ಪೀಠಿಕೆ.
ಸಮಾಜದ ಅಭಿವೃದ್ಧಿಗೆ ತೊಡಕನ್ನುಂಟುಮಾಡುವ ಪದ್ಧತಿಗಳನ್ನು ಸಾಮಾಜಿಕ ಪಿಡುಗುಗಳು ಎಂದು ಕರೆಯುತ್ತಾರೆ. ಭಾರತದಂತಹ ಅಭಿವೃದ್ದಿ ಪಥದಲ್ಲಿರುವ ರಾಷ್ಟ್ರಗಳಲ್ಲಿ ಇಂತಹ ಪದ್ಧತಿಗಳು,ದೇಶವನ್ನು ಅಭಿವೃದ್ಧಿಪಥದತ್ತ ಕೊಂಡೊಯ್ಯಲು ಕಂಟಕವಾಗಿವೆ. ಇವುಗಳನ್ನು ನಿವಾರಿಸಿಕೊಂಡಾಗ ಮಾತ್ರ ಸಮಾಜ ಸ್ವಾಸ್ಥ್ಯ ವನ್ನು ಕಾಣಲು ಸಾಧ್ಯ.

ವಿಷಯ
ಬೆಳವಣಿಗೆ.
ಮುಖ್ಯ ವಾಗಿ ಕಾಣಬರುವ ಕೆಲವು ಸಾಮಾಜಿಕ ಪಿಡುಗುಗಳು
ಜಾತಿಯತೆ,ಬಡತನ, ಬಾಲಾಪರಾಧ,
ಹೆಣ್ಣು ಭ್ರೂಣ ಹತ್ಯೆ,
ಲಿಂಗ ತಾರತಮ್ಯ
ಮಿತಿಮೀರಿದ ಜನಸಂಖ್ಯೆ,
ನಿರುದ್ಯೋಗ,
ಭ್ರಷ್ಟಾಚಾರ,
ಮಹಿಳೆಯರ ಶೋಷಣೆ,
ಬಾಲ್ಯವಿವಾಹ,
ವರದಕ್ಷಿಣೆ ಕಿರುಕುಳ ಮತ್ತು ಇತ್ಯಾದಿ.

ಜಾತಿಯತೆ.
ಜಾತಿ ವ್ಯವಸ್ಥೆಯು ವರ್ಗವನ್ನು ನಿರ್ಧರಿಸುವ ಅಥವಾ ಹುಟ್ಟಿನಿಂದಲೇ ಜನರಿಗೆ ಸ್ಥಾನಮಾನವನ್ನು ನಿಗದಿಪಡಿಸುವ ಒಂದು ವ್ಯವಸ್ಥೆಯಾಗಿದೆ. ಜಾತಿ ವ್ಯವಸ್ಥೆಯು ಭಾರತದ ಇತಿಹಾಸದಲ್ಲಿ ದೀರ್ಘಕಾಲದಿಂದ ಇರುವ ಪ್ರಮುಖ ಸಾಮಾಜಿಕ ಪಿಡುಗಾಗಿದೆ. ಸಮಾಜದ ಮನೋಭಾವ ಮತ್ತು ನಡವಳಿಕೆಗಳಲ್ಲಿ ಸ್ಥಿರವಾದ ಮತ್ತು ಸಾರ್ಥಕವಾದ ಬದಲಾವಣೆಗಳು ಆಗಬೇಕಾದರೆ, ಅದು ಕಾಲಕ್ರಮೇಣ ಮತ್ತು ಸತತ ಪ್ರಯತ್ನಗಳ ಮೂಲಕವೇ ಸಾಧ್ಯ. ಆದರೆ,  ಇದು ಸಮಾಜದ ಎಲ್ಲಾ ಸ್ತರಗಳಲ್ಲಿನ ಜನರ ಸಹಕಾರ ಮತ್ತು ಸಕ್ರಿಯ ಪಾಲುಗಾರಿಕೆಯಿಂದ ಮಾತ್ರ ಸಾಧ್ಯ. ಸಮಾಜದ ಪ್ರತಿಯೊಬ್ಬ ಸದಸ್ಯರು ತಮ್ಮ ಮನೋಭಾವ ಮತ್ತು ನಡವಳಿಕೆಗಳಲ್ಲಿ ಸಮಾನತೆಯ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಮಾತ್ರ ನಿಜವಾದ ಬದಲಾವಣೆ ಸಾಧ್ಯ.

