ಭಾಷೆಯು ಸಂವಾಹನದ ವಾಹಕ. ಅದು ಇಲ್ಲದೆ ಯಾವುದೇ ಒಂದು ಪ್ರಾಣಿ ಸಂವಹಿಸಲು ಸಾಧ್ಯವಿಲ್ಲ. ಮಾನವ ಇತರೆ ಪ್ರಾಣಿಗಳಿಗಿಂತ ಭಿನ್ನ ರೀತಿಯ ಸಂವಾಹನದ ಮೂಲಕ ಮತ್ತೊಬ್ಬ ಮಾನವನೊಡನೆ ಸಂವಾಹಿಸಲು ವಿಶಿಷ್ಟವಾದ ಭಾಷೆಗಳನ್ನು ರೂಪಿಸಿಕೊಂಡಿದ್ದಾನೆ.ಭಾಷೆ ಎಂಬುವುದು ಕೇವಲ ಸಂವಾಹನಕ್ಕೆ ಅವಶ್ಯವಾದ ಮಾಧ್ಯಮ ಆಗಿದ್ದರೂ , ವ್ಯಕ್ತಿಯ ಭಾವ ಹೊಮ್ಮಲು ಇರುವ ವಾಹಕವೂ ಸಹ ಆಗಿದೆ.ಭಾಷೆಯು ಸಂವಾಹನದ ವಾಹಕವಾಗಿದೆ . ಅದು ಇಲ್ಲದೆ ಯಾವುದೇ ಒಂದು ಪ್ರಾಣಿ ಸಂವಹಿಸಲು ಸಾಧ್ಯವಿಲ್ಲ. ಮಾನವ ಇತರೆ ಪ್ರಾಣಿಗಳಿಗಿಂತ ಭಿನ್ನವಾದ ರೀತಿಯಲ್ಲಿ ಸಂವಾಹನದ ಮೂಲಕ ಮತ್ತೊಬ್ಬ ಮಾನವನೊಡನೆ ಸಂವಹಿಸಲು ವಿಶಿಷ್ಟವಾದ ಭಾಷೆಗಳನ್ನು ರೂಪಿಸಿಕೊಂಡಿದ್ದಾನೆ.
ಭಾಷೆ ಎಂಬುವುದು ಕೇವಲ ಸಂವಾಹನಕ್ಕೆ ಅವಶ್ಯವಾದ ಮಾಧ್ಯಮವೆ ಆದರೂ, ವ್ಯಕ್ತಿಯ ಭಾವನೆಗಳು ಹೊರ ಹೊಮ್ಮಲು ಇರುವ ವಾಹಕವೂ ಸಹ ಆಗಿದೆ. ಇಂದು ವಿವಿಧ ರೂಪಗಳಲ್ಲಿ ಸುಮಾರು ೪೫ ದಶಲಕ್ಷ ಜನರು ಆಡುನುಡಿಯಾಗಿ ಬಳಸುತ್ತಿದ್ದಾರೆ. ನಮ್ಮ ಕನ್ನಡ ಭಾಷೆಯು ಭಾರತದ 22 ಅಧಿಕೃತ ಭಾಷೆಗಳಲ್ಲಿ ಒಂದಾಗಿದೆ.
ಒಂದು ಭೌಗೋಳಿಕ ಎಲ್ಲೆಯೊಳಗೆ ಜನರು ಹೊಂದಿರುವ ಸಂಸ್ಕೃತಿಯು ಉಳಿಯಬೇಕೆಂದರೆ ಆ ಎಲ್ಲೆಯೊಳಗಿನ ಭಾಷೆ ಅಸ್ತಿತ್ವದಲ್ಲಿರಲೇಬೇಕು.
