ನಾಮ ಪದ: ಒಂದು ವಸ್ತು, ಒಬ್ಬ ವ್ಯಕ್ತಿ, ಒಂದು ಸ್ಥಳದ ಹೆಸರಾಗಿರಬಹುದು ಅಥವಾ ಒಂದು ಗುಂಪನ್ನು ಸೂಚಿಸುವ ಪದವಾಗಿರಬಹುದು ಅಥವಾ ಗುಣ, ಸ್ವಭಾವ, ಸಂಖ್ಯೆ, ಸ್ಥಾನ, ಅಳತೆ, ತೂಕ ಇತ್ಯಾದಿಗಳನ್ನು ಸೂಚಿಸುವ ಪದಗಳಾಗಿರಬಹುದು. ಅವುಗಳನ್ನು ನಾಮಪದಗಳೆಂದು ಕರೆಯುತ್ತೇವೆ. ಇದನ್ನು ಸಂಜ್ಞಾ ಎಂದೂ ಕರೆಯುವರು.

ಉದಾಹರಣೆ : ಅವನು, ಅವಳು, ಅದು, ಅವು, ನೀನು,
ನೀವು, ನಾನು, ಯಾವನು, ಇದು, ಏನು ಇತ್ಯಾದಿ.
ಹೀಗೆ ಯಾರಾದರೂ ವ್ಯಕ್ತಿಯ, ವಸ್ತುವಿನ, ಜಾಗ ಮೊದಲಾದವುಗಳ ಹೆಸರನ್ನು ತಿಳಿಸುವ ಪದಗಳು ನಾಮಪದಗಳಾಗಿರುತ್ತವೆ.

ನಾಮಪದದ ವಿಧಗಳು
ಅ)ವಸ್ತುವಾಚಕ: ವಸ್ತುಗಳ ಹೆಸರುಗಳನ್ನು ಹೇಳುವ ಶಬ್ದಗಳೆಲ್ಲವೂ ವಸ್ತುವಾಚಕಗಳು . ಉದಾ: ಮನುಷ್ಯ, ಬಸವ, ಮುದುಕ, ಮರ, ಹಣ್ಣು, ಅಡವಿ, ಶಾಲೆ. ವಸ್ತುವಾಚಕದಲ್ಲಿ ರೂಢನಾಮ, ಅಂಕಿತನಾಮ, ಅನ್ವರ್ಥನಾಮ ಎಂದು ಮೂರು ಉಪ ವಿಧಗಳಿವೆ.

ಆ) ರೂಢನಾಮ: ರೂಢಿಯಿಂದ ಬಂದ ನಾಮವಾಚಕಗಳು ರೂಢನಾಮಗಳು ಎನಿಸುವುವು.
ಉದಾ: ನದಿ, ಪರ್ವತ, ದೇಶ, ಊರು, ಮರ. ಮನುಷ್ಯ, ಹುಡುಗ.

ಇ)ಅಂಕಿತನಾಮ: ವ್ಯವಹಾರದ ಉಪಯೋಗಕ್ಕೆ ಇಟ್ಟುಕೊಂಡ ಹೆಸರುಗಳೆಲ್ಲಾ ಅಂಕಿತನಾಮಗಳು.
ಉದಾ: ಗಂಗಾ, ಬ್ರಹ್ಮಪುತ್ರ, ಹಿಮಾಲಯ, ಭಾರತ, ಬೇಲೂರು,

ಈ) ಅನ್ವರ್ಥನಾಮ:ಅರ್ಥಕ್ಕೆ ಅನುಗುಣವಾಗಿ ಇಟ್ಟ ಹೆಸರುಗಳೆಲ್ಲಾ ಅನ್ವರ್ಥನಾಮಗಳು.
ದಾ: ಯೋಗಿ, ವ್ಯಾಪಾರಿ, ಜಾಣ, ಇತ್ಯಾದಿ.

ಗುಣವಾಚಕಗಳು:
ವಸ್ತುಗಳ ಗುಣ, ರೀತಿ ಸ್ವಭಾವಗಳನ್ನು ತಿಳಿಸುವ ವಿಶೇಷಣಗಳೆಲ್ಲಾ ಗುಣವಾಚಕಗಳು.
ಉದಾ: ಕೆಂಪು, ದೊಡ್ಡ, ಚಿಕ್ಕ, ಹಳೆಯ, ಕರಿಯ, ಕೆಟ್ಟ, ಒಳ್ಳೆಯ,

ಸಂಖ್ಯಾವಾಚಕಗಳು:
ಸಂಖ್ಯೆಯನ್ನು ಹೇಳುವ ಶಬ್ದಗಳೆಲ್ಲವೂ ಸಂಖ್ಯಾವಾಚಕ ಎನಿಸುವುವು.
ಉದಾ: ಒಂದು, ಎರಡು, ಹತ್ತು, ಸಾವಿರ, ಲಕ್ಷ.