ಬಡತನ.
ಬಡತನ ಎಂದರೆ ಜನರ ಮೂಲಭೂತ ಅಗತ್ಯಗಳನ್ನು ಪೂರೈಸದ ಪರಿಸ್ಥಿತಿ. ಸಂಪನ್ಮೂಲಗಳು ಮತ್ತು ಅವಕಾಶಗಳು ಸೀಮಿತವಾದಾಗ ಮತ್ತು ಜನಸಂಖ್ಯೆಯು ಅಧಿಕವಾಗಿರುವಾಗ, ನಿರುದ್ಯೋಗ ಪರಿಸ್ಥಿತಿಯು ಅಂತಿಮವಾಗಿ ಬಡತನಕ್ಕೆ ಕಾರಣವಾಗುತ್ತದೆ.

ಬಾಲಕಾರ್ಮಿಕ ಸಮಸ್ಯೆ.
ಸಾಮಾನ್ಯವಾಗಿ, ಅಪ್ರಾಪ್ತ ವಯಸ್ಸಿನ ಮಕ್ಕಳ ದುಡಿಮೆಯನ್ನು ಬಾಲಕಾರ್ಮಿಕತನ ಎಂದು ಕರೆಯಲಾಗುತ್ತದೆ. ಭಾರತ ಸಂವಿಧಾನದ ಪ್ರಕಾರ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಆರ್ಥಿಕ ಸಂಪಾದನೆಯ ಉದ್ದೇಶದಿಂದ ದುಡಿಮೆ ಮಾಡುತ್ತಿದ್ದರೆ ಅಂತಹವರನ್ನು ಬಾಲ ಕಾರ್ಮಿಕರು ಎಂದು ಕರೆಯಲಾಗಿದೆ. ಮಕ್ಕಳ ದುಡಿತವೆಂಬುದು ಸಾಮಾಜಿಕ ವ್ಯವಸ್ಥೆಯ ಒಂದು ಗಂಭೀರ ಪಿಡುಗಾಗಿದೆ.

ಹೆಣ್ಣು ಭ್ರೂಣ ಹತ್ಯೆ.
ಸ್ವಾಭಾವಿಕವಾಗಿ ತಾಯಿಯ ಗರ್ಭದಲ್ಲಿ ಹೆಣ್ಣು ಭ್ರೂಣವಿದ್ದು, ಅದು ತಂದೆ ತಾಯಿಗೆ ಬೇಡವಾದರೆ ಅದನ್ನು ಗರ್ಭದಲ್ಲಿಯೇ ಕೊಂದುಹಾಕುವುದೆ ಹೆಣ್ಣು ಭ್ರೂಣ ಹತ್ಯೆ ಎನ್ನುವರು. ಗಂಡು ಮಕ್ಕಳ ಬಯಕೆಯಿಂದ ಆಧುನಿಕ ತಂತ್ರಜ್ಞಾನದ ದುರ್ಬಳಕೆ ನಡೆಯುತ್ತಿದೆ.

ಲಿಂಗ ತಾರತಮ್ಯ.
ಲಿಂಗತ್ವ ಎಂಬುದು ಮಹಿಳೆಯರು ಮತ್ತು ಪುರುಷರು ಎಂದು ಗುರುತಿಸಿಕೊಳ್ಳುವುದ್ದಕ್ಕಾಗಿ ಇರುವ ಪರಿಕಲ್ಪನೆಯಾಗಿದೆ. ಇದು ಸ್ತ್ರೀ ಪುರುಷರಿಬ್ಬರಿಗೂ ಅವರವರ ಸ್ಥಾನವನ್ನು ಸೂಚಿಸುತ್ತದೆ. ಲಿಂಗತಾರತಮ್ಯದಲ್ಲಿ ಪ್ರಕಾರಗಳಿವೆ ಅವುಗಳೆಂದರೆ ಜನನ ಪ್ರಮಾಣದಲ್ಲಿ ಅಸಮಾನತೆ, ಮೂಲ ಸೌಕರ್ಯದಲ್ಲಿ ಅಸಮಾನತೆ, ಅವಕಾಶಗಳಲ್ಲಿ ಅಸಮಾನತೆ, ಒಡೆತನದ ಅಸಮಾನತೆ, ಕೌಟುಂಬಿಕ ಅಸಮಾನತೆ.

ಬಾಲ್ಯವಿವಾಹ.
ಕಾನೂನಿನ ಪ್ರಕಾರ ಬಾಲ್ಯವಿವಾಹ ಎಂದರೆ 18 ವರ್ಷದೊಳಗಿನ ಹುಡುಗಿಗೆ ಅಥವಾ 21 ವರ್ಷದೊಳಗಿನ ಹುಡುಗನಿಗೆ ಮದುವೆ ಮಾಡಿದರೆ ಅದನ್ನು ಬಾಲ್ಯವಿವಾಹ ಎನ್ನಲಾಗುತ್ತದೆ. ಲಿಂಗತಾರತಮ್ಯ, ಶಿಕ್ಷಣ ಇಲ್ಲದಿರುವಿಕೆ, ಬಾಲಕಾರ್ಮಿಕತೆ, ಇವೆಲ್ಲವೂ ಬಾಲ್ಯ ವಿವಾಹಕ್ಕೆ ಕಾರಣವಾಗಿವೆ.

ಮಕ್ಕಳ ಸಾಗಾಣಿಕೆ ಮತ್ತು ಮಾರಾಟ.
18 ವರ್ಷದೊಳಗಿನ ಯಾವುದೆ ವ್ಯಕ್ತಿಯ ನೇಮಕಾತಿ, ಸಾಗಾಣಿಕೆ, ವರ್ಗಾವಣೆ, ಆಶ್ರಯ, ರವಾನಿಸುವುದು ಅಥವಾ ಶೋಷಣೆಯ ಉದ್ದೇಶಕ್ಕಾಗಿ ನಡೆಯುವ ಕೃತ್ಯವನ್ನು ಮಕ್ಕಳ ಸಾಗಾಣಿಕೆ ಎನ್ನುವರು. ಹೆಚ್ಚಾಗುತ್ತಿರುವ ಸಾಮಾಜಿಕ ಅಸಮಾನತೆ, ಕೌಶಲ್ಯಗಳ ಕೊರತೆ, ಅಸಮಾನ ವ್ಯಾಪಾರ ಸಂಬಂಧ ಇವೆಲ್ಲವೂ ಮಕ್ಕಳ ಸಾಗಾಣಿಕೆ ಮತ್ತು ಮಾರಾಟಕ್ಕೆ ಕಾರಣವಾಗಿವೆ.

ವರದಕ್ಷಿಣೆ.
ವಿವಾಹದ ಉಡುಗೊರೆಯಾಗಿ ವಧುವಿನ ಕುಟುಂಬದವರಿಂದ ನಾನಾರೂಪದಲ್ಲಿ ಅಪೇಕ್ಷಿಸಲಾಗುವ ಸ್ವತ್ತು, ಚಿನ್ನಾಭರಣ, ನಗದು ಅಥವಾ ವಾಹನ ಇತ್ಯದಿಗಳು ವವರದಕ್ಷಿಣೆಯ ರೂಪಗಳಾಗಿರುತ್ತವೆ. ವರದಕ್ಷಿಣೆಯನ್ನು ಕೊಡುವುದು ಮತ್ತು ಪಡೆಯುವುದು ಶಿಕ್ಷಾರ್ಹ ಅಪರಾಧ.

ಉಪಸಂಹಾರ

ಸಾಮಾಜಿಕ ಪಿಡುಗುಗಳು ದೇಶಕ್ಕೆ ಅಂಟಿದ ಕಪ್ಪು ಚುಕ್ಕೆಯಾಗಿದೆ. ಸಾಮಾಜಿಕ ಬದಲಾವಣೆಗಳು ರಾತ್ರೋರಾತ್ರಿ ಸಾಧ್ಯವಾಗುವಂತಹದ್ದಲ್ಲ. ಇದನ್ನು ನಿರ್ಮೂಲನೆ ಮಾಡುವತ್ತ ನಾವೆಲ್ಲರೂ ಸಾಗಬೇಕಾಗಿದೆ. ಇದು ಕೇವಲ ಒಬ್ಬರಿಂದ ಸಾದ್ಯವಿಲ್ಲ, ಎಲ್ಲರೂ ಇವುಗಳ ಬಗ್ಗೆ ಸರಿಯಾದ ರೀತಿಯಲ್ಲಿ ಕ್ರಮತೆಗೆದುಕೊಳ್ಳಬೇಕಾಗಿದೆ.
Scroll to Top