ಕನ್ನಡ ಭಾಷೆ ಇಂದು ಇಂಗ್ಲೀಷಿನ ವ್ಯಾಪಕ ಬಳಕೆಯಿಂದಾಗಿ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ. ಕನ್ನಡದ ಬಗ್ಗೆ ಹೇಳುವುದಾದರೆ, ಕನ್ನಡವು ದಕ್ಷಿಣ ಭಾರತದ ಭಾಷೆಗಳ ಮೂಲವೆಂದು ಗುರುತಿಸಲ್ಪಟ್ಟಿರುವ ಮೂಲದ್ರಾವಿಡದಿಂದ ಯಾವಾಗ ಆಡುಭಾಷೆಯಾಗಿ ಪರಿವರ್ತಿತವಾಯಿತೆಂದು ಖಚಿತವಾಗಿ ಹೇಳಲು ಅಸಾಧ್ಯ.
ಸರಿಸುಮಾರು ಎರಡೂವರೆ ಸಾವಿರ ವರ್ಷಗಳ ಸಾಂಸ್ಕೃತಿಕ ಇತಿಹಾಸವನ್ನು ಹೊಂದಿದ ಈ ಕನ್ನಡ ನಾಡನ್ನು ಶಾತವಾಹನ, ಗಂಗ, ಕದಂಬ, ಚಾಲುಕ್ಯ, ರಾಷ್ಟ್ರಕೂಟ ಹೊಯ್ಸಳ ಮುಂತಾದ ರಾಜವಂಶದವರು ಆಳುವುದಲ್ಲದೆ ರಾಷ್ಟ್ರದ ಇತಿಹಾಸದಲ್ಲಿ ತಮ್ಮ ಕೀರ್ತಿಗಾಥೆಯನ್ನು ಸುವರ್ಣಾಕ್ಷರಗಳಿಂದ ದಾಖಲಿಸಿದ್ದಾರೆ.
ಬೇಲೂರು-ಹಳೆಬೀಡು, ಬಾದಾಮಿ-ಪಟ್ಟದಕಲ್ಲು, ಐಹೊಳೆ, ಹಂಪಿ ಮುಂತಾದ ಸ್ಥಳಗಳು ನಮ್ಮ ಭವ್ಯ ಇತಿಹಾಸ ಮತ್ತು ಪರಂಪರೆಗೆ ಸಾಕ್ಷಿಯಾಗಿವೆ. ಪ್ರಾಚೀನ ಕಾಲದಿಂದಲೂ ನಮ್ಮ ನಾಡು ಧರ್ಮ, ಸಾಹಿತ.. ಸಂಗೀತ. ನೃತ್ಯ .. ಕಲೆ. ಕ್ರೀಡೆ, ಶಿಲ್ಪಕಲೆ,ಮತ್ತು ವಾಸ್ತು ಶಿಲ್ಪಗಳಿಗೆ ಹೆಸರುವಾಸಿಯಾಗಿದೆ.
ಕನ್ನಡ ಸಾಹಿತ್ಯ
ಕನ್ನಡ ಬರವಣಿಗೆಯ ಪ್ರಪ್ರಥಮ ಉದಾಹರಣೆ ದೊರಕಿರುವುದು ತಾಳಗುಂದದ ಸಿಂಹಕಟಾಂಜನ ಶಾಸನ ದಲ್ಲಿ (ಸು. ಕ್ರಿ.ಶ೩೭೦ ರಿಂದ೪೫೦). ಪ್ರಸಿದ್ಧವಾದ ಬಾದಾಮಿ ಶಾಸನಗಳು ಪುರಾತನ ಕನ್ನಡ ಬರವಣಿಗೆಯ ಮತ್ತಷ್ಟು ಉದಾಹರಣೆಗಳನ್ನು ನೀಡುತ್ತವೆ. ಉಪಲಬ್ಧವಾಗಿರುವ ಪ್ರಥಮ ಕನ್ನಡ ಪುಸ್ತಕವೆಂದರೆ ೯ ನೇ ಶತಮಾನದ ಅಮೋಘವರ್ಷ ನೃಪತುಂಗನ [ಕವಿರಾಜಮಾರ್ಗ] ನೃಪತುಂಗನ ಆಸ್ಥಾನದ ಕವಿಯಾಗಿದ್ದ ಶ್ರೀವಿಜಯನ ಈ ಪುಸ್ತಕ ಕನ್ನಡ ಕಾವ್ಯ, ಕನ್ನಡ ನಾಡು, ಮತ್ತು ಕನ್ನಡಿಗರ ಬಗ್ಗೆ ಬರೆಯಲ್ಪಟ್ಟ ಒಟ್ಟಾರೆ ಸಾರಾಂಶವೆನ್ನಬಹುದು.
