಲ, ಕುಸುಮ ಗಂಧವ ತರುವ ಮಾರುತನೂ ಇರಲಿಲ್ಲ. ಕೆಂಪಾದ ಚಿಗುರೆಲೆಗಳ ರಥಗಳೆನಿಸಿ ಮೆರೆಯುತ್ತಿರುವ ಗಿಡಬಳ್ಳಿಗಳು ಮೌನವಾಗಿ ಮುಖದ ಕಾಂತಿ ಕಳೆದುಕೊಂಡು ಮನಸ್ಸು ನೊಂದು ಭಾಗ್ಯಹೀನರಂತೆ, ದೀನರಂತೆ ನಿಂತಿವೆ. ಹೊಲಗದ್ದೆಗಳ ಮೇಲೆ ಹೇಮಂತನು ಮಂಜುಮುಸುಕನ್ನು ಹಾಸಿರುತ್ತಾನೆ. ಹೇಮಂತ ಋತುವಿನಲ್ಲಿ ನದಿಗಳು ಮೆಲ್ಲಮೆಲ್ಲನೆ ನಡುಗುತ್ತ, ನೆನೆಯುತ್ತ ಹರಿಯುತ್ತಿರುತ್ತವೆ. ಪ್ರಕೃತಿ ಆ ಸಮಯದಲ್ಲಿ ಮೈ ಮುದುರಿ ಕೂರುತ್ತದೆ. ಮರಗಳು ಹಣ್ಣೆಲೆಗಳನ್ನು ಉದುರಿಸಿಕೊಂಡು ಬೋಳಾಗಿ ನಿಲ್ಲುತ್ತವೆ. ಬರಲು ಮರಗಳನ್ನೇರಿ ಕಾಡಿನ ಪಕ್ಷಿಗಳು ಕಣ್ಣೀರು ಸುರಿಸುತ್ತವೆ. ತಂಪಾದ ಗಾಳಿ, ಹಿಮದ ಸೋನೆಗೆ ಸಿಲುಕಿದ ಮಾನವನ ಜೀವ ಸೆರೆ ಸಿಕ್ಕಂತೆ ಒದ್ದಾಡುತ್ತದೆ. ಎತ್ತ ನೋಡಿದರೂ ಬಿಳಿ ಮಂಜು, ಹಿಮಗಾಳಿ ನಡುಗುತ್ತಿರುವ ನೀರವಲೋಕ ಎಲ್ಲ ಕಡೆ ಬರಡು ಬನಗಳು ಜಡವಾದ ಜನರು ಎಲ್ಲ ಕಡೆ ಶೂನ್ಯಆವರಿಸಿರುವ ಭಾವ. ಹೇಮಂತನ ಕಠಿಣ ಶಾಸನವನ್ನು ತಲೆಬಾಗಿ ಸ್ವೀಕರಿಸಬೇಕು .ಇದೆ ಸೃಷ್ಟಿಯು ತನ್ನನ್ನು ಉಳಿಸಿಕೊಳ್ಳುವ ಒಳಮರ್ಮ. ಋತುಗಳಿಗೆ ತಕ್ಕಂತೆ ಕಾಲಕ್ಕೆ ತಕ್ಕಂತೆ ತನ್ನಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುವುದು ಪ್ರಕೃತಿಯ ಸಹಜ ಧರ್ಮ. ಹೇಮಂತ ಋತುವಿನಲ್ಲಿ ಪ್ರಕೃತಿ ಜಡವಾದಂತೆ ಕಂಡರೂ ಮತ್ತೆ ಹೊಸ ಋತು ಬಂದಾಗ ಅದು ಚಿಗುರೊಡೆದು ನಳನಳಿಸುವಂತೆ ಮನುಷ್ಯನು ಕೂಡ ಹೊಸ ಕಾಲಕ್ಕೆ ಹೊಸ ಬಿಸಿಲಿಗೆ ಕಾಯಬೇಕು. ಬಂದೆಲ್ಲ ಕಷ್ಟ ಸುಖಗಳನ್ನು ನಿಸರ್ಗದ ಸಹಜ ನಿಯಮ ಎಂದು ಸ್ವೀಕರಿಸಬೇಕು.