ಸಂಖ್ಯೇಯವಾಚಕಗಳು:
ಸಂಖ್ಯೆಯಿಂದ ಕೂಡಿದ ಶಬ್ದಗಳೆಲ್ಲವೂ ಸಂಖ್ಯೇಯವಾಚಕಗಳು ಎನಿಸುವುವು,.
ಉದಾ: ಒಂದನೆಯ, ಇಮ್ಮಡಿ, ಹತ್ತರಿಂದ ಮುಂತಾದವು.

ಭಾವನಾಮಗಳು:
ಭಾವನೆಗಳನ್ನು ಸೂಚಿಸುವ ಶಬ್ದಗಳೇ ಭಾವನಾಮಗಳು.
ಉದಾ: ಓಹೋ, ಅಯ್ಯೋ, ಅಬ್ಬಬ್ಬ.

ಪರಿಮಾಣವಾಚಕಗಳು:
ವಸ್ತುಗಳ ಸಾಮಾನ್ಯ ಅಳತೆ, ಪರಿಮಾಣ, ಗಾತ್ರ-ಇತ್ಯಾದಿಗಳನ್ನು ಹೇಳುವ ಶಬ್ದಗಳನ್ನು ಪರಿಮಾಣವಾಚಕಗಳೆನ್ನುವರು.
ಉದಾ : ಅಷ್ಟು, ಇಷ್ಟು, ಹಲವು, ಕೆಲವು, ಅನಿತು

ಪ್ರಕಾರವಾಚಕಗಳು:
ವಸ್ತುಗಳ ಸ್ಥಿತಿ ಅಥವಾ ರೀತಿಗಳನ್ನು ತಿಳಿಸುವ ಶಬ್ದಗಳೆಲ್ಲ ಪ್ರಕಾರವಾಚಕಗಳೆನಿಸುವುವು. ಇವೂ ಒಂದು ಬಗೆಯ ಗುಣವಾಚಕಗಳೇ.
ಉದಾ : ಅಂಥ, ಅಂಥಹುದು, ಇಂಥ, ಇಂಥದು, ಎಂತಹ

ದಿಗ್ವಾಚಕಗಳು:
ದಿಕ್ಕುಗಳ ಹೆಸರನ್ನು ಸೂಚಿಸುವ ಶಬ್ದಗಳೆಲ್ಲ ದಿಗ್ವಾಚಕಗಳು.
ಉದಾ: ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ, ಈಶಾನ್ಯ, ವಾಯುವ್ಯ

ಸರ್ವನಾಮಗಳು:
ನಾಮಪದಗಳ ಬದಲಿಗೆ ಬಳಸುವ ಪದಗಳಿಗೆ ಸರ್ವನಾಮಗಳು ಎನಿಸುವುವು.
ಉದಾ: ಅವನು, ಅವಳು, ಅದು, ಅವು, ನೀನು, ನೀವು, ನಾನು.

ಸರ್ವನಾಮದಲ್ಲಿ ಮೂರು ವಿಧ.
1. ಪುರುಷಾರ್ಥಕ ಸರ್ವನಾಮ
2. ಪ್ರಶ್ನಾರ್ಥಕ ಸರ್ವನಾಮ
3. ಆತ್ಮಾರ್ಥಕ ಸರ್ವನಾಮ

ಪುರುಷಾರ್ಥಕ ಸರ್ವನಾಮ :
ಕನ್ನಡದ ಸರ್ವನಾಮಗಳಲ್ಲಿ ಪುರುಷಾರ್ಥಕ ಸರ್ವನಾಮವನ್ನು ಬಹಳ ವ್ಯವಸ್ಥಿತವಾಗಿ ಬಳಸಲಾಗಿದೆ.

ಪುರುಷಾರ್ಥಕ ಸರ್ವನಾಮದಲ್ಲಿ ಮೂರು ವಿಧ.
ಅ. ಉತ್ತಮ ಪುರುಷ ಸರ್ವನಾಮ : ಆ). ಮಧ್ಯಮ ಪುರುಷ ಸರ್ವನಾಮ : ಇ). ಪ್ರಥಮ /ಅನ್ಯ ಪುರುಷ ಸರ್ವನಾಮ :

1ಅ). ಉತ್ತಮ ಪುರುಷ ಸರ್ವನಾಮ : ತನ್ನನ್ನು ತಾನೇ ಸಂಬೋಧಿಸಿ ಕೊಳ್ಳಲು ಬಳಸುವ ಸರ್ವನಾಮವೇ ಉತ್ತಮ ಪುರುಷ ಸರ್ವನಾಮ. ಇದು ಹಳೆಗನ್ನಡದಲ್ಲಿ ಆಂ, ಆನ್, ನಾನ್, ನಾಂ ಎಂಬ ಏಕವಚನ- ಬಹುವಚನ ರೂಪದಲ್ಲಿದ್ದವು. ನಡುಗನ್ನಡ ಕಾಲದಲ್ಲಿ ನಾನ್, ನಾಂ ಎಂಬ ರೂಪ ಪಡೆದವು. ಹೊಸಗನ್ನಡದ ವೇಳೆ ಸ್ವರಾಂತ್ಯ ರೂಪ ಪಡೆದು ನಾನು, ನಾವು ಎಂಬ ಬಳಕೆಯಾಯಿತು
1ಆ). ಮಧ್ಯಮ ಪುರುಷ ಸರ್ವನಾಮ : ತನ್ನ ಎದುರಿಗೆ ಇರುವವರನ್ನು ಸಂಬೋಧಿಸಲು ಬಳಸುವ ಪದವೇ ಮಧ್ಯಮ ಪುರುಷ ಸರ್ವನಾಮ. ಹಳೆಗನ್ನಡ ಕಾಲದಲ್ಲಿ ನೀಂ – ನೀನ್ ಎಂದು ಬಳಕೆಯಾಗುತ್ತಿತ್ತು. ಹೊಸಗನ್ನಡ ಕಾಲದಲ್ಲಿ ಸ್ವರಾಂತ್ಯರೂಪ ಪಡೆದು ನೀನು, ನೀವು ಎಂದು ಬಳಕೆಯಾಗುತ್ತಿದೆ.

1ಇ). ಪ್ರಥಮ ಪುರುಷ : ತಾನು ಹಾಗೂ ಎದುರಿನ ವ್ಯಕ್ತಿ ಇಬ್ಬರನ್ನು ಹೊರತುಪಡಿಸಿ ಮೂರನೇ ವಸ್ತು- ವ್ಯಕ್ತಿಯನ್ನು ಸೂಚಿಸಲು ಬಳಸುವ ಪದವೇ ಪ್ರಥಮ ಪುರುಷ ಸರ್ವನಾಮ. ಹಳೆಗನ್ನಡದಲ್ಲಿ ಅವನ್, ಅವಳ್, ಆತನ್, ಇವನ್ ಎಂದು ಬಳಕೆಯಾಗುತ್ತಿತ್ತು. ಹೊಸಗನ್ನಡದಲ್ಲಿ ಅವನು, ಇವಳು, ಅದು, ಇದು ಎಂದು ಬಳಕೆಯಾಗುತ್ತಿವೆ.

ಪ್ರಶ್ನಾರ್ಥಕ ಸರ್ವನಾಮ :
ಪ್ರಶ್ನಿಸಲು ಬಳಕೆ ಮಾಡುವ ಸರ್ವನಾಮಗಳೇ ಪ್ರಶ್ನಾರ್ಥಕ ಸರ್ವನಾಮಗಳಾಗಿವೆ. ಹಳೆಗನ್ನಡ ಕಾಲಘಟ್ಟದಲ್ಲಿ ಏಕೆ, ಏನ್, ಅವನ್, ಅವಳ್, ಅವುದ್, ಅವು ಎಂದು ಬಳಕೆಯಾಗುತ್ತಿತ್ತು. ಹೊಸಗನ್ನಡದ ಕಾಲದಲ್ಲಿ ಈ ಪದಗಳು ಸ್ವರಾಂತ್ಯ ಹೊಂದಿ ಏಕೆ, ಏನು, ಅವನು, ಅವಳು, ಯಾವುದು, ಯಾವುವು ಎಂಬಂತೆ ಬದಲಾವಣೆಗೊಂಡಿದೆ.

ಆತ್ಮಾರ್ಥಕ ಸರ್ವನಾಮ :
ತನ್ನನ್ನು ತಾನೇ ಆತ್ಮಪೂರ್ವಕವಾಗಿ ಸಂಬೋಧಿಸಿಕೊಳ್ಳಲು ಬಳಸುವ ಸರ್ವನಾಮವೇ ಆತ್ಮಾರ್ಥಕ ಸರ್ವನಾಮವಾಗಿದೆ. ಹಳೆಗನ್ನಡದಲ್ಲಿ ‘ ತಾನ್’ ಎಂಬುದು ಏಕ ವಚನವಾಗಿಯೂ, ‘ತಾಮ್’ ಎಂಬುದು ಬಹುವಚನವಾಗಿ ಬಳಕೆಗೊಡಿದ್ದವು. ಹೊಸಗನ್ನಡದಲ್ಲಿ ತಾನು, ತಾವು ಎಂದು ಬಳಕೆಯಾಗುತ್ತಿದೆ.
Please enable JavaScript in your browser to complete this form.
Full Name
Scroll to Top