ಮಹಾಭಾರತದ ಅರಣ್ಯಪರ್ವದಲ್ಲಿ ಯಕ್ಷನು(ಧರ್ಮದೇವ) ಯುಧಿಷ್ಠಿರ(ಧರ್ಮರಾಯ)ನನ್ನು ಪರೀಕ್ಷಿಸಿದುದು
ವನವಾಸದಲ್ಲಿದ್ದ ಪಾಂಡವರು ಒಂದು ದಿನ ಕಾಡಿನಲ್ಲಿ ಅಲೆಯುತ್ತ ವಿಪರೀತ ದಣಿದರು. ಯುಧಿಷ್ಠಿರ (ಧರ್ಮರಾಯ) ತನ್ನ ತಮ್ಮಂದಿರಿಗೆ ನೀರು ತರಲು ಹೇಳಿದಾಗ ಒಬ್ಬೊಬ್ಬರೇ ಹೋದರೂ, ಯಾರೂ ಮರಳಲಿಲ್ಲ. ಕಾರಣವೇನೆಂದು ತಿಳಿಯಲು ಸ್ವತಃ ಯುಧಿಷ್ಠಿರನೇ ತಮ್ಮಂದಿರನ್ನು ಹುಡುಕುತ್ತಾ ಹೊರಟನು. ಯಕ್ಷನೊಬ್ಬನ ಒಡೆತನದಲ್ಲಿದ್ದ ಕೊಳದ ಬಳಿಯಲ್ಲಿ ನಾಲ್ವರೂ ಪಾಂಡವರು ಪ್ರಜ್ಞಾಶೂನ್ಯರಾಗಿ ಬಿದ್ದುದನ್ನು ನೋಡಿದನು. ಮತ್ತು ಯಕ್ಷನಲ್ಲಿ ವಿಚಾರಿಸಿದನು.
ಆಗ ಯಕ್ಷನು, “ಧರ್ಮರಾಯ! ನನ್ನ ಪ್ರಶ್ನೆಗಳಿಗೆ ಉತ್ತರ ಹೇಳುವವರಿಗಷ್ಟೇ ಇಲ್ಲಿ ನೀರು ಕುಡಿಯಲು ಅವಕಾಶ. ನಾನು ಎಷ್ಟು ತಡೆದರೂ ನಿನ್ನ ಈ ತಮ್ಮಂದಿರು ನನಗೆ ಉತ್ತರಿಸದೆ ನೀರನ್ನು ತೆಗೆದುಕೊಳ್ಳಲು ಮುಂದಾದರು. ಆದುದರಿಂದ ನಾನು ಅವರ ಪ್ರಾಣ ತೆಗೆಯಬೇಕಾಯಿತು. ನನ್ನ ಪ್ರಶ್ನೆಗಳಿಗೆ ಉತ್ತರಿಸಲು ನಿನ್ನಿಂದ ಸಾಧ್ಯವಾದರೆ, ಅನಂತರ ಈ ನೀರನ್ನು ಕುಡಿಯಬಹುದು!” ಎಂದು ಯಕ್ಷನು ಹೇಳಿದನು.
ಅದಕ್ಕೆ ಉತ್ತರವಾಗಿ ಯುದಿಷ್ಠಿರನು, “ಯಕ್ಷ! ನಾನು ನಿನ್ನ ಕರಾರನ್ನು ಉಲ್ಲಂಘಿಸುವುದಿಲ್ಲ. ನಿನ್ನ ಪ್ರಶ್ನೆಗಳನ್ನು ಕೇಳು” ಎಂದು ಹೇಳಿದನು. ಧರ್ಮರಾಜನಿಗೆ ಯಕ್ಷ ಕೇಳಿದ ಪ್ರಶ್ನೆಗೆ, ಧರ್ಮರಾಜ ನೀಡಿದ ಉತ್ತರಗಳು.
ಭೂಮಿಗಿಂತ ದೊಡ್ಡವರು ಯಾರು? - ತಾಯಿ. ಗಾಳಿಗಿಂತ ವೇಗ ಉಳ್ಳದ್ದು ಯಾವುದು? - ಮನಸ್ಸು. ಹುಲ್ಲಿಗಿಂತ ಹೆಚ್ಚಾಗಿ ಬೆಳೆಯುವುದು ಯಾವುದು ?– ಚಿಂತೆ. ಉತ್ತಮವಾದ ಧನ ಯಾವುದು? - ವಿದ್ಯೆ. ಗಂಡನ ನಿಜವಾದ ಗೆಳತಿ ಯಾರು? - ಹೆಂಡತಿ. ರೋಗಿಯ ನಿಜವಾದ ಮಿತ್ರ ಯಾರು? - ವ್ಯೆದ್ಯ. ಅತ್ಯುತ್ತಮವಾದ ಲಾಭ ಯಾವುದು? - ಆರೋಗ್ಯ. ಅತ್ಯುತ್ತಮವಾದ ಸುಖ ಯಾವುದು? - ಸಂತ್ರುಪ್ತಿ. ಮಾನವನಿಗೆ ನಿಜವಾದ ಶತ್ರು ಯಾವುದು? - ಕೋಪ. ವಾಸಿಯಾಗದ ರೋಗ ಯಾವುದು? - ದುರಾಸೆ. ನಿಜವಾದ ಸಾಧು ಯಾರು? - ಸರ್ವರ ಹಿತ ಬಯಸುವವನು. ನಿಜವಾದ ಅಮ್ರುತ ಯಾವುದು? - ಹಸುವಿನ ಹಾಲು. ಪರಿಪೂರ್ಣ ಸುಖ ದೊರೆಯುವುದು ಯಾವಾಗ? - ಸದಾಚಾರದಿಂದ. ಸ್ವರ್ಗ ಸಿಗುವುದು ಹೇಗೆ?- ಸತ್ಯದಿಂದ ಇದ್ದಾಗ. ನಾವು ಬಿಡಲೇ ಬೇಕಾದ್ದು ಯಾವುದು?- ದುರಾಭಿಮಾನ, ಲೋಭ, ದುರಾಸೆ. ವಿಶ್ವದ ಅತಿ ದೊಡ್ಡ ಅಚ್ಚರಿ ಯಾವುದು? - ನಾವು ಶಾಶ್ವತ ಎಂಬ ಭಾವನೆ. ಅದಕ್ಕೆ ಯಕ್ಷನು, “ಯುಧಿಷ್ಠಿರ! ನೀನು ನನ್ನ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿದ್ದೀಯ, ಈಗ ಹೇಳು. ನಿನ್ನ ತಮ್ಮಂದಿರಲ್ಲಿ ನೀನು ಬಯಸಿದ ಒಬ್ಬನು ಜೀವಿಸುತ್ತಾನೆ
ಯಕ್ಷ: “ರಾಜನ್! ನಿನಗೆ ಪ್ರಿಯನಾದವನು ಭೀಮಸೇನ. ಅರ್ಜುನನ ಮೇಲೆ ನೀನು ಅವಲಂಬಿಸಿರುವೆ. ಹೀಗಿರುವಾಗ ಏಕೆ ನಿನ್ನ ದಾಯಾದಿ ನಕುಲನು ಜೀವಿತನಾಗಲು ಬಯಸುತ್ತೀಯೆ? ಹತ್ತುಸಾವಿರ ಆನೆಗಳ ಬಲಗಳುಳ್ಳ ಭೀಮನನ್ನು ಬಿಟ್ಟು ನಕುಲನೇ ಜೀವಿತನಾಗಬೇಕೆಂದು ಏಕೆ ಬಯಸುತ್ತೀಯೆ? ಭೀಮಸೇನನೇ ನಿನಗೆ ಪ್ರಿಯನಾದವನೆಂದು ಜನರು ಹೇಳುತ್ತಾರೆ. ಹೀಗಿರುವಾಗ ಯಾವ ಭಾವನೆಯಿಂದ ನೀನು ನಿನ್ನ ಮಲತಾಯಿಯ ಮಗ ಈ ನಕುಲನು ಜೀವಿತನಾಗಬೇಕೆಂದು ಬಯಸುತ್ತೀಯೆ? ಯಾರ ಬಾಹುಬಲವನ್ನು ಸರ್ವ ಪಾಂಡವರೂ ಆಶ್ರಯಿಸಿರುವರೋ ಆ ಅರ್ಜುನನನ್ನು ಬಿಟ್ಟು ನಕುಲನೇ ಜೀವಿತನಾಗಬೇಕೆಂದು ಏಕೆ ಬಯಸುತ್ತೀಯೆ?”
ಯುಧಿಷ್ಠಿರನು ಹೇಳಿದನು: “ಕ್ರೂರಿಯಾಗದೇ ಇರುವುದು ಪರಮ ಧರ್ಮ. ನಾನು ಕ್ರೂರನಾಗಬಯಸುವುದಿಲ್ಲ. ನನ್ನನ್ನು ಧರ್ಮಶೀಲ ರಾಜನೆಂದು ಜನರು ಸದಾ ತಿಳಿದುಕೊಂಡಿದ್ದಾರೆ. ಸ್ವಧರ್ಮದಿಂದ ನಾನು ವಿಚಲಿತನಾಗುವುದಿಲ್ಲ. ಕುಂತಿಯಂತೆ ನನಗೆ ಮಾದ್ರಿಯೂ ಕೂಡ. ಅವರಿಬ್ಬರ ನಡುವೆ ನನಗೆ ಭೇದವಿಲ್ಲ. ಇಬ್ಬರು ತಾಯಂದಿರೂ ಸಮನಾಗಿರಬಯಸುತ್ತೇನೆ. ಆದುದರಿಂದ ನಕುಲನು ಜೀವಿಸಲಿ!” ಈ ಉತ್ತರದಿಂದ ಸಂತುಷ್ಟನಾದ ಯಕ್ಷನು, ನಿನ್ನ ಎಲ್ಲ ತಮ್ಮಂದಿರೂ ಬದುಕಲಿ!” ಎಂದು ಹರಸಿ ಎಲ್ಲರನ್ನೂ ಜೀವಂತಗೊಳಿಸಿದನು.