1.ಪೂರ್ಣವಿರಾಮ (.) Full stop
2.(,)ಅಲ್ಪವಿರಾಮ (Comma)
3.(;)ಅರ್ಧವಿರಾಮ (Semi colon)
4.(?)ಪ್ರಶ್ನೆಸೂಚಕ ಚಿಹ್ನೆ (Question mark)
5.(!)ಆಶ್ಚರ್ಯಸೂಚಕ ಚಿಹ್ನೆ (Exclamatory mark)
6.(“ “)ಉದ್ಧರಣ ಚಿಹ್ನೆ ( Inverted Commas)
7.(‘ ‘) ವಿಶೇಷಕ(Inverted commas)
8.( )ಆವರಣ (Brackets)
9.(:) ವಿವರಣಾತ್ಮಕ(Colen)
10.(+)ಅಧಿಕಚಿಹ್ನೆ (Addition mark)
11.(=) ಸಮಾನಾರ್ಥಕಚಿಹ್ನೆ(Equal)

1.ಪೂರ್ಣವಿರಾಮ(.) Full stop
ಆವರಣದಲ್ಲಿ ಕೊಟ್ಟಿರುವ ಗುರುತು ಪೂರ್ಣವಿರಾಮದ ಸಂಕೇತ. ಬರವಣಿಗೆಯಲ್ಲಿ ಪೂರ್ಣವಿರಾಮದ ಸಂಕೇತ. ಬರವಣಿಗೆಯಲ್ಲಿ ಪ್ರತಿವಾಕ್ಯವೂ ಪೂರ್ಣ ಆದಾಗ ವಾಕ್ಯದ ಕೊನೆಯಲ್ಲಿ ಈ ಗುರುತನ್ನುಇಡಬೇಕಾಗುವುದು. ಇಲ್ಲವಾದರೆ ಅರ್ಥೈಸಿಕೊಳ್ಳುವಾಗ ಹಲವಾರು ಅನರ್ಥಗಳಿಗೆ ಆಸ್ಪದ ಉಂಟಾಗುವುದು.
ಉದಾಹರಣೆ:
ರಾಮನು ಮರವನ್ನು ಕಡಿದನು.
ಮಗುವು ಮಲಗಿತು.
ವಿದ್ಯಾರ್ಥಿಗಳು ಪದ್ಯವನ್ನುಹಾಡುತ್ತಾರೆ.
ಊರಿನಲ್ಲಿ ಇಂದು ಜಾತ್ರಾ ಮಹೋತ್ಸವ ಇದೆ.

 2.ಅಲ್ಪವಿರಾಮ(,)  Comma
ಹಲವಾರು ನಾಮಪದಗಳು ವಾಕ್ಯದಲ್ಲಿ ಒಟ್ಟಿಗೆ ಬಂದಾಗ, ವಾಕ್ಯವು ಪೂರ್ಣ ಆಗುವ ಮೊದಲು, ಪ್ರತಿನಾಮ ಪದ ಶಬ್ದಗಳ ಮುಂದೆ ಅಲ್ಪ ವಿರಾಮದ ಗುರುತಾದ (,) ಅನ್ನು ಉಪಯೋಗಿಸುತ್ತೇವೆ. ಸಮುಚ್ಚಯ ಪದಗಳ ಅಂತ್ಯದಲ್ಲಿ “ಊ'' ವಿಸರ್ಗವು
ಬಂದಾಗಲೂ, ಈ ಗುರುತು ಹಾಕುತ್ತೇವೆ. ಇದೇ ರೀತಿ ಸಂಬೋಧನೆಯ ಪದಗಳ ಮುಂದೆಯೂ ಸಹ ಈ ಅಲ್ಪವಿರಾಮದ ಗುರುತನ್ನು ಉಪಯೋಗಿಸುತ್ತೇವೆ.
ಉದಾಹರಣೆ :
ರಾಮಾ, ಊಟಮಾಡು.
ಪರಮಾತ್ಮಾ, ಕಾಪಾಡು.
ಮಕ್ಕಳೇ, ಬನ್ನಿರಿ,
ರಾಮನೇ, ಇಲ್ಲಿ ಬಾ.