ಈ) ಕೆಳಗಿನ ವಾಕ್ಯಗಳ ಸ್ವಾರಸ್ಯವನ್ನು ವಿಸ್ತರಿಸಿ ಬರೆಯಿರಿ.
1. ಚೆಂಗುಡಿಯ ಸಿಂಗರದ ವರವರೂಥಗಳೆನಿಸಿ.
ಆಯ್ಕೆ : ಈ ಮೇಲಿನ ವಾಕ್ಯವನ್ನು ಡಾ.ಎನ್.ವಿ. ಪರಮೇಶ್ವರಭಟ್ಟರು ಬರೆದ ಹೇಮಂತ ಎನ್ನುವ ಪದ್ಯಭಾಗದಿಂದ ಆಯ್ದುಕೊಳ್ಳಲಾಗಿದೆ.

ಸಂದರ್ಭ : ಈ ಮಾತನ್ನು ಕವಿ ಹೇಳಿದ್ದಾರೆ. ಹೇಮಂತನ ಆಗಮನವಾದಾಗ ಪ್ರಕೃತಿ ಮುದುರಿರುತ್ತದೆ. ಕೆಂಪಾದ ಚಿಗುರೆಲೆಗಳ ರಥಗಳೆನಿಸಿ ಮೆರೆಯತ್ತಿರುವ ಗಿಡಬಳ್ಳಿಗಳು ಮೌನವಾಗಿ ಮುಖದ ಕಾಂತಿ ಕಳೆದುಕೊಂಡು ಮನಸ್ಸು ನೊಂದು ಭಾಗ್ಯಹೀನರಂತೆ ದೀನರಂತೆ ನಿಂತಿವೆ.

ಸ್ವಾರಸ್ಯ : ಹೇಮಂತ ಋತುವಿನ ಕಾಲದಲ್ಲಿ ಪ್ರಕೃತಿಯಲ್ಲಿ ಆಗುವ ಬದಲಾವಣೆಯನ್ನು ಗಿಡಮರಗಳು ಎಲೆಗಳನ್ನು ಉದುರಿಸಿಕೊಂಡು ನಿಲ್ಲುವ ಸಂದರ್ಭವನ್ನು ಮೇಲಿನ ವಾಕ್ಯವು ವಿವರಿಸುವುದು.

2. ಸುಯ್ಯಲರ ಸೂಸುತಿದೆ ನಿನ್ನ ಹಳಿದು.

ಆಯ್ಕೆ : ಈ ಮೇಲಿನ ವಾಕ್ಯವನ್ನು ಡಾ.ಎನ್.ವಿ. ಪರಮೇಶ್ವರಭಟ್ಟರು ಬರೆದ ಹೇಮಂತ ಎನ್ನುವ ಪದ್ಯಭಾಗದಿಂದ ಆಯ್ದುಕೊಳ್ಳಲಾಗಿದೆ.

ಸಂದರ್ಭ : ಈ ಮಾತನ್ನು ಕವಿ ಹೇಳಿದ್ದಾರೆ. ಹೊಲಗದ್ದೆಗಳ ಮೇಲೆ ಹೇಮಂತನು ಮಂಜು ಮುಸುಕನ್ನು ಹಾಸಿರುತ್ತಾನೆ. ಬೀಸುತ್ತಿರುವ ಗಾಳಿಯು ಹೇಮಂತನನ್ನು ಹಳಿದಂತೆ ಭಾಸವಾಗುತ್ತದೆ ಎಂದು ಹೇಳಿದ್ದಾರೆ.

ಸ್ವಾರಸ್ಯ : ಹೇಮಂತ ಋತುವಿನ ಕಾಲದಲ್ಲಿ ಮಂಜುಕವಿದ ವಾತಾವರಣವಿರುವುದನ್ನು ಕವಿ ಸ್ವಾರಸ್ಯಕರವಾಗಿ ಹೇಳಿದ್ದಾರೆ.

3. ಕಣ್ಣೀರು ಸುರಿಸುತಿದೆ ಕಾನನದ.
ಆಯ್ಕೆ : ಈ ಮೇಲಿನ ವಾಕ್ಯವನ್ನು ಡಾ.ಎನ್.ವಿ. ಪರಮೇಶ್ವರಭಟ್ಟರು ಬರೆದ ಹೇಮಂತ ಎನ್ನುವ ಪದ್ಯಭಾಗದಿಂದ ಆಯ್ದುಕೊಳ್ಳಲಾಗಿದೆ.

ಸಂದರ್ಭ : ಈ ಮಾತನ್ನು ಕವಿ ಹೇಳಿದ್ದಾರೆ. ಹೇಮಂತ ಋತುವಿನ ಆಗಮನವಾದಾಗ ಪ್ರಕೃತಿ ಮೈ ಮುದುರಿ ಕೂರುತ್ತದೆ. ಮರಗಳು ಹಣ್ಣೆಲೆಗಳನ್ನು ಉದುರಿಸಿಕೊಂಡು ಬೋಳಾಗಿ ನಿಲ್ಲುತ್ತವೆ. ಬರಲು ಮರಗಳನ್ನೇರಿ ಕಾಡಿನ ಪಕ್ಷಿಗಳು ಕಣ್ಣೀರು ಸುರಿಸುತ್ತವೆ. ತಂಪಾದ ಗಾಳಿ,ಹಿಮದ ಸೋನೆಗೆ ಸಿಲುಕಿದ ಮಾನವನ ಜೀವ ಸೆರೆ ಸಿಕ್ಕಂತೆ ಒದ್ದಾಡುತ್ತದೆ.

ಸ್ವಾರಸ್ಯ : ಮರಗಿಡಗಳು ಬರಲಾಗಿದ್ದರಿಂದ ಆಶ್ರಯಕ್ಕಾಗಿ ಹಕ್ಕಿಗಳು ಪರದಾಡುತ್ತವೆಂದು ಕವಿ ಸ್ವಾರಸ್ಯಕರವಾಗಿ ಹೇಳಿದ್ದಾರೆ.

4. ಎತ್ತಲುಂ ನಡುಗುತಿಹ ನೀರವಾ ಲೋಕ
ಆಯ್ಕೆ : ಈ ಮೇಲಿನ ವಾಕ್ಯವನ್ನು ಡಾ.ಎನ್.ವಿ. ಪರಮೇಶ್ವರಭಟ್ಟರು ಬರೆದ ಹೇಮಂತ ಎನ್ನುವ ಪದ್ಯಭಾಗದಿಂದ ಆಯ್ದುಕೊಳ್ಳಲಾಗಿದೆ.

ಸಂದರ್ಭ : ಈ ಮಾತನ್ನು ಕವಿ ಹೇಳಿದ್ದಾರೆ. ಹೇಮಂತ ಋತುವಿನ ಕಾಲದಲ್ಲಿ ಪ್ರಕೃತಿಯಲ್ಲಿ ಎತ್ತ ನೋಡಿದರೂ ಬಿಳಿ ಮಂಜು, ಹಿಮಗಾಳಿ ನಡುಗುತ್ತಿರುವ ನೀರವಲೋಕ ಎಲ್ಲ ಕಡೆ ಬರಡು ಬನಗಳು ಜಡವಾದ ಜನರು, ಎಲ್ಲ ಕಡೆ ಶೂನ್ಯ ಆವರಿಸಿರುವ ಭಾವ ಎಂದು ಕವಿ ಹೇಳಿದ್ದಾರೆ.

ಸ್ವಾರಸ್ಯ : ಹೇಮಂತ ಋತುವಿನಲ್ಲಿ ಪ್ರಕೃತಿಯಲ್ಲಾಗುವ ಬದಲಾವಣೆಯನ್ನು ಎಲ್ಲ ಕಡೆ ಹಿಮ ಕವಿದ ವಾತಾವರಣವಿರುವುದನ್ನು ಕವಿ ಇಲ್ಲಿ ಸ್ವಾರಸ್ಯಕರವಾಗಿ ವಿವರಿಸಿದ್ದಾರೆ.

5. ಅದಕೆ ತಲೆವಾಗುವುದೆ ಸೃಷ್ಟಿಯೊಳಮರ್ಮ.

ಆಯ್ಕೆ : ಈ ಮೇಲಿನ ವಾಕ್ಯವನ್ನು ಡಾ.ಎನ್.ವಿ. ಪರಮೇಶ್ವರಭಟ್ಟರು ಬರೆದ ಹೇಮಂತ ಎನ್ನುವ ಪದ್ಯಭಾಗದಿಂದ ಆಯ್ದುಕೊಳ್ಳಲಾಗಿದೆ.

ಸಂದರ್ಭ : ಈ ಮಾತನ್ನು ಕವಿ ಹೇಳಿದ್ದಾರೆ. ಹೇಮಂತನ ಕಠಿಣ ಶಾಸನವನ್ನು ತಲೆಬಾಗಿ ಸ್ವೀಕರಿಸಬೇಕು. ಇದೆ ಸೃಷ್ಟಿಯು ತನ್ನನ್ನು ಉಳಿಸಿಕೊಳ್ಳುವ ಒಳಮರ್ಮ. ಋತುಗಳಿಗೆ ತಕ್ಕಂತೆ ಕಾಲಕ್ಕೆ ತಕ್ಕಂತೆ ತನ್ನಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುವುದು ಪ್ರಕೃತಿಯ ಸಹಜ ಧರ್ಮ ಎನ್ನುವುದನ್ನು ಕವಿ ಮೇಲಿನ ವಾಕ್ಯದ ಮೂಲಕ ಹೇಳಿದ್ದಾರೆ.

ಸ್ವಾರಸ್ಯ : ಹೇಮಂತ ಋತುವಿನಲ್ಲಿ ಪ್ರಕೃತಿ ಜಡವಾದಂತೆ ಕಂಡರೂ ಮತ್ತೆ ಹೊಸ ಋತು ಬಂದಾಗ ಅದು ಚಿಗುರೊಡೆದು ನಳನಳಿಸುವಂತೆ ಮನುಷ್ಯನು ಕೂಡ ಹೊಸ ಕಾಲಕ್ಕೆ, ಹೊಸ ಬಿಸಿಲಿಗೆ ಕಾಯಬೇಕು. ಬಂದೆಲ್ಲ ಕಷ್ಟ - ಸುಖಗಳನ್ನು ನೈಸರ್ಗಿಕ ಸಹಜ ಎಂದು ಸ್ವೀಕರಿಸಬೇಕು ಎನ್ನುವುದು ಮೇಲಿನ ವಾಕ್ಯದ ಸ್ವಾರಸ್ಯವಾಗಿದೆ.

ಉ)ಮೊದಲೆರಡು ಪದಗಳಿಗಿರುವ ಸಂಬಂಧದಂತೆ ಮೂರನೆಯ ಪದಕ್ಕೆ ಸಂಬಂಧಿಸಿದ ಪದವನ್ನು ಬರೆಯಿರಿ.
1. ಸಿಂಗರ : ಸಿಂಗಾರ :: ಮರುತ : ಮಾರುತ
2. ಮೌನ :ಮಾತು : : ಜಡ : ಚೇತನ
3. ಬನ :ವನ : : ಮೊಗ : ಮುಖ
4. ಚಿಗುರೆಲೆ : ಲೋಪಸಂಧಿ: : ತಲೆವಾಗು : ಆಗಮ ಸಂಧಿ
5. ನೀರವ : ಮೌನ : : ಕಠಿಣ : ಕ್ಲಿಷ್ಟ
Please enable JavaScript in your browser to complete this form.
Full Name
Scroll to Top