ಇದಕ್ಕೆ ಹಿಂದೆ ಬರೆಯಲ್ಪಟ್ಟ ಕೆಲವು ಕನ್ನಡ ಪುಸ್ತಕಗಳ ಉಲ್ಲೇಖ ಈ ಪುಸ್ತಕದಲ್ಲಿ ಬಂದಿರುವ ಆಧಾರದ ಮೇಲೆ ಕನ್ನಡ ಸಾಹಿತ್ಯದ ಉಗಮ ಸುಮಾರು ಕ್ರಿ.ಶ. ೬- ೭ನೇ ಶತಮಾನಗಳಲ್ಲಿ ಆದದ್ದಿರಬಹುದು. ಆದರೆ ಕವಿರಾಜಮಾರ್ಗದ ಹಿಂದಿನ ಯಾವ ಕೃತಿಗಳೂ ಇದುವರೆಗೆ ದೊರಕಿಲ್ಲ. ಕನ್ನಡ ಸಾಹಿತ್ಯದ ಚರಿತ್ರೆಯನ್ನು ಮೂರು ಘಟ್ಟಗಳಾಗಿ ವಿಂಗಡಿಸ ಬಹುದು: ಹಳೆಗನ್ನಡ, ನಡುಗನ್ನಡ ಹಾಗೂ ಆಧುನಿಕ ಕನ್ನಡ.
ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಹತ್ತನೇ ಶತಮಾನದಿಂದ ಸುಮಾರು ಹನ್ನೆರಡನೇ ಶತಮಾನದವರೆಗಿನ ಕಾಲಘಟ್ಟವನ್ನು ಹಳೆಗನ್ನಡ ಎಂದು ಗುರುತಿಸಬಹುದು. ಈ ಕಾಲದ ಸಾಹಿತ್ಯ ಮುಖ್ಯವಾಗಿ ಜೈನ ಧರ್ಮವನ್ನು ಅವಲಂಬಿಸಿದೆ. ಕನ್ನಡ ಚರಿತ್ರೆಯ ಈ ಘಟ್ಟಕ್ಕೆ ಆದಿ-ಕಾವ್ಯ ಎಂದೂ ಸಹ ಕರೆಯಬಹುದು. ಈ ಕಾಲದ ಅತಿ ಪ್ರಸಿದ್ದ ಕವಿಯೆಂದರೆ ಪಂಪ (ಕ್ರಿ.ಶ. 902-975). ಪಂಪನ ವಿಕ್ರಮಾರ್ಜುನ ವಿಜಯ ಅಥವಾ ಪಂಪ ಭಾರತ ಇಂದಿಗೂ ಮೇರು ಕೃತಿಯೆಂದು ಪರಿಗಣಿತವಾಗಿದೆ. ಪಂಪ ಭಾರತ ಮತ್ತು ತನ್ನ ಇನ್ನೊಂದು ಮುಖ್ಯಕೃತಿಯಾದ ಆದಿಪುರಾಣದ ಮೂಲಕ ಪಂಪ ಕನ್ನಡ ಕಾವ್ಯಪರಂಪರೆಯ ದಿಗ್ಗಜರಲ್ಲಿ ಒಬ್ಬನಾಗಿದ್ದಾನೆ. ಪಂಪ ಭಾರತ ಸಂಸ್ಕೃತ ಮಹಾಭಾರತದ ಕನ್ನಡ ರೂಪಾಂತರ. ತನ್ನ ಮಾನವತಾವಾದ ಹಾಗೂ ಗಂಭೀರ ಲೇಖನಶೈಲಿಯ ಮೂಲಕ ಕನ್ನಡದ ಅತ್ಯಂತ ಪ್ರಭಾವಶಾಲಿ ಲೇಖಕರಲ್ಲಿ ಒಬ್ಬನಾಗಿದ್ದಾನೆ.'ಮಾನವ ಕುಲ ತಾನೊಂದೇ ವಲಂ' ಎಂದು ವಿಶ್ವಮಾನವ ತತ್ವವನ್ನು ಸಾರಿದ ಜಗದ ಕವಿ ಪಂಪ.
ಇದೇ ಕಾಲದ ಇನ್ನೊಬ್ಬ ಪ್ರಮುಖ ಲೇಖಕನೆಂದರೆ ಶಾಂತಿನಾಥ ಪುರಾಣವನ್ನು ರಚಿಸಿದ ಪೊನ್ನ (939-966) ಈ ಕಾಲದ ಮತ್ತೊಬ್ಬ ಹೆಸರಾಂತ ಕವಿ ರನ್ನ (949-?). ರನ್ನನ ಪ್ರಮುಖ ಕೃತಿಗಳು ಜೈನ ಧರ್ಮೀಯವಾದ ಅಜಿತ ತೀರ್ಥಂಕರ ಪುರಾಣ ಮತ್ತು ಗದಾಯುದ್ಧಂ ಅಥವಾ ಸಾಹಸಭೀಮ ವಿಜಯ. ಇದು ಇಡೀ ಮಹಾಭಾರತದ ಒಂದು ಸಿಂಹಾವಲೋಕನ ದೃಷ್ಟಿ. ಮಹಾಭಾರತ ಯುದ್ಧದ ಕೊನೆಯ ದಿನದಲ್ಲಿ ಸ್ಥಿತವಾಗಿದ್ದರೂ ಸಿಂಹಾವಲೋಕನ ಕ್ರಮದಲ್ಲಿ ಇಡಿಯ ಮಹಾಭಾರತವನ್ನು ಪರಿಶೀಲಿಸುತ್ತದೆ. ಛಂದಸ್ಸಿನ ದೃಷ್ಟಿಯಿಂದ ಈ ಕಾಲದ ಕಾವ್ಯ ಚಂಪೂ ಶೈಲಿಯಲ್ಲಿದೆ (ಒಂದು ರೀತಿಯ ಗದ್ಯ ಮಿಶ್ರಿತ ಪದ್ಯ)
ನಡುಗನ್ನಡ
ನಡುಗನ್ನಡ ಸಾಹಿತ್ಯದಲ್ಲಿ ಅನೇಕ ಹೊಸ ಸಾಹಿತ್ಯ ಪ್ರಕಾರಗಳು ಬೆಳಕಿಗೆ ಬಂದವು. ಇವುಗಳಲ್ಲಿ ಮುಖ್ಯವಾದವು ರಗಳೆ, ಸಾಂಗತ್ಯ ಮತ್ತು ದೇಸಿ. ಈ ಕಾಲದ ಸಾಹಿತ್ಯ ಜೈನ, ಹಿಂದೂ ಹಾಗೂ ಜಾತ್ಯತೀತ ಬೋಧನೆಗಳ ಮೇಲೆ ಆಧಾರಿತವಾಗಿದೆ. ಈ ಘಟ್ಟದ ಪ್ರಮುಖ ಲೇಖಕರಲ್ಲಿ ಇಬ್ಬರೆಂದರೆ ಹರಿಹರ ಮತ್ತು ರಾಘವಾಂಕ. ಇಬ್ಬರೂ ತಮ್ಮದೇ ಶೈಲಿಯಲ್ಲಿ ಕನ್ನಡ ಸಾಹಿತ್ಯದ ದಾರಿಯನ್ನು ಬೆಳಗಿದವರು.
ಹರಿಹರ ರಗಳೆ ಸಾಹಿತ್ಯವನ್ನು ಬಳಕೆಗೆ ತಂದನು, ತನ್ನ ಶೈವ ಮತ್ತು ವೀರಶೈವ ಕೃತಿಗಳ ಮೂಲಕ. ರಾಘವಾಂಕ ತನ್ನ ಆರು ಕೃತಿಗಳ ಮೂಲಕ ಷಟ್ಟದಿ ಛಂದಸ್ಸನ್ನು ಜನಪ್ರಿಯಗೊಳಿಸಿದನು. ಅವನ ನ ಮುಖ್ಯ ಕೃತಿ ಹರಿಶ್ಚಂದ್ರ ಕಾವ್ಯ, ಪೌರಾಣಿಕ ಪಾತ್ರವಾದ ಹರಿಶ್ಚಂದ್ರನ ಜೀವನವನ್ನು ಕುರಿತದ್ದು. ಈ ಕೃತಿ ಸಹ ತನ್ನ ತೀವ್ರವಾದ ಮಾನವತಾವಾದಕ್ಕೆ ಪ್ರಸಿದ್ಧವಾಗಿದೆ. ಇದೇ ಕಾಲದ ಇನ್ನೊಬ್ಬ ಪ್ರಸಿದ್ಧ ಜೈನ ಕವಿ ಜನ್ನ. ತನ್ನ ಕೃತಿಗಳಾದ ಯಶೋಧರ ಚರಿತೆ ಮತ್ತು ಅನಂಥನಾಥ ಪುರಾಣಗಳ ಮೂಲಕ ಜೈನ ಸಂಪ್ರದಾಯದ ಬಗ್ಗೆ ಬರೆದನು. ಇದೇ ಕಾಲದ ಕನ್ನಡ ವ್ಯಾಕರಣದ ಬಗೆಗಿನ ಮುಖ್ಯ ಕೃತಿ ಕೇಶಿರಾಜನ ಶಬ್ದಮಣಿದರ್ಪಣ.
ವಚನಗಳು ಎಂದು ಸಾಮಾನ್ಯವಾಗಿ ಕರೆಯಲಾಗುವ ಲಿಂಗಾಯತ ಶರಣರ ವಚನಗಳು ಮುಕ್ತ ಛಂದಸ್ಸಿನಲ್ಲಿವೆ. ಬಸವೇಶ್ವರ, ಅಕ್ಕಮಹಾದೇವಿ ಮೊದಲಾದವರ ವಚನಗಳನ್ನು ಶಾಸ್ತ್ರೀಯ ಸಂಗೀತದಲ್ಲಿ ಅಳವಡಿಸಿ ಮಲ್ಲಿಕಾರ್ಜುನ ಮನಸೂರ ಮೊದಲಾದ ಹಿಂದುಸ್ತಾನಿ ಸಂಗೀತ ಕಾರರು ಹಾಡಿದ್ದಾರೆ. ಶರಣರ ನಂತರದ ಕವಿಯಾದ ಸರ್ವಜ್ಞರ ವಚನಗಳು ಮಾತ್ರ ತ್ರಿಪದಿಯಲ್ಲಿವೆ.ವಚನಗಳು ಅಂದಿನ ಕಾಲದ ಸಾಮಾಜಿಕ, ಧಾರ್ಮಿಕ ಮತ್ತು ಆರ್ಥಿಕ ಪರಿಸ್ಥಿತಿಗಳ ಬಗೆಗಿನ ಯೋಚನಾಧಾರೆಗಳು. ಇನ್ನೂ ಮುಖ್ಯವಾಗಿ, ವಚನ ಸಾಹಿತ್ಯ ಅಂದಿನ ಸಾಮಾಜಿಕ ಕ್ರಾಂತಿಯ ಪ್ರಕ್ರಿಯೆಗೆ ಕನ್ನಡಿ ಹಿಡಿಯುತ್ತದೆ. ಬಸವಣ್ಣನವರಿಂದ ಆರಂಭವಾದ ಈ ಕ್ರಾಂತಿ ಜಾತಿ, ಮತ, ಧರ್ಮಗಳ ಯೋಚನೆಗಳ ಕ್ರಾಂತಿಕಾರಿ ಮರು-ಪರಿಶೀಲನೆಗೆ ದಾರಿ ಮಾಡಿಕೊಟ್ಟಿತು.
ವಚನ ಸಾಹಿತ್ಯದಿಂದ ಬಂದ ಮುಖ್ಯ ಬೋಧನೆಗಳೆಂದರೆ ಕಾಯಕವೇ ಕೈಲಾಸ ಮತ್ತು ಅಧ್ಯಾತ್ಮಿಕತೆಯ ಬಗ್ಗೆ ಹೊಸ ನೋಟ. ವಚನ ಸಾಹಿತ್ಯದ ಪ್ರಮುಖ ಹರಿಕಾರರೆಂದರೆ ಬಸವೇಶ್ವರ (1134-1196), ಅಲ್ಲಮಪ್ರಭು ಮತ್ತು ಕನ್ನಡದ ಮೊದಲ ಮಹಿಳಾ ಲೇಖಕಿಯಾದ ಅಕ್ಕ ಮಹಾದೇವಿ (12ನೇ ಶತಮಾನ) ಇವರಲ್ಲದೆ ದೇವರ ದಾಸಿಮಯ್ಯ, ಅಂಬಿಗರ ಚೌಡಯ್ಯ ಇನ್ನೂ ಮೊದಲಾ ವಚನಕಾರರು ವಚನ ಸಾಹಿತ್ಯಕ್ಕೆ ಉತ್ತಮ ಕಾಣಿಕೆ ನೀಡಿದ್ದಾರೆ.
ದಾಸ ಸಾಹಿತ್ಯ
ದಾಸ ಸಾಹಿತ್ಯ (ಭಕ್ತಿ ಸಾಹಿತ್ಯ) 15ನೇ ಶತಮಾನದಲ್ಲಿ ಆರಂಭಗೊಂಡ ಭಕ್ತಿ ಪಂಥದ ಹರಿದಾಸರಿಂದ ವಿರಚಿತವಾದದ್ದು. ಈ ಪದ್ಯಗಳಿಗೆ ಸಾಮಾನ್ಯವಾಗಿ 'ಪದ' ಗಳೆಂದು ಹೆಸರು. ಇವು ಭಗವಂತನಲ್ಲಿ ಒಂದಾಗ ಬಯಸುವ ಭಕ್ತನ ಭಾವವನ್ನು ಪ್ರತಿಬಿಂಬಿಸುತ್ತವೆ. ಈ ಸಾಹಿತ್ಯ ಸಂಗೀತದೊಂದಿಗೂ ನಿಲುಕಿದೆ.
ದಾಸ ಸಾಹಿತ್ಯ ಸಂಗೀತ ಪದ್ಧತಿಗಳಲ್ಲೊಂದಾದ ಕರ್ನಾಟಕ ಸಂಗೀತಕ್ಕೆ ಬುನಾದಿಯಾಗಿದೆ. ದಾಸರ ಪದಗಳಿಗೆ ದೇವರನಾಮಗಳೆಂದೂ ಹೆಸರು. ಈ ಪ್ರಕಾರದ ಮುಖ್ಯ ಕನ್ನಡ ಕವಿಗಳೆಂದರೆ ಪುರಂದರದಾಸ (1494-1564) ಮತ್ತು ಕನಕದಾಸ(1509-1609). ಇವರನ್ನು ದಾಸ ಸಾಹಿತ್ಯದ ಅಶ್ವಿನೀ ದೇವತೆಗಳೆಂದು ಕರೆಯಲಾಗಿದೆ.
ನವ್ಯ ಸಾಹಿತ್ಯ
ನವೋದಯ ಎಂದರೆ ಹೊಸ ಹುಟ್ಟು/ಹೊಸದು. ಬ್ರಿಟಿಷ್ ಆಳ್ವಿಕೆಯ ಪ್ರಾರಂಭಿಕ ಹಂತಗಳಲ್ಲಿ ಹೆಚ್ಚು ಬೆಳಕು ಕಾಣದೆ ಇದ್ದ ಕನ್ನಡ ಸಾಹಿತ್ಯ,19ನೇ ಶತಮಾನದ ಕೊನೆಗೆ ಹಾಗು ಇಪ್ಪತ್ತನೆ ಶತಮಾನದ ಆರಂಭದಲ್ಲಿ ಹೊಸ ಹುಟ್ಟು ಪಡೆಯಿತು. ಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಗೆ ಕಾರಣವಾಯಿತು. ಈ ಹಂತದಲ್ಲಿ ಬಿ.ಎಂ.ಶ್ರೀ, ಕುವೆಂಪು ,ಶಿವರಾಮ ಕಾರಂತ ಮೊದಲಾದ ಶ್ರೇಷ್ಠ ಲೇಖಕರು ಬೆಳಕಿಗೆ ಬಂದರು. ಈ ಕಾಲದ ಸಾಹಿತ್ಯ ಪ್ರಕಾರಗಳು ರೊಮ್ಯಾಂಟಿಕ್ ಇಂಗ್ಲಿಷ್ ಕಾವ್ಯ ಮತ್ತು ಗ್ರೀಕ್ ರುದ್ರನಾಟಕಗಳಿಂದ ಪ್ರಭಾವಿತವಾಯಿತು. ಈ ಘಟ್ಟದ ಬೆಳವಣಿಗೆಯನ್ನು ತಂದವರು ಬಿ. ಎಂ.ಶ್ರೀ, ತಮ್ಮ ಇಂಗ್ಲೀಷ್ ಗೀತಗಳ ಪುಸ್ತಕ ದೊಂದಿಗೆ. ಅನೇಕ ಸುಶಿಕ್ಷಿತ ಕನ್ನಡಿಗರು, ಮುಖ್ಯವಾಗಿ ಶಿಕ್ಷಕ ವೃತ್ತಿಯಲ್ಲಿದ್ದವರು, ತಮ್ಮ ಮಾತೃಭಾಷೆಯಲ್ಲಿ ಬರೆಯುವುದರ ಮಹತ್ವವನ್ನು ಕಂಡು ಕೊಂಡು ಕನ್ನಡ ಕನ್ನಡ ಸಾಹಿತ ಸಾಹಿತ್ಯಕ್ಕೆ ಪ್ರೇರಣೆಯನ್ನೊದಗಿಸಿದರು.
ಇದಕ್ಕೆ ಉದಾಹರಣೆಯಾಗಿ ಕುವೆಂಪು - ತಮ್ಮ ಒಬ್ಬ ಶಿಕ್ಷಕರಿಂದ (ಬ್ರಿಟಿಷ್ ಮೂಲದವರು) ಕನ್ನಡದಲ್ಲಿ ಬರೆಯುವುದರ ಮಹತ್ವವನ್ನು ಕಂಡುಕೊಂಡು ಮುಂದೆ ರಾಷ್ಟ್ರಕವಿ ಬಿರುದಿಗೆ ಪಾತ್ರರಾದರು. ಅವರ ಪ್ರಕೃತಿಪ್ರೇಮ, ಮಾನವನ ಉನ್ನತಿಯಲ್ಲಿ ನಂಬಿಕೆ ಮತ್ತು ಪ್ರಕೃತಿ ಮತ್ತು ದೇವರ ಸಮ್ಮಿಶ್ರಣವನ್ನು ಕಾಣುವ ಅವರ ಮನಸ್ಸು ಅವರನ್ನು ಕನ್ನಡದ ಉಚ್ಚ ಕವಿಗಳಲ್ಲಿ ಒಬ್ಬರನ್ನಾಗಿ ಮಾಡಿವೆ. ಅವರ ಅತಿ ಪ್ರಸಿದ್ದ ಕಾವ್ಯಕೃತಿ ಶ್ರೀ ರಾಮಾಯಣ ದರ್ಶನಂ.
ಇದಕ್ಕೆ ಉದಾಹರಣೆಯಾಗಿ ನಿಂತಿರುವ ಮತ್ತೊಬ್ಬ ಲೇಖಕರೆಂದರೆ ಶಿವರಾಮ ಕಾರಂತ - ಅತ್ಯಂತ ಬುದ್ಧಿಮತ್ತೆಯ, ಆಳವಾದ ಆದರ್ಶಗಳುಳ್ಳ ವ್ಯಕ್ತಿತ್ವ, ಹಾಗೂ ಅಷ್ಟೇ ಆಳವಾದ ಸಾಮಾಜಿಕ ಕಳಕಳಿಯಿದ್ದ ಲೇಖಕರು. ಅವರ ಶಕ್ತಿಶಾಲಿ ಸಾಮಾಜಿಕ ಕಾದಂಬರಿಗಳಲ್ಲಿ ಪ್ರಸಿದ್ಧವಾದವು-ಚೋಮನ ದುಡಿ, ಬೆಟ್ಟದ ಜೀವ, ಮೈಮನಗಳ ಸುಳಿಯಲ್ಲಿ, ಮರಳಿ ಮಣ್ಣಿಗೆ ಮತ್ತು ಮೂಕಜ್ಜಿಯ ಕನಸುಗಳು ಮೊದಲಾದುವು.
1947 ರ ಭಾರತದ ಸ್ವಾತಂತ್ರ್ಯಾನಂತರ ಕನ್ನಡ ಸಾಹಿತ್ಯದಲ್ಲಿ ಇನ್ನೊಂದು ಹೊಸ ಸಾಹಿತ್ಯ ಪ್ರಕಾರದ ಉಗಮವಾಯಿತು: ನವ್ಯ. ಈ ಪ್ರಕಾರದ ಪಿತಾಮಹರೆಂದರೆ ಗೋಪಾಲಕೃಷ್ಣ ಅಡಿಗರು. ನವ್ಯ ಕವಿಗಳು ನಿರಾಶಾವಾದಿ ಬುದ್ಧಿಜೀವಿಗಳಿಗಾಗಿ ಹಾಗೂ ನಿರಾಶಾ ವಾದಿ ಬುದ್ಧಿಜೀವಿಗಳಂತೆ ಕಾವ್ಯ ರಚಿಸಿದರು. ಭಾಷಾಪ್ರಯೋಗದ ಚಮತ್ಕಾರ ಹಾಗೂ ಕಾವ್ಯತಂತ್ರ ಹೊಸ ಎತ್ತರವನ್ನು ಈ ಪ್ರಕಾರದಲ್ಲಿ ಕಂಡಿತು.
ಈ ಕಾಲದ ಪ್ರಸಿದ್ಧ ಕವಿಗಳು, ಕಾದಂಬರಿಕಾರರು ಮತ್ತು ನಾಟಕಕಾರರು ಕುವೆಂಪು. ಬಿ.ಎಂ.ಶ್ರೀ.
ದ.ರಾ.ಬೇಂದ್ರೆ. ಪುತಿನ. ಕೆ.ಎಸ್.ನರಸಿಂಹಸ್ವಾಮಿ. ಎಂ.ಗೋಪಾಲಕೃಷ್ಣ ಅಡಿಗ.
ಪ್ರೊ.ನಿಸಾರ್ ಅಹಮದ್. ಚೆನ್ನವೀರ ಕಣವಿ.
ಡಾ.ಚಂದ್ರಶೇಖರ ಕಂಬಾರ. ಡಿ.ವಿ.ಜಿ. ಶಿವರಾಮ ಕಾರಂತ. ಮಾಸ್ತಿ ವೆಂಕಟೇಶ ಐಯ್ಯಂಗಾರ್. ಅ.ನ.ಕೃ.
ಗಿರೀಶ್ ಕಾರ್ನಾಡ್. ಯು.ಆರ್.ಅನಂತಮೂರ್ತಿ. ವಿ. ಕೃ. ಗೋಕಾಕ್. ಗೊರೂರು ರಾಮಸ್ವಾಮಿ ಅಯ್ಯಂಗಾರ್ ಕೆ.ವಿ.ಅಯ್ಯರ್. ಮಂಜೇಶ್ವರ ಗೋವಿಂದ ಪೈ ತೀ ನಂ ಶ್ರೀ. ಎಸ್. ಎಲ್. ಭೈರಪ್ಪ. ಕೆ.ಪಿ. ಪೂರ್ಣಚಂದ್ರ ತೇಜಸ್ವಿ. ಟಿ.ಪಿ.ಕೈಲಾಸಂ. ಶ್ರೀರಂಗ. ಬಿ.ವಿ. ಕಾರಂತ ಹಾಗೂ ಮುಂತಾದವರು.