 3.ಅರ್ಧವಿರಾಮ(;) Semi colon
ಯಾವುದೇ ಪ್ರಧಾನವಾಕ್ಯಕ್ಕೆ ಸಂಬಂಧಿಸಿದಂತೆ ಅಧೀನ ವಾಕ್ಯಗಳು
ಜೊತೆಯಲ್ಲಿ ಬಂದಾಗ ಅರ್ಧವಿರಾಮದ ಗುರುತನ್ನು ನಮೂದಿಸುತ್ತೇವೆ.
ಉದಾಹರಣೆ :
ಅವನು ಕಾಶಿರಾಮೇಶ್ವರಗಳಿಗೆ ಹೋಗಿಬಂದನು;
ಆದರೂ ಕೆಟ್ಟ ಬುದ್ಧಿಯನ್ನು ಬಿಡಲಿಲ್ಲ.
ಆ ದಿನ ಮಳೆ ಬಂದಿತ್ತು; ಆದುದರಿಂದ ಆಟವಾಡಲಿಲ್ಲ.
ಇದು ಆಟಗಾರರಿಗೆ
ಸ್ವಲ್ಪ ನಿರಾಸೆಯನ್ನುಂಟುಮಾಡಿತು.
ತಾವು ಕಡಿಮೆ ಮಾತನಾಡಿದ್ದೀರಿ; ಹೆಚ್ಚು ಕೆಲಸ ಮಾಡಿದ್ದೀರಿ.ಅಂದು ಮಳೆ ಬಂದಿತು; ಆದುದರಿಂದ ಆಟವಾಡಲಿಲ್ಲ.

4.ಪ್ರಶ್ನೆಸೂಚಕಚಿಹ್ನೆ (?) Mark of Interrogation
ಪ್ರಶ್ನವಾಚಕವಾಕ್ಯದ ಕೊನೆಯಲ್ಲಿ ಪ್ರಶ್ನಸೂಚಕ ಚಿಹ್ನೆಯನ್ನು ನಮೂದಿಸ ಬೇಕಾಗುತ್ತದೆ.
ಉದಾಹರಣೆ :
ರಾಮನು ಎಲ್ಲಿಗೆ ಹೋದ?
ನೀನು ಯಾರು?
ಸೀತಾ ಇನ್ನೂ ಏಕೆ ಬರಲಿಲ್ಲ?
ಕರ್ನಾಟಕದ ರಾಜಧಾನಿ ಯಾವುದು?

5.ಆಶ್ಚರ್ಯಸೂಚಕ ಚಿಹ್ನೆ (!) Exclamatory Sentence
ಹರ್ಷ, ಆಶ್ಚರ್ಯ, ದುಃಖ, ಕೋಪ ಮೊದಲಾದ ಭಾವಗಳನ್ನು ವ್ಯಕ್ತಗೊಳಿಸುವ ಸಮಯದಲ್ಲಿ ಆಶ್ಚರ್ಯ ಸೂಚಕ ಚಿಹ್ನೆ (!)
ಯನ್ನು ಬಳಸಲಾಗುವುದು.
 ಉದಾಹರಣೆ :
ಆಹಾ! ತಂಗಾಳಿ ಹೇಗೆ ಬೀಸುತ್ತಿದೆ!
ಆಹಾ! ಮೈಸೂರು ದಸರಾ ಎಷ್ಟೊಂದು ಸುಂದರವಾಗಿದೆ!
ಅಯ್ಯೋ ದೇವರೇ! ಹೀಗಾಯಿತಲ್ಲ!
ಛೀ! ಮೂರ್ಖ ತೊಲಗು!

6.ಉದ್ಧರಣಚಿಹ್ನೆ (“ “) Inverted Commas
ಇನ್ನೊಬ್ಬರು ಹೀಗೆ ಹೇಳಿದರೆಂದು ಒಬ್ಬರ ಮಾತನ್ನು ಉದ್ಧರಿಸಿ ಬರೆಯುವಾಗ ಅಥವಾ ಇನ್ನೊಬ್ಬರ ನೇರ ಮಾತುಗಳನ್ನುತೋರಿಸುವಾಗ ಈ ಚಿಹ್ನೆಯನ್ನು ಉಪಯೋಗಿಸಬೇಕು.
ಉದಾಹರಣೆ :
ಮಹಾಭಾರತದಲ್ಲಿ "ಧರ್ಮಕ್ಕೇ ಎಂದಿಗೂ ಜಯ" ಎಂದು ಹೇಳಲಾಗಿದೆ.
ನಿನ್ನೆ ಭಾಷಣದಲ್ಲಿ ನಮ್ಮ ಮುಖ್ಯೋಪಾಧ್ಯಾಯರು “ಪ್ರತಿಯೊಬ್ಬ ವಿದ್ಯಾರ್ಥಿಯೂ ಕಷ್ಟಪಟ್ಟು ಓದಬೇಕು” ಎಂದು ಹೇಳಿದರು. 7.ವಿಶೇಷಕಚಿಹ್ನೆ (‘ ‘) Inverted Commas ವಿಶೇಷ ರೀತಿಯ ಹಾಗೂ ವಿಧಾಯಕ ರೂಪದ ಪದವನ್ನು ಸೂಚಿಸಲು ಈ ರೀತಿಯ ವಿಶೇಷಕ ಚಿಹ್ನೆಯನ್ನು ಬಳಸಲಾಗುವುದು. ಉದಾಹರಣೆ :
ಕನ್ನಡದಲ್ಲಿ ಅನೇಕ ‘ಇಂಗ್ಲೀಷ್’ ಪದಗಳು ಸೇರಿ ಬಳಕೆಗೆ ಬಂದಿವೆ ನಿನ್ನೆ ಉಪಾಧ್ಯಾಯರು ‘ಹೈಡೋಜನ್’ ವಿಷಯದಲ್ಲಿ ಪಾಠ ಹೇಳಿದರು. ಶ್ರೀ ಬಿ.ಎಂ. ಶ್ರೀಕಂಠಯ್ಯನವರ ಕಾವ್ಯನಾಮ ‘ಶ್ರೀ’ ಎಂದು.

8.ಆವರಣಚಿಹ್ನೆ ( ) Brackets
ವಾಕ್ಯದಲ್ಲಿ ಹಲವೆಡೆ ಹೆಚ್ಚಿನ ಮಾಹಿತಿಗಳನ್ನು ನೀಡುವಾಗ, ಅರ್ಥ ವಿವರಣೆ ಹಾಗೂ ಸಮಾನಾರ್ಥ ಪದವನ್ನು ಸೂಚಿಸುವಾಗ ಈ ಚಿಹ್ನೆಯನ್ನು ಬಳಸಲಾಗುವುದು.
ಉದಾಹರಣೆ:
ಮಯನ್ಮಾರ್ ( ಬರ್ಮಾ ) ಪ್ರಸ್ತುತ ಮಿಲಿಟರಿ ಆಡಳಿತದ ಹಿಡಿತದಲ್ಲಿದೆ .
ಶಾಂತಿ (ನನ್ನ ತಂಗಿಯ ಮಗಳು) ಈಗ ಅಮೇರಿಕದಲ್ಲಿ ನೆಲೆಸಿದ್ದಾಳೆ.
ಮನೆಯ ಮುಂದೆ ಹೀಗೆ ಬರೆದಿದೆ: ಸರ್ವೇಜನಾಃ ಸುಖಿನೋಭವಂತು (ಎಲ್ಲರೂ ಸುಖಿಗಳಾಗಿರಲಿ).
ನೀರನ್ನು ವಿಭಜಿಸಿದರೆ ಆಮ್ಲಜನಕ (ಆಕ್ಸಿಜನ್) ಜಲಜನಕ (ಹೈಡ್ರೋಜನ್)ಗಳು ಉತ್ಪತ್ತಿಯಾಗುತ್ತವೆ.

9.ವಿವರಣಾತ್ಮಕಚಿಹ್ನೆ (:) Colon
ಒಂದು ಅಭಿಪ್ರಾಯವನ್ನು ವಿವರಿಸುವಾಗ, ಅದು ಮುಂದಿನಂತೆ ಇದೆ ಎಂದು ತೋರಿಸುವ ಸಂದರ್ಭದಲ್ಲಿ ಈ ಚಿಹ್ನೆಯನ್ನು ಬಳಸಲಾಗುತ್ತದೆ. ಉದಾಹರಣೆ:
ಇನ್ನು ಪಂಪ ಮಹಾಕವಿಯ ವಿಚಾರ: ಪಂಪ ಕವಿಯು ಕನ್ನಡದ ಬಹು ದೊಡ್ಡ ಕವಿ …….. ಇತ್ಯಾದಿ.
ಇಲ್ಲಿ ಪಂಪ ಕವಿಯ ವಿಚಾರ-ಎಂಬ ಪದದ ಮುಂದೆ ವಿವರಣಾತ್ಮಕವಾದ (:) ಈ ಚಿಹ್ನೆ ಹಾಕಲಾಗಿದೆ.
ನೀನು ಈ ದಿನ ಮಾಡಬೇಕಾದ ಕೆಲಸಗಳು : ಬ್ಯಾಂಕ್ ಗೆ ಹೋಗಿ ಹಣ ತರುವುದು, ಅಂಗಡಿಯಿಂದ ಸಾಮಾನು ತರುವುದು, ಹೀಗೆ (:)ಈ ಚಿನ್ಹೆಯನ್ನು ಮುಂದೆ ವಿವರಣೆ ಮಾಡಿದೆ ಎಂಬರ್ಥದಲ್ಲಿ ಹಾಕಬೇಕಾಗುವುದು.
10.ಅಧಿಕ ಚಿಹ್ನೆ (+) Plus
ಎರಡುಪದಗಳನ್ನೋ, ಅಥವಾ ವಿಭಕ್ತಿ ಪ್ರತ್ಯಯಗಳನ್ನೋ, ಕೂಡಿಸಿ ಸಂಧಿಮಾಡಿ ಹೇಳುವಾಗ, ಎರಡು ಪದಗಳನ್ನು ಕೂಡಿಸಿ ಸಮಾಸ ಮಾಡುವಾಗ, ಅಥವಾ ಎರಡು ಸಂಖ್ಯೆಗಳ ಕೂಡಿಸಿದೆ ಎಂಬರ್ಥ ಸೂಚನೆ ಮಾಡುವಾಗ ಸಾಮಾನ್ಯವಾಗಿ '+' ಈ ಚಿಹ್ನೆ ಬಳಸುವುದುಂಟು. 
ಇದಕ್ಕೆ ಅಧಿಕ (ಹೆಚ್ಚು) ಚಿಹ್ನೆ ಎಂದು ಕರೆಯುತ್ತಾರೆ. ಉದಾಹರಣೆ : ರಾಮ + ಇಂದ = ರಾಮನಿಂದ, ಎರಡು + ಮೂರು = ಐದು. ೮ + ೪ = ೧೨. ಇತ್ಯಾದಿ. 11.ಸಮಾನಾರ್ಥಕ ಚಿಹ್ನೆ(=) Equals ಎರಡು ಪದಗಳ ಅರ್ಥವೂ ಸಮ ಎನಿಸಿದಾಗ, ಆ ಭಾವವನ್ನು ವ್ಯಕ್ತಗೊಳಿಸಲು = ಗುರುತನ್ನು ಉಪಯೋಗಿಸಲಾಗುವುದು. ಉದಾಹರಣೆ :
ರಜತ = ಬೆಳ್ಳಿ
ಸುವರ್ಣ = ಚಿನ್ನ
ನಭ = ಆಕಾಶ
ವೃಕ್ಷ = ಮರ
Please enable JavaScript in your browser to complete this form.
Full Name
Scroll